ಮಾತೃಪೂರ್ಣ ಅಕ್ರಮಕ್ಕೆ ಶಿಸ್ತುಕ್ರಮ

ಬೆಂಗಳೂರು: ಮಾತೃಪೂರ್ಣ ಯೋಜನೆಯಲ್ಲಿ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ವಿತರಿಸುವ ಊಟದಲ್ಲಿ ತಪ್ಪು ಲೆಕ್ಕ ತೋರಿಸಿ ಅಕ್ರಮ ಎಸಗಿದವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎಚ್ಚರಿಕೆ ಕೊಟ್ಟಿದೆ.

ಶುಕ್ರವಾರ ವಿಜಯವಾಣಿ ಮುಖಪುಟದಲ್ಲಿ ‘ಮಾತೃಪೂರ್ಣ ಅನುತ್ತೀರ್ಣ’ ಶೀರ್ಷಿಕೆಯಲ್ಲಿ ಪ್ರಕಟವಾದ ವರದಿ ಗಮನಿಸಿದ ಸಚಿವೆ ಡಾ.ಜಯಮಾಲಾ, ಅಧಿಕಾರಿಗಳ ಜತೆ ತುರ್ತು ಸಭೆ ನಡೆಸಿದರು. ಯೋಜನೆ ಸಂಪೂರ್ಣ ಲಾಭ ಫಲಾನುಭವಿಗಳಿಗೆ ತಲುಪುವಂತಾಗಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಯೋಜನೆಯ ಸಾಧಕ-ಬಾಧಕ, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಸಮರ್ಪಕವಾಗಿ ಊಟ ದೊರೆಯದಿರುವುದರ ಬಗ್ಗೆಯೂ ಸಚಿವರು ಮಾಹಿತಿ ಕೇಳಿದ್ದಾರೆ. ಸಮರ್ಪಕ ಊಟ ಪೂರೈಕೆಗೆ ಏನೆಲ್ಲ ಕ್ರಮ ಕೈಗೊಳ್ಳಬಹುದು ಎಂಬುದನ್ನು ರ್ಚಚಿಸಿ, ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಅನುಷ್ಠಾನಕ್ಕೆ ತರಬೇಕು. ಜತೆಗೆ ಊಟದ ವಿಚಾರದಲ್ಲಿ ತಪು್ಪ ಮಾಹಿತಿ ನೀಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರ ಖಾತೆಗೆ ನೇರವಾಗಿ ಹಣ ಹಾಕಬೇಕೆಂಬ ನಿಯಮವಿದ್ದರೂ ಟೆಂಡರ್ ಕರೆಯುತ್ತಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು. ಸರ್ಕಾರದ ಹಣ ಪೋಲು ಮಾಡಕೂಡದು. ನೇರವಾಗಿ ಕಾರ್ಯಕರ್ತೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವಂತೆ ನೋಡಿಕೊಳ್ಳಬೇಕು. ಅಂಗನವಾಡಿ ಕೇಂದ್ರಗಳಿಗೆ ಜಿಲ್ಲಾ ಮಟ್ಟದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುವಂತೆ ಸಚಿವರು ಸೂಚಿಸಿದ್ದಾರೆ.

ಮಾತೃಪೂರ್ಣ ಉತ್ತಮ ಕಾರ್ಯಕ್ರಮವಾಗಿದ್ದರೂ ವ್ಯಾಪ್ತಿ ದೊಡ್ಡದಿದೆ. ಹೀಗಾಗಿ ಫಲಾನುಭವಿಗಳನ್ನು ತಲುಪಲು ಸಮಯಾವಕಾಶ ಬೇಕಾಗುತ್ತದೆ. ಅಂಗನವಾಡಿ ಕಾರ್ಯಕರ್ತೆಯರನ್ನೇ ಅವಲಂಬಿಸಬೇಕಿದೆ. ಸಮರ್ಪಕ ಸೇವೆ ಸಿಗದ ಕಡೆ ತೆರಳಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.