18.5 C
Bangalore
Monday, December 16, 2019

ಪೂಜ್ಯರು ಕಂಡಂತೆ ದೇವರು

Latest News

‘ದಿಶಾ ರೈಡ್ ಆಂಡ್ ವಾಕ್’ ಜಾಗೃತಿ ಜಾಥಾ

ಹುಬ್ಬಳ್ಳಿ: ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಆಶ್ರಯದಲ್ಲಿ ಇಲ್ಲಿನ ತೋಳನಕೆರೆಯಿಂದ ಬಿವಿಬಿ ಇಂಜಿನಿಯರಿಂಗ್ ಕಾಲೇಜ್​ವರೆಗೆ ಭಾನುವಾರ ಬೆಳಗ್ಗೆ ‘ದಿಶಾ ರೈಡ್ ಆಂಡ್ ವಾಕ್’ ಘೋಷಣೆಯೊಂದಿಗೆ...

‘ಆಟೋ ರಿಕ್ಷಾ ರನ್’

ಹುಬ್ಬಳ್ಳಿ: ಕನ್ಯಾಕುಮಾರಿಯಿಂದ ಅಹಮದಾಬಾದ್​ವರೆಗೆ ‘ಆಟೋ ರಿಕ್ಷಾ ರನ್’ ಹಮ್ಮಿಕೊಂಡಿರುವ ಇಂಗ್ಲೆಂಡಿನ ‘ಸೇವಾ ಯುಕೆ’ ಸಂಸ್ಥೆಯ ಅನಿವಾಸಿ ಭಾರತೀಯರು ಭಾನುವಾರ ಬೆಳಗ್ಗೆ ಹುಬ್ಬಳ್ಳಿಯಿಂದ ಗೋವಾದ...

ಗೀತೆ ಅಧ್ಯಯನದಿಂದ ಜೀವನ ಸುಖಮಯ

ಧಾರವಾಡ: ಗೀತೆ ದೀಪ ಸ್ವರೂಪ. ಅಜ್ಞಾನದ ಅಂಧಕಾರವನ್ನು ಕಳೆದು ಸುಜ್ಞಾನವನ್ನು ನೀಡುವುದು. ಸತ್ಸಂಗ ಮತ್ತು ಜ್ಯೋತಿ ಎರಡೂ ನಮ್ಮ ಜೀವನದಲ್ಲಿ ಪ್ರಧಾನ ಪಾತ್ರ...

ಸ್ವಾಮಿಯೇ ಶರಣಂ ಅಯ್ಯಪ್ಪ

ಹುಬ್ಬಳ್ಳಿ: ನಗರದ ಶಿರೂರು ಪಾರ್ಕ್ ಅಯ್ಯಪ್ಪ ಸ್ವಾಮಿ ದೇಗುಲದ ಮಾಲಾಧಾರಿಗಳು ಹಾಗೂ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ ವತಿಯಿಂದ ನಗರದಲ್ಲಿ ಭಾನುವಾರ ಅಯ್ಯಪ್ಪ...

ದೇಶದಲ್ಲಿ ಹೆಚ್ಚುತ್ತಿದೆ ನಿರುದ್ಯೋಗ ಸಮಸ್ಯೆ

ಮೈಸೂರು: ಬಂಡವಾಳಶಾಯಿಗಳ ಪರ ಆಡಳಿತ ನಡೆಸುತ್ತಿರುವ ಸರ್ಕಾರಗಳು, ದುಡಿಯುವ ವರ್ಗವನ್ನು ಕಡೆಗಣಿಸಿವೆ. ಇದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದ್ದು, ಸಾಕಷ್ಟು ಕಾರ್ಖಾನೆಗಳು ಬಾಗಿಲು...

ಧರ್ಮಸಂಸ್ಥಾಪನೆಗಾಗಿ ಭೂಮಿಯಲ್ಲಿ ಮತ್ತೆ ಮತ್ತೆ ಅವತರಿಸುವ ಶ್ರೀಕೃಷ್ಣನ ಉಕ್ತಿಗೆ ಉಜ್ವಲ ಸಾಕ್ಷಿಯಂತೆ ಬಾಳಿ ಬೆಳಗಿದವರು ಸಿದ್ಧಗಂಗೆಯ ಕಾಯಕಯೋಗಿ ಡಾ. ಶಿವಕುಮಾರ ಸ್ವಾಮಿಗಳು. ಲಕ್ಷಾಂತರ ಜನರ ಬಾಳನ್ನು ರೂಪಿಸಲೆಂದು ಅವತರಿಸಿದ್ದ ಶ್ರೀಗಳು ಬಂದಲ್ಲಿಗೇ ಮರಳಿದ್ದಾರೆ. ನಾಡಿನ ಪ್ರಮುಖ ಮಠ-ಪೀಠಗಳ ಪೂಜ್ಯರು ಈ ನಡೆದಾಡುವ ದೇವರನ್ನು ತಾವು ಕಂಡಂತೆ ಬಣ್ಣಿಸಿರುವ ಅಪರೂಪದ ನುಡಿನೋಟಗಳು ಇಲ್ಲಿವೆ.

