ಕಾಲೇಜು ಕ್ಯಾಂಪಸ್​ಗೆ ನುಗ್ಗಿ ಗೂಂಡಾಗಿರಿ

ಹುಬ್ಬಳ್ಳಿ: ಆರ್​ಟಿಐ ಕಾರ್ಯಕರ್ತನ ಪುತ್ರನೊಬ್ಬ ವಿದ್ಯಾನಗರದ ಕಾಲೇಜೊಂದರ ಕ್ಯಾಂಪಸ್​ಗೆ ನುಗ್ಗಿ ಕ್ಯಾಂಟೀನ್​ನಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ, ಪಿಸ್ತೂಲ್ ತೋರಿಸಿ ಬೆದರಿಸಿ ಗೂಂಡಾಗಿರಿ ನಡೆಸಿದ ಘಟನೆ ನಡೆದಿದೆ.

ಮಾಹಿತಿ ಹಕ್ಕು ಕಾಯ್ದೆ (ಆರ್​ಟಿಐ) ಕಾರ್ಯಕರ್ತ ಫಿಲೋಮಿನ್ ಪುತ್ರ ಸುಂದರಪಾಲ್ ಹಲ್ಲೆ ನಡೆಸಿದ ಆರೋಪಿ.

ಸುಂದರಪಾಲ್ ಕಾಲೇಜಿನ ವಿದ್ಯಾರ್ಥಿ ಅಲ್ಲದಿದ್ದರೂ ಕ್ಯಾಂಪಸ್​ಗೆ ಹೋಗಿ ಗಲಾಟೆ ಮಾಡಿದ್ದಾನೆ. ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆಸಿದ ದೃಶ್ಯ ಕ್ಯಾಂಟೀನ್​ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ. ಇತ್ತೀಚೆಗೆ ನಡೆದ ಫ್ಯಾಶನ್ ಶೋ ವಿಚಾರವಾಗಿ ಗಲಾಟೆ ನಡೆದಿತ್ತು. ಆ ವೇಳೆ ವಿದ್ಯಾರ್ಥಿಗಳು ಸುಂದರಪಾಲ್​ಗೆ ಧರ್ಮದೇಟು ನೀಡಿದ್ದರು. ಅದೇ ಕಾರಣಕ್ಕೆ ಸುಂದರಪಾಲ್ ಮರುದಿನ ಕ್ಯಾಂಟೀನ್​ಗೆ ತೆರಳಿ ಪಿಸ್ತೂಲ್ ತೋರಿಸಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಸುಂದರಪಾಲ್ ಬಳಿ ಪಿಸ್ತೂಲ್ ಇದೆ ಎನ್ನುವುದಕ್ಕೆ ಪೂರಕವಾಗಿ ಆತ ಪಿಸ್ತೂಲ್ ಹಿಡಿದು ಕುಳಿತಿರುವ ಬೇರೆ ಫೋಟೊ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಕ್ಯಾಂಪಸ್​ನಲ್ಲಿ ಸುಂದರಪಾಲ್ ಪಿಸ್ತೂಲ್ ಹಿಡಿದಿರುವ ಕುರಿತು ಸಿಸಿಟಿವಿಯಲ್ಲಿ ದಾಖಲೆಯಿಲ್ಲ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ವಿದ್ಯಾನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.