ವೇತನ ನೀಡಲು ಗ್ರಾಪಂ ನೌಕರರ ಆಗ್ರಹ

ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಪದಾಧಿಕಾರಿಗಳು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ತಾಪಂ ಅಧ್ಯಕ್ಷ ದಾನಪ್ಪ ಚೌಧರಿ ಅವರಿಗೆ ಮನವಿ ಸಲ್ಲಿಸಿದರು.

ಶುಕ್ರವಾರ ತಾಪಂ ಕಾರ್ಯನಿವಾಹಕರ ಅಧಿಕಾರಿಗಳ ಕಚೇರಿ ಮುಂದೆ ಜಮಾಯಿಸಿದ ನೌಕರರನ್ನುದ್ದೇಶಿಸಿ ಪಂಚಾಯಿತಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ನೌಕರರಿಗೆ ಕಳೆದ 6 ತಿಂಗಳಿಂದ ಬಾಕಿ ಉಳಿದಿರುವ ವೇತನ ತಕ್ಷಣ ಕೊಡಬೇಕು. ಹೊಸ ವೇತನ ಅನುಮೋದನೆ ಇಲ್ಲದವರಿಗೂ ವೇತನ ನೀಡಬೇಕು. ಇಲೆಕ್ಟ್ರಾನಿಕ್ ಫಂಡ್ಸ್ ಮ್ಯಾನೇಜ್​ವೆುಂಟ್ ಸಿಸ್ಟಮ್ (ಇಎಫ್​ಎಂಎಸ್)ಗೆ ಸೇರದೆ ಬಾಕಿ ಉಳಿದ 18 ಸಾವಿರ ನೌಕರರ ವಿವರವನ್ನು ಪಿಡಿಒ ಹಾಗೂ ಇಒ ಅವರು ಕೂಡಲೇ ಸರ್ಕಾರಕ್ಕೆ ಕಳುಹಿಸಬೇಕು ಎಂದು ಆಗ್ರಹಿಸಿದರು.

ಅಪರ ಕಾರ್ಯದರ್ಶಿ ಎಂ.ಎಸ್.ಸ್ವಾಮಿ ವರದಿಯಂತೆ 5998 ಬಿಲ್ ಕಲೆಕ್ಟರ್ ಹುದ್ದೆಗಳ ಸೃಷ್ಟಿಗಾಗಿ ಕಿರು ನೀರು ಪೂರೈಕೆ ಹಾಗೂ ಕೊಳವೆ ನೀರು ಪೂರೈಕೆ ಸ್ಥಾವರಗಳಿಗೆ ಅನುಗುಣವಾಗಿ 16 ಸಾವಿರ ಹುದ್ದೆಗಳ ಸೃಷ್ಟಿಗಾಗಿ ಐಪಿಡಿ ಸಾಲಪ್ಪನವರ ವರದಿಯಂತೆ ಕಸಗೂಡಿಸುವ ಹುದ್ದೆ ಸೃಷ್ಟಿಸಿ ಎಲ್ಲರಿಗೂ ಅನುಮೋದನೆ ನೀಡಬೇಕು. ಎಸ್​ಎಸ್​ಎಲ್​ಸಿ ಪಾಸಾದವರಿಗೆ ಕಾರ್ಯದರ್ಶಿ 2 ಹುದ್ದೆಗೆ ಬಡ್ತಿ ನೀಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಕ್ಲರ್ಕ್ ಕಂ ಕಂಪ್ಯೂಟರ್ ಆಪರೇಟರ್ ಹುದ್ದೆ ಬಡ್ತಿಗೆ ನೀಡಬೇಕು. 1252 ಗ್ರೇಡ್ 2 ಪಂಚಾಯಿತಿಗಳನ್ನು ಗ್ರೇಡ್ -1 ಮೇಲ್ದರ್ಜೆಗೇರಿಸಲು ಈಡೇರಿಸಬೇಕು. ಕೂಡಲೇ ಈ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲವಾದಲ್ಲಿ ಜ.8 ಹಾಗೂ 9 ರಂದು ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಲಕ್ಷ್ಮಣ ಹಂದ್ರಾಳ ಮಾತನಾಡಿ, ಕನಿಷ್ಠ 18 ಸಾವಿರ ರೂ. ವೇತನ ಕೊಡಬೇಕು. ನೌಕರಿ ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.

ಸುರೇಖಾ ರಜಪೂತ ಮಾತನಾಡಿ, ಗ್ರಾಪಂ ನೌಕರರಿಗೆ ಆರೋಗ್ಯ ಕಾರ್ಡ್ ನೀಡಬೇಕು. ವರ್ಷಕ್ಕೆ 20 ದಿನಗಳ ಗಳಿಕೆ ರಜೆ ಮಂಜೂರು ಮಾಡಬೇಕು. ಭಾನುವಾರ ಕೆಲಸ ಮಾಡಿದವರಿಗೆ ಹೆಚ್ಚುವರಿ ವೇತನ ಕೊಡಬೇಕು ಅಥವಾ ವಾರಕ್ಕೊಂದು ರಜೆ ನೀಡಬೇಕು. ನಿತ್ಯವೇತನ ನೀಡುವುದರಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದು ಕೂಡಲೇ ವೇತನ ಕೊಡುವ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಮನವಿ ಸ್ವೀಕರಿಸಿದ ತಾಪಂ ಅಧ್ಯಕ್ಷ ದಾನಪ್ಪ ಚೌಧರಿ ಮಾತನಾಡಿ, ನಿಮ್ಮ ಬೇಡಿಕೆಗಳನ್ನು ಇಒ ಅವರ ಗಮನಕ್ಕೆ ತಂದು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು..

ಕಾರ್ಯದರ್ಶಿ ರಫೀಕ್ ವಾಲಿಕಾರ, ಸಿದ್ದರಾಯ ಬಂಗಾರಿ, ಇಸಾಕ್ ಜಮಾದಾರ, ಸಿದ್ದು ಜಾಲಗೇರಿ, ಭೀಮು ಸಾರವಾಡ ಸೇರಿದಂತೆ ನೂರಾರು ಜನ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.