ಹೊಸ ಬೆಳಕು ನೀಡುವ ಶ್ರೀಗಳ ಚಿಂತನೆಗಳು

| ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಬಾಳೆಹೊನ್ನೂರು ಶ್ರೀಪೀಠ

ಸಿದ್ಧಗಂಗಾ ಕ್ಷೇತ್ರದ ಶ್ರೀ ಡಾ. ಶಿವಕುಮಾರ ಸ್ವಾಮಿಗಳು ಕಾಯಕ ಯೋಗಿಗಳು. ಕಾಯಕ ಮತ್ತು ದಾಸೋಹದಲ್ಲಿ ಅಪಾರ ಆಸಕ್ತಿ ಅವರಿಗಿತ್ತು. ಕಾಯಕ ಜೀವನದಿಂದ ಬದುಕನ್ನು ಸ್ವರ್ಗ ಮಾಡಲು ಸಾಧ್ಯ ಎಂಬುದನ್ನರಿತ ಹಿರಿಯ ಜೀವ. 2019ರಲ್ಲಿ ಶ್ರೀಗಳು ಇಹಲೋಕದ ಯಾತ್ರೆ ಪೂರೈಸಿ ಶಿವಸಾಯುಜ್ಯ ಹೊಂದಿದ್ದಾರೆ. ಬದುಕಿನುದ್ದಕ್ಕೂ ನೋವು ತಿಂದು ನಲಿವು ಕೊಟ್ಟ ಮಹಾಂತರು. ಸದ್ದುಗದ್ದಲವಿಲ್ಲದೆ ಸಾಧನೆ ಮಾಡಿದ ಸಾಧನೆಯ ಸಹ್ಯಾದ್ರಿ ಅವರು. ಯಾರ ಹೊಗಳಿಕೆ-ತೆಗಳಿಕೆಗೆ ಬೆಲೆ ಕೊಟ್ಟವರಲ್ಲ. ಕಾಯಕವೇ ಜೀವನದ ಉಸಿರು ಎಂದು ನಂಬಿ ನಡೆದವರು ಅವರು. ಧಾರ್ವಿುಕ ಶ್ರದ್ಧೆ, ಪೂಜಾನಿಷ್ಠೆ, ಕಾಯಕದಲ್ಲಿ ತಲ್ಲೀನತೆಯ ಮನಸ್ಸು ಅವರದಾಗಿತ್ತು. ಮಾತಿಗಿಂತ ಕೃತಿ ಲೇಸೆಂದು ಹೇಳುವ ಮಹಾನುಭಾವ. ವೀರಶೈವಧರ್ಮದ ಮೂಲ ಪಂಚಪೀಠಗಳ ಬಗ್ಗೆ ಅವರಿಗಿರುವ ಅಭಿಮಾನ, ಒಲವನ್ನು ಯಾವ ಶಬ್ದಗಳಿಂದ ವರ್ಣಿಸಲೂ ಸಾಧ್ಯವಿಲ್ಲ. 2003ರ ಮಾ. 16ರಂದು ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದಲ್ಲಿ ಅವರಾಡಿದ ಮಾತು ಸಮಾಜದ ಉತ್ಕರ್ಷ ಮತ್ತು ಸಾಮರಸ್ಯಕ್ಕೆ ಸಾಕ್ಷಿಯಾಗಿತ್ತು. ಅದೇ ವರ್ಷ ಜೂ. 1ರಂದು ಕೂಡಲಸಂಗಮದಲ್ಲಿ ಜರುಗಿದ ಗುರು ವಿರಕ್ತರ ಸಮಾವೇಶದಲ್ಲಿ ನಮ್ಮೊಂದಿಗೆ ಹಂಚಿಕೊಂಡ ಚಿಂತನೆಗಳು ಹೊಸ ಬೆಳಕಿಗೆ ನಾಂದಿಯಾಗಿವೆ. ಭಕ್ತರ ಕಣ್ಣಿನಲ್ಲಿ ದೇವರಾಗಿ ಕಂಡವರು ಇಂದು ಸಾಕ್ಷಾತ್ ಶಿವನಲ್ಲಿ ಒಂದಾಗಿ ಬೆರೆತುಹೋದರು. ಭೌತಿಕ ಕಾಯ ಕಣ್ಮರೆಯಾದರೂ ಅವರ ಚಿಂತನೆಗಳು ಬದುಕಿ ಬಾಳುವ ಜನಾಂಗಕ್ಕೆ ಆಶಾಕಿರಣ. ಡಾ. ಶಿವಕುಮಾರ ಸ್ವಾಮಿಗಳ ಉದಾತ್ತ ವಿಚಾರ ಮತ್ತು ಆ ದಾರಿಯಲ್ಲಿ ಮುನ್ನಡೆಯುವ ಶಕ್ತಿ ಇಂದಿನ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರಲ್ಲಿ ಬೆಳೆದು ಬರಬೇಕೆಂಬುದೇ ನಮ್ಮ ಹೃದಯಾಂತರಾಳದ ಸದಾಶಯ.

ಸಿದ್ಧಗಂಗಾ ಶ್ರೀಗಳ ಸಾಧನೆ ಮಠಗಳಿಗೆ ಮಾದರಿ

| ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪೇಜಾವರ ಮಠ, ಉಡುಪಿ

ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರು ಕಾಯಕ ಜೀವಿ ಹಾಗೂ ಕರ್ಮಯೋಗಿ. ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಊಟದ ಜತೆಗೆ ಶಿಕ್ಷಣಕ್ಕೆ ನೆರವಾದ ಶ್ರೀಗಳ ಸಾಧನೆ ಇತರ ಮಠಗಳಿಗೆ ಸ್ಪೂರ್ತಿ ನೀಡಿದೆ. ಅವರ ಅನ್ನ ದಾಸೋಹ ಮತ್ತು ಅಕ್ಷರದಾಸೋಹ ಮಾದರಿಯಾಗಿದೆ.

ನನಗೂ ಶ್ರೀಗಳಿಗೂ 23 ವರ್ಷಗಳ ಅಂತರವಿದೆ. ಪ್ರಾರಂಭದಲ್ಲಿ ಶ್ರೀಗಳ ಸಾಧನೆಯನ್ನು ಕೇಳಿ ನಾನೇ ಮಠಕ್ಕೆ ಮೊದಲ ಬಾರಿ ಭೇಟಿ ನೀಡಿದ್ದೆ. ಬಳಿಕ ಎರಡನೆಯ ಪರ್ಯಾಯದಲ್ಲಿ ವಿಶ್ವ ಹಿಂದೂ ಪರಿಷತ್​ನ ಧರ್ಮ ಸಂಸತ್​ಗೆ ಶ್ರೀಗಳನ್ನು ಆಹ್ವಾನಿಸಿದ್ದೆ. ಈ ಸಂದರ್ಭದಲ್ಲಿ ಉಡುಪಿಗೆ ಆಗಮಿಸಿದ್ದ ಶ್ರೀಗಳು ಎರಡು ದಿನ ವಾಸ್ತವ್ಯ ಹೂಡಿದ್ದರು. ಅಂದಿನಿಂದ ನಮ್ಮ ಬಾಂಧವ್ಯ ಬೆಳೆದಿದೆ. ಅನೇಕ ಬಾರಿ ಸಿದ್ಧಗಂಗಾ ಮಠದ ಕಾರ್ಯಕ್ರಮಗಳಿಗೆ ಶ್ರೀಗಳ ಆಹ್ವಾನದ ಮೇರೆಗೆ ತೆರಳಿದ್ದೆ. ಅವರ ಸಾಧನೆಯನ್ನು ಕಣ್ಣಾರೆ ಕಂಡಿದ್ದೇನೆ. ಅದೊಂದು ಅದ್ಭುತ. ಜಾತಿ-ಮತ ಭೇದವಿಲ್ಲದೆ ನಿತ್ಯ ನಡೆಯುವ ಅನ್ನದಾಸೋಹ ಪವಾಡವೇ ಸರಿ. ಹಿಂದೂ ಸಮಾಜದ ಉನ್ನತಿ, ಸಂಘಟನೆಗೆ ಶ್ರೀಗಳು ನಿರಂತರ ಮಾರ್ಗದರ್ಶನ, ಬೆಂಬಲ ನೀಡುತ್ತಿದ್ದರು. 111 ವರ್ಷ ಶ್ರೀಗಳು ಬದುಕಿದ್ದಾರೆ. ಇನ್ನೂ ನಮ್ಮ ಮುಂದೆ ಇರಬೇಕು ಎಂದು ಜನತೆ ಬಯಸುತ್ತಿರುವುದೇ ಅವರ ಸಾಧನಗೆ ಸಾಕ್ಷಿಯಾಗಿದೆ.

