ರಾಜ್ಯದಲ್ಲಿ ಶೇ.41 ಮಳೆ ಕೊರತೆ ಸಿಎಂ ಕುಮಾರಸ್ವಾಮಿ ಸಭೆಯಲ್ಲಿ ಮುಂಗಾರು ಪೂರ್ವ ಮಳೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಪ್ರಮಾಣದಲ್ಲಿ ಶೇ. 41 ಕೊರತೆ ಕಂಡುಬಂದಿದ್ದು, ಈ ಬಾರಿ ಮುಂಗಾರು ಬಿತ್ತನೆಯಲ್ಲಿ ಹಿನ್ನಡೆ ಉಂಟಾಗುವ ಆತಂಕ ಎದುರಾಗಿದೆ. ರಾಜ್ಯದ ಬರ ಪರಿಸ್ಥಿತಿ ನಿರ್ವಹಣೆ ಕುರಿತು ಸಿಎಂ ಎಚ್.ಡಿ. ಕುಮಾರಸ್ವಾಮಿ ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒಗಳ ಜತೆ ವಿಡಿಯೋ ಸಂವಾದ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕಂದಾಯ ಸಚಿವ ದೇಶಪಾಂಡೆ ಈ ವಿಷಯ ತಿಳಿಸಿದರು.

ಈ ಬಾರಿ ಮುಂಗಾರು ಪೂರ್ವ ಮಳೆ ಪ್ರಮಾಣದಲ್ಲಿ ಶೇ.41 ಕುಂಠಿತ ಕಂಡುಬಂದಿರುವುದರಿಂದ ಮೈಸೂರು, ಚಾಮರಾಜ ನಗರ, ಮಂಡ್ಯ, ಹಾಸನ, ತುಮಕೂರು ಜಿಲ್ಲೆಗಳಲ್ಲಿ ಮುಂಗಾರು ಬಿತ್ತನೆ ಸಮಸ್ಯೆ ಕಾಣಿಸಿದೆ. ಪ್ರತಿವರ್ಷ ಮುಂಗಾರು ಪೂರ್ವದಲ್ಲಿ 2.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗುತ್ತದೆ. ಕಳೆದ ವರ್ಷ ಇದೇ ವೇಳೆಗೆ 3.5 ಲಕ್ಷ ಹೆಕ್ಟೇರ್​ನಲ್ಲಿ ಬಿತ್ತನೆ ಆಗಿತ್ತು. ಈ ವರ್ಷ ಕೇವಲ 38 ಸಾವಿರ ಹೆಕ್ಟೇರ್ ಬಿತ್ತನೆಯಾಗಿದೆ. ಹೀಗಾಗಿ ಮುಂಗಾರು ಬಿತ್ತನೆ ತಗ್ಗುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು. ಅತಿವೃಷ್ಟಿಯಾದರೆ ಸುರಕ್ಷತಾ ಕ್ರಮಕೈಗೊಳ್ಳಲು ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಶೇಷವಾಗಿ ಮಲೆನಾಡು, ಕರಾವಳಿ, ಕೊಡಗು ಜಿಲ್ಲೆಗಳಲ್ಲಿ ಉದ್ಭವಿಸಬಹುದಾದ ಪ್ರವಾಹ ಗಮನದಲ್ಲಿಟ್ಟುಕೊಂಡು ದಕ್ಷಿಣಕನ್ನಡ ಹಾಗೂ ಕೊಡಗು ಜಿಲ್ಲೆಯಲ್ಲಿ ತಲಾ 1 ಎನ್​ಡಿಆರ್​ಎಫ್ ತುಕಡಿ ನಿಯೋಜಿಸುವಂತೆ ಕೇಂದ್ರ ಸರ್ಕಾರವನ್ನು ಈಗಾಗಲೇ ಕೋರಲಾಗಿದೆ ಎಂದರು.

ಮೋಡಬಿತ್ತನೆಗೆ 88 ಕೋಟಿ ರೂ.

ಮುಂಗಾರು ಮಳೆ ಕೊರತೆ ಸೂಚನೆ ಹಿನ್ನೆಲೆಯಲ್ಲಿ ಮುಂದಿನ 2 ವರ್ಷಗಳಿಗೆ ಮೋಡಬಿತ್ತನೆ ನಡೆಸಲು 2 ವಾರದೊಳಗೆ ಟೆಂಡರ್ ಅಂತಿಮಗೊಳಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಆಗಸ್ಟ್ ಬದಲು ಜೂನ್​ನಲ್ಲಿ ಬೆಂಗಳೂರು-ಹುಬ್ಬಳ್ಳಿ ಕೇಂದ್ರ ವಾಗಿ 2 ವಿಮಾನಗಳು ಮೋಡ ಬಿತ್ತನೆ ನಡೆಸಲಿವೆ ಎಂದರು.

