ಆ. 8ರಿಂದ ರಾಜ್ಯಾದ್ಯಂತ ಗಾಂಧಿ ರಂಗ ಪಯಣ

ಹಾವೇರಿ: ಮಹಾತ್ಮ ಗಾಂಧೀಜಿಯವರ 150ನೇ ಜಯಂತಿಯಂಗವಾಗಿ ಅವರ ಜೀವನ ಪಯಣ ಕುರಿತಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿತ ಗಾಂಧಿ-150 ಒಂದು ರಂಗ ಪಯಣ ಎಂಬ ರೂಪಕವನ್ನು ಕ್ವಿಟ್ ಇಂಡಿಯಾ ಚಳವಳಿಯ ದಿನವಾದ ಆ. 8ರಿಂದ ಡಿಸೆಂಬರ್ 15ರವರೆಗೆ ರಾಜ್ಯಾದ್ಯಂತ ಪ್ರದರ್ಶನಕ್ಕೆ ಸಜ್ಜುಗೊಳಿಸಲಾಗಿದೆ.

ವಿಶೇಷವಾಗಿ ಶಾಲಾ ಕಾಲೇಜ್ ವಿದ್ಯಾರ್ಥಿಗಳಿಗೆ ಹಾಗೂ ಯುವ ಸಮೂಹವನ್ನು ಕೇಂದ್ರೀಕರಿಸಿ ರೂಪಿಸಲಾದ ಗಾಂಧಿ ಪಯಣ ರೂಪಕ ಬೊಳುವಾರು ಮಹಮ್ಮದ್ ಕುಂಞಯವರ ಮಕ್ಕಳ ಕಾದಂಬರಿ, ಪಾಪುಗಾಂಧಿ, ಬಾಪುಗಾಂಧಿ ಆದ ಕಥೆ ಆಧರಿಸಿದೆ. ಈ ರಂಗ ರೂಪಕವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಅವರ ಪರಿಕಲ್ಪನೆಯಲ್ಲಿ ರಂಗಕರ್ವಿು ಡಾ.ಶ್ರೀಪಾದ ಭಟ್ ರಂಗರೂಪಕ್ಕೆ ಅಳವಡಿಸಿ ನಿರ್ದೇಶಿಸಿದ್ದಾರೆ.

ಗಾಂಧಿ ರಂಗಪಯಣದಲ್ಲಿ 30ಕ್ಕೂ ಅಧಿಕ ಕಲಾವಿದರು ತೊಡಗಿಸಿಕೊಂಡಿದ್ದಾರೆ. ಎರಡು ತಂಡವಾಗಿ ವಿಭಜಿಸಿ ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಕಲಾವಿದ ಮಧ್ವರಾಜ್ ನೇತೃತ್ವದಲ್ಲಿ ಪಯಣ ಬೆಳೆಸಿದರೆ, ಧಾರವಾಡದ ರಂಜಿತಾ ಜಾಧವ ಅವರ ನೇತೃತ್ವದಲ್ಲಿ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಪಯಣ ಬೆಳೆಸಲಿದೆ ಎಂದು ನಿರ್ದೇಶಕ ಶ್ರೀಪಾಧ ಭಟ್ ತಿಳಿಸಿದ್ದಾರೆ.

ರಾಜ್ಯದ ಎಲ್ಲ ತಾಲೂಕುಗಳಲ್ಲಿ ಪ್ರತಿದಿನ ಎರಡರಿಂದ ಮೂರು ಪ್ರದರ್ಶನಗಳನ್ನು ಆಯೋಜಿಸಲಾಗುವುದು. ಬೆಳಗಿನ ವೇಳೆಯಲ್ಲಿ ಪ್ರತಿ ತಂಡವು ತಾಲೂಕಿನ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜ್​ಗಳಲ್ಲಿ ಹಾಗೂ ಸಂಜೆ ಸಾರ್ವಜನಿಕರಿಗಾಗಿ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಗಾಂಧೀಜಿಯವರ ಜೀವನ ಚರಿತ್ರೆ ಕುರಿತಂತೆ ಸರಳ ಭಾಷೆಯಲ್ಲಿ ರಚಿಸಲಾದ ಕಿರುಹೊತ್ತಿಗೆ ಹಂಚಿಕೆ ಹಾಗೂ ಜಗತ್ತಿನ ನಾನಾ ಭಾಷೆ, ರಾಷ್ಟ್ರಗಳಲ್ಲಿ ಗಾಂಧೀಜಿಯವರ ಕುರಿತಂತೆ ಹೊರತಂದಿರುವ ಅಂಚೆ ಚೀಟಿಗಳ ವಿಶೇಷ ಪ್ರದರ್ಶನವನ್ನು ಮಾಡಲಾಗುವುದು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವಂತರಾಯ ಪಾಟೀಲ, ರಂಗಾಯಣ ನಿರ್ದೇಶಕ ಪ್ರಮೋದ ಶಿಗ್ಗಾಂವಿ, ರಂಗಕರ್ವಿುಗಳಾದ ಕೆ.ವೈ. ನಾರಾಯಣ, ಶಂಕರಯ್ಯ ಘಂಟಿ, ಬಿ.ಆರ್. ಪೊಲೀಸ್​ಪಾಟೀಲ, ಶಿವಾನಂದ ಶೆಟ್ಟರ, ಶಶಿಧರ ಬಾರಿಗಾರ ಇತರರಿದ್ದರು.

ಶೇಷಗಿರಿಯಲ್ಲಿ ರಂಗ ತಾಲೀಮು: ಗಾಂಧಿ-150 ರಂಗ ಪಯಣಕ್ಕೆ ಕಳೆದ ಒಂದು ತಿಂಗಳಿನಿಂದ ಜಿಲ್ಲೆಯ ಹಾನಗಲ್ಲ ತಾಲೂಕಿನ ಶೇಷಗಿರಿ ಗ್ರಾಮದ ಗಜಾನನ ಮಿತ್ರಮಂಡಳಿ ರಂಗ ಮಂದಿರದಲ್ಲಿ ತಾಲೀಮು ನೀಡಲಾಗಿದೆ. ಗಾಂಧಿ ಪಯಣ ರಂಗರೂಪಕದ ಪೂರ್ವ ತಯಾರಿ ಪ್ರದರ್ಶನವನ್ನು ಶೇಷಗಿರಿ ಗ್ರಾಮದಲ್ಲಿ ಶನಿವಾರ ಪ್ರಥಮ ಪ್ರದರ್ಶನವೂ ನಡೆಯಿತು.