ಅಳಿಯುವುದು ಕಾಯ ಉಳಿಯುವುದು ಧ್ಯೇಯ

| ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಶ್ರೀ ತರಳಬಾಳು ಜಗದ್ಗುರು ಶಾಖಾಮಠ, ಸಾಣೇಹಳ್ಳಿ

ಕರ್ನಾಟಕದ ಮಠ-ಪೀಠಗಳ ಇತಿಹಾಸದಲ್ಲಿ ವಯೋವೃದ್ಧರೂ, ಜ್ಞಾನವೃದ್ಧರೂ, ಅನುಭಾವಿಗಳೂ ಆಗಿ ಅನ್ನ, ಆಶ್ರಯ ಮತ್ತು ಅಕ್ಷರ ದಾಸೋಹದ ಮೂಲಕ ಜನರ ಬದುಕಿಗೆ ಬೆಳಕನ್ನು ನೀಡುತ್ತಿದ್ದವರು ಸಿದ್ಧಗಂಗೆಯ ಡಾ. ಶಿವಕುಮಾರ ಸ್ವಾಮಿಗಳವರು. 111 ವರ್ಷಗಳ ಕಾಲ ಅವರು ಸಮಾಜದ ಏಳಿಗೆಗಾಗಿ ಶ್ರೀಗಂಧದ ಕೊರಡಿನಂತೆ ತೇದುಕೊಂಡವರು. ಒಬ್ಬ ಸ್ವಾಮಿ ಹೇಗಿರಬೇಕು ಎಂದು ತಮ್ಮ ಬದುಕಿನ ಮೂಲಕವೇ ತೋರಿಸಿಕೊಟ್ಟವರು. ಜಾತಿ, ಮತ, ಪಕ್ಷ, ಪಂಗಡಗಳ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ನೋಡಿದ ಅಪರೂಪದ ಬಸವಸ್ವರೂಪಿಗಳು. ಹಾಗಾಗಿ ಅವರ ಶ್ರೀಮಠದಲ್ಲಿ ಕರ್ನಾಟಕದ ಎಲ್ಲ ಜಿಲ್ಲೆಗಳ ವಿದ್ಯಾರ್ಥಿಗಳು ಜಾತ್ಯತೀತರಾಗಿ ಶಿಕ್ಷಣ ಪಡೆಯುತ್ತಿರುವುದು. ಮಠಗಳ ಪರಂಪರೆಗೆ ನವಚೈತನ್ಯ ತುಂಬಿದವರು ಪೂಜ್ಯರು. ಅವರು ಇಷ್ಟು ದೀರ್ಘ ಕಾಲ ಮನೋಬಲ, ಆತ್ಮಬಲದದ ಮೂಲಕವೇ ಬದುಕಿದ್ದರು ಎಂದರೆ ಅತಿಶಯೋಕ್ತಿಯಾಗದು.

ಸಿರಿಗೆರೆ ಮತ್ತು ಸಿದ್ಧಗಂಗಾ ಮಠಕ್ಕೆ ಅವಿನಾಭಾವ ಸಂಬಂಧ ಇತ್ತು, ಇದೆ. ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಹಾಗೂ ಸಿದ್ಧಗಂಗೆಯ ಡಾ. ಶಿವಕುಮಾರ ಸ್ವಾಮಿಗಳವರು ಸಮಕಾಲೀನರು. ಹೆಸರು ಒಂದೇ ಆಗಿರುವಂತೆ ಅವರಿಬ್ಬರ ದೇಹ ಎರಡಾಗಿದ್ದರೂ ಆತ್ಮ ಒಂದೇ ಎನ್ನುವ ರೀತಿಯಲ್ಲಿ ಬಾಳಿದವರು. ಉಭಯತರಲ್ಲೂ ಆತ್ಮೀಯ ಸಂಬಂಧವಿತ್ತು. ಸಿರಿಗೆರೆಯ ಕಾರ್ಯಕ್ರಮಗಳಿಗೆ ಸಿದ್ಧಗಂಗೆಯ ಶ್ರೀಗಳು, ಸಿದ್ಧಗಂಗೆಯ ಕಾರ್ಯಕ್ರಮಗಳಿಗೆ ಸಿರಿಗೆರೆ ಶ್ರೀಗಳವರು ದಯಮಾಡಿಸುತ್ತಿದ್ದುದು ಅಪರೂಪವೇನಲ್ಲ. ನಮ್ಮ ಗುರುಗಳ ಬಗ್ಗೆ ಸಿದ್ಧಗಂಗೆ ಶ್ರೀಗಳವರಿಗೆ ಅಪಾರ ಪ್ರೀತಿ ವಿಶ್ವಾಸಗಳಿದ್ದವು. ಇತ್ತೀಚೆಗೆ ಪೂಜ್ಯರು ವಯೋಧರ್ಮಕ್ಕನುಗುಣವಾಗಿ ಆಸ್ಪತ್ರೆ ಸೇರಬೇಕಾಗಿತ್ತು. ಆದರೆ ಅವರಿಗೆ ಆಸ್ಪತ್ರೆಯ ವಾತಾವರಣಕ್ಕಿಂತ ಮಠದ ಆವರಣವೇ ಪ್ರಿಯವಾಗಿತ್ತು. ಹಾಗಾಗಿ ಆಸ್ಪತ್ರೆಯಿಂದ ಮಠಕ್ಕೆ ಆಗಮಿಸಿದಾಗಲೇ ಅವರಲ್ಲಿ ಮತ್ತೆ ಚೈತನ್ಯ ಚಿಮ್ಮುತ್ತಿತ್ತು. ಶಿವಪೂಜಾ ಮಂತ್ರ ಹೇಳುತ್ತಿದ್ದರೆ, ಕೈಯಲ್ಲಿ ಭಸ್ಮದ ಗಟ್ಟಿ ಇಟ್ಟರೆ ಅವರಲ್ಲಿ ಚೈತನ್ಯ ಮೂಡುತ್ತಿತ್ತು. ಇದೇ ಜನವರಿ 3ರಂದು ಪೂಜ್ಯರ ದರ್ಶನಕ್ಕಾಗಿ ನಾವು ಸಿದ್ಧಗಂಗಾ ಶ್ರೀಮಠಕ್ಕೆ ಹೋಗಿದ್ದೆವು. ಆಗ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಖುರ್ಚಿಯ ಮೇಲೆ ಕೂತಿದ್ದ ಸ್ವಾಮಿಗಳು ಕಣ್ಮುಚ್ಚಿದ್ದರು. ಪಕ್ಕದಲ್ಲಿ ವಚನಗಳ ಸಿ.ಡಿ. ಕೇಳುತ್ತಿತ್ತು. ವೈದ್ಯರು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ತಮ್ಮ ದರ್ಶನಕ್ಕೆ ಆಗಮಿಸಿದ್ದಾರೆ ಎಂದಾಗ ನಮ್ಮ ಕೈಗಳನ್ನು ಬಿಗಿಯಾಗಿ ಹಿಡಿದುಕೊಂಡರು. ಸಾಣೇಹಳ್ಳಿಗೆ ತಾವು 2007ರಲ್ಲಿ ದಯಮಾಡಿಸಿದ್ದು ನೆನಪಿದೆಯೇ ಎಂದು ಕೇಳಿದಾಗ ಕತ್ತು ಹಾಕಿ ನೆನಪಿದೆ ಎಂದು ಉತ್ತರಿಸಿದರು. ಅವರಿಗೆ ಮಾತು ನಿಂತುಹೋಗಿತ್ತು. ಆದರೆ ಸ್ಪರ್ಶಜ್ಞಾನ ಮತ್ತು ಶ್ರವಣಜ್ಞಾನ ಚುರುಕಾಗಿತ್ತು. ಅವರು ನಮಗೆ ತೋರಿದ ಪ್ರತಿಕ್ರಿಯೆ ಕಂಡು ಅಲ್ಲಿದ್ದ ವೈದ್ಯರಿಗೇ ಆಶ್ಚರ್ಯ. ಸ್ವಾಮಿಜಿ ತಾವು ಬೇಗ ಚೇತರಿಸಿಕೊಳ್ಳಬೇಕು ಎಂದು ಹೇಳಿದಾಗ ಮೌನವೇ ಅವರ ಉತ್ತರವಾಗಿತ್ತು.

