ಮನರಂಜಿಸಿದ ಜೋಡೆತ್ತಿನ ಗಾಡಿ ಓಟ

ಚಿಕ್ಕಮಗಳೂರು: ರೊಚ್ಚಿಗೆದ್ದ ರಾಸುಗಳಿಂದ ಪ್ರಶಸ್ತಿಗಾಗಿ ಮಿಂಚಿನಂಥ ಓಟ, ಹೊರಗಿನಿಂದ ಬಂದ ಯುವ ಪಡೆಯ ಕದ್ದುಮುಚ್ಚಿದ ಬೆಟ್ಟಿಂಗ್, ಗುರಿಮುಟ್ಟಲು ಮುನ್ನುಗ್ಗುತ್ತಿದ್ದ ಎತ್ತುಗಳ ಆರ್ಭಟಕ್ಕೆ ದಿಕ್ಕಾಪಾಲಾಗಿ ಓಡಿದ ಜನ, ಬಿಸಿಲನ್ನೂ ಲೆಕ್ಕಿಸದೆ ಛತ್ರಿಹಿಡಿದು ಸ್ಪರ್ಧೆ ವೀಕ್ಷಿಸಿದ ಮಹಿಳೆಯರು, ಮಕ್ಕಳು, ಕಿಕ್ಕಿರಿದು ನೆರೆದಿದ್ದ ಗ್ರಾಮೀಣ ಜನರಿಂದ ಶಿಳ್ಳೆ, ಕೇಕೆ, ಚೀರಾಟ…

ತಾಲೂಕಿನ ಮುಗುಳವಳ್ಳಿ ಗ್ರಾಮದಲ್ಲಿ ಗೌರಮ್ಮ-ಗಣೇಶ ಸೇವಾ ಸಮಿತಿ ಹಾಗೂ ದೋಸ್ತಿ ದರ್ಬಾರ್ ಯುವಕ ಸಂಘ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ರಾಜ್ಯ ಮಟ್ಟದ ಜೋಡೆತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ ಕಂಡಬಂದ ದೃಶ್ಯ.

ಸ್ಪರ್ಧೆ ಆರಂಭವಾಗುವ ಮುನ್ನವೇ ಗಾಡಿಯೊಂದರ ಜೋಡೆತ್ತುಗಳು ನೋಡುಗರ ನಡುವೆ ನುಗ್ಗುತ್ತಿದ್ದಂತೆ ಜನರು ಗಾಬರಿಯಿಂದ ಓಡಿಹೋದರು. ಸ್ಪರ್ಧೆ ಅಂಕಣ ಬಿಟ್ಟು ಗದ್ದೆಗಳಿಗೆ ನುಗ್ಗಿದ ಆ ಎತ್ತುಗಳನ್ನು ಹಿಡಿದು ತರಲು ಸ್ಪರ್ಧಿಗಳು ಹರಸಹಾಸ ಪಟ್ಟರು.

ಆಯೋಜಕರು ಎ ಮತ್ತು ಬಿ ಅಂಕಣದಲ್ಲಿ ಪ್ರತಿ ಬಾರಿ ಎರಡು ಗಾಡಿಗಳನ್ನು ಒಟ್ಟಿಗೆ ಬಿಡುವ ಮೂಲಕ ಲೀಗ್ ಸ್ಪರ್ಧೆ ಮಾಡಿದರು. ಹೀಗೆ 50 ಜೋಡೆತ್ತಿನ ಗಾಡಿಗಳು ಪಾಲ್ಗೊಂಡಿದ್ದವು. ಸ್ಪರ್ಧೆ ಸಂದರ್ಭದಲ್ಲಿ ಎತ್ತುಗಳು ಮಿಂಚಿನ ವೇಗದಲ್ಲಿ ಸಾಗುವಾಗ ಗ್ರಾಮಸ್ಥರು ಹಾಗೂ ಯುವ ಸಮೂಹ ಕೇಕೆಹಾಕಿ ಹುರಿದುಂಬಿಸುತ್ತಿದ್ದುದು ಸಾಮಾನ್ಯವಾಗಿತ್ತು.

ಪ್ರಥಮಬಾರಿಗೆ ಆಯೋಜಿಸಿದ್ದ ಗ್ರಾಮೀಣ ಕ್ರೀಡೆ ವೀಕ್ಷಿಸಲು ಸುತ್ತಲಿನ ಹತ್ತಾರು ಹಳ್ಳಿಗರು, ನಗರ ಪ್ರದೇಶದಿಂದಲೂ ಜನ ಆಗಮಿಸಿದ್ದರು. ಹಚ್ಚ ಹಸಿರಿನ ಮೈದಾನದಲ್ಲಿ ಅಂಕಣದ ಎರಡೂ ಭಾಗದಲ್ಲಿ ಹಾಕಿದ್ದ ಬ್ಯಾರಿಕೇಡ್​ಗೆ ಮಾವಿನ ಸೊಪ್ಪು ಕಟ್ಟಿ ಮತ್ತು ಅಲ್ಲಲ್ಲಿ ಭಗವಾಧ್ವಜ ಹಾಕಿ ಸಿಂಗರಿಸಲಾಗಿತ್ತು.

ಮಂಡ್ಯ, ಬಾಗಲಕೋಟೆ, ಹಾಸನ, ದಾವಣಗೆರೆ, ಮೈಸೂರು, ಚಿಕ್ಕಮಗಳೂರು, ಅಂಬಳೆ, ತೇಗೂರು, ಹಂಪಾಪುರ, ಕೋಟೆ, ಕೆಂಪನಹಳ್ಳಿ ಸೇರಿ ರಾಜ್ಯದ ವಿವಿಧ ಭಾಗಗಳಿಂದ 50ಕ್ಕೂ ಹೆಚ್ಚು ಜೋಡೆತ್ತಿನ ಗಾಡಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.

ಸ್ಪರ್ಧೆಗೂ ಮೊದಲು ಎತ್ತಿನ ಜತೆ ಮಾಲೀಕರು ಓಡಿ ಅಭ್ಯಾಸ ಮಾಡಿದರು. ಆಗಲೂ ನೋಡಗರಿಗೆ ಸಾಕಷ್ಟು ಮನರಂಜನೆ ಸಿಕ್ಕಿತು.

ಪ್ರಥಮ ಬಹುಮಾನ ಸ್ಥಾನ 40 ಸಾವಿರ ರೂ., ದ್ವಿತೀಯ 30 ಸಾವಿರ ರೂ., ನಾಲ್ಕನೇ ಬಹುಮಾನ 10 ರೂ., ಐದನೇ ಬಹುಮಾನ 5 ಸಾವಿರ ರೂ. ನಗದು ಮತ್ತು ಪ್ರಶಸ್ತಿ ನೀಡಲಾಗುವುದು.

ಗ್ರಾಮದ ಹಿರಿಯ ಬಸವರಾಜು, ಜಿಪಂ ಮಾಜಿ ಸದಸ್ಯ ನಿರಂಜನ್, ತಾಪಂ ಸದಸ್ಯೆ ಪುಷ್ಪಾ ಸೋಮಶೇಖರ್, ಗ್ರಾಪಂ ಸದಸ್ಯ ವಿಜಯಕುಮಾರ್, ಮಂಜುನಾಥ್, ನಾಗರಾಜ್, ಸಹಕಾರಿ ಸಂಘದ ದಿನೇಶ್, ಗ್ರಾಪಂ ಮಾಜಿ ಅಧ್ಯಕ್ಷೆ ನಾಗರತ್ನಾ, ಪರಮೇಶ್ ಇದ್ದರು.