ಬೆಂಗಳೂರು: ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು 500 ಕೋಟಿ ರೂಪಾಯಿಗೂ ಅಧಿಕ ಹೂಡಿಕೆ ಮಾಡಲು ಖಾಸಗಿ ವಲಯಗಳು ಸ್ವಯಂ ಪ್ರೇರಿತವಾಗಿ ಮುಂದೆ ಬಂದಿದ್ದು, ಇದಕ್ಕೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಡಿ.14ರಿಂದ 16ರ ವರೆಗೆ ನಡೆಯಲಿರುವ ‘ದಕ್ಷಿಣ ಭಾರತ್ ಉತ್ಸವ’ಕ್ಕೆ ಮುನ್ನ ಪೂರ್ವ ಕಿರು ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದ ಸಚಿವರು, ರಾಜ್ಯದಲ್ಲಿ ಅಂದಾಜು 550 ಸ್ಮಾರಕಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಲು ಸರ್ಕಾರ ಯೋಜನೆಯನ್ನು ರೂಪಿಸಿದೆ. ಇಷ್ಟೂ ಸ್ಮಾರಕಗಳು ಖಾಸಗಿ ವಲಯಗಳಿಗೆ ದತ್ತು ಸ್ವೀಕಾರಕ್ಕೆ ಲಭ್ಯವಿದೆ. ಈ ಸ್ಮಾರಕಗಳಲ್ಲದೆ ಇತರ ಪಾರಂಪರಿಕ ಸ್ಥಳಗಳನ್ನು ಪ್ರವಾಸೋದ್ಯಮಕ್ಕೆ ತೆರೆಯಲಾಗುವುದು. ಇದರಿಂದ ರಾಜ್ಯದಲ್ಲಿ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿ ಹೆಚ್ಚಾಗಲಿದ್ದು, ಈ ವಿನೂತನ ಕಾರ್ಯಕ್ರಮಕ್ಕೆ ಸೆ.25ರಂದು ಚಾಲನೆ ನೀಡಲಾಗುವುದು ಎಂದರು.
ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸ್ವಯಂಪ್ರೇರಣೆಯಿಂದ ಹೂಡಿಕೆ ಮಾಡುವ ಖಾಸಗಿ ವಲಯದ ನಿರ್ಧಾರವನ್ನು ಶ್ಲಾಘನೀಯ. ಕೆಲವರು ಇದರಿಂದ ಲಾಭ ಗಳಿಸದಿದ್ದರೂ, ಪ್ರಪಂಚದ ಜನರಿಗೆ ಅನುಭವ ಸಿಕ್ಕಿ ಉಪಯೋಗವಾಗಲಿದೆ. ಈಗ ಕರ್ನಾಟಕವು ಯುನೆಸ್ಕೋದಿಂದ ಮಾನ್ಯತೆ ಪಡೆದಿರುವ ನಾಲ್ಕು ಪಾರಂಪರಿಕ ತಾಣಗಳನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಅವುಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಲಿದೆ. ಸವದತ್ತಿ ದೇವಸ್ಥಾನವು ವಾರ್ಷಿಕವಾಗಿ 1.25 ಕೋಟಿಗೂ ಅಧಿಕ ಪ್ರವಾಸಿಗರನ್ನು ಆಕರ್ಷಿಸಿದೆ. ಕರ್ನಾಟಕವು ಸಾಂಸ್ಕೃತಿಕ ಪರಂಪರೆ, ಪರಿಸರ ಪ್ರೇಕ್ಷಣೀಯ ಸ್ಥಳಗಳು, ಸಾಹಸ ಅನ್ವೇಷಣೆ ಕೇಂದ್ರಗಳು, ತೀರ್ಥಕ್ಷೇತ್ರ ಹೀಗೆ ವಿವಿಧ ಪ್ರವಾಸೋದ್ಯಮ ಮಾರ್ಗಗಳನ್ನು ಹೊಂದಿರುವುದು ರಾಜ್ಯಕ್ಕೆ ಅನುಕೂಲಕರವಾಗಿದೆ ಎಂದು ಸಚಿವರು ವಿವರಿಸಿದರು.
ದಕ್ಷಿಣದ ರಾಜ್ಯಗಳು ಒಗ್ಗೂಡಲಿ:
ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಮಾತನಾಡಿ, ಒಟ್ಟಾರೆ ಪ್ರವಾಸೋದ್ಯಮವನ್ನು ಉತ್ತೇಜಿಸಲು ದಕ್ಷಿಣ ಭಾರತದ ರಾಜ್ಯಗಳು ಒಗ್ಗೂಡುವ ಅಗತ್ಯವಿದೆ. ನಾವು ಒಟ್ಟಿಗೆ ಕೆಲಸ ಮಾಡಿ, ತಡೆರಹಿತ ಏಕೀಕೃತ ಪ್ರವಾಸೋದ್ಯಮ ಮತ್ತು ಪ್ರಯಾಣ ಉದ್ಯಮವನ್ನು ತರಬೇಕಿದೆ. ಪಶ್ಚಿಮ ಘಟ್ಟಗಳು, ರಾಜ್ಯಗಳಲ್ಲಿ ವ್ಯಾಪಿಸಿರುವ ದಕ್ಷಿಣ ಪ್ರಸ್ಥಭೂಮಿ ಮತ್ತು ಅನೇಕ ಪಾರಂಪರಿಕ ತಾಣಗಳು ಪ್ರವಾಸೋದ್ಯಮ ಸ್ನೇಹಿ ಯೋಜನೆಗಳಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು.
ಮುಂಬರುವ ಡಿ.14ರಿಂದ 16ರ ವರೆಗೆ ಬೆಂಗಳೂರು ಅರಮನೆ ಮೈದಾನದಲ್ಲಿ ‘ದಕ್ಷಿಣ ಭಾರತ ಉತ್ಸವ’ ಏರ್ಪಡಿಸಲಾಗಿದೆ. ಪ್ರವಾಸೋದ್ಯಮದಲ್ಲಿ ಮುಕ್ತ ಹೂಡಿಕೆಗೆ ಅವಕಾಶ ಇರುವುದರಿಂದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಪುದುಚೇರಿ ರಾಜ್ಯಗಳು ತಮ್ಮ ಪ್ರವಾಸೋದ್ಯಮ ಸಂಬಂಧಿತ ಚಟುವಟಿಕೆಗಳನ್ನು ಪ್ರಸ್ತುತಪಡಿಸಲಿವೆ.
– ಬಿ.ವಿ.ಗೋಪಾಲ್ ರೆಡ್ಡಿ, ಎಫ್‌ಕೆಸಿಸಿಐ ಅಧ್ಯಕ್ಷ