ಸಿದ್ಧಗಂಗಾ ಶ್ರೀಗಳು 2007 ನವೆಂಬರ್ 7ರಂದು ಸಾಣೇಹಳ್ಳಿಯ ನಾಟಕೋತ್ಸವಕ್ಕೆ ದಯಮಾಡಿಸಿದ್ದರು. ಸಮಯಕ್ಕೆ ಸರಿಯಾಗಿ ಬರುವ ಪದ್ಧತಿ ನಮ್ಮಲ್ಲಿ ಅನೇಕರಿಗಿಲ್ಲ. ಆದರೆ ಅಂದು ಪೂಜ್ಯರು ನಿಗದಿತ ಸಮಯಕ್ಕೆ ಮೊದಲೇ ಆಗಮಿಸಿದ್ದರು. ಕಾರಿನಲ್ಲೇ ನಮ್ಮ ಬಯಲು ರಂಗಮಂದಿರಕ್ಕೆ ಹೋಗೋಣ ಎಂದರೆ ಅವರು ಯಾರ ಮಾತನ್ನೂ ಕೇಳದೆ ಕಾರಿನಿಂದ ಕೆಳಗಿಳಿದು ಕಟ್ಟಿಗೆ ಆವಿಗೆಗಳನ್ನು ಮೆಟ್ಟಿ ವೇಗವಾಗಿ ಹೆಜ್ಜೆ ಹಾಕುತ್ತ ನಮಗಿಂತ ಮುಂದೆ ಮುಂದೆ ನಡೆಯುತ್ತಿದ್ದರು.

ಅಂದು ನಾಟಕೋತ್ಸವದ ಹಿನ್ನೆಲೆಯಲ್ಲಿ ‘ಶಿಕ್ಷಣದಲ್ಲಿ ಸಹಭಾಗಿತ್ವ’ ಎನ್ನುವ ವಿಷಯದ ಮೇಲೆ ವಿಚಾರಸಂಕಿರಣವಿತ್ತು. ಪೂಜ್ಯರು ಶತಕ ದಾಟಿದ್ದರೂ ತುಂಬಾ ಪ್ರಖರ ವೈಚಾರಿಕರಂತೆ ತಮ್ಮ ಚಿಂತನೆಗಳನ್ನು ಹಂಚಿಕೊಂಡಿದ್ದರು. ಸಿರಿಗೆರೆಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಶಿಕ್ಷಣ ಸೇವೆಯನ್ನು ಮುಕ್ತವಾಗಿ ಪ್ರಶಂಸಿಸಿದರು.

