ಹಳಿಯಾಳ: ಕುಸ್ತಿ ಅಖಾಡ ಹಳಿಯಾಳದಲ್ಲಿ ಪದವಿಪೂರ್ವ ವಿದ್ಯಾರ್ಥಿಗಳ ಎರಡು ದಿನದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಗೆ ಸೋಮವಾರ ಚಾಲನೆ ದೊರೆತಿದೆ.
ಪಟ್ಟಣದ ಮೋತಿಕೆರೆ ದಡದಲ್ಲಿರುವ ಉಕ ಜಿಲ್ಲಾ ಕುಸ್ತಿ ಅಖಾಡದಲ್ಲಿ ಕುಸ್ತಿಯ ಕಾವು ರಂಗೇರಿದೆ. ರಾಜ್ಯದ 26 ಜಿಲ್ಲೆಗಳಿಂದ 150 ಬಾಲಕಿಯರು ಮತ್ತು 500 ಬಾಲಕರು ಒಟ್ಟೂ 650 ಕುಸ್ತಿಪಟುಗಳು ಪಂದ್ಯಾವಳಿಯಲ್ಲಿ ಭಾಗಹಿಸಿದ್ದಾರೆ. ಇಲ್ಲಿ ಒಟ್ಟೂ 30 ದೇಹತೂಕಗಳಲ್ಲಿ ಕುಸ್ತಿ ಪಂದ್ಯಾವಳಿ ನಡೆಯುತ್ತಿವೆ.
ಆದರೆ, ಸೋಮವಾರ ಸಾಯಂಕಾಲ ಸುರಿದ ಭಾರೀ ಮಳೆ ಕುಸ್ತಿ ಕಾವಿಗೆ ತಣ್ಣಿರೆರಚಿದೆ. ಮಳೆಯಿಂದ ಕುಸ್ತಿ ಅಖಾಡ ಅಸ್ತವ್ಯಸ್ತವಾಯಿತು. ಸುಮಾರು ಎರಡುವರೆ ತಾಸು ಕುಸ್ತಿ ಪಂದ್ಯಾವಳಿ ಬಂದ್ ಮಾಡಬೇಕಾಯಿತು.
ಕಾರ್ಯಕ್ರಮಕ್ಕೆ ಚಾಲನೆ:
ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗದ ಉಕ ಜಿಲ್ಲಾ ಉಪನಿರ್ದೇಶಕ ರಾಮಪ್ಪಾ ಸಿ., ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ವಿವಿಧ ರೀತಿಯ ಪ್ರತಿಭೆ ಇದ್ದು, ಅದನ್ನು ಗುರುತಿಸಿಕೊಂಡು ತಾವು ಮುಂದೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ರಾಜ್ಯಮಟ್ಟದ ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾಗಿ ಕ್ರೀಡಾ ಇಲಾಖೆಯಲ್ಲಿ ಸಿಗುವಂತಹ ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡು ಇದರ ಸದುಪಯೋಗ ಪಡೆಯಬೇಕೆಂದು ವಿದ್ಯಾರ್ಥಿ ಕ್ರೀಡಾಪಟುಗಳಿಗೆ ಸಲಹೆ ನೀಡಿದರು.
ಹುಬ್ಬಳ್ಳಿಯ ಯಶವಂತ ಸ್ವಾಮಿಜಿ ಅವರು ಮಾತನಾಡಿ, ಕುಸ್ತಿಯಲ್ಲಿ ಲೋಪದೋಷಗಳು ಬರಬಾರದು, ಕುಸ್ತಿ ಕ್ರೀಡೆ ಪ್ರಾಚೀನ ಕ್ರೀಡೆಯಾಗಿದ್ದು ಕುಸ್ತಿ ಕ್ರೀಡೆಗೆ ಯಾವುದೇ ರೀತಿಯ ಕಪ್ಪು ಚುಕ್ಕೆ ಬಾರದಂತೆ ನಿರ್ಣಾಯಕರಿಗೆ ಹಾಗೂ ಕ್ರೀಡಾಪಟುಗಳಿಗೆ ಮನವಿ ಮಾಡಿದರು.
