ಮಾತೃಪೂರ್ಣ ಅನುತ್