‘ಇವತ್ತು ನಾವೆಲ್ಲ ವಿಚಾರಪರರಾಗಬೇಕಿದೆ. ಆರ್ಥಿಕವಾಗಿ ಬಲಿಷ್ಠರಾಗದೆ ಏನೂ ಕೆಲಸ ಮಾಡ್ಲಿಕ್ಕಾಗೋದಿಲ್ಲ. ಇವತ್ತು ಸಮಾಜ ಎಂಥದ್ದು ಬೇಕು? ತರುಣ ಜನಾಂಗ ನಮ್ಮ ದೇಶದ ಆಸ್ತಿ. ಅವರೆಲ್ಲರೂ ನಿಷ್ಠಾವಂತರು, ಶಿಸ್ತು ಪರಿಪಾಲಕರು ಆಗಿರಬೇಕು. ಶಿಕ್ಷಕರು ಅಂಥದನ್ನು ತಂದುಕೊಡಬೇಕಾಗಿದೆ. ಮಕ್ಕಳನ್ನು ತಯಾರು ಮಾಡುವಂತಹ ಜವಾಬ್ದಾರಿ ವಹಿಸಬೇಕಾಗಿದೆ. ನಮ್ಮ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವವರು ಬೇಕಾಗಿದ್ದಾರೆ. ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ ಅಂದರು. ಆಚಾರ್ಯ ಅಂದರೆ ಶಿಕ್ಷಕ. ಶಿಕ್ಷಕರಿಗೆ ಮೇಲ್ಮಟ್ಟದ ಸ್ಥಾನವನ್ನು ತಂದುಕೊಟ್ಟರು. ಶಿಕ್ಷಕ ತ್ಯಾಗ ಜೀವನದ ಪ್ರತೀಕ. ಶಿಕ್ಷಕ ಸರಳ ಜೀವನದ ಪ್ರತೀಕ. ಶಿಕ್ಷಕ ಸೇವಾ ಧರ್ಮದ ಪ್ರತೀಕ. ಶಿಕ್ಷಕ ಘನೀಭೂತವಾಗಿರುವಂತಹ ಪಾಂಡಿತ್ಯವುಳ್ಳವನು. ಅಪಾರ ಜ್ಞಾನವುಳ್ಳ ಸಂಸ್ಕಾರವಂತ. ಅಂಥ ಶಿಕ್ಷಕರು ನಿಜಕ್ಕೂ ತಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ಸಲ್ಲಿಸಿದಾಗ, ಯುವ ಜನಾಂಗವನ್ನು ತಯಾರು ಮಾಡುವ ಕಾರ್ಯ ಯಶಸ್ವಿಯಾದಾಗ ಮಗು ಚೆನ್ನಾಗಿ ಬೆಳೆದು ಶಿಕ್ಷಣ ಪಡೆದು ಒಳ್ಳೆಯ ಸಮಾಜ ರಚನೆ ಮಾಡುವ ಅವಕಾಶವಾಗುವುದು…’ ಎಂದೆಲ್ಲ ಅಪ್ಪಣೆ ಕೊಡಿಸಿದ್ದು ಇಂದಿಗೂ ಪ್ರಸ್ತುತವಾಗಿದೆ.

ಗ್ರಾಮಾಂತರ ಪ್ರದೇಶ ಉದ್ಧಾರವಾದರೆ ಮಾತ್ರ ದೇಶ ಉದ್ಧಾರವಾಗುತ್ತದೆ ಎನ್ನುವುದು ಪೂಜ್ಯರ ಆಶಯವಾಗಿತ್ತು. ಅದಕ್ಕನುಗುಣವಾಗಿಯೇ ಅವರು ಗ್ರಾಮಾಂತರ ಮಕ್ಕಳ ಶಿಕ್ಷಣಕ್ಕಾಗಿ ಶಿಕ್ಷಣಸಂಸ್ಥೆಗಳನ್ನು ತೆರೆದು ಅನ್ನ, ಜ್ಞಾನದಾಸೋಹವನ್ನು ಮಾಡುತ್ತ ಬಂದರು. ಬಸವಣ್ಣನವರ ಬಗ್ಗೆ ಅಪಾರ ಭಕ್ತಿ ಗೌರವ ಇಟ್ಟುಕೊಂಡಿದ್ದ ಪೂಜ್ಯರು ಬಸವೇಶ್ವರ ನಾಟಕವನ್ನು ತಮ್ಮ ಕಲಾತಂಡದಿಂದ ಸಾವಿರಾರು ಪ್ರಯೋಗಗಳನ್ನು ಮಾಡಿಸಿದ್ದು ಗಮನಾರ್ಹ. ಅಷ್ಟೇ ಅಲ್ಲ; ತಾವು ಕೂತು ಆ ನಾಟಕವನ್ನು ಪೂರ್ಣಪ್ರಮಾಣದಲ್ಲಿ ಅದೆಷ್ಟು ಸಾರಿ ನೋಡಿದ್ದರೋ ಲೆಕ್ಕವಿಲ್ಲ. ಅವರು ಬಹುಶಃ ಸೋಮವಾರವೇ ಶಿವನ ಪಾದ ಸೇರಬೇಕೆಂದು ಸಂಕಲ್ಪ ಮಾಡಿದ್ದರೋ ಏನೋ? ಹಾಗಂತ ಇತರ ವಾರಗಳು ಶುಭವಲ್ಲ ಎಂದೇನಲ್ಲ. ಪೂಜ್ಯರ ಅಗಲುವಿಕೆಯಿಂದ ದುಃಖಿತರಾಗದೆ ಅವರ ಕಾಯಕ ಶ್ರದ್ಧೆಯನ್ನು ಭಕ್ತಸಮೂಹ ಮೈಗೂಡಿಸಿಕೊಂಡರೆ ಅದೇ ನಾವು ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿ.

ಸ್ವಾಮಿತ್ವಕ್ಕೆ ಆದರ್ಶಪ್ರಾಯವಾದ ಬದುಕು

| ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಮೂರುಸಾವಿರ ಮಠ, ಹುಬ್ಬಳ್ಳಿ

ತುಮಕೂರಿನ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಮಹಾಸ್ವಾಮೀಜಿಯವರು ‘ಸ್ವಾಮಿತ್ವ’ ಎಂಬ ಪದಕ್ಕೆ ಆದರ್ಶಪ್ರಾಯರಾಗಿ ಬದುಕಿದವರು. ಪೂಜ್ಯರು ಯೋಗ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸಿದ್ಧಿಸ್ಥಿತಿ ತಲುಪಿದ್ದರು. ಸಿದ್ಧಗಂಗಾ ಸ್ವಾಮೀಜಿಯವರು ಸಿದ್ಧಿಪುರುಷರೂ, ತ್ರಿಕರಣಶುದ್ಧರೂ ಆಗಿದ್ದರು. ತಮ್ಮ ಬಳಿ ಯಾರೇ ಬಂದರೂ ಅವರನ್ನು ಹಸಿವಿನಿಂದ ಕಳಿಸಿದವರಲ್ಲ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ, ಸಂಸ್ಕಾರ ನೀಡಿ, ದಾಸೋಹತತ್ವದಡಿ ಲೋಕಕಲ್ಯಾಣ ಕಾರ್ಯವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದವರು. ಆ ಮೂಲಕ ಈ ದೇಶದ ತೀರ ಜನಸಾಮಾನ್ಯರಿಗೂ ಯಾವುದೇ ಭೇದ ಭಾವವಿಲ್ಲದೆ ಸೇವೆ ನೀಡಿದ ಮಹಾತ್ಮರು. ಹುಬ್ಬಳ್ಳಿ ಮೂರುಸಾವಿರ ಮಠದ ಬಗ್ಗೆ ಸಿದ್ಧಗಂಗಾ ಶ್ರೀಗಳು ಅಪಾರ ಗೌರವ ಇಟ್ಟುಕೊಂಡಿದ್ದರು. ಹಿಂದಿನ ಗುರುಗಳಾದ ಶ್ರೀ ಗಂಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳೊಂದಿಗೆ ಸಂಪರ್ಕದಲ್ಲಿದ್ದರು. ಮೂರುಸಾವಿರ ಮಠಕ್ಕೂ ಸಿದ್ಧಗಂಗಾ ಸ್ವಾಮೀಜಿ ಬಂದು ಹೋಗಿದ್ದಾರೆ. ಮೂರು ಸಾವಿರ ಮಠಕ್ಕೆ ಸಂಬಂಧಿಸಿ ಶ್ರೀಮಠದ ಚರಿತ್ರೆ ಕುರಿತ ಕೃತಿಗಳನ್ನು ಸಿದ್ಧಗಂಗಾ ಮಠದಿಂದ ಪ್ರಕಟಿಸಿದ್ದಾರೆ. ಹೀಗೆ ಇತರ ಮಠಗಳ ಬಗ್ಗೆಯೂ ಅವರಿಗೆ ವಿಶೇಷ ಗೌರವ ಆದರ ಇತ್ತು. ಎಲ್ಲಕ್ಕಿಂತ ಮುಖ್ಯವಾಗಿ, ಧಾರ್ವಿುಕ ಕೇಂದ್ರಗಳ ಇತಿಹಾಸದ ಬಗ್ಗೆ ಕುತೂಹಲವೂ, ಅದು ಜನಸಾಮಾನ್ಯರಿಗೆ ತಿಳಿಯಬೇಕು ಎಂಬ ಕಾಳಜಿಯೂ ಇತ್ತು. ಅವರು ತಮ್ಮ ನಿಷ್ಕಲ್ಮಶ ಭಾವದಿಂದ ಎಲ್ಲರ ಪ್ರೀತ್ಯಾದರಕ್ಕೆ ಪಾತ್ರರಾಗಿ ಹೃದಯ ಸಿಂಹಾಸನದಲ್ಲಿ ಪ್ರತಿಷ್ಠಾಪಿತರಾಗಿದ್ದಾರೆ.

