ಪ್ರತ್ಯೇಕಕ್ಕೆ ಸಿಗಲಿಲ್ಲ ಬೆಂಬಲ ಉತ್ತರದಲ್ಲಿ ಆಗಲಿಲ್ಲ ಬಂದ್

ಬೆಂಗಳೂರು: ಪ್ರತ್ಯೇಕ ರಾಜ್ಯ ರಚನೆಗೆ ಆಗ್ರಹಿಸಿ ಕರೆ ನೀಡಲಾಗಿದ್ದ ಉತ್ತರ ಕರ್ನಾಟಕ ಬಂದ್ ವಿಫಲವಾಗಿದೆ. 13 ಜಿಲ್ಲೆಗಳ ಪೈಕಿ ಬಹುತೇಕ ಕಡೆ ಬಂದ್ ಬದಲಾಗಿ ಸಾಂಕೇತಿಕ ಪ್ರತಿಭಟನೆ, ಘೋಷಣೆ, ಮನವಿ ಸಲ್ಲಿಕೆಗಳಷ್ಟೇ ನಡೆದವು. ಶಾಲಾ-ಕಾಲೇಜು, ಅಂಗಡಿ-ಮುಂಗಟ್ಟುಗಳೆಲ್ಲ ಎಂದಿನಂತೆ ತೆರೆದಿದ್ದವು, ಬಸ್-ಆಟೋ ಇತ್ಯಾದಿ ಮಾಮೂಲಿನಂತೆ ಸಂಚರಿಸಿದವು.

ಹುಬ್ಬಳ್ಳಿಯಲ್ಲಿ ಉ.ಕ.ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ್ದು ಬಿಟ್ಟರೆ ಬೇರೆನೂ ನಡೆಯಲಿಲ್ಲ. ಧಾರವಾಡ, ಹಾವೇರಿ, ಬಾಗಲಕೋಟೆ, ಬೆಳಗಾವಿಯಲ್ಲೂ ಬಂದ್ ನೀರಸ ವಾಗಿತ್ತು. ವಿಜಯಪುರ, ಬೀದರ್ ಜಿಲ್ಲೆಗಳಲ್ಲೂ ಬಂದ್, ಪ್ರತಿಭಟನೆ ಬಿಸಿ ಕಾಣಲಿಲ್ಲ. ಯಾದಗಿರಿ ಶಾಸ್ತ್ರಿ ವೃತ್ತದಲ್ಲಿ ಕರವೇ ಪ್ರತಿಭಟನೆ ನಡೆಸಿ ಅಖಂಡ ಕರ್ನಾಟಕವೇ ಉಳಿಯಲಿ ಎಂದು ಸಿಎಂಗೆ ಮನವಿಪತ್ರ ರವಾನಿಸಿದೆ. ಉತ್ತರ ಕರ್ನಾಟಕ ಹೋರಾಟ ಸಮಿತಿ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಬೆಳಗಾವಿಯಲ್ಲಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತ್ಯೇಕ ರಾಜ್ಯ ಬೇಡಿಕೆ ವಿರೋಧಿಸಿ ಸಾರ್ವಜನಿಕರಿಗೆ ಗುಲಾಬಿ ನೀಡಿ ವಿನೂತನವಾಗಿ ಪ್ರತಿಭಟಿಸಿದ್ದಾರೆ. ಗದಗದ ಲಕ್ಷ್ಮೇಶ್ವರದಲ್ಲಿ ಪ್ರತ್ಯೇಕ ರಾಜ್ಯ ಬೇಡಿಕೆಗೆ ಒತ್ತಾಯಿಸಿ ತಾಲೂಕು ಹೋರಾಟ ಸಮಿತಿಯಿಂದ ಖಡಕ್ ರೊಟ್ಟಿ-ಚಟ್ನಿ ಹಂಚಿ ಪ್ರತಿಭಟಿಸಲಾಯಿತು.

ಎಚ್ಡಿಕೆ ವಿರುದ್ಧ ಶಿವಸೇನೆ ಕಿಡಿ

ಮುಂಬೈ: ಉ.ಕ. ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿಯನ್ನು ರಾಜ್ಯದ 2ನೇ ರಾಜಧಾನಿ ಮಾಡುವ ಅಭಿಪ್ರಾಯ ವ್ಯಕ್ತಪಡಿಸಿರುವ ಕರ್ನಾಟಕ ಸಿಎಂ ಕುಮಾರಸ್ವಾಮಿ ವಿರುದ್ಧ ಶಿವಸೇನೆ ಕಿಡಿಕಾರಿದೆ. ಗಡಿ ವಿವಾದ ಸಂದರ್ಭದಲ್ಲೇ ಎಚ್ಡಿಕೆ ಈ ಹೇಳಿಕೆ ನೀಡಿರುವುದರಿಂದ ಮಹಾರಾಷ್ಟ್ರ ಸರ್ಕಾರ ಕೂಡಲೇ ಸುಪ್ರೀಂಕೋರ್ಟ್​ಗೆ ತೆರಳಿ ಕರ್ನಾಟಕ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಬೇಕೆಂದು ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಆಗ್ರಹಿಸಲಾಗಿದೆ.