ಜಿಲ್ಲಾ ಪದವಿಪೂರ್ವ ಕಾಲೇಜ್ ಪ್ರಾಚಾರ್ಯರ ಸಂಘದ ಅಧ್ಯಕ್ಷ ಸತೀಶ ನಾಯ್ಕ ಮಾತನಾಡಿ, ರಾಜ್ಯಮಟ್ಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ನಮ್ಮ ಜಿಲ್ಲೆ ಹಾಗೂ ರಾಜ್ಯದ ಹೆಸರು ತರುವಲ್ಲಿ ಶ್ರಮಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇದನ್ನೂ ಓದಿ: ಅಂಡರ್ ಪಾಸ್ ನಿರ್ಮಿಸುವಂತೆ ಆಗ್ರಹಿಸಿ ಹೆದ್ದಾರಿ ತಡೆ ನಡೆಸಿದ ಕಾಂಗ್ರೆಸ್ಸಿಗರು
ಬೆಳಗ್ಗೆ ಕ್ರೀಡಾಕೂಟ ಆರಂಭಕ್ಕೂ ಮುನ್ನ ದಸರಾ ಕೇಸರಿ ಪ್ರಶಸ್ತಿ ವಿಜೇತ ರೋಹನ ಗೆವಡೆ ಮತ್ತು ದಸರಾ ಕಿಶೋರಿ ಪ್ರಶಸ್ತಿ ವಿಜೇತೆ ಲಕ್ಷ್ಮೀ ಪಾಟೀಲ ಅವರುಗಳು ಕ್ರೀಡಾ ಜ್ಯೋತಿಯನ್ನು ಕುಸ್ತಿ ಅಖಾಡಕ್ಕೆ ತಂದು ಬೆಳಗಿಸಿದರು. ಈ ಇಬ್ಬರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕ್ರೀಡಾ ಸಂಯೋಜಕ ಗೋಪಾಲಕೃಷ್ಣ , ಶಿವಾಜಿ ಕಾಲೇಜು ಅಭೀವೃದ್ದಿ ಸಮೀತಿ ಉಪಾಧ್ಯಕ್ಷ ಸತ್ಯಜೀತ ಗಿರಿ, ಬ್ರಿಟಾನೀಯಾ ನ್ಯೂಟ್ರೇಷನ್ ಫೌಂಡೇಶನ್ ಪ್ರಮುಖ ಅಧಿಕಾರಿ ಪ್ರಿಯಾಂಕಾ ಸಿಂಗ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೃಷ್ಣಾ ಪಾಟಿಲ್, ಮಾಜಿ ಪುರಸಭೆ ಅಧ್ಯಕ್ಷ ಅಜರುದ್ದೀನ್ ಬಸರಿಕಟ್ಟಿ, ಮಾಜಿ ಉಪಾದ್ಯಕ್ಷೆ ಸುವರ್ಣಾ ಮಾದರ ಪ್ರಮುಖರಾದ ದೇಮಾಣಿ ಶಿರೋಜಿ, ಸತೀಶ ಮಾನೆ, ಸಂಜು ಗೌಡಾ, ಈರಣ್ಣಾ ವಡ್ಡರ, ತುಕಾಮಾರ ಗೌಡಾ, ಇಬ್ರಾಹಿಂ ಮುಲ್ಲಾ, ಸಂಜು ಮಿಶ್ಯಾಳೆ, ಮಾಲಾ ಬ್ರಗಾಂಜಾ, ಪ್ರಶಾಂತ ರಾಣೆ ಇತರರು ಇದ್ದರು.
ಸರ್ಕಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ದಂಡು:
ಕುಸ್ತಿ ಪಂದ್ಯಾವಳಿಯ ಉಧ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ಸೇರಿ ಕಾಂಗ್ರೇಸ್ ವಿವಿಧ ಪದಾಧಿಕಾರಿಗಳಿದ್ದರು. ಇದು ಶಿಕ್ಷಣ ಇಲಾಖೆಯ ಕಾರ್ಯಕ್ರಮವೋ, ಕಾಂಗ್ರೆಸ್ ಕಾರ್ಯಕ್ರಮವೋ ಎಂಬ ಪ್ರಶ್ನೆ ಕೇಳಿ ಬಂತು.