ಬಿಳಿಹಾಳೆ ಇಲ್ಲದೆ ಸ್ಥಗಿತಗೊಂಡ ಸಬ್ ರಿಜಿಸ್ಟ್ರಾರ್ ಕಚೇರಿ !

ಮೈಸೂರು: ಅಗತ್ಯ ಬಿಳಿಹಾಳೆ ಹಾಗೂ ಸ್ಟೇಷನರಿ ಸರಬರಾಜು ಇಲ್ಲದೆ ಜಿಲ್ಲೆಯ ಎಲ್ಲ ಸಬ್ ರಿಜಿಸ್ಟ್ರಾರ್ ಕಚೇರಿಗಳ ಕೆಲಸವನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಗಿತಗೊಳಿಸಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.

ನಗರದ 4 ಸೇರಿದಂತೆ ಜಿಲ್ಲೆಯ ಒಟ್ಟು 15 ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸಣ್ಣಪುಟ್ಟ ಕೆಲಸಗಳು ಬಿಟ್ಟರೆ ಯಾವುದೇ ಭೂ ದಾಖಲೆ ನೋಂದಣಿ ಇಲ್ಲದೆ ಕಚೇರಿಗಳು ಭಣಗುಡುತ್ತಿವೆ.

ಒಂದೆಡೆ ಸ್ಕಾೃನಿಂಗ್-ಜೆರಾಕ್ಸ್ ಪೇಪರ್ ಕೊರತೆಯಿಂದ ನೋಂದಣಿಯಾಗುತ್ತಿಲ್ಲ. ಕೆಲ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ತಾಂತ್ರಿಕ ಸಮಸ್ಯೆಯಿಂದ ರೈತರಿಗೆ ಇಸಿ ಸೇರಿದಂತೆ ಯಾವುದೇ ದಾಖಲೆ ಲಭ್ಯವಾಗುತ್ತಿಲ್ಲ. ಜಿಲ್ಲೆಯ ಎಲ್ಲ ಉಪ ನೋಂದಣಾಧಿಕಾರಿ ಕಚೇರಿಗೆ ಸ್ಕಾೃನಿಂಗ್ ಪೇಪರ್ ಸೇರಿದಂತೆ ಸ್ಟೇಷನರಿ ಸಾಮಗ್ರಿ ಸರಬರಾಜು ಮಾಡುವ ಗುತ್ತಿಗೆ ಪಡೆದ ಕಂಪನಿ ಸರಬರಾಜು ನಿಲ್ಲಿಸಿದ್ದರಿಂದ ಇಡೀ ಕಚೇರಿಯ ಕೆಲಸಗಳು ಸ್ತಬ್ಧಗೊಂಡಿವೆ.

ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕೆಲಸ ಕಾರ್ಯ ಸ್ಥಗಿತ ಹಿನ್ನೆಲೆ ಆಸ್ತಿ ನೋಂದಣಿಗಾಗಿ ಬಂದ ಸಾರ್ವಜನಿಕರು ಪರದಾಡುತ್ತಿದ್ದಾರೆ. ಈ ಸಮಸ್ಯೆ ಬಗ್ಗೆ ಈಗಾಗಲೇ ಜಿಲ್ಲಾ ನೋಂದಣಾಧಿಕಾರಿ ಸರ್ಕಾರಕ್ಕೆ ಪತ್ರ ಬರೆದಿದ್ದು, ಈ ಬಗ್ಗೆ ಸರ್ಕಾರ ತಲೆಕೆಡಿಸಿಕೊಂಡಿಲ್ಲ.

