156 ತಾಲೂಕು ಬರಪೀಡಿತ

ಬೆಂಗಳೂರು: ಬರಪೀಡಿತ ತಾಲೂಕುಗಳ ಪಟ್ಟಿಗೆ ಮತ್ತೆ 56 ತಾಲೂಕು ಸೇರಿಸಲಾಗಿದ್ದು, ಮೂರು ಜಿಲ್ಲೆ ಹೊರತುಪಡಿಸಿ ಇಡೀ ರಾಜ್ಯ ಬರಪೀಡಿತವಾದಂತಾಗಿದೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಮುಂಗಾರಿನಲ್ಲಿ ಮಳೆ ಕೊರತೆಯಿಂದ 100 ತಾಲೂಕು ಬರಪೀಡಿತ ಎಂದು ಈಗಾಗಲೇ ಘೋಷಿಸಲಾಗಿದೆ. ಇದೀಗ ಮತ್ತೆ 56 ತಾಲೂಕುಗಳು ಸೇರಿ 156ಕ್ಕೆ ಏರಿದೆೆ. ದಕ್ಷಿಣಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಬರ ಆವರಿಸಿದೆ ಎಂದರು.

ಬರ-ಪ್ರವಾಹದಂಥ ನೈಸರ್ಗಿಕ ವಿಕೋಪ ಕಾರಣಕ್ಕೆ ಆಹಾರ ಉತ್ಪಾದನೆ ಕುಸಿದಿದೆ. 20 ಸಾವಿರ ಕೋಟಿ ರೂ.ನಷ್ಟು ಆಹಾರ ಉತ್ಪಾದನೆ ನಷ್ಟವಾಗಿರುವ ಅಂದಾಜಿದ್ದು, ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ. ಈಗಾಗಲೇ ಘೋಷಿತ 100 ಬರಪೀಡಿತ ತಾಲೂಕುಗಳಿಗೆ ಶಾಸಕರ ನೇತೃತ್ವದ ಟಾಸ್ಕ್​ಫೋರ್ಸ್ ರಚಿಸಿ ಇಲಾಖೆಯಿಂದ ತಲಾ 50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ತಲಾ 50 ಲಕ್ಷ ರೂ. ಬಿಡುಗಡೆ ಮಾಡಿದ್ದು, ಒಟ್ಟು 1 ಕೋಟಿ ರೂ. ನೀಡಲಾಗಿದೆ. ಹೊಸದಾಗಿ ಸೇರಿದ 56 ತಾಲೂಕುಗಳಿಗೆ ಈಗಾಗಲೇ 25 ಲಕ್ಷ ರೂ. ಬಿಡುಗಡೆ ಮಾಡಲಾಗಿದ್ದು, ಮತ್ತೆ 25 ಲಕ್ಷ ರೂ. ನೀಡಲಾಗುವುದು.

ಬರಪೀಡಿತ ತಾಲೂಕುಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ, ಮೇವು ಬ್ಯಾಂಕ್ ಸ್ಥಾಪನೆ, ಗೋಶಾಲೆ ತೆರೆಯುವುದು, ಉದ್ಯೋಗ ಖಾತರಿ ಯೋಜನೆಯಂತೆ 150 ದಿನ ಕೆಲಸ ನೀಡುವಂತೆ ತಿಳಿಸಲಾಗಿದೆ. ಮೇವು ಖರೀದಿಗೆ ಪಶುಸಂಗೋಪನೆ ಇಲಾಖೆಗೆ ಈ ಮೊದಲು 10 ಕೋಟಿ ರೂ. ನೀಡಲಾಗಿತ್ತು, ಮತ್ತೆ 10 ಕೋಟಿ ರೂ. ನೀಡಲಾಗಿದೆ. ಬೆಳಗಾವಿ, ಕೋಲಾರ, ಬಳ್ಳಾರಿ, ಕೊಪ್ಪಳ, ಗದಗ ಜಿಲ್ಲೆಗಳಲ್ಲಿ ಮೇವು ಖರೀದಿಗೆ ಟೆಂಡರ್ ಪ್ರಕ್ರಿಯೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಸದ್ಯ 283 ಗ್ರಾಮಗಳಲ್ಲಿ 524 ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. 315 ಗ್ರಾಮಗಳಲ್ಲಿ ಖಾಸಗಿ ಬೋರ್​ವೆಲ್ ಗುತ್ತಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ. ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ 226.60 ಕೋಟಿ ರೂ. ಇದ್ದು, ಬರ ನಿರ್ವಹಣೆಗೆ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಒಟ್ಟು ಮಳೆ ಕೊರತೆ ಶೇ. 49 ರಷ್ಟಿದೆ. ಹಿಂಗಾರು ಬೆಳೆಗಳ ಪೈಕಿ ಶೇ. 90 ಬಿತ್ತನೆ ನಡೆಯುವ ಒಳನಾಡಿನಲ್ಲಿ ಶೇ. 66ರಷ್ಟು ಮಳೆ ಕೊರತೆ ಇದೆ. ಹಿಂಗಾರು ಹಂಗಾಮಿನ 31.80 ಲಕ್ಷ ಹೆಕ್ಟೇರ್ ಪ್ರದೇಶದ ಗುರಿಗೆ ಬದಲಾಗಿ ಡಿ.21 ರವರೆಗೆ ಶೇ. 26.03 ಲಕ್ಷ ಹೆಕ್ಟೇರ್​ನಲ್ಲಿ ಮಾತ್ರ (ಶೇ. 81.89) ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 29.09 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಈ ವರ್ಷ ಅಂದಾಜು 5.8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿಲ್ಲ ಎಂದು ವಿವರಿಸಿದರು.

ಕೈಗಾರಿಕೆ ಖಾತೆ ನೀಡಿದರೆ ಉತ್ತಮವಾಗಿ ನಿರ್ವಹಿಸುತ್ತೇನೆ ಎಂದು ಜನಸಾಮಾನ್ಯರು ಮಾತನಾಡಿಕೊಳ್ಳುತ್ತಾರೆ. ಆದರೆ ನಾನಂತೂ ಇಂಥದ್ದೇ ಖಾತೆ ನೀಡಿ ಎಂದು ಕೇಳಿಲ್ಲ, ನನ್ನ ಬಳಿ ಇರುವ ಖಾತೆ ಹಿಂಪಡೆಯಿರಿ ಎಂದೂ ತಿಳಿಸಿಲ್ಲ.

| ಆರ್.ವಿ.ದೇಶಪಾಂಡೆ ಕಂದಾಯ ಸಚಿವ

10 ದಿನದಲ್ಲಿ ಇನ್​ಪುಟ್ ಸಬ್ಸಿಡಿ

ಪ್ರವಾಹ ಸಂತ್ರಸ್ತ 8 ಜಿಲ್ಲೆಗಳ ನಾಗರಿಕರಿಗೆ ಕೇಂದ್ರ ಸರ್ಕಾರದಿಂದ 546 ಕೋಟಿ ರೂ. ಬಿಡುಗಡೆಯಾಗಿತ್ತು ಎಂದ ದೇಶಪಾಂಡೆ, ಬೆಳೆನಷ್ಟವಾಗಿದ್ದ 1,53,587 ರೈತರ ಮಾಹಿತಿಯನ್ನು ರಾಜ್ಯ ಸರ್ಕಾರ ಸಂಗ್ರಹಿಸಿ 323 ಕೋಟಿ ರೂ. ಇನ್​ಪುಟ್ ಸಬ್ಸಿಡಿಯನ್ನು ನೇರವಾಗಿ ಖಾತೆಗೆ ಜಮೆ ಮಾಡಲಾಗುತ್ತಿದೆ.10 ದಿನಗಳಲ್ಲಿ ರೈತರ ಖಾತೆಗೆ ಹಣ ಸಂದಾಯ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 214.03 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಸುದ್ದಿಗೋಷ್ಠಿಯಲ್ಲೇ ಆನ್​ಲೈನ್ ಮೂಲಕ 6,343 ರೈತರಿಗೆ ಇನ್​ಪುಟ್ ಸಬ್ಸಿಡಿ ಪಾವತಿಸಲಾಯಿತು.

ಕೇಂದ್ರಕ್ಕೆ ಮನವಿ

ಎನ್​ಡಿಆರ್​ಎಫ್ ನಿಯಮಾವಳಿ ಪ್ರಕಾರ ಶೇ.33 ಮಳೆ ಕೊರತೆ ಇದ್ದರೆ ಬೆಳೆನಷ್ಟಕ್ಕೆ ಇನ್​ಪುಟ್ ಸಬ್ಸಿಡಿ ಕೊಡಬೇಕು. ಆದರೆ, ಶೇ.50 ಬೆಳೆನಷ್ಟವಾಗಿದ್ದರೆ ಮಾತ್ರ ಪರಿಗಣಿಸಿ ಎಂದು ಇತ್ತೀಚೆಗೆ ಕೇಂದ್ರ ಸರ್ಕಾರ ಹೇಳಿದೆ. ಕೇಂದ್ರ ಗೃಹ ಸಚಿವರ ಬಳಿಗೆ ಶೀಘ್ರದಲ್ಲೇ ನಿಯೋಗ ತೆರಳಿ ಪರಿಸ್ಥಿತಿ ಮನವರಿಕೆ ಮಾಡಿಕೊಡಲಾಗುವುದು ಎಂದು ದೇಶಪಾಂಡೆ ತಿಳಿಸಿದರು.