ಬೆಳ್ವೆ: ಬೈಂದೂರು-ವಿರಾಜಪೇಟೆ ರಾಜ್ಯ ಹೆದ್ದಾರಿ ಹಾಲಾಡಿ ಮಡಾಮಕ್ಕಿ ಮಾರ್ಗದ ನಡುವೆ (ರಾಜ್ಯ ಹೆದ್ದಾರಿ) ಅಭಿವೃದ್ಧಿ ಕಾಮಗಾರಿಗಾಗಿ ಬೆಳ್ವೆ ಮರೂರು ಕ್ರಾಸ್ ಸಮೀಪ ರಸ್ತೆ ಕಾಮಗಾರಿಗೆ ಗುತ್ತಿಗೆದಾರರು ಜಖಂಗೊಂಡ ದೊಡ್ಡ ಗಾತ್ರದ ಸಿಮೆಂಟ್ ಮೋರಿಗಳನ್ನು ಬಳಸುತ್ತಿರುವ ಕುರಿತು ಸಾರ್ವಜನಿಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಕೊಲ್ಲೂರು, ಶೃಂಗೇರಿ, ಧರ್ಮಸ್ಥಳ, ಸುಬ್ರಹ್ಮಣ್ಯ ಪುಣ್ಯಕ್ಷೇತ್ರಗಳು ಸೇರಿದಂತೆ ಪ್ರಮುಖ ಭಾಗಗಳಿಗೆ ತೆರಳುವ ಯಾತ್ರಾರ್ಥಿಗಳ ವಾಹನಗಳು, ಆಟೊರಿಕ್ಷಾಗಳು, ಖಾಸಗಿ ವಾಹನಗಳು, ಭಾರಿ ತೂಕದ ಸರಕು ಸಾಗಾಟದ ಲಾರಿಗಳು ರಾಜ್ಯ ಹೆದ್ದಾರಿ ಪ್ರಯಾಣ ಅವಲಂಬಿಸಿವೆ.
ಮೋರಿ ಪೈಪುಗಳ ಹೊರ ಭಾಗದಲ್ಲಿ ಅಲ್ಲಲ್ಲಿ ಸಿಮೆಂಟ್ ಕಿತ್ತು ಹೋಗಿ ಕಬ್ಬಿಣದ ತಂತಿಗಳು ಹೊರ ಬಂದಿವೆ. ಸಿಮೆಂಟ್ ಕಿತ್ತು ಹೋದ ಕೆಲವು ಭಾಗಗಳಿಗೆ ಪುನಃ ಸಿಮೆಂಟ್ ಹಾಕಿ ಮುಚ್ಚಿರುವುದು ಎದ್ದು ಕಾಣುತ್ತಿದೆ. ಒಂದು ಮೋರಿಯನ್ನು ಹೆದ್ದಾರಿಯ ಮಗ್ಗುಲಿಗೆ ಈಗಾಗಲೇ ಹಾಕಲಾಗಿದೆ. ರಸ್ತೆ ಅಗಲೀಕರಣಗೊಂಡಾಗ ವಾಹನಗಳ ಸಂಚಾರ ಇನ್ನಷ್ಟು ದಟ್ಟಣೆಗೊಳ್ಳಲಿರುವುದರಿಂದ ಇಂತಹ ಜಖಂಗೊಂಡ ಮೋರಿಗಳು ಕುಸಿದು ಅವಘಡಗಳು ಸಂಭವಿಸುವ ಸಾಧ್ಯತೆಗಳಿವೆ. ಗುತ್ತಿಗೆದಾರರು ಉತ್ತಮ ಗುಣಮಟ್ಟದ ಸಿಮೆಂಟ್ ಮೋರಿಗಳನ್ನು ಹೆದ್ದಾರಿ ರಸ್ತೆ ಕಾಮಗಾರಿಗೆ ಬಳಸುವಂತೆ ಈ ಮಾರ್ಗದ ವಾಹನ ಸವಾರರೂ, ಪ್ರಯಾಣಿಕರು, ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬೆಳ್ವೆ ಮರೂರು ಕ್ರಾಸ್ ಮಸೀದಿ ಸಮೀಪ ರಾಜ್ಯ ಹೆದ್ದಾರಿ ವಿಸ್ತರಣೆ ಕಾಮಗಾರಿಗೆ ಗುತ್ತಿಗೆದಾರರು ಜಖಂಗೊಂಡ ಸಿಮೆಂಟ್ ಮೋರಿಗಳನ್ನು ಬಳಸುತ್ತಿರುವ ಕುರಿತು ಮಾಹಿತಿ ಬಂದಿದೆ. ಈ ಕುರಿತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು.
– ಹರ್ಷವರ್ಧನ, ಸಹಾಯಕ ಅಭಿಯಂತ, ಲೋಕೋಪಯೋಗಿ ಇಲಾಖೆ, ಕುಂದಾಪುರ