ಜೀವನವೇ ಸಂದೇಶದಂತೆ ಬದುಕಿದವರು

| ಶ್ರೀ ಸಿದ್ದೇಶ್ವರ ಶ್ರೀಗಳು ಜ್ಞಾನಯೋಗಾಶ್ರಮ, ವಿಜಯಪುರ

ಜಗತ್ತು ದಾಸೋಹತತ್ವದ ಮೇಲೆ ನಿಂತಿದೆ. ಒಂದು ಹೂವು ಅರಳಿ ಸುಗಂಧವನ್ನು ಸೂಸುತ್ತದೆ, ಮಕರಂದವನ್ನು ಬೀರುತ್ತದೆ. ಮಾನವನಿಂದ ಒಂದು ಬೊಗಸೆ ನೀರನ್ನು ಸ್ವೀಕರಿಸಿದ ತೆಂಗಿನಮರ ರುಚಿರುಚಿಯಾದ ಸವಿಸವಿಯಾದ ಎಳನೀರನ್ನು ನೂರಾರು ವರ್ಷಗಳ ಕಾಲ ಕೊಡುತ್ತದೆ ಮತ್ತು ಯಾವುದೇ ಫಲಾಪೇಕ್ಷೆ ಇಲ್ಲದೆ ಜಗತ್ತನ್ನು ಬೆಳಗುವ ಸೂರ್ಯನು ಯಾರ ಮನೆಗೂ ಬಿಲ್ ಕಳಿಸಿಲ್ಲ. ಉಚಿತವಾಗಿಯೇ ಬೆಳಗಿನಿಂದ ಸಂಜೆಯವರೆಗೆ ಬೆಳಗುತ್ತಾನೆ. ಜಗತ್ತಿಗೆ ಕಾವನ್ನು ಕೊಡುತ್ತಾನೆ. ಇವೆಲ್ಲ ದಾಸೋಹ ತತ್ವದ ವ್ಯಾಪಕತೆಯನ್ನು ಎತ್ತಿ ತೋರುವ ಉದಾಹರಣೆಗಳು. ಜಗತ್ತಿನ ಎಲ್ಲ ದೇಶಗಳಲ್ಲೂ ಈ ರೀತಿಯ ದಾಸೋಹಿಗಳು ಆಗಿಹೋಗಿದ್ದಾರೆ. ಒಬ್ಬ ವಿಜ್ಞಾನಿ ತನ್ನ ಜ್ಞಾನದಿಂದ ಜಗತ್ತನ್ನು ಸಮೃದ್ಧ ಮತ್ತು ಶ್ರೀಮಂತವಾಗಿ ಮಾಡುತ್ತಾನೆ. ಇದು ಜ್ಞಾನದಾಸೋಹ. ಹೀಗೆ ದಾಸೋಹವನ್ನು ಉಸಿರಾಗಿಸಿಕೊಂಡು ಬದುಕಿದವರು ಶತಾಯುಷಿಗಳಾದ ಪರಮಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು. ಜೀವನವೇ ಒಂದು ಸಂದೇಶ ಎನ್ನುವಂತೆ ಬದುಕಿದರು. ಅನ್ನದಾಸೋಹ, ವಿದ್ಯಾದಾಸೋಹ, ಸದ್ಭಾವದಾಸೋಹಗಳ ಮೂಲಕ ಲಕ್ಷಾಂತರ ಜನರ ಬದುಕಿಗೆ ಬೆಳಕಾದವರು. ಕೋಟ್ಯಂತರ ಜನರಿಗೆ ಆದರ್ಶಪ್ರಾಯರು ಪರಮಪೂಜ್ಯರು.

ಶ್ರೀಗಳ ಪಾದುಕಾಪ್ರದಾನ

| ಶ್ರೀ ಗವಿಸಿದ್ಧೇಶ್ವರ ಶ್ರೀಗಳು ಗವಿಮಠ, ಕೊಪ್ಪಳ

ಗವಿಮಠ ಹಾಗೂ ಸಿದ್ಧಗಂಗಾ ಶ್ರೀಗಳ ಒಡನಾಟ ಬಹಳ ಹಿಂದಿನದು. 2005ರಲ್ಲಿ ಗವಿಮಠದ ಎರಡು ಸಾವಿರ ವಿದ್ಯಾರ್ಥಿಗಳ ಉಚಿತ ಪ್ರಸಾದನಿಲಯದ ಅಡಿಗಲ್ಲು ಸಮಾರಂಭಕ್ಕೆ ಡಾ.ಶಿವಕುಮಾರ ಸ್ವಾಮೀಜಿ ಆಗಮಿಸಿದ್ದರು. 2006ರಲ್ಲಿ ಉದ್ಘಾಟನೆಯನ್ನೂ ಅವರೇ ನೆರವೇರಿಸಿದ್ದರು.

