ಟಿಡಿಆರ್ ಅಕ್ರಮದಲ್ಲಿ ಕೈವಾಡ: ಚೆಕ್ ಡಿಸ್ಕೌಂಟರ್ ಡೈರಿ ರಹಸ್ಯ ಬಯಲು, 15 ದಿನದಲ್ಲಿ ಚಾರ್ಜ್​ಶೀಟ್

| ಅವಿನಾಶ ಮೂಡಂಬಿಕಾನ ಬೆಂಗಳೂರು

ಸರ್ಕಾರ ವಶಪಡಿಸಿಕೊಂಡ ಭೂಮಿಗೆ ಪರಿಹಾರ ನೀಡುವ ‘ಅಭಿವೃದ್ಧಿ ಹಕ್ಕು ವರ್ಗಾವಣೆ’ (ಟಿಡಿಆರ್) ಹಗರಣದಲ್ಲಿ ಪ್ರಭಾವಿ ರಾಜಕಾರಣಿಗಳ ಕೈವಾಡವಿರುವ ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸಿಬಿ ಅಧಿಕಾರಿಗಳೇ ಇದನ್ನು ಬಯಲಿಗೆಳೆದಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಚೆಕ್ ಡಿಸ್ಕೌಂಟರ್ ರಾಜೇಶ್​ನ ಕಾಟನ್​ಪೇಟೆ ನಿವಾಸದಲ್ಲಿ ಪತ್ತೆಯಾದ ಡೈರಿಯಲ್ಲಿ ಕಾಂಗ್ರೆಸ್​ನ ಪ್ರಭಾವಿ ಸಚಿವರೊಬ್ಬರಿಗೆ ಕೋಟ್ಯಂತರ ರೂ. ಸಂದಾಯವಾಗಿರುವುದು ಉಲ್ಲೇಖವಾಗಿದೆ ಎಂಬ ಮಾಹಿತಿಯನ್ನು ಹಿರಿಯ ಎಸಿಬಿ ಅಧಿಕಾರಿಯೊಬ್ಬರು ವಿಜಯವಾಣಿಗೆ ನೀಡಿದ್ದಾರೆ.

ಪ್ರಭಾವಿ ಸಚಿವರೊಬ್ಬರು ಹಗರಣದ ಆರೋಪಿಗಳನ್ನು ರಕ್ಷಿಸುತ್ತಿದ್ದರು. ಹೀಗಾಗಿಯೇ ಪ್ರಕರಣ ಇಷ್ಟು ಸಮಯ ಬೆಳಕಿಗೆ ಬಂದಿರಲಿಲ್ಲ. ಸದ್ಯ ತಲೆಮರೆಸಿಕೊಂಡಿರುವ ಆರೋಪಿ ಬಿಡಿಎ ಇಂಜಿನಿಯರ್ ಕೃಷ್ಣಲಾಲ್​ನನ್ನು 2018ರಲ್ಲಿ ಇದೇ ಸಚಿವರು ಬಿಬಿಎಂಪಿಯಿಂದ ಬಿಡಿಎಗೆ ವರ್ಗಾವಣೆ ಮಾಡಿಸಿದ್ದರು. ಈತ ಹಗರಣದಲ್ಲಿ ಶಾಮೀಲಾಗಿರುವುದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಲಭಿಸಿದ ಬಳಿಕ ಆ ಸಚಿವರು ಪ್ರಕರಣವನ್ನೇ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆಂದು ತಿಳಿದು ಬಂದಿದೆ. ಡೈರಿಯಲ್ಲಿ ಕೆಲ ನ್ಯಾಯಾಧೀಶರ ಹೆಸರು ಕೂಡ ಉಲ್ಲೇಖವಾಗಿರುವುದಾಗಿ ಅಧಿಕಾರಿ ಹೇಳಿದ್ದಾರೆ.

ವಂಚನೆಗೆ ಸಿಕ್ಕಿದೆ ಸಾಕ್ಷ್ಯ: ಪ್ರಕರಣದ ಪ್ರಮುಖ ಆರೋಪಿಗಳಾದ ವಾಲ್​ವಾರ್ಕ್ ಕಂಪನಿ ನಿರ್ದೇಶಕ ರತನ್ ಬಾಬು ಲಾಲ್​ಲಾಥ್, ಕಂಪನಿ ನೌಕರ ಅಮಿತ್ ಜೆ. ಬೋಳಾರ್, ಚೆಕ್ ಡಿಸ್ಕೌಂಟರ್ ರಾಜೇಶ್ ಇನ್ನಿತರರ ವಿಚಾರಣೆ ಪೂರ್ಣಗೊಂಡಿದೆ. ಆರೋಪಿಗಳು ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂ. ವಂಚಿಸಿರುವುದಕ್ಕೆ ಮಹತ್ವದ ಸಾಕ್ಷ್ಯ ದೊರೆತಿದ್ದು, ಮುಂದಿನ 15 ದಿನದೊಳಗೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವುದಾಗಿ ಎಸಿಬಿ ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆದರೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ರಾಜಕಾರಣಿಗಳು ಹಾಗೂ ಕಾರ್ಪೆರೇಟರ್​ಗಳ ವಿಚಾರಣೆ ನಡೆಸುವ ಕುರಿತು ಇನ್ನೂ ಯಾವುದೇ ನಿರ್ಧಾರವಾಗಿಲ್ಲ.