ಈ ಎಲ್ಲ ಕಚೇರಿಗಳಿಗೆ ಅಗತ್ಯ ಬಿಳಿಹಾಳೆ ಹಾಗೂ ಸ್ಟೇಷನರಿ ಸರಬರಾಜು ಮಾಡುತ್ತಿದ್ದ ಕಂಪನಿಯ ಟೆಂಡರ್ ಅವಧಿಯು ಮಾರ್ಚ್ 31ಕ್ಕೆ ಮುಗಿದಿದೆ. ಆದರೆ, ಮತ್ತೆ ಈ ಸಂಬಂಧ ಯಾವುದೇ ಟೆಂಡರ್ ಆಗಿಲ್ಲ. ಹೀಗಾಗಿ ಕಳೆದ 20 ದಿನಗಳಿಂದ ಕಚೇರಿ ನಿರ್ವಹಣಾ ಹಣದಲ್ಲೇ ಕಾಗದಗಳನ್ನು ತಂದು ಕೆಲಸ ಮಾಡಲಾಗಿತ್ತು. ಸದ್ಯ ಮೂರು ನಾಲ್ಕು ದಿನಗಳಿಂದ ಕಚೇರಿ ನಿರ್ವಹಣಾ ಹಣವೂ ಮುಗಿದಿದ್ದು, ಎಲ್ಲ ಕೆಲಸ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ.

ಎರಡು ಮೂರು ದಿನಗಳಿಂದ ಮಳೆಯಾಗುತ್ತಿದ್ದು, ರೈತರಿಗೆ ಬಿತ್ತನೆ ಕಾಲವಾಗಿದೆ. ಹೀಗಾಗಿ, ರೈತರು ಬ್ಯಾಂಕ್‌ಗಳಿಂದ ಸಾಲ ಪಡೆಯಲು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಡಮಾನ ನೋಂದಣಿ ಮಾಡಿಸಬೇಕಿದ್ದು, ದಿನಕ್ಕೆ ನೂರಾರು ರೈತರು ನೋಂದಾಯಿಸಲು ಆಗಮಿಸುತ್ತಾರೆ. ಆದರೆ, ಕನಿಷ್ಠ ಜೆರಾಕ್ಸ್ ಪೇಪರ್ ಇಲ್ಲದೆ ನೋಂದಣಿಯಾಗದೆ ವಾಪಸ್ ಕಳುಹಿಸಲಾಗುತ್ತಿದೆ. ಇದರೊಟ್ಟಿಗೆ ಭೂಮಿ-ಮನೆ ರಿಜಿಸ್ಟರ್ ಮಾಡಿಸುವವರಿಗೂ ಇದರ ಬಿಸಿ ತಟ್ಟಿದ್ದು, ಸರ್ಕಾರಕ್ಕೆ ಬರುವ ಆದಾಯಕ್ಕೆ ಕತ್ತರಿ ಬಿದ್ದಿದೆ. ಕಚೇರಿಗೆ ಅಗತ್ಯವಾದ ಪೇಪರ್ ತರಿಸುವಲ್ಲಿ ವಿಫಲವಾಗಿರುವ ನೋಂದಣಾಧಿಕಾರಿ ಹಾಗೂ ಸರ್ಕಾರದ ವಿರುದ್ಧ ರೈತರು-ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.

ಜಿಲ್ಲೆಯ ಎಲ್ಲ ಉಪ ನೋಂದಣಾಧಿಕಾರಿ ಕಚೇರಿಯ ಅಗತ್ಯ ಬಿಳಿಹಾಳೆ ಹಾಗೂ ಸ್ಟೇಷನರಿ ಸರಬರಾಜು ಸಮಸ್ಯೆಯನ್ನು ಇಂದು ಬಗೆಹರಿಸಲಾಗಿದೆ. ಈ ಸಂಬಂಧ ಯಾವುದೇ ಕಂಪನಿಗೆ ಟೆಂಡರ್ ನೀಡದೆ, ಉಪ ನೋಂದಣಾಧಿಕಾರಿ ಕಚೇರಿಗಳಿಂದಲೇ ಅಗತ್ಯ ವಸ್ತುಗಳನ್ನು ಕೊಳ್ಳುವಂತೆ ಸೂಚನೆ ನೀಡಲಾಗಿದೆ.
ವಿಜಯಲಕ್ಷ್ಮಿ ಇನಾಮ್ದಾರ್ ಜಿಲ್ಲಾ ನೋಂದಣಾಧಿಕಾರಿ

Leave a Reply

Your email address will not be published. Required fields are marked *