ಗವಿಮಠಕ್ಕೂ ಹಾಗೂ ಸಿದ್ಧಗಂಗಾ ಮಠಕ್ಕೂ ಅವಿನಾಭಾವ ಸಂಬಂಧವಿದೆ. 2002ರಲ್ಲಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಪೀಠಾಧಿಪತಿಗಳಾದ ಮೇಲೆ ನಾಡಿನ ಹಿರಿಯ ಶಿಕ್ಷಣ ಸಂಸ್ಥೆಗಳನ್ನು, ಪೂಜ್ಯ ಸ್ವಾಮಿಗಳವರನ್ನು ಸಂದರ್ಶಿಸಿ ಕೊಪ್ಪಳ ಜನತೆಗೆ ಒಳಿತು ಮಾಡಬೇಕೆಂಬ ದೃಢಸಂಕಲ್ಪ ಮಾಡಿದ್ದರ ಫಲವೇ 2000 ವಿದ್ಯಾರ್ಥಿಗಳ ಉಚಿತ ವಸತಿ ಮತ್ತು ಪ್ರಸಾದ ನಿಲಯ. ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಸಮೀಪದ ನಾಗನಕಲ್ ಗ್ರಾಮದ ಬಳಿಯಿರುವ ತಪೋವನಕ್ಕೆ ಬಂದಿದ್ದರು. ನೂರು ವರ್ಷ ತುಂಬುವ ಹೊಸ್ತಿಲಲ್ಲಿದ್ದಾಗ ಪಟ್ಟಣದ ಸದ್ಭಕ್ತರು ನಾಡಿನ ನಾನಾ ಹಿರಿಯ ಸ್ವಾಮಿಗಳ ನೇತೃತ್ವದಲ್ಲಿ 2006ರ ಡಿ. 9ರಂದು ಮೊದಲ ಗುರುವಂದನಾ ಕಾರ್ಯಕ್ರಮ ನಡೆಸಲಾಗಿತ್ತು. ಆಗ ಎಲ್​ವಿಟಿ ಸಮೂಹ ಸಂಸ್ಥೆ ನಿರ್ವಿುಸಿದ್ದ ತೋಂಟದಾರ್ಯ ತಪೋವನಕ್ಕೆ ಭೇಟಿ ನೀಡಿದ್ದರು. ತಪೋವನದಲ್ಲಿರುವ ಪ್ರಕೃತಿಯ ಸೊಬಗಿಗೆ ಮನಸೋತ ಶ್ರೀಗಳು ತಮ್ಮ ಪಾದುಕೆಗಳನ್ನು ಸಂಸ್ಥೆಯ ಮಾಲೀಕರಿಗೆ ನೀಡಿದ್ದರು. ಅಂದಿನಿಂದ ಇಂದಿನವರೆಗೂ ಶ್ರೀಗಳ ಪಾದುಕೆಗಳು ತಪೋವನದಲ್ಲೇ ಗಾಜಿನ ಪೆಟ್ಟಿಗೆಯಲ್ಲಿ ಸುರಕ್ಷಿತವಾಗಿದ್ದು, ನಿತ್ಯ ಪೂಜೆಗೊಳ್ಳುತ್ತಿವೆ.

ಸಮಾಜಕ್ಕೆ ಸಮರ್ಪಿತ ಬದುಕು

| ಶ್ರೀ ನಿರ್ಮಲಾನಂದನಾಥ ಸ್ವಾಮಿಗಳು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ

ನಮ್ಮ ನಾಡಿನಲ್ಲಿ ಮಠಮಾನ್ಯಗಳ ಬಗ್ಗೆ ಜನರ ಹೃನ್ಮನದಲ್ಲಿ ಪವಿತ್ರ ಭಾವನೆಗಳಿವೆ. ಧರ್ಮಬೋಧೆ ಹಾಗೂ ಧಾರ್ವಿುಕ ಆಚರಣೆಗಳಿಗೆ ಮಾತ್ರ ಸೀಮಿತಗೊಳ್ಳದೆ ಜನಸಾಮಾನ್ಯರ ಜೀವನ ಹಾಗೂ ಬದುಕನ್ನು ಸುವ್ಯವಸ್ಥಿತಗೊಳಿಸುವ ಉದಾತ್ತ ಧ್ಯೇಯವನ್ನು ಹೊಂದಿರುವ ಮಠಗಳು ತಮ್ಮ ವೈಶಿಷ್ಟ್ಯೂರ್ಣ ಸೇವೆಯಿಂದಾಗಿ ಎಲ್ಲರ ಗೌರವಕ್ಕೆ ಪಾತ್ರವಾಗಿವೆ. ಮಠಮಾನ್ಯಗಳು ಸಮಾಜೋದ್ಧಾರವನ್ನೇ ಗುರಿಯಾಗಿಸಿಕೊಂಡು ದುಡಿದಾಗ ಜನಜೀವನ ಸಹಜವಾಗಿಯೇ ಉನ್ನತಿಯತ್ತ ಸಾಗುತ್ತದೆ. ಆ ನಿಟ್ಟಿನಲ್ಲಿ ಇಂದು ಕರ್ನಾಟಕವು ಧಾರ್ವಿುಕ, ಶೈಕ್ಷಣಿಕ, ಸಾಮಾಜಿಕ ಮುಂತಾದ ಕ್ಷೇತ್ರಗಳಲ್ಲಿ ಕಂಡಿರುವ ಅದ್ವಿತೀಯ ಸಾಧನೆಯ ಹಿಂದೆ ಮಠಮಾನ್ಯಗಳ ಕೊಡುಗೆ ಅಪೂರ್ವವಾದುದು. ಜನಮನದ ಜ್ಞಾನಾಭ್ಯುದಯಕ್ಕಾಗಿ ಹಗಲಿರುಳೆನ್ನದೆ ಶ್ರಮಿಸುತ್ತಿರುವ ಅಂತಹ ಮಠಗಳಲ್ಲಿ ಶ್ರೀ ಸಿದ್ಧಗಂಗಾ ಮಠವೂ ಪ್ರಖ್ಯಾತವಾಗಿದೆ. ನಮ್ಮ ಪರಮಪೂಜ್ಯ ಗುರುಗಳಾದ ಜಗದ್ಗುರು ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳವರು ಹಾಗೂ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳವರು ಪರಸ್ಪರ ಗೌರವಾದರಣೀಯರಾಗಿದ್ದರು. ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ ನಡೆಯುವ ಧರ್ಮಸಭೆಗಳಲ್ಲಿ ಸಿದ್ಧಗಂಗಾ ಶ್ರೀಗಳವರ ದಿವ್ಯ ಉಪಸ್ಥಿತಿಯನ್ನು ನಮ್ಮ ಪೂಜ್ಯ ಗುರೂಜಿಯವರು ಸದಾ ಬಯಸುತ್ತಿದ್ದರು. ನಮ್ಮ ಶ್ರೀಮಠದ ಹತ್ತುಹಲವು ಧಾರ್ವಿುಕ ಸಮಾರಂಭಗಳಲ್ಲಿ ಪಾಲ್ಗೊಂಡು ಪೂಜ್ಯರು ನೀಡಿರುವ ಅನುಗ್ರಹ ಸಂದೇಶಗಳು ಯಾವತ್ತೂ ನಮಗೆ ದಾರಿದೀಪವಾಗಿವೆ.

