ಗೋರಕ್ಷಣೆ ಹೆಸರಲ್ಲಿ ಹಿಂಸೆ: ಕ್ರಮ ಕೈಗೊಳ್ಳಲು ರಾಜ್ಯಗಳಿಗೆ ಸೂಚಿಸಿದ ಸುಪ್ರೀಂ

ನವದೆಹಲಿ: ಸ್ವಯಂ ಘೋಷಿತ ಗೋರಕ್ಷಕರು ಮತ್ತು ಮಕ್ಕಳ ಕಳ್ಳತನದ ವದಂತಿ ಹಿನ್ನೆಲೆಯಲ್ಲಿ ಕಾನೂನು ಕೈಗೆತ್ತಿಕೊಂಡು ಜನರ ಹತ್ಯೆಗೆ ಕಾರಣವಾಗುತ್ತಿರುವವರ ಜನಸಮೂಹದ ವಿರುದ್ಧ ಸುಪ್ರೀಂ ಕೋರ್ಟ್‌ ಕಿಡಿಕಾರಿದ್ದು, ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳುವುದು ಆಯಾ ರಾಜ್ಯ ಸರ್ಕಾರದ ಕರ್ತವ್ಯ ಎಂದು ಹೇಳಿದೆ.

ಜನರಿಗೆ ಯಾವುದೇ ರೀತಿಯ ಭಯ ಮತ್ತು ಅರಾಜಕತೆ ಹೆಸರಿನಲ್ಲಿ ದಾಳಿಯನ್ನು ಸಹಿಸಲಾಗುವುದಿಲ್ಲ. ಈ ರೀತಿ ಉಂಟಾದಲ್ಲಿ ರಾಜ್ಯ ಸರ್ಕಾರ ಧನಾತ್ಮಕವಾಗಿ ವರ್ತಿಸಬೇಕಿದೆ. ಯಾವುದೇ ಕಾರಣಕ್ಕೂ ದೌರ್ಜನ್ಯವನ್ನು ಒಪ್ಪಲಾಗುವುದಿಲ್ಲ. ಅಂತವರ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರ ನೇತೃತ್ವದ ತ್ರಿ ಸದಸ್ಯ ಪೀಠ ಹೇಳಿದೆ.

ಸ್ವಘೋಷಿತ ಗೋರಕ್ಷಕರಿಂದಾಗುವ ಅನಾಹುತಗಳನ್ನು ತಡೆಯಲು ಪರಿಹಾರ ಮತ್ತು ದಂಡನಾತ್ಮಕವಾದಂತ ಮಾರ್ಗದರ್ಶಿ ಸೂತ್ರಗಳನ್ನು ಪರಿಚಯಿಸಿರುವ ಸುಪ್ರೀಂ, ಇದಕ್ಕಾಗಿ ಸಂಸತ್ತು ಪ್ರತ್ಯೇಕ ಕಾನೂನನ್ನು ಜಾರಿಗೆ ತರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆಯನ್ನು ಪರಿಶೀಲಿಸುವಂತೆ ಸಾಮಾಜಿಕ ಕಾರ್ಯಕರ್ತ ತೆಹಸೀನ್‌ ಪೂನಾವಾಲಾ ಮತ್ತು ಮಹಾತ್ಮ ಗಾಂಧಿ ಅವರ ಮೊಮ್ಮಗ ತುಷಾರ್‌ ಗಾಂಧಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಕೋರ್ಟ್‌ ನಾಗರಿಕರು ಕಾನೂನನ್ನು ಕೈಗೆತ್ತಿಕೊಳ್ಳುವುದು ಬೇಡ ಎಂದು ಹೇಳಿದೆ. (ಏಜೆನ್ಸೀಸ್)