More

  ರಾಜ್ಯಕ್ಕೆ ತೆರಿಗೆ ತಾಪತ್ರಯ: ಕಾಡುತ್ತಿದೆ ಎರಡು ಸಾವಿರ ಕೋಟಿ ರೂಪಾಯಿ ಕೊರತೆ ಆತಂಕ

  ಬೆಂಗಳೂರು: ಆರ್ಥಿಕತೆ ಕುಸಿತದ ಕರಿಛಾಯೆ ರಾಜ್ಯದ ತೆರಿಗೆ ಸಂಗ್ರಹಣೆಯ ಮೇಲೂ ವ್ಯಾಪಿಸಿರುವ ಪರಿಣಾಮ ವರ್ಷಾಂತ್ಯಕ್ಕೆ 2000 ಕೋಟಿ ರೂ.ವರೆಗೂ ಕೊರತೆ ಸಂಭವಿಸುವ ಆತಂಕ ಎದುರಾಗಿದೆ. ಈ ಸವಾಲಿಗೆ ಪರಿಹಾರವಾಗಿ ಸ್ವಂತ ತೆರಿಗೆಗಳ ಸಂಗ್ರಹಣೆಯಲ್ಲಿ ಸುಧಾರಣೆ, ಸಾಲ, ಬಾಕಿ ತೆರಿಗೆ ವಸೂಲಿ ಹಾಗೂ ಸೋರಿಕೆ ತಡೆಗೆ ಆದ್ಯತೆ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಐದು ಇಲಾಖೆಗಳ ಅಧಿಕಾರಿಗಳ ಜತೆ ಮಹತ್ವದ ಸಭೆ ನಡೆಸಲಿದ್ದಾರೆ.

  ರಾಜ್ಯ ಸರ್ಕಾರ ವಿವಿಧ ಮೂಲಗಳಿಂದ ಸಂಗ್ರಹಿಸುವ ತೆರಿಗೆಗಳಲ್ಲಿ ಕೊರತೆಯಾಗಬಹುದೆಂಬ ಅಂದಾಜಿನ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ತೊಡಕುಂಟಾಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ. ಹಣಕಾಸು ಸಂಗ್ರಹಣೆ ಬಿಗಿಗೊಳಿಸಿದರಷ್ಟೇ ಉತ್ತಮ ಬಜೆಟ್ ನೀಡಲು ಸಾಧ್ಯ ಎಂದು ಬೇರೆ ಬೇರೆ ಮಾರ್ಗಗಳ ಮೂಲಕ ಸಂಪನ್ಮೂಲ ಸಂಗ್ರಹದ ಕಡೆ ಚಿತ್ತ ಹರಿಸಿದೆ.

  ಎಷ್ಟು ಕೊರತೆ: ಸರ್ಕಾರ ಸ್ವಂತ ತೆರಿಗೆಗಳಿಂದ ಒಟ್ಟು 1,01,744 ಕೋಟಿ ರೂ. ಸಂಗ್ರಹ ಉದ್ದೇಶ ಹೊಂದಿದ್ದು, ಈವರೆಗೆ 57,740 ಕೋಟಿ ರೂ. ಸಂಗ್ರಹವಾಗಿದೆ. ಈ ಲೆಕ್ಕದಲ್ಲಿ 2000 ಕೋಟಿ ರೂ. ಕಡಿಮೆಯಾಗಬಹುದೆಂಬುದು ಆರ್ಥಿಕ ಇಲಾಖೆ ಅಂದಾಜು. ತೆರಿಗೆ ಸಂಗ್ರಹಣೆಯ ಬೆಳವಣಿಗೆಯ ಪ್ರಮಾಣ ಶೇ. 5.2ಕ್ಕಿಂತ ಹೆಚ್ಚಾಗುತ್ತಿಲ್ಲ. ಸರ್ಕಾರಿ ವೆಚ್ಚದ ಮೇಲೆ ನಿಯಂತ್ರಣ ಹಾಕುವ ಬಗ್ಗೆ ಚರ್ಚೆಗಳಾಗಿವೆಯಾದರೂ ಎಲ್ಲಿ ಎಷ್ಟು ಕಡಿಮೆ ಮಾಡಬೇಕು ಎಂಬ ಬಗ್ಗೆ ತೀರ್ವನವಾಗಿಲ್ಲ.

  ಸೋರಿಕೆ ತಡೆ ಚರ್ಚೆ: ರಾಜ್ಯದ ಜಿಎಸ್​ಟಿಯಲ್ಲಿ 8.12 ಲಕ್ಷ ನೋಂದಾಯಿತ ವ್ಯಾಪಾರಿಗಳಿದ್ದಾರೆ. ಜಿಎಸ್​ಟಿ ಸಂಗ್ರಹದಲ್ಲಿ ಎಲ್ಲೆಲ್ಲಿ ಸೋರಿಕೆ ಎಂಬುದನ್ನು ಗುರುತಿಸಲಾಗಿದೆ. ಅದನ್ನು ತಡೆಗಟ್ಟುವ ಮೂಲಕ ತೆರಿಗೆ ಸಂಗ್ರಹ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ.

