ಇನ್ನೂ ಬಾರದ ಆರೋಗ್ಯ ಭತ್ಯೆ

ಜನರ ರಕ್ಷಣೆಗೆ ಪೊಲೀಸರು ಹಗಲಿರುಳು ಶ್ರಮಿಸುತ್ತಾರೆ. ಸಿಬ್ಬಂದಿ ಕೊರತೆಯಿಂದಾಗಿ ಕೆಲಸದ ಒತ್ತಡವಿದ್ದರೂ ದುಡಿಯುತ್ತಾರೆ. ಆದರೆ, ಸರ್ಕಾರ ಹಾಗೂ ಪೊಲೀಸ್ ಇಲಾಖೆ ಪೊಲೀಸರ ಸಮಸ್ಯೆಗಳಿಗೆ ಮಾತ್ರ ಸರಿಯಾಗಿ ಸ್ಪಂದಿಸಲ್ಲ ಎಂಬ ಆರೋಪವಿದೆ. ಸಿಬ್ಬಂದಿ ಆರೋಗ್ಯ ತಪಾಸಣೆಗಾಗಿ ಜಾರಿಗೆ ತಂದಿರುವ ವಾರ್ಷಿಕ 1 ಸಾವಿರ ರೂ. ಆರೋಗ್ಯ ಭತ್ಯೆಯನ್ನು ಈ ವರ್ಷ ಕೊಟ್ಟಿಲ್ಲ. ಈ ಬಗ್ಗೆ ಪೊಲೀಸ್ ಸಿಬ್ಬಂದಿ ವಿಜಯವಾಣಿ ಸಹಾಯವಾಣಿಗೆ ಕರೆ ಮಾಡಿ ಕೊಟ್ಟ ಮಾಹಿತಿ ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ. 

| ಅವಿನಾಶ ಮೂಡಂಬಿಕಾನ ಬೆಂಗಳೂರು

ಸಾರ್ವಜನಿಕರಿಗೆ ರಕ್ಷಣೆ ಒದಗಿಸಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಪೊಲೀಸ್ ಸಿಬ್ಬಂದಿಗೆ ಆರೋಗ್ಯ ಭಾಗ್ಯ ಕಲ್ಪಿಸುವಲ್ಲೂ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಉದಾಸೀನ ತೋರಿದೆ. ಪ್ರತಿ ವರ್ಷ ಸಮಯಕ್ಕೆ ಸರಿಯಾಗಿ ನಡೆಯುತ್ತಿದ್ದ ಕಡ್ಡಾಯ ಉಚಿತ ಆರೋಗ್ಯ ತಪಾಸಣೆ ಈ ವರ್ಷ ಇನ್ನೂ ಸಿಕ್ಕಿಲ್ಲ.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐಪಿಎಸ್ ಅಧಿಕಾರಿಗಳನ್ನು ಹೊರತು ಪಡಿಸಿ, ಅವರ ಕೆಳಗಿನ ಹಂತದಲ್ಲಿರುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪ್ರತಿ ವರ್ಷ ಆಯಾ ಜಿಲ್ಲೆ ಅಥವಾ ನಗರದಲ್ಲಿರುವ ಉತ್ತಮ ಗುಣಮಟ್ಟ ಹೊಂದಿರುವ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ.

2019ರಲ್ಲಿ ಈ ಸೇವೆ ಕೆಲ ಪೊಲೀಸ್ ಸಿಬ್ಬಂದಿಗೆ ಮಾತ್ರ ಸಿಕ್ಕಿದ್ದು, ಉತ್ತರ ಕರ್ನಾಟಕ ಹಾಗೂ ಇತರ ಜಿಲ್ಲೆಗಳಲ್ಲಿರುವ ಪೊಲೀಸ್ ಸಿಬ್ಬಂದಿಗೆ ಇನ್ನೂ ಸಿಕ್ಕಿಲ್ಲ. ಪ್ರತಿ ವರ್ಷ ಮಾರ್ಚ್ ತಿಂಗಳೊಳಗಾಗಿ ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತಿತ್ತು. ಆದರೆ, ಈ ಬಾರಿ ಮೇ ಆದರೂ ಜಾರಿಯಾಗಿಲ್ಲ. ಆರೋಗ್ಯ ತಪಾಸಣೆ ಸಂಬಂಧಿಸಿದ ಅಧಿಕಾರಿಗಳ ಬಳಿ ಈ ಬಗ್ಗೆ ವಿಚಾರಿಸಿದ ನಿರ್ಲಕ್ಷ್ಯದ ಮಾತನುಗಳನ್ನಾಡಿ ಕಳುಹಿಸುತ್ತಿದ್ದಾರೆ ಎಂದು ಉತ್ತರ-ಕರ್ನಾಟಕ ಭಾಗದ ಪೊಲೀಸ್ ಸಿಬ್ಬಂದಿಯೊಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ.

ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ

ಯಾವ ರೀತಿ ತಪಾಸಣೆ ನಡೆಸಿದರೂ ಸರ್ಕಾರದಿಂದ ಹಣ ಸಂದಾಯವಾಗುವ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿ ಆರೋಗ್ಯ ತಪಾಸಣೆ ನಡೆಸುವುದನ್ನು ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷಿಸಿದ್ದಾರೆ ಎನ್ನಲಾಗಿದೆ. ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಿದರೆ ಕನಿಷ್ಠ 2,500 ರಿಂದ 4 ಸಾವಿರ ರೂ. ವರೆಗೆ ಖರ್ಚಾಗುತ್ತದೆ.

ಒಂದು ಸಾವಿರ ರೂ. ಭತ್ಯೆ

ರಾಜ್ಯದಲ್ಲಿರುವ ಎಲ್ಲ ಜಿಲ್ಲೆ ಹಾಗೂ ನಗರ ಗಳಲ್ಲಿ ಉತ್ತಮ ಸೌಲಭ್ಯಗಳನ್ನು ಹೊಂದಿರುವ ಖಾಸಗಿ ಆಸ್ಪತ್ರೆಗಳ ಜತೆ ಸರ್ಕಾರ ಕೆಲ ವರ್ಷಗಳ ಹಿಂದೆ ಒಪ್ಪಂದ ಮಾಡಿಕೊಳ್ಳ ಲಾಗಿತ್ತು. ಓರ್ವ ಪೊಲೀಸ್ ಸಿಬ್ಬಂದಿಗೆ 1 ಸಾವಿರ ರೂ. ಆರೋಗ್ಯ ಭತ್ಯೆ ರೂಪದಲ್ಲಿ ಆಯಾ ಖಾಸಗಿ ಆಸ್ಪತ್ರೆಗೆ ಸರ್ಕಾರದಿಂದ ಪ್ರತಿ ವರ್ಷ ಹಣ ಮಂಜೂರಾಗುತ್ತದೆ. ತಮ್ಮ ಜಿಲ್ಲೆಗಳಲ್ಲಿರುವ ಸರ್ಕಾರ ಸೂಚಿಸಿದ ಆಸ್ಪತ್ರೆಯಲ್ಲಿ ವರ್ಷ ಕ್ಕೊಮ್ಮೆ ಠಾಣೆಯ ಎಲ್ಲ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಕಡ್ಡಾಯವಾಗಿ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸುತ್ತಿದ್ದರು.

ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯದ ಎಲ್ಲ ಪೊಲೀಸರಿಗೂ ಉಚಿತ ಆರೋಗ್ಯ ತಪಾಸಣೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಆರೋಗ್ಯ ತಪಾಸಣೆ ನಡೆಸಿಲ್ಲ ಎಂಬ ಆರೋಪ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು.

| ಡಾ.ಎಸ್. ಪರಶಿವಮೂರ್ತಿ ಎಡಿಜಿಪಿ (ಆಡಳಿತ ವಿಭಾಗ)

Leave a Reply

Your email address will not be published. Required fields are marked *