ಸಿಎಂ ಕುಮಾರಸ್ವಾಮಿಯವರ ಪ್ರಚೋದನಾತ್ಮಕ ಹೇಳಿಕೆಯಿಂದ ಉತ್ತರ ಕರ್ನಾಟಕ ಪ್ರತ್ಯೇಕತೆಯ ಕೂಗು ಎದ್ದಿದೆ. ಬಿಜೆಪಿ ಯಾವತ್ತಿಗೂ ಅಖಂಡ ಕರ್ನಾಟಕದ ಪರ. ಬಿಜೆಪಿ ಕುಮ್ಮಕ್ಕಿನಿಂದ ಬಂದ್ ಕರೆ ನೀಡಲಾಗಿದೆ ಎಂಬ ಆರೋಪದಲ್ಲಿ ಹುರುಳಿಲ್ಲ.

| ಜಗದೀಶ್ ಶೆಟ್ಟರ್ ಮಾಜಿ ಸಿಎಂ

ಬಂದ್​ಗೆ ಕರೆ ನೀಡಿ, ಬಳಿಕ ಬಂದ್ ಹಿಂಪಡೆದಿದ್ದೇವೆ ಎಂದು ಸೋಮಶೇಖರ ಕೋತಂಬರಿ ಹೇಳಿದ್ದು ನೋಡಿದರೆ ಅವರು ರಾಜಕೀಯ ಆಮಿಷಕ್ಕೆ ಒಳಗಾಗಿದ್ದಾರೆ ಎನಿಸುತ್ತಿದೆ.

| ಶ್ರೀಷಡಕ್ಷರಿ ಸ್ವಾಮೀಜಿ ಹುಬ್ಬಳ್ಳಿ ರಾಜಗುರು ವಿದ್ಯಾಶ್ರಮ

ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬದ್ಧವಿದ್ದು, ಬಿಜೆಪಿ ರಾಜಕೀಯ ಮಾಡಲೆಂದೇ ರಾಜ್ಯ ಒಡೆವ ಮಾತಾಡುತ್ತಿದೆ. ನಮ್ಮ ಸರ್ಕಾರ ಈ ಭಾಗದವರ ಪರವಾಗಿದೆ.

| ಡಾ.ಜಿ. ಪರಮೇಶ್ವರ್, ಉಪ ಮುಖ್ಯಮಂತ್ರಿ

ತ್ರಿವಳಿ ಜಿಲ್ಲೆಗಳಿಂದ ಎಚ್ಚರಿಕೆ

ತ್ರಿವಳಿ ಜಿಲ್ಲೆಗಳಾದ ಬಳ್ಳಾರಿ, ರಾಯಚೂರು, ಕೊಪ್ಪಳದಲ್ಲಿ ಬಂದ್ ಕರೆ ಮನವಿ ಸಲ್ಲಿಕೆಗಷ್ಟೇ ಸಿಮೀತವಾಯಿತು. ಉಕ, ಹೈಕ ಅಭಿವೃದ್ಧಿ, 371(ಜೆ) ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆದವು. ಸಿಎಂ ಕುಮಾರಸ್ವಾಮಿ ವಿರುದ್ಧ ಧಿಕ್ಕಾರ ಹಾಕಲಾಯಿತು. ಮುಂದಿನ ದಿನಗಳಲ್ಲಿ ಉಕ ಅಭಿವೃದ್ಧಿಗೆ ಆದ್ಯತೆ ನೀಡದಿದ್ದರೆ ಪ್ರತ್ಯೇಕ ರಾಜ್ಯ ಹೋರಾಟ ಮುಂದುವರಿಸಲಾಗುವುದೆಂದು ಎಚ್ಚರಿಸಲಾಯಿತು. ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಆಗ್ರಹ ವಿರೋಧಿಸಿ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಧರಣಿಗಳು ನಡೆದವು. ನಂಜುಂಡಪ್ಪ ವರದಿ ಶಿಫಾರಸನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು, ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಲಾಯಿತು.

ಪರ ವಿರೋಧ

ಗದಗ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಪರ-ವಿರೋಧಗಳ ಮೂಲಕ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಪ್ರತ್ಯೇಕ ರಾಜ್ಯದ ಕೂಗಿಗೆ ವಿರೋಧ ವ್ಯಕ್ತಪಡಿಸಲಾಯಿತು.