  200 ರೂ. ಮೇಲ್ಪಟ್ಟ ಖರೀದಿಗೆ ಕಡ್ಡಾಯ ಬಿಲ್ ಬಗ್ಗೆ ಜಾಗೃತಿ, ಫೇಕ್ ಇನ್​ವಾಯ್್ಸಳಿಗೆ ಕಡಿವಾಣ, ಇ-ವೇ ಬಿಲ್​ಗಳ ಮೇಲೆ ನಿಗಾ, ಸತ್ತವರು ಹಾಗೂ ವಹಿವಾಟು ಮುಚ್ಚಿದವರ ಹೆಸರಿನಲ್ಲಿ ನಡೆಸುತ್ತಿರುವ ವಹಿವಾಟು ತಡೆ, ಎಲ್ಲ ಡೀಲರ್​ಗಳ ವಹಿವಾಟು ಕಾಲಕಾಲಕ್ಕೆ ಪರಿಶೀಲನೆ, ನಕಲಿ ಡೀಲರ್​ಗಳನ್ನು ಮಟ್ಟ ಹಾಕುವುದು, ಗಡಿಯಲ್ಲಿ ಪರಿಶೀಲನೆ, ತೆರಿಗೆ ಸಂಗ್ರಹದಲ್ಲಿ ವಂಚನೆಗಳನ್ನು ಶೂನ್ಯಕ್ಕೆ ಇಳಿಸುವುದು ಸರ್ಕಾರದ ಉದ್ದೇಶ.

  ಸಮಿತಿ ರಚನೆ: ಜಿಎಸ್​ಟಿ ವಂಚನೆ ತಡೆ, ಪರಿಹಾರ ನೀಡಿಕೆ ಸಂಬಂಧ ಎಲ್ಲ ರಾಜ್ಯಗಳಲ್ಲಿಯೂ ಸಮಿತಿ ರಚಿಸಲಾಗುತ್ತಿದೆ. ಕರ್ನಾಟಕದಲ್ಲೂ ಒಂದೆರಡು ದಿನದಲ್ಲಿ ಕೇಂದ್ರ ತೆರಿಗೆ ಇಲಾಖೆ ರಾಜ್ಯದ ವಲಯದ ಪ್ರಧಾನ ಮುಖ್ಯ ಆಯುಕ್ತರ ಅಧ್ಯಕ್ಷತೆ, ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರ ಸಹಅಧ್ಯಕ್ಷತೆಯಲ್ಲಿ ಸಮಿತಿ ಅಸ್ತಿತ್ವಕ್ಕೆ ಬರುತ್ತಿದೆ.

  ಕೇಂದ್ರದಿಂದ ಎಷ್ಟು ಕಡಿತ: ಕೇಂದ್ರ ಸರ್ಕಾರ ನೀಡಬೇಕಾಗಿರುವ ತೆರಿಗೆ ಪಾಲಿನಲ್ಲಿ ಎಷ್ಟು ಕಡಿತ ಆಗಲಿದೆ ಎಂಬ ಅಂದಾಜು ರಾಜ್ಯ ಸರ್ಕಾರಕ್ಕೆ ಸಿಗುತ್ತಿಲ್ಲವಾದರೂ, 5 ಸಾವಿರ ಕೋಟಿ ರೂ.ಗಳ ತನಕ ಕಡಿಮೆ ಆಗಬಹುದೆಂದು ಹೇಳಲಾಗುತ್ತಿದೆ. ಈಗ ಜಿಎಸ್​ಟಿ ಪರಿಹಾರದ ಎರಡು ಕಂತು 7000 ಕೋಟಿ ರೂ. ಬಾಕಿ ಇದೆ. ಆದರೆ ಕೇಂದ್ರ ಸರ್ಕಾರ ಆ ಬಗ್ಗೆ ಮಾಹಿತಿ ನೀಡಿಲ್ಲ. ಮಾರ್ಚ್ ತನಕ ಮಾಹಿತಿ ಸಿಗಲ್ಲ ಎಂದು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

  ಸಾಲ, ಬಾಕಿ ವಸೂಲಿಗೆ ಆದ್ಯತೆ

  ವಿವಿಧ ಬಾಬ್ತುಗಳಿಗೆ ನೀಡಿರುವ ಸಾಲ ವಸೂಲಿಗೆ ಆದ್ಯತೆ ನೀಡಬೇಕೆಂದು ಸರ್ಕಾರ ಎಲ್ಲ ಇಲಾಖೆಗಳಿಗೂ ತಿಳಿಸಿದೆ. ವಿವಿಧ ಮಂಡಳಿ ಹಾಗೂ ನಿಗಮಗಳಿಗೆ ಸರ್ಕಾರ ಸಾಲದ ರೂಪದಲ್ಲಿ ಹಣ ನೀಡಿರುತ್ತದೆ. ಆ ಸಾಲ ವಸೂಲಿ ಮಾಡಿಕೊಂಡರೆ ಮತ್ತೆ ಸರ್ಕಾರದಿಂದ ಹಣ ನೀಡುವುದು ತಪು್ಪತ್ತದೆ ಎಂಬುದು ಸರ್ಕಾರದ ಉದ್ದೇಶ. ಸರ್ಕಾರ ನೀಡಿರುವ ಸಾಲದ ಪ್ರಮಾಣ ಸುಮಾರು 20 ಸಾವಿರ ಕೋಟಿ ರೂ.ಗಳಿರಬಹುದು. ಆದರೆ ಅದಕ್ಕೆ ಬರುತ್ತಿರುವ ಬಡ್ಡಿ 100 ಕೋಟಿ ರೂ.ಯನ್ನೂ ದಾಟುತ್ತಿಲ್ಲ. ಆದ್ದರಿಂದಲೇ ಸಾಲ ವಸೂಲಿಗೆ ಆರ್ಥಿಕ ಇಲಾಖೆ ಸಂಬಂಧಿಸಿದ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