ಇಂದೂ ಹಲವೆಡೆ ಗಾಳಿ-ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಮುಂದುವರಿದಿದ್ದು, ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಘಟ್ಟಮಾದ ಮಂಗಲದಲ್ಲಿ 51 ಮಿ.ಮೀ. ಮಳೆಯಾಗಿದೆ. ಮೈಸೂರು, ಬೆಂಗಳೂರು, ಬೆಂ. ಗ್ರಾಮಾಂತರ, ರಾಮನಗರ, ಮಂಡ್ಯ ಜಿಲ್ಲೆಗಳಲ್ಲಿ ಚದುರಿದಂತೆ ಮಳೆ ಸುರಿದಿದೆ. ಗುರುವಾರ ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು, ಕೋಲಾರ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಗಾಳಿ-ಮಳೆ ಮುನ್ಸೂಚನೆ ಇದೆ. ಉತ್ತರ ಒಳನಾಡು ಮತ್ತು ಕರಾವಳಿ ಕರ್ನಾಟಕದಲ್ಲಿ ಒಣಹವೆ ವಾತಾವರಣ ಮುಂದುವರಿದಿದ್ದು, ಕಲಬುರಗಿ ಯಲ್ಲಿ ದಾಖಲೆಯ 43.3 ಡಿ.ಸೆ. ತಾಪಮಾನ ಕಂಡು ಬಂದಿದೆ.

ಜಿಲ್ಲಾಧಿಕಾರಿ ಗ್ರಾಮ ಭೇಟಿ ಕಡ್ಡಾಯ

ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಸರಬರಾಜು ಖಾತರಿಪಡಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒಗಳು ಕಡ್ಡಾಯವಾಗಿ ಪ್ರತಿದಿನ ಗ್ರಾಮಗಳಿಗೆ ಭೇಟಿ ನೀಡುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಡಿಯೋ ಸಂವಾದದಲ್ಲಿ ಸೂಚಿಸಿದರು.

ಕೊಡಗಿನಲ್ಲಿ ಮುಂಜಾಗ್ರತೆ

ಕೊಡಗು ಜಿಲ್ಲೆಯ ಮುಂಗಾರು ಹಂಗಾಮಿನಲ್ಲಿ ನೆರೆ ಅನಾಹುತ ತಡೆಗಟ್ಟಲು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚಿಸಿದರು. ಕೊಡಗು ಜಿಲ್ಲೆಯಲ್ಲಿ ಭಾರತೀಯ ಭೂ ವಿಜ್ಞಾನ ಸಮೀಕ್ಷಾ ಇಲಾಖೆ (ಜಿಎಸ್​ಐ) ನಡೆಸಿದ ಸಮೀಕ್ಷೆಯಲ್ಲಿ ಭೂ ಕುಸಿತವಾಗುವ ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಬಗ್ಗೆ ಜಾಗೃತಿ ಕಾರ್ಯ ಕೈಗೊಂಡಿದೆ. ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಗಳ ನೇಮಿಸಲಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದರು. ಹಾರಂಗಿ ಜಲಾಶಯದಲ್ಲಿ ಹೂಳೆತ್ತುವ ಕಾರ್ಯಕ್ಕೆ ಜಲಸಂಪನ್ಮೂಲ ಇಲಾಖೆ ಕ್ರಮಕೈಗೊಳ್ಳುತ್ತಿದ್ದು, ಅಗ್ನಿಶಾಮಕ ಹಾಗೂ ಇತರ ಇಲಾಖೆಗಳಿಗೆ ರಕ್ಷಣಾ ಕಾರ್ಯಕ್ಕೆ ಅಗತ್ಯವಿರುವ ಪರಿಕರಗಳ ಖರೀದಿಗೆ ಕ್ರಮವಹಿಸಲಾಗಿದೆ. ನೆರೆ ಸಂತ್ರಸ್ತರಿಗೆ ಗೃಹನಿರ್ವಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ ಎಂದು ಸಭೆಗೆ ಡಿಸಿ ತಿಳಿಸಿದರು.