ಹೊನ್ನಾಳಿ: ನನ್ನ ಅಧಿಕಾರಾವಧಿಯಲ್ಲಿ ಇಲ್ಲಿ ಗಣಿಗಾರಿಕೆ ಮಾಡಲು ಬಿಟ್ಟಿರಲಿಲ್ಲ. ಕೊನೇ ಉಸಿರಿರುವ ಇರುವ ತನಕ ಇದಕ್ಕೆ ಬದ್ಧನಾಗಿರುತ್ತೇನೆ. ಯಾವುದೇ ಕಾರಣಕ್ಕೂ ರೈತರ ಬದುಕು ದುಸ್ತರವಾಗಲು ಬಿಡುವುದಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಕತ್ತಿಗೆ ಗ್ರಾಮದಿಂದ ಗಣಿಗಾರಿಕೆ ಮಾಡಲು ಉದ್ದೇಶಿಸಿರುವ ಸ್ಥಳದವರೆಗೆ ಗ್ರಾಮಸ್ಥರೊಂದಿಗೆ ಮಂಗಳವಾರ ಪಾದಯಾತ್ರೆ ಮಾಡಿ, ನಂತರ ಮಾತನಾಡಿದರು.
2018 ರಲ್ಲೂ ಇಲ್ಲಿ ಗಣಿಗಾರಿಕೆ ಮಾಡುವ ಉದ್ದೇಶವಿಟ್ಟುಕೊಂಡು ನನ್ನ ಬಳಿ ಬಂದಿದ್ದರು. ಆದರೆ, ಗ್ರಾಮಸ್ಥರ ಪರ ನಿಂತು ಅಲ್ಲಿ ಗಣಿಗಾರಿಕೆಗೆ ಅವಕಾಶ ನೀಡದಂತೆ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಅಧಿಕಾರಿಗಳಿಂದ ಭರವಸೆ ಕೊಡಿಸಿದ್ದೆ.
ಆದರೆ, ಈಗ ಕತ್ತಿಗೆ ಗ್ರಾಮದ ಸರ್ವೆ ನಂ. 226ರಲ್ಲಿ 9 ಎಕರೆ ಖರೀದಿಸಿ, ಗಣಿಗಾರಿಕೆಗೆ ಪ್ರಯತ್ನಿಸುತ್ತಿದ್ದಾರೆ. ಇದರಿಂದ ಕೊಳವೆಬಾವಿಗಳ ಅಂತರ್ಜಲ ಕುಸಿಯುತ್ತದೆ. ಬೆಳೆಗಳಿಗೆ ಹಾನಿಯಾಗುತ್ತದೆ. ಚೆಕ್‌ಡ್ಯಾಂ ಹಾಗೂ ಕೆರೆಗಳಿಗೆ ಧಕ್ಕೆಯಾಗುತ್ತದೆ. ಇದಕ್ಕೆ ಅವಕಾಶ ಕೊಡದಂತೆ ಭೂ ಗಣಿ ವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಕತ್ತಿಗೆ ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ್ ಮಾತನಾಡಿ, ಗ್ರಾಮದಲ್ಲಿ ಗಣಿಗಾರಿಕೆ ಮಾಡದಂತೆ ಅನೇಕ ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದರಿಂದ ನಮ್ಮ ಗ್ರಾಮದ 2 ಸಾವಿರ ಜಾನುವಾರುಗಳಿಗೆ ತೊಂದರೆ ಆಗಲಿದೆ. ಹೊಸಕೆರೆಗೆ ಹಾನಿಯಾಗುವುದು ನಿಶ್ಚಿತ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್ ಮಾತನಾಡಿ, ಇಲಾಖೆ ಅಧಿಕಾರಿಗಳು ಈಗ ಏಕಾಏಕಿ ಗಣಿಗಾರಿಕೆಗೆ ಅವಕಾಶ ಮಾಡಿಕೊಡುತ್ತಿರುವುದನ್ನು ನಮ್ಮ ಪಕ್ಷ ಖಂಡಿಸುತ್ತದೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್, ಗ್ರಾಮದ ಮುಖಂಡರಾದ ರಾಮಚಂದ್ರಣ್ಣ, ಮೇಘರಾಜ್, ಓಂಕಾರಪ್ಪ, ಯೋಗೇಶಪ್ಪ, ಲೋಕಪ್ಪ, ನಾಗರಾಜಪ್ಪ, ಬಿದ್ರಿ ಚನ್ನೇಶಪ್ಪ, ಬಸವರಾಜು, ರಾಜು, ಚನ್ನೇಶ್, ಆಶಿಕಾ ಕಾಂತರಾಜ್, ಪ್ರಸನ್ನ, ಗ್ರಾಮಸ್ಥರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.