100 ಅಡಿ ಎತ್ತರದ ಮಹದೇಶ್ವರರ ಪ್ರತಿಮೆ ನಿರ್ಮಾಣ

ಹನೂರು: ಮ.ಬೆಟ್ಟದ ದೀಪದಗಿರಿ ಒಡ್ಡುವಿನಲ್ಲಿ 100 ಅಡಿ ಎತ್ತರದ ಮಹದೇಶ್ವರರ ಪ್ರತಿಮೆ ನಿರ್ಮಾಣ ಕಾಮಗಾರಿಯನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಲು ಹಾಗೂ ಒಳಚರಂಡಿ ವ್ಯವಸ್ಥೆಗೆ ಅವಶ್ಯಕವಾಗಿರುವ ಜಮೀನನ್ನು ಖರೀದಿಸಿ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ಮ.ಬೆಟ್ಟದ ನಾಗಮಲೆ ಭವನದಲ್ಲಿ ಶುಕ್ರವಾರ ಅಭಿವೃದ್ಧಿ ಸಂಬಂಧ ಆಯೋಜಿಸಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಪಡೆದು ಮಾತನಾಡಿದರು.
ಈ ಹಿಂದಿನ ಸಭೆಯಲ್ಲಿನ ಅನುಪಾಲನಾ ವರದಿಯಲ್ಲಿನ ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೇ ಪ್ರಾಧಿಕಾರಕ್ಕೆ ಅವಶ್ಯಕವಾಗಿರುವ ಸಿಬ್ಬಂದಿ ನೇಮಕಕ್ಕೆ ವೃಂದಗಳನ್ನು ವಿಂಗಡನೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ನೂತನ ಬಸ್‌ಗಳ ಖರೀದಿ, 100 ಅಡಿ ಎತ್ತರದ ಮಹದೇಶ್ವರರ ಪ್ರತಿಮೆ ನಿರ್ಮಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಸೂಚಿಸಿದರು.

ಅಧಿಕಾರಿಗಳೊಂದಿಗೆ ಚರ್ಚಿಸಿ: ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿದ್ಯುತ್ ವಿತರಣಾ ಕೇಂದ್ರವನ್ನು ಕಳೆದ ಒಂದೂವರೆ ವರ್ಷದ ಹಿಂದೆಯೇ ಮಂಜೂರು ಮಾಡಲಾಗಿದ್ದು, ಅರಣ್ಯ ಇಲಾಖಾ ಅಧಿಕಾರಿಗಳು ಅನುಮತಿ ನೀಡದಿದ್ದರಿಂದ ಕಾಮಗಾರಿ ಪ್ರಾರಂಭವಾಗಿಲ್ಲ. ಈ ಹಿನ್ನೆಲೆ ಕ್ಷೇತ್ರದಲ್ಲಿ ಆಗಾಗ್ಗೆ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು ಜಾತ್ರಾ ಸಂದರ್ಭಗಳಲ್ಲಿ ವೋಲ್ಟೇಜ್ ಸಮಸ್ಯೆಯೂ ಆಗುತ್ತಿದೆ. ಇದರಿಂದ ಭಕ್ತರಿಗೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದಾಗ ಮುಖ್ಯಮಂತ್ರಿ ಪ್ರತಿಕ್ರಿಯಿಸಿ, ಅರಣ್ಯ ಇಲಾಖೆ ಹಾಗೂ ಇಂಧನ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಚರ್ಚಿಸಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡು ಶೀಘ್ರವಾಗಿ ಕಾಮಗಾರಿ ಆರಂಭಿಸುವಂತೆ ಸೂಚಿಸಿದರು.

ಅಧಿವೇಶನದ ಬಳಿಕ 2 ದಿನ ಕ್ಷೇತ್ರಕ್ಕೆ: ಹನೂರು ಕ್ಷೇತ್ರದಲ್ಲಿನ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗಾಗಿ ಆಗಮಿಸುವಂತೆ ಶಾಸಕ ನರೇಂದ್ರ ಆಹ್ವಾನ ನೀಡಿದ ಹಿನ್ನೆಲೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಬೆಳಗಾವಿ ಅಧಿವೇಶನದ ಬಳಿಕ ದಿನಾಂಕವನ್ನು ನಿಗದಿಪಡಿಸಿ ಎರಡು ದಿನಗಳು ಹನೂರು ಪ್ರವಾಸ ಹಮ್ಮಿಕೊಳ್ಳಲಾಗುವುದು. ಈ ಸಂದರ್ಭದಲ್ಲಿ ಮೊದಲ ದಿನ ಹನೂರು ಕ್ಷೇತ್ರದಲ್ಲಿನ ಸೇತುವೆಗಳು, ಹಾಲಿನ ಡೈರಿ, ಇನ್ನಿತರ ಅಭಿವೃದ್ಧಿ ಕಾರ‌್ಯಗಳನ್ನು ಉದ್ಘಾಟಿಸಿ 2ನೇ ದಿನ ಮಲೆ ಮಹದೇಶ್ವರ ಬೆಟ್ಟದ ಅಭಿವೃದ್ಧಿ ಬಗ್ಗೆ ಹಾಗೂ ಜಿಲ್ಲೆಯ ಇತರೆ ಸಮಸ್ಯೆಗಳ ಬಗ್ಗೆ ಚರ್ಚಿಸುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಸಚಿವರಾದ ಪುಟ್ಟರಾಜು, ಪುಟ್ಟರಂಗಶೆಟ್ಟಿ, ಸಂಸದ ಧ್ರುವನಾರಾಯಣ್, ಶಾಸಕರಾದ ನರೇಂದ್ರ, ನಿರಂಜನ್‌ಕುಮಾರ್, ಮಹೇಶ್, ಸಾಲೂರು ಬೃಹನ್ಮಾಠಧ್ಯಕ್ಷ ಗುರುಸ್ವಾಮೀಜಿ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿ.ಪಂ ಸಿಇಓ ಹರೀಶ್‌ಕುಮಾರ್, ಪ್ರಾಧಿಕಾರದ ಕಾರ್ಯದರ್ಶಿ ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ, ಉಪವಿಭಾಗಾಧಿಕಾರಿ ಫೌಜಿಯಾ ತರುನ್ನಮ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.