ಶ್ರೇಷ್ಠ ಸೇವೆಯ ಮಾದರಿ ಬದುಕು

| ಡಾ. ಡಿ. ವೀರೇಂದ್ರ ಹೆಗ್ಗಡೆ, ಧರ್ಮಸ್ಥಳದ ಧರ್ಮಾಧಿಕಾರಿಗಳು

ಸಿದ್ಧಗಂಗಾ ಮಠದ ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿ ತಮ್ಮ ಬಾಳನ್ನು ಸಾರ್ಥಕವಾಗಿ ಪೂರೈಸಿದ್ದಾರೆ. ಶಾಸ್ತ್ರಗಳಲ್ಲಿ ದೇಹ ಮತ್ತು ಆತ್ಮದ ಭೇದವನ್ನು ತಿಳಿಸಲಾಗಿದೆ. ಆತ್ಮಕಲ್ಯಾಣಕ್ಕಾಗಿ ಮತ್ತು ಸಮಾಜದ ಉನ್ನತಿಗಾಗಿಯೇ ದೇಹವನ್ನು ಬಳಸಬೇಕು ಎನ್ನುವುದು ಭಾರತೀಯರ ನಂಬಿಕೆ. ತಮ್ಮ ಬದುಕನ್ನು ಯಶಸ್ವಿಯಾಗಿ ನಿರ್ವಹಿಸುವುದು ಹೇಗೆ ಎಂಬುದನ್ನು ಸ್ವಾಮೀಜಿಯವರು ತಮ್ಮ ಬದುಕಿನಲ್ಲಿ ಮಾದರಿಯಾಗಿ ತೋರಿಸಿಕೊಟ್ಟವರು. ಆತ್ಮೋನ್ನತಿಗಾಗಿ ಪೂಜೆ, ಧ್ಯಾನ, ತಪಸ್ಸು – ಅಂತೆಯೇ ಸಮಾಜದ ಕಲ್ಯಾಣಕ್ಕಾಗಿ ದೇಹವನ್ನು ಕೊರಡಿನಂತೆ ಸವೆಸಿದರು. ಧಾರ್ವಿುಕರಾದರೂ ಅವರಲ್ಲಿ ದೇಶಭಕ್ತಿ ಆಳವಾಗಿತ್ತು. ದೇಶ ಉದ್ಧಾರವಾಗಬೇಕಾದರೆ ಜನತೆಯ ಬಡತನ ನಿವಾರಣೆ ಆಗಬೇಕು, ವಿದ್ಯಾರ್ಜನೆಗೆ ಅವಕಾಶ ಬೇಕು ಎಂದು ಯೋಜನೆಗಳನ್ನು ಹಾಕಿಕೊಂಡರು. ಮೂರು ತಲೆಮಾರುಗಳ ಶಿಕ್ಷಣದಿಂದ ಸಮಾಜದಲ್ಲಿದ್ದ ಜಾತೀಯತೆಯ ಅಂತರಗಳನ್ನು ಹೋಗಲಾಡಿಸಿ ಎಲ್ಲರಿಗೂ ಸಮಾನ ಅವಕಾಶವನ್ನು ನೀಡಿದರು. ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ಸ್ವ ಉದ್ಯೋಗಕ್ಕೆ ಮಾರ್ಗದರ್ಶನ ನೀಡಿದರು. ಅವರ ಪ್ರೇರಣೆಯಿಂದ ನೂರಾರು ಮಠ ಮಂದಿರಗಳು ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿದವು. ಪೂಜ್ಯರು ಸರ್ಕಾರಕ್ಕೆ ಮಾರ್ಗದರ್ಶನ ನೀಡುವ ಹಿರಿಯರಾಗಿದ್ದರು. ಕಳೆದ ಎಪ್ಪತ್ತೆರಡು ವರ್ಷಗಳಲ್ಲಿ ಕರ್ನಾಟಕದ ಸರ್ಕಾರಗಳು ರಚನೆಯಾದಾಗ ಪೂಜ್ಯ ಶ್ರೀಗಳ ಆಶೀರ್ವಾದ ಪಡೆಯಲು ಮುತ್ಸದ್ದಿಗಳು ಧಾವಿಸುತ್ತಿದ್ದರು. ಪೂಜ್ಯರು ತಮ್ಮ ಹಿರಿತನದಿಂದ ಮಾರ್ಗದರ್ಶನ ನೀಡುತ್ತಾ ಬಂದರು. ಸರ್ಕಾರದ ಅನೇಕ ಜನಪರ ಯೋಜನೆಗಳಲ್ಲಿ ಪೂಜ್ಯರ ಪ್ರೇರಣೆ ಮಾರ್ಗದರ್ಶನಗಳಿವೆ. ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಾರವಾದ ಪ್ರೀತಿ ಮತ್ತು ಆಶೀರ್ವಾದವನ್ನು ಇತ್ತಿದ್ದ ಪೂಜ್ಯರು ಅನೇಕ ಬಾರಿ ಕ್ಷೇತ್ರಕ್ಕೆ ಭೇಟಿ ಕೊಟ್ಟಿರುವುದನ್ನು ಇಲ್ಲಿ ಸ್ಮರಿಸಿ, ಅವರು ಖಂಡಿತವಾಗಿಯೂ ಸ್ವರ್ಗಾರೋಹಣ ಮಾಡಿದ್ದಾರೆ ಎಂಬ ಭರವಸೆಯೊಂದಿಗೆ ನನ್ನ ಗೌರವವನ್ನು ಸಲ್ಲಿಸುತ್ತೇನೆ.

Stay connected

278,753FansLike
588FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...