ಹೆದ್ದಾರಿ ಅಪಾಯಕ್ಕೆ ರಹದಾರಿ

>

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ನಾಗರಿಕರ ಅನುಕೂಲಕ್ಕಾಗಿ ಸರ್ಕಾರ ಮೂಲ ವ್ಯವಸ್ಥೆಗೆ ಮುಂದಾಗುತ್ತದೆ. ರಸ್ತೆ ಇನ್ನಿತರ ಅಭಿವೃದ್ಧಿ ಜನರ ಹಿತದೃಷ್ಟಿಯಲ್ಲೇ ಆಗುತ್ತದೆ. ಆದರೆ ಇಲ್ಲಿ ರಾಜ್ಯ ಹೆದ್ದಾರಿ ವಿಸ್ತರಣೆಯೇ ಅಪಾಯಕ್ಕೆ ರಹದಾರಿ ಆಗುತ್ತಿರುವುದು ವಿಪರ‌್ಯಾಸ !
ಹೆಮ್ಮಾಡಿ ಕೊಲ್ಲೂರು ರಾಜ್ಯ ಹೆದ್ದಾರಿಯ ಅಪಾಯ ವಲಯಗಳನ್ನು ಗುರುತಿಸಿ, ಅಪಾಯ ರಹಿತ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ರಸ್ತೆ ವಿಸ್ತರಣೆಯೇ ಮತ್ತೊಂದು ಅಪಾಯಕ್ಕೆ ದಾರಿ ಮಾಡಿಕೊಡುತ್ತಿರುವುದು ಬೇಸರದ ಸಂಗತಿ. ಹೆಮ್ಮಾಡಿಯಿಂದ ಐದು ಅಪಾಯಕಾರಿ ಸ್ಥಳಗಳ ವಿಸ್ತರಣೆ ಕೆಲಸ ಬೈಕ್ ಸವಾರರ ಕೈಕಾಲು ಮುರಿಯುವ ಜತೆಗೆ ಪಾದಚಾರಿಗಳು ರಸ್ತೆ ಅಂಚಲ್ಲಿ ಸಂಚಾರ ಮಾಡದಂತೆ ಮಾಡಿದೆ.
ಕೊಲ್ಲೂರು ಹೆಮ್ಮಾಡಿ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರದ 3 ಕೋಟಿ ರೂ. ಅನುದಾನದಲ್ಲಿ ಲೋಕೋಪಯೋಗಿ ನೇತೃತ್ವದಲ್ಲಿ ರಸ್ತೆ ಕಾಮಗಾರಿಗೆ ಗ್ರೀನ್ ಸಿಗ್ನಲ್ ನೀಡಿದೆ. ರಸ್ತೆ ವಿಸ್ತರಣೆ ಕಾಮಗಾರಿ ಟೆಂಡರ್ ಆಗಿ, ಗುತ್ತಿಗೆ ಪಡೆದವರು ಒಂದು ತಿಂಗಳ ಹಿಂದೆ ರಸ್ತೆ ಅಂಚು ಅಗೆದು ಹಾಕಿ ಜಲ್ಲಿ ಹಾಕಿ ಹೋದವರು ಮತ್ತೆ ಪತ್ತೆಯಿಲ್ಲ. ಜನ ಸಾಮಾನ್ಯರು ರಸ್ತೆ ವಿಸ್ತರಣೆಗೆ ಚುನಾವಣೆ ನೀತಿ ಸಂಹಿತೆ ಕಾರಣ ಎಂದು ಶಾಪ ಹಾಕುತ್ತಿದ್ದು, ಆದರೆ ಯಾವುದೇ ಅಭಿವೃದ್ಧಿ ಕೆಲಸ ಆರಂಭವಾದ ನಂತರ ನೀತಿ ಸಂಹಿತೆ ಪೂರ್ಣ ಮಾಡಲು ಅಡ್ಡಗಾಲು ಹಾಕುವುದಿಲ್ಲ.
ಜಾಡಿ ಸಮೀಪ ಕೆಸಿಡಿಸಿ ಜಾಗದ ಒತ್ತುವರಿ, ಗೇರು ಮರಗಳನ್ನು ದೂಡಿ ಹಾಕಿದ್ದೇ ಕಾಮಗಾರಿ ಸ್ಥಗಿತಕ್ಕೆ ಕಾರಣ. ಲೋಕೋಪಯೋಗಿ ಇಲಾಖೆ ಜಾಗ ಅಳತೆ ಮಾಡಿ, ಗಡಿ ಗುರುತು ಹಾಕಿದರೂ, ಗುತ್ತಿಗೆದಾರರು ಮರಗಳ ದೂಡಿ ಹಾಕಿದ್ದರಿಂದ ಗೇರು ಅಭಿವೃದ್ಧಿ ನಿಗಮ ನಿಗಮ ಗರಂ ಆಗಿದ್ದು, ರಸ್ತೆ ವಿಸ್ತರಣೆಗೆ ಅಡ್ಡಿಯಾಗಿದೆ. ಒಟ್ಟಿನಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ವಿಸ್ತರಣೆ ಜನ ಸಾಮಾನ್ಯರಿಗೆ ತೊಡಕಾಗಿ ಕಾಡುತ್ತಿರುವುದು ಸುಳ್ಳಲ್ಲ.

