ಸಾವಯವ ಸಂತೆ ಪುನರಪಿ ಆರಂಭಕ್ಕೆ ಕ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ

ದೊಡ್ಡಣಗುಡ್ಡೆ ತೋಟಗಾರಿಕೆ ಕೇಂದ್ರದಲ್ಲಿ ವಾರಕ್ಕೊಮ್ಮೆ ನಡೆಯುತ್ತಿದ್ದ ಸಾವಯವ ಸಂತೆ ಸ್ಥಗಿತಗೊಳಿಸಿದ್ದು ಸರಿಯಲ್ಲ, ಅದನ್ನು ಮತ್ತೆ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ರಘುಪತಿ ಭಟ್ ಆಗ್ರಹಿಸಿದರು.
ಉಡುಪಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಶಾಸಕ ಲಾಲಾಜಿ ಆರ್.ಮೆಂಡನ್ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು. ಸಾವಯವ ಸಂತೆ ಮತ್ತೆ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಪ್ರತ್ಯೇಕ ಜಾಗದಲ್ಲಿ ರೈತರ ಸಂತೆ ಆರಂಭಿಸಿ. ಇದರಿಂದ ರೈತರಿಗೆ ಹಾಗೂ ಗ್ರಾಹಕರಿಗೆ ಪ್ರಯೋಜನವಾಗಲಿದೆ ಎಂದು ರಘುಪತಿ ಭಟ್ ಹೇಳಿದರು.

ಕಾಡಿನಲ್ಲಿ ಹಣ್ಣಿನ ಗಿಡ ಬೆಳೆಸಿ: ಅರಣ್ಯದಲ್ಲಿ ಅಕೇಶಿಯ ಗಿಡ ನೆಡುವುದರಿಂದ ಕಾಡುಪ್ರಾಣಿಗಳು ಆಹಾರ ಹುಡುಕಿಕೊಂಡು ಕೃಷಿ ಭೂಮಿಯತ್ತ ಬರುತ್ತಿವೆ. ಕಾಡಿನಲ್ಲಿ ಹಣ್ಣಿನ ಗಿಡ ಬೆಳೆಸುವುದರಿಂದ ಕಾಡುಪ್ರಾಣಿಗಳ ಹಾವಳಿ ತಪ್ಪಿಸಬಹುದು. ಹೀಗಾಗಿ ಅಕೇಶಿಯ ಮರಗಳನ್ನು ತೆರವು ಮಾಡಿ ಎಂದು ರಘುಪತಿ ಭಟ್ ಅಧಿಕಾರಿಗಳಿಗೆ ಸೂಚಿಸಿದರು. ಉತ್ತರಿಸಿದ ಅರಣ್ಯ ಇಲಾಖೆ ಅಧಿಕಾರಿ, ಈಗಿರುವ ಅಕೇಶಿಯ ಗಿಡಗಳು 12ರಿಂದ 14 ವರ್ಷದೊಳಗೆ ಕಟಾವಿಗೆ ಬಂದ ಅನಂತರ ತೆರವು ಮಾಡಿ ಹಣ್ಣಿನ ಗಿಡ ನೆಡಲಾಗುವುದು ಎಂದರು.

ಶೀಘ್ರದಲ್ಲೇ ಬಲೆ ವಿತರಣೆ: ಮತ್ಸ್ಯ ಸಂಕುಲ ಉಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಸಣ್ಣ ತೂತಿನ ಬಲೆ ಹಾಕುವುದನ್ನು ನಿಷೇಧಿಸಿದ್ದು, ಡೈಮಂಡ್ ಆಕೃತಿಯ ದೊಡ್ಡ ಗಾತ್ರದ ತೂತಿರುವ ಬಲೆ ಹಾಕುವಂತೆ ಸೂಚಿಸಿದೆ. ಅದರಂತೆ ಮಲ್ಪೆ ಬಂದರಿನ ಒಂದು ಸಾವಿರ ಬೋಟ್‌ಗಳಿಗೆ ಬಲೆ ವಿತರಿಸಲು ಟೆಂಡರ್ ಆಗಿದೆ. ಶೀಘ್ರದಲ್ಲೇ ಬಲೆ ವಿತರಣೆ ಮಾಡಲಾಗುವುದು. ಮತ್ಸ್ಯಾಶ್ರಯ ಯೋಜನೆಯಡಿ 2017-18ನೇ ಸಾಲಿನಲ್ಲಿ 127 ಮನೆಗಳು ಮಂಜೂರಾಗಿವೆ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.
ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉಪಾಧ್ಯಕ್ಷ ರಾಜೇಂದ್ರ ಪಂದಬೆಟ್ಟು, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಭುಜಂಗ ಶೆಟ್ಟಿ, ಇಒ ಕೆ.ರಾಜು, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಕೃಷಿ ಇಲಾಖೆ ಅಧಿಕಾರಿ ಮೋಹನ್‌ರಾಜ್ ಉಪಸ್ಥಿತರಿದ್ದರು.

ರಸ್ತೆ ಕಾಮಗಾರಿಗೆ ಅನುದಾನ ಮಂಜೂರು: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬ್ರಹ್ಮಾವರದಿಂದ ಸೀತಾನದಿಯವರೆಗಿನ 21.95 ಕಿ.ಮೀ ಉದ್ದದ ಪ್ರಥಮ ಹಂತದ ದ್ವಿಪಥ ರಸ್ತೆ ಕಾಮಗಾರಿಗೆ 35.15 ಕೋಟಿ ರೂ. ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು. ಕೆ.ಜಿ.ರೋಡ್‌ನಿಂದ ಕುಕ್ಕೆಹಳ್ಳಿಯವರೆಗಿನ ಎರಡನೇ ಹಂತದ ರಸ್ತೆ ಕಾಮಗಾರಿಗೆ 6 ಕೋಟಿ ರೂ. ಮಂಜೂರಾಗಿದೆ. ಕೆಂಚೂರು-ನಾಲ್ಕೂರು- ಶಿರೂರುವರೆಗಿನ ಮೂರನೇ ಹಂತದ ರಸ್ತೆ ಅಭಿವೃದ್ಧಿ ಕಾಮಗಾರಿಗೆ 8 ಕೋಟಿ ಮಂಜೂರಾಗಿದೆ ಎಂದು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ತಿಳಿಸಿದರು.