ರಾಜ್ಯದ ಜನತೆ ಬೆನ್ನತ್ತಿವೆ 22 ಕಸ ಕಾಯಿಲೆ!

| ಗಿರೀಶ್ ಗರಗ ಬೆಂಗಳೂರು

ಎಚ್1ಎನ್1, ಡೆಂಘ, ಮಂಗನಕಾಯಿಲೆಗಳಂಥವುಗಳಿಂದ ಬಸವಳಿದ ರಾಜ್ಯದ ಜನತೆಗೀಗ ಕಸದ ರೋಗಗಳು ಕಾಡಲಾರಂಭಿಸಿವೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಒಟ್ಟಾರೆ ಸಂಗ್ರಹವಾಗುವ ಕಸದಲ್ಲಿ ಶೇ.70 ತ್ಯಾಜ್ಯ ವಿಲೇವಾರಿಯಾಗದೆ ಪರಿಸರದಲ್ಲಿ ಸೇರ್ಪಡೆಯಾಗುತ್ತಿರುವ ಪರಿಣಾಮ 22ಕ್ಕೂ ಹೆಚ್ಚು ಕಾಯಿಲೆಗಳು ಜನರ ಬೆನ್ನತ್ತಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

ರಾಜ್ಯದಲ್ಲಿ 11 ನಗರ ಪಾಲಿಕೆ, 58 ನಗರಸಭೆ, 115 ಪುರಸಭೆ ಮತ್ತು 91 ಪಟ್ಟಣ ಪಂಚಾಯಿತಿ ಸೇರಿ ಒಟ್ಟು 279 ನಗರಾಡಳಿತಗಳಿದ್ದು, ಒಟ್ಟಾರೆ ಪ್ರತಿನಿತ್ಯ 11,186 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಸಂಸ್ಕರಣೆ ಆಗುತ್ತಿರುವುದು ಶೇ.30ಕ್ಕಿಂತ ಕಡಿಮೆ. ಉಳಿದ ತ್ಯಾಜ್ಯ ಎಲ್ಲೆಂದರಲ್ಲಿ ವಿಲೇವಾರಿ ಆಗುತ್ತಿರುವುದರಿಂದ ಭೂಮಿ, ಗಾಳಿ, ಅಂತರ್ಜಲಕ್ಕೆ ಹಾನಿ ಉಂಟಾಗುವ ಜತೆಗೆ ಸುತ್ತಲಿನ ಜನರನ್ನೂ ಕಾಯಿಲೆಗಳ ಕೂಪಕ್ಕೆ ನೂಕುತ್ತಿವೆ. ಪರಿಸ್ಥಿತಿಯ ಗಂಭೀರತೆ ಅರಿತು ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ತ್ಯಾಜ್ಯ ನಿರ್ವಹಣೆಗೆ ಅನುಸರಿಸಬೇಕಾದ ಕ್ರಮಗಳ ಕುರಿತ ಹೊಸ ಕರಡು ನೀತಿ ಸಿದ್ಧಪಡಿಸಿದೆ.

3,475 ಟನ್ ಸಂಸ್ಕರಣೆ: ರಾಜ್ಯದಲ್ಲಿ ಪ್ರತಿದಿನ ಉತ್ಪತ್ಪಿಯಾಗುವ 11,186 ಟನ್ ತ್ಯಾಜ್ಯದಲ್ಲಿ 9,706 ಟನ್ ತ್ಯಾಜ್ಯ ಸ್ಥಳೀಯ ನಗರಾಡಳಿತಗಳ ರಸ್ತೆ ಹಾಗೂ ಮನೆಗಳಲ್ಲಿ ಉತ್ಪತ್ತಿಯಾದವಾಗಿರುತ್ತವೆ. ಈ ತ್ಯಾಜ್ಯದಲ್ಲಿ 3,475 ಟನ್ ಸಮರ್ಪಕವಾಗಿ ಸಂಸ್ಕರಿಸಿದರೆ ಉಳಿದ ತ್ಯಾಜ್ಯವನ್ನು ಭೂಭರ್ತಿ ಪ್ರದೇಶಕ್ಕೆ ವಿಲೇವಾರಿ ಮಾಡಲಾಗುತ್ತಿದೆ. ಸಂಗ್ರಹಿಸಲು ವಿಫಲವಾದ 1,480 ಟನ್ ತ್ಯಾಜ್ಯದ ಮಾಹಿತಿ ನಗರಾಡಳಿತಗಳಿಗೂ ಗೊತ್ತಿಲ್ಲ.

ಪ್ಲಾಸ್ಟಿಕ್​ನಿಂದಲೂ ಅಪಾಯ: ರಾಜ್ಯದಲ್ಲಿ ವಾರ್ಷಿಕ 4,19,600 ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಅದು ಕರಗದೆ ಭೂಮಿಯಲ್ಲಿಯೇ ಉಳಿಯುತ್ತಿರುವುದರಿಂದ ಭೂಮಿ ಹಾಳಾಗುತ್ತಿದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಸುಡುತ್ತಿರುವುದರಿಂದ ವಾಯುಮಾಲಿನ್ಯ ಉಂಟಾಗುತ್ತಿದೆ.