ಅನುಮತಿ ನೀಡದ ಇಲಾಖೆ: ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ದೇವರಾಜ್, ರಮೇಶ್ ವಿಚಾರಣೆ ನಡೆಸಲು ಅನುಮತಿ ನೀಡುವಂತೆ ಕೋರಿ ಎಸಿಬಿ ಮೇ 27ರಂದೇ ಪಿಡಬ್ಲ್ಯುಡಿ ಕಾರ್ಯದರ್ಶಿಗೆ ಮನವಿ ಮಾಡಿದೆ. ಆದರೆ ತಿಂಗಳು ಕಳೆದರೂ ವಿಚಾರಣೆಗೆ ಅನುಮತಿ ಸಿಕ್ಕಿಲ್ಲ. ಇದು ತನಿಖೆಗೆ ಹಿನ್ನಡೆ ಉಂಟುಮಾಡಿದೆ. ಮೂರು ತಿಂಗಳೊಳಗಾಗಿ ಇಲಾಖೆ ಅನುಮತಿ ನೀಡದಿದ್ದಲ್ಲಿ ಸ್ವಯಂಪ್ರೇರಿತವಾಗಿ ಎಫ್​ಐಆರ್ ದಾಖಲಿಸಿಕೊಂಡು ವಿಚಾರಣೆ ನಡೆಸಲು ಎಸಿಬಿಗೆ ಅವಕಾಶವಿದೆ.

ಏನಿದು ಪ್ರಕರಣ?

ಭಟ್ಟರಹಳ್ಳಿಯಿಂದ ಟಿ.ಸಿ. ಪಾಳ್ಯದವರೆಗಿನ (ಅಂದಾಜು 7 ಕಿ.ಮೀ) ರಸ್ತೆ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಳ್ಳಲಾದ ಜಮೀನಿಗೆ ನೀಡಿರುವ ಪರಿಹಾರದಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ ಉಂಟಾಗಿದೆ. ಬಿಬಿಎಂಪಿ ರಸ್ತೆ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಂಡ ಜಮೀನಿಗೆ ನಿಗದಿತ ಜಾಗಕ್ಕಿಂತಲೂ ಅಧಿಕ ಟಿಡಿಆರ್ ಹಕ್ಕು ಕೊಡುವ ಮೂಲಕ ಸಂಬಂಧಿಸಿದ ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರು. 2005ರಿಂದ ಟಿಡಿಆರ್ ನಿಯಮ ಜಾರಿಗೆ ಬಂದ ಬಳಿಕ ಇದೇ ರೀತಿ ಅಂದಾಜು 1 ಸಾವಿರ ಕೋಟಿ ರೂ.ಗಳಿಗೂ ಅಧಿಕ ಅವ್ಯವಹಾರ ನಡೆದಿದೆ ಎಂಬುದು ಹಗರಣದ ಸಾರ.

ಇ.ಡಿಯಿಂದಲೂ ತನಿಖೆ

ಟಿಡಿಆರ್ ಅವ್ಯವಹಾರದಲ್ಲಿ ಭಾಗಿಯಾಗಿದ್ದ ಶ್ರೀ ಬನಶಂಕರಿ ಮಹಿಳಾ ಕೋ-ಆಪರೇಟಿವ್ ಬ್ಯಾಂಕ್​ನ ಬಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ಓರ್ವ ವ್ಯಕ್ತಿಯ ಹೆಸರಿನಲ್ಲಿ ಖಾತೆ ತೆರೆದು, ಆತನ ಹೆಸರಿನಲ್ಲೇ ಟಿಡಿಆರ್​ಗೆ ಸಂಬಂಧಿಸಿದ ಹಣ ಡ್ರಾ ಮಾಡಿಕೊಳ್ಳುತ್ತಿದ್ದರು. ಆದರೆ, ಈ ವಿಚಾರ ಆ ವ್ಯಕ್ತಿಯ ಗಮನಕ್ಕೆ ಬರುತ್ತಿರಲಿಲ್ಲ.

Leave a Reply

Your email address will not be published. Required fields are marked *