ಪಟ್ಟಾ ಜಾಗಕ್ಕೂ ನೋಟಿಸ್
ರಸ್ತೆ ವಿಸ್ತರಣೆ ಸಂದರ್ಭ ಪಟ್ಟಾ ಜಾಗ ಬಂದರೆ ಜಾಗದ ಮಾಲೀಕರ ಮನವೊಲಿಸಿ ವಿಕ್ರಯ ಮಾಡಿ ವಿಸ್ತರಣೆ ಮಾಡಬೇಕಾಗುತ್ತದೆ. ಜಾಗದ ಮಾಲೀಕ ಸ್ಥಳ ಬಿಟ್ಟುಕೊಡಲು ಒಪ್ಪದಿದ್ದರೆ ವಿಕ್ರಯಿಸಿ ಸ್ವಾಧೀನ ಪಡಿಸಿಕೊಳ್ಳಬೇಕಾಗುತ್ತದೆ. ಸರ್ಕಾರಿ ಜಾಗವಿದ್ದರೆ ಅದನ್ನು ಬಳಸಿಕೊಳ್ಳಬೇಕು ಎಂಬುದು ನಿಯಮ. ಜಾಗ ಅನಿವಾರ್ಯವಾದರೆ ಪರಿಹಾರ ನೀಡಿ ಬಿಡಿಸಿಕೊಳ್ಳಬೇಕು. ಆದರೆ ಹೆಮ್ಮಾಡಿ ರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ ಖಾಸಗಿ ಜಾಗದ ಮಾಲೀಕರಿಗೆ ಜಾಗ ತೆರವು ಮಾಡುವಂತೆ ನೋಟಿಸ್ ನೀಡಲಾಗಿದೆ. ರಸ್ತೆ ಬದಿಯಲ್ಲಿ ಸಾಕಷ್ಟು ಜಾಗವಿದ್ದರೂ ಖಾಸಗಿ ಜಾಗ ಒತ್ತುವರಿಗೆ ಮುಂದಾಗಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಖಾಸಗಿ ಜಾಗದ ಮಾಲೀಕರು ಪ್ರಸಕ್ತ ಜಾಗ ತೆರವು ವಿರುದ್ಧ ತಡೆ ತಂದಿದ್ದಾರೆ.

ಸರ್ಕಾರ ಎಲ್ಲ ಯೋಜನೆಗಳನ್ನು ಸಾರ್ವಜನಿಕ ಹಿತಾಸಕ್ತಿಯಲ್ಲಿ ಜಾರಿಗೆ ತರುತ್ತದೆ. ಕಡಿಮೆ ಖರ್ಚು ಹೆಚ್ಚು ಪ್ರಯೋಜನ ಸಿಗಬೇಕು ಎಂಬುದು ಸರ್ಕಾರದ ಉದ್ದೇಶ. ಕೊಲ್ಲೂರಿಗೆ ಹೋಗುವ ರಸ್ತೆಯ ಅಪಾಯಕಾರಿ ತಿರುವುಗಳ ವಿಸ್ತರಣೆ ನಿಜಕ್ಕೂ ಸ್ವಾಗತಾರ್ಹ. ರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ ರಸ್ತೆ ಅಗೆದು ಜಲ್ಲಿ ಕೂರಿಸಿ ತಿಂಗಳು ಕಳೆದರೂ ರಸ್ತೆ ಅಭಿವೃದ್ಧಿ ಪಡಿಸದಿರುವುದು ಪ್ರಯಾಣಿಕರು ಅಂಗೈಯಲ್ಲಿ ಜೀವ ಹಿಡಿದು ಸಂಚರಿಸುವ ಸ್ಥಿತಿ ತಂದಿದೆ.
ರಾಘವೇಂದ್ರ ಭಟ್, ಕೃಷಿಕ, ಭಟ್ರತೋಟ, ಪಡುಕೋಣೆ

ಕೊಲ್ಲೂರು ಹೆಮ್ಮಾಡಿ ರಾಜ್ಯ ಹೆದ್ದಾರಿ ಸಂಚಾರ ಅಪಾಯಕ್ಕೆ ಅಹ್ವಾನ ನೀಡುತ್ತಿದೆ. ಅಪಘಾತ ವಲಯದಲ್ಲಿ ರಸ್ತೆ ವಿಸ್ತರಣೆಗೆ ಮುಂದಾಗಿದ್ದು ಶ್ಲಾಘನೀಯ. ಆದರೆ ಕಾಮಗಾರಿ ಮುಗಿಸದೆ, ಪ್ರಯಾಣ ಪ್ರಾಣ ಸಂಕಟಕ್ಕೆ ಎಡೆ ಮಾಡಿಕೊಡುತ್ತಿರುವುದು ಅಕ್ಷಮ್ಯ. ಜಾಡಿ ಸಮೀಪ ನಮ್ಮ ಕಣ್ಣೆದುರೇ ಬೈಕ್ ಸವಾರರು ಬಿದ್ದು, ಗಂಭೀರ ಗಾಯಗೊಂಡಿದ್ದಾರೆ. ಕೆಸಿಡಿಸಿ ಗೇರು ಮರಗಳನ್ನು ಜೆಸಿಬಿಯಲ್ಲಿ ದೂಡಿ ಹಾಕಿದ್ದೇ ರಸ್ತೆ ಕಾಮಗಾರಿ ನಿಲ್ಲಲು ಕಾರಣ.
ವಾಸುದೇವ ಮುದೂರು, ಸಂಚಾಲಕ ದಲಿತ ಸಂಘರ್ಷ ಸಮಿತಿ