ಸರ್ದಾರ್​ ಪಟೇಲ್​ ಪ್ರತಿಮೆ ತಲುಪಲು ಶೀಘ್ರ ಆರಂಭವಾಗಲಿದೆ ಏರ್​ಪೋರ್ಟ್​, ರೈಲು ಸೇವೆ

ಅಹಮದಾಬಾದ್​: ಗುಜರಾತ್​ನ ಕೆವಾಡಿಯ ಎಂಬಲ್ಲಿ ನರ್ಮದಾ ನದಿ ತೀರದಲ್ಲಿ ಇತ್ತೀಚೆಗಷ್ಟೇ ಅನಾವರಣವಾದ ಸರ್ದಾರ್​ ವಲಭಭಾಯಿ ಅವರ ಜಗತ್ತಿನ ಅತೀ ಎತ್ತರದ ಏಕತಾ ಪ್ರತಿಮೆಗೆ ಸುಗಮ ಸಂಪರ್ಕ ಕಲ್ಪಿಸಲು ಗುಜರಾತ್​ ಸರ್ಕಾರ ಸಕಲ ವ್ಯವಸ್ಥೆ ಮಾಡುತ್ತಿದೆ.

ಪ್ರತಿಮೆಗೆ ಹತ್ತಿರವಾಗಿ ವಿಮಾನ ನಿಲ್ದಾಣ ನಿರ್ಮಿಸಲು ಮತ್ತು ರೈಲು ಸಂಪರ್ಕ ಕಲ್ಪಿಸುವ ಸಂಬಂಧ ಗುಜರಾತ್​ ಮುಖ್ಯಮಂತ್ರಿ ವಿಜಯ್​ ರೂಪಾನಿ ಅವರು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅಧಿಕಾರಿಗಳು ಮತ್ತು ರೈಲ್ವೆ ಮಂಡಳಿಯ ಅಧಿಕಾರಿಗಳೊಂದಿಗೆ ಇತ್ತೀಚೆಗೆ ದೆಹಲಿಯಲ್ಲಿ ಸಭೆ ನಡೆಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಕಚೇರಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ.

ನರ್ಮಾದಾ ಜಿಲ್ಲೆಯ ರಾಜ್​ಪಿಪ್ಲಾ ಎಂಬಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಾಗುವುದು. ಈ ಮೂಲಕ ಪ್ರತಿಮೆಗೆ ಸುಗಮ ಸಂಪರ್ಕ ಕಲ್ಪಿಸಲಾಗುವುದು ಎಂದು ವಿಜಯ್​ ರೂಪಾನಿ ಅವರು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅಧಿಕಾರಿಗಳೊಂದಿಗಿನ ಭೇಟಿ ನಂತರ ಘೋಷಿಸಿದ್ದಾರೆ.

ಪ್ರತಿಮೆ ಇರುವ ಕೆವಾಡಿಯ ಗ್ರಾಮದಿಂದ ರಾಜ್​ಪಿಪ್ಲಾ 23 ಕಿ.ಮೀ. ದೂರದಲ್ಲಿದೆ.

ಇದರ ಜತೆಗೆ ಮುಖ್ಯಮಂತ್ರಿ ರೂಪಾನಿ ಅವರು ರೈಲ್ವೆ ಮಂಡಳಿಯೊಂದಿಗೂ ಸಭೆ ನಡೆಸಿದ್ದು, ರಾಜ್ಯದ ಹಲವು ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ಚರ್ಚಿಸಿದ್ದಾರೆ. ಅದರ ಜತೆಗೇ, ಪ್ರತಿಮೆ ಇರುವ ಕೆವಾಡಿಯ ವರೆಗೂ ರೈಲು ಮಾರ್ಗ ನಿರ್ಮಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಬಾಹ್ಯಾಕಾಶದಿಂದ ಹೇಗೆ ಕಾಣುತ್ತದೆ ಗೊತ್ತಾ ಸರ್ದಾರ್​ ಪ್ರತಿಮೆ?