ಎಲ್ಲೆಂದರಲ್ಲಿ ತ್ಯಾಜ್ಯ ವಿಲೇವಾರಿಯಿಂದ ಪರಿಸರ ಮತ್ತು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ತ್ಯಾಜ್ಯದಿಂದ ನೊಣ, ಸೊಳ್ಳೆಗಳು ಉತ್ಪತ್ತಿಯಾಗಿ ಮಲೇರಿಯಾ, ಕಾಲರ ಸೇರಿ ಇನ್ನಿತರ ಗಂಭೀರ ಕಾಯಿಲೆಗಳು ಹರಡುತ್ತಿವೆ. ತ್ಯಾಜ್ಯದ ಮೇಲೆ ಓಡಾಡುವುದರಿಂದ ಚರ್ಮರೋಗ ಬರಬಹುದು.

| ಡಾ.ಕೆ.ಎಸ್.ಸಂಜಯ್ ಉಸ್ತುವಾರಿ ಅಧೀಕ್ಷಕ, ಇಂದಿರಾಗಾಂಧಿ ಆಸ್ಪತ್ರೆ

ಕಾಯಿಲೆಗಳಿಗೆ ರಹದಾರಿ…

ರಾಜ್ಯ ಪೌರಾಡಳಿತ ನಿರ್ದೇಶನಾಲಯವು ಕರ್ನಾಟಕ ರಾಜ್ಯ ಘನ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಕುರಿತ ಹೊಸ ಕರಡು ಸಿದ್ಧಪಡಿಸಿದೆ. ಅದರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಉಲ್ಲೇಖಿಸಿ ಜನರಿಗೆ 22 ಬಗೆಯ ಕಾಯಿಲೆಗಳು ಬರುವ ಬಗ್ಗೆ ವಿವರಿಸಿದೆ. ಕಸ ವಿಲೇವಾರಿ ಸರಿಯಾಗಿ ಆಗದ್ದರಿಂದ ನೀರು, ಗಾಳಿ, ಭೂಮಿ ಮತ್ತು ಆಹಾರ ಪದಾರ್ಥಗಳು ಹಾಳಾಗುತ್ತವೆ. ಪ್ರಮುಖವಾಗಿ ಕೈಗಾರಿಕಾ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣ ಪರಿಸರಕ್ಕೆ ಹಾನಿಯಾಗುತ್ತಿದೆ. ಅಲ್ಲದೆ ಚರ್ಮರೋಗ, ಶ್ವಾಸಕೋಶ ಕ್ಯಾನ್ಸರ್, ಯಕೃತ್, ಮೂತ್ರಪಿಂಡ, ಶ್ವಾಸಕೋಶ ಸಂಬಂಧಿ ಕಾಯಿಲೆಗಳು, ಮಲೇರಿಯಾ, ಚಿಕೂನ್ ಗುನ್ಯಾ ಇನ್ನಿತರ ಮಾರಕ ಕಾಯಿಲೆಗಳಿಗೆ ಜನರು ತುತ್ತಾಗುವಂತಾಗುತ್ತಿದೆ. ವೈದ್ಯಕೀಯ ತ್ಯಾಜ್ಯದ ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಏಡ್ಸ್​ನಂತಹ ಹಲವು ಕಾಯಿಲೆಗಳು ಬರುತ್ತಿವೆ.

ಹೊಸ ನೀತಿಯಲ್ಲೇನಿದೆ?

# 2019ರಲ್ಲಿ ಯಾವುದೇ ಕಾರಣಕ್ಕೂ ತ್ಯಾಜ್ಯ ಸುಡುವುದಕ್ಕೆ ಅವಕಾಶ ನೀಡುವಂತಿಲ್ಲ.

# 2020ರ ವೇಳೆಗೆ ತ್ಯಾಜ್ಯ ಉತ್ಪತ್ತಿ ಪ್ರಮಾಣ ಶೇ. 15 ಕಡಿಮೆ ಮಾಡಬೇಕು. -ಠಿ;2021ಕ್ಕೆ ಹಸಿ, ಒಣ, ಸ್ಯಾನಿಟರಿ ತ್ಯಾಜ್ಯವನ್ನು ಶೇ. 80 ವಿಂಗಡಿಸುವಂತಾಗಬೇಕು.

# ಹಸಿ ತ್ಯಾಜ್ಯ ಶೇ.100 ಸಂಸ್ಕರಿಸಿ, ಮನೆ ತ್ಯಾಜ್ಯ ಸಂಗ್ರಹ ಶೇ. 100 ಅನುಷ್ಠಾನವಾಗಬೇಕು.

# 1 ಲಕ್ಷಕ್ಕೂ ಅಧಿಕ ಜನರಿರುವ ನಗರಗಳಲ್ಲಿ ತ್ಯಾಜ್ಯ ಸಂಸ್ಕರಣೆ ನಿಯಮ ಕಡ್ಡಾಯ ಜಾರಿ.