  -ಠಿ;16,400 ಕೋಟಿ ಬಾಕಿ

  ಕೆಲವು ವರ್ಷಗಳಿಂದ 16,400 ಕೋಟಿ ರೂ.ಗಳ ತೆರಿಗೆ ಬಾಕಿ ವಸೂಲಿಯಾಗದೆ ಉಳಿದಿದೆ. ಪ್ರತಿ ವರ್ಷ ಕರ ಸಮಾಧಾನ ಯೋಜನೆ ತಂದರೂ ಬಾಕಿ ಸಮಸ್ಯೆ ಬಗೆಹರಿಯುತ್ತಿಲ್ಲ. ನ್ಯಾಯಾಲಯಗಳಲ್ಲಿರುವ ಕೆಲವು ಪ್ರಕರಣಗಳನ್ನು ಇತ್ಯರ್ಥ ಮಾಡಿ ವಸೂಲಿ ಮಾಡುವಂತೆಯೂ ತಿಳಿಸಲಾಗಿದೆ. ನೆರೆ ಹಾವಳಿ, ಸಾಲ ಮನ್ನಾ, ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಹೆಚ್ಚಿನ ಸಂಪನ್ಮೂಲ ಕ್ರೋಡೀಕರಣಕ್ಕೆ ಈ ಕ್ರಮ ಅನುಸರಿಸುವಂತೆ ಹೇಳಲಾಗಿದೆ.

  ಇಂದು ಸಿಎಂ ಸರಣಿ ಸಭೆ

  ಬೆಂಗಳೂರು: ತೆರಿಗೆ ಸಂಗ್ರಹ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಸಿಎಂ ಯಡಿಯೂರಪ್ಪ ಸೋಮವಾರ ಅರ್ಧ ದಿನ ವಿವಿಧ ಇಲಾಖೆಗಳೊಂದಿಗೆ ಸರಣಿ ಸಭೆ ನಡೆಸುತ್ತಿದ್ದಾರೆ. ಈ ಆರ್ಥಿಕ ವರ್ಷದ ಕೊನೆಯ ತ್ರೖೆಮಾಸಿಕ ಆರಂಭವಾಗಿದ್ದರೂ ಈವರೆಗಿನ ಆದಾಯ ಸಂಗ್ರಹ ನಿರೀಕ್ಷಿತ ಪ್ರಮಾಣದಲ್ಲಿಲ್ಲ. ನಿರೀಕ್ಷೆಯ ಗುರಿ ಮುಟ್ಟದಿದ್ದರೆ ಕಾರ್ಯಕ್ರಮ ಅನುಷ್ಠಾನ ಕಷ್ಟ. ಕೇಂದ್ರದಿಂದಲೂ ಸರಿಸುಮಾರು 5 ಸಾವಿರ ಕೋಟಿ ರೂ. ಕಡಿಮೆ ಅನುದಾನ ಬರುವ ನಿರೀಕ್ಷೆ ಇದೆ. ಈ ಎಲ್ಲ ಕಾರಣಗಳಿಂದಾಗಿ ವಾಣಿಜ್ಯ ತೆರಿಗೆ, ಅಬಕಾರಿ, ಸಾರಿಗೆ, ನೋಂದಣಿ ಮುದ್ರಾಂಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಸಿಎಂ ಸಮಾಲೋಚನೆ ನಡೆಸಲಿದ್ದು, ಕೊನೆಯ ತ್ರೖೆಮಾಸಿಕದಲ್ಲಿ ಕೈಗೊಳ್ಳಬೇಕಾದ ಕ್ರಮ, ಸರ್ಕಾರದ ಕಡೆಯಿಂದ ಆಗಬೇಕಾದ ಕ್ರಮ, ಮುಂದಿನ ಬಜೆಟ್​ಗೆ ಪೂರಕ ಸಿದ್ಧತೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಈವರೆಗಿನ ಅಂಕಿಅಂಶಗಳನ್ನು ಗಮನಿಸಿದರೆ, ಅಬಕಾರಿ ಇಲಾಖೆ ಹೊರತು ಪಡಿಸಿ ಉಳಿದ ಇಲಾಖೆಗಳು ಗುರಿ ಮುಟ್ಟಿಲ್ಲ.

  | ರುದ್ರಣ್ಣ ಹರ್ತಿಕೋಟೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts