ಜಾಲತಾಣಗಳಲ್ಲಿ ಪೇದೆ ಪರ- ವಿರೋಧ ಚರ್ಚೆ

ಯಲ್ಲಾಪುರ: ಪಟ್ಟಣದ ಇಸ್ಲಾಂ ಗಲ್ಲಿಯ ಯುವಕನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯದವರು ಪೊಲೀಸ್ ಪೇದೆ ನಾಗಪ್ಪ ಲಮಾಣಿ ವಿರುದ್ಧ ಮಾಡಿರುವ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಪರ ಹಾಗೂ ವಿರೋಧದ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಮುಸ್ಲಿಂ ಸಮುದಾಯದವರು ನಾಗಪ್ಪ ವಿರುದ್ಧ ಕಿರುಕುಳದ ಆರೋಪ ಹೊರಿಸಿ ಆಕ್ರೋಶ ಹೊರಹಾಕುತ್ತಿದ್ದರೆ, ಮತ್ತೊಂದೆಡೆ ಪಟ್ಟಣದ ಹಲವು ಜನತೆ ನಾಗಪ್ಪ ಪರ ನಿಂತಿದ್ದು, ‘ಐ ಸಪೋರ್ಟ್ ನಾಗಪ್ಪ ಪೊಲೀಸ್’ ಎಂಬ ಅಭಿಯಾನವನ್ನು ಜಾಲತಾಣಗಳಲ್ಲಿ ಆರಂಭಿಸಿದ್ದಾರೆ. ಅಕ್ರಮ ಗೋ ಸಾಗಾಟ ಹಾಗೂ ಎಗ್ಗಿಲ್ಲದೆ ನಡೆಯುತ್ತಿದ್ದ ಗಾಂಜಾ ಸಾಗಾಟ ಮತ್ತು ಮಾರಾಟವನ್ನು ತಡೆಯುವಲ್ಲಿ ನಾಗಪ್ಪ ಹೆಚ್ಚಿನ ಶ್ರಮ ವಹಿಸುತ್ತಿದ್ದರು. ಪಟ್ಟಣದ ಸೂಕ್ಷ್ಮ ಪ್ರದೇಶ ಎಂದೇ ಗುರುತಿಸಿಕೊಂಡಿರುವ ನೂತನನಗರ ಜಡ್ಡಿಯ ಬೀಟ್ ಪೊಲೀಸ್ ಆಗಿ ನಾಗಪ್ಪ ಲಮಾಣಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲಿ ನಡೆಯುವ ಅಕ್ರಮ ಚಟುವಟಿಕೆ, ದೊಂಬಿ, ಗಲಾಟೆ, ಹಲವಾರು ಪ್ರಕರಣ ತಡೆಯುವಲ್ಲಿ ಇವರು ಯಶಸ್ವಿಯಾಗಿದ್ದರು. ಜತೆಗೆ, ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಇದೇ ಕಾರಣಕ್ಕಾಗಿ ಅವರ ಮಾನಸಿಕ ಸ್ಥೈರ್ಯ ಕುಗ್ಗಿಸುವ ಸಲುವಾಗಿ ಈ ಆರೋಪ ಹೊರಿಸಲಾಗುತ್ತಿದೆ ಎಂಬ ಮಾತುಗಳು ಜಾಲತಾಣಗಳಲ್ಲಿ ಚರ್ಚೆಯಾಗುತ್ತಿವೆ.

ನಾನು ಕರೆ ಮಾಡಿಲ್ಲ: ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿರುವ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಆರ್. ನಾಯ್ಕ ಹೆಗ್ಗಾರಕೈ, ಈ ಪ್ರಕರಣದ ಕುರಿತು ನನಗೆ ಯಾವುದೇ ಮಾಹಿತಿಯಿಲ್ಲ. ನಾನು ಯಾರಿಗೂ ಆ ರೀತಿ ಕರೆ ಮಾಡಿಲ್ಲ, ಮಾಡುವುದೂ ಇಲ್ಲ. ನನ್ನ ಹೆಸರನ್ನು ಈ ರೀತಿ ದುರ್ಬಳಕೆ ಮಾಡಿಕೊಂಡವರು ಯಾರೆಂಬುದು ಪೊಲೀಸರಿಂದ ತನಿಖೆಯಾಗಬೇಕು. ಆ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಆಗಬೇಕು ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷನೆಂಬ ಹೆಸರಿನಲ್ಲಿ ಬೆದರಿಕೆ ಕರೆ: ಕಿರುಕುಳದ ಆರೋಪಕ್ಕೆ ಗುರಿಯಾಗಿರುವ ನಾಗಪ್ಪ ಅವರಿಗೆ ಜೆಡಿಎಸ್ ಜಿಲ್ಲಾಧ್ಯಕ್ಷನೆಂಬ ಹೆಸರಿನಲ್ಲಿ ಬಂದಿರುವ ಬೆದರಿಕೆ ಕರೆಯ ಆಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ. ಆ ಕುರಿತು ಆಕ್ರೋಶ ವ್ಯಕ್ತವಾಗಿದೆ. ನಿಮಗೆ ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ. ಈ ವಿಷಯವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರಿಗೆ ತಿಳಿಸಿ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲು ಹೇಳುತ್ತೇನೆ ಹಾಗೂ ಇಡೀ ಜಿಲ್ಲೆಯ ಅಲ್ಪಸಂಖ್ಯಾತರನ್ನು ಒಗ್ಗೂಡಿಸಿ ನಿಮ್ಮ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದು ಕರೆ ಮಾಡಿದ ವ್ಯಕ್ತಿ ಬೆದರಿಕೆ ಹಾಕಿದ್ದಾನೆ.