ಆರತಿಪುರದಲ್ಲಿ ಪುರಾತತ್ವ ಇಲಾಖೆಯಿಂದ ಮ್ಯೂಸಿಯಂವಿಜಯವಾಣಿ ಸುದ್ದಿಜಾಲ ಶ್ರವಣಬೆಳಗೊಳ
ಮಂಡ್ಯ ಜಿಲ್ಲೆಯ ಆರತಿಪುರದಲ್ಲಿ ನೂರಾರು ಸಂಖ್ಯೆಯಲ್ಲಿ ಜಿನ ಮೂರ್ತಿಗಳು ದೊರಕಿದ್ದು, ಪ್ರಾಚೀನ ಇತಿಹಾಸವನ್ನು ಬೆಳಕಿಗೆ ತರಲು ಮ್ಯೂಸಿಯಂ ತೆರೆಯಲು ಕೇಂದ್ರ ಪುರಾತತ್ವ ಇಲಾಖೆ ಮುಂದಾಗಿದೆ ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಪಟ್ಟಣದ ಚಾವುಂಡರಾಯ ಸಭಾಮಂಟಪದಲ್ಲಿ ಆಯೋಜಿಸಿದ್ದ ಮಂಡ್ಯ ಜಿಲ್ಲೆಯ ಆರತಿಪುರ ಕ್ಷೇತ್ರದ ಜೈನ ಮಠದ ನೂತನ ಪಟ್ಟಾ ಚಾರ್ಯರಾಗಿ ಪಟ್ಟಾಭಿಷಕ್ತರಾದ ಸಿದ್ಧಾಂತಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಪುರ ಪ್ರವೇಶ ಮತ್ತು ಅಭಿನಂದನಾ ಸಮಾರಂಭದಲ್ಲಿ ಸ್ವಾಗತಿಸಿ ಆಶೀರ್ವಚನ ನೀಡಿದರು.
ಗುರುಕುಲ ಮತ್ತು ಶಿಕ್ಷಣ ಸಂಸ್ಥೆಗಳನ್ನು ತೆರೆದು ಆ ಭಾಗದ ಸರ್ವರ ಹಿತಕ್ಕಾಗಿ ಸರ್ವೋತೋಮುಖ ಅಭಿವೃದ್ಧಿ ಹೊಂದುವಂತೆ ಆರತಿಪುರವನ್ನು ಬೆಳೆಸಲಿ ಎಂದು ಸಲಹೆ ನೀಡಿದರು. ಅಮರ ಕೀರ್ತಿ ಮಹಾರಾಜರು ಮಾತನಾಡಿದರು.
ಸಿದ್ಧಾಂತಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಗೆ ಜಲ, ಗಂಧ, ಅಕ್ಷತೆ, ಪುಷ್ಪ, ಚರು, ದೀಪ, ಧೂಪ, ಫಲ ಅರ್ಘ್ಯಗಳಿಂದ ಪೂಜಿಸಿ ಅಷ್ಠವಿಧಾರ್ಚನೆಯನ್ನು ನೆರವೇರಿಸಲಾಯಿತು. ಚಾರುಕೀರ್ತಿ ಶ್ರೀಗಳು ಕ್ಷೇತ್ರದ ಪರಂಪರೆಯಂತೆ ಆರತಿಪುರದ ನೂತನ ಸಿದ್ಧಾಂತಕೀರ್ತಿ ಶ್ರೀಗಳನ್ನು ಗೌರವಿಸಿ ಆಗಮ ಶಾಸ್ತ್ರದ ಜಯಧವಲ ಗ್ರಂಥಗಳನ್ನು ನೀಡಿದರು. ಇಲ್ಲಿನ ಜೈನ ಸಮಾಜ, ಮಹಿಳಾ ಸಮಾಜ, ಮತ್ತು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಶ್ರೀಗಳಿಗೆ ಫಲ ಅರ್ಪಿಸಿ ಗೌರವಿಸಿದರು.
ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ವಿದ್ಯಾನಂದ ಧರ್ಮಶಾಲೆಯಿಂದ ಚಾವುಂಡರಾಯ ಸಭಾ ಮಂಟಪದವರೆಗೂ ಸಿದ್ಧಾಂತ ಕೀರ್ತಿ ಶ್ರೀಗಳನ್ನು ತೆರೆದ ವಾಹನದಲ್ಲಿ ಇರಿಸಿದ್ದ ಬೆಳ್ಳಿ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಪೂರ್ಣ ಕುಂಭ, ಧರ್ಮಧ್ವಜಗಳನ್ನು ಹಿಡಿದ ಬಾಲಕ- ಬಾಲಕಿಯರು ಕಳಸ ಹೊತ್ತ ಮಹಿಳೆಯರು ಮಂಗಳವಾದ್ಯ ಚಿಟ್ಟಿಮೇಳ, ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು. ಅಮೋಘಕೀರ್ತಿ ಮಹಾರಾಜರು ಮತ್ತು ಸೋಂದಾ ಜೈನಮಠದ ಭಟ್ಟಾಕಲಂಕ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಂಡ್ಯ ಜೈನ ಸಮಾಜದ ಅಧ್ಯಕ್ಷ ಬಿ.ಎಸ್.ಪದ್ಮನಾಭ್, ಕಾರ್ಯದರ್ಶಿ ಶ್ರೀಧರ್ ಆರತಿಪುರ ಕ್ಷೇತ್ರದ ಅಧ್ಯಕ್ಷ ಬ್ರಹ್ಮದೇವ್, ಮಹಿಳಾ ಅಧ್ಯಕ್ಷೆ ಜಯಂತಿ ಮಹೇಂದ್ರಬಾಬು ಮೊದಲಾದವರು ಹಾಜರಿದ್ದರು.

Leave a Reply

Your email address will not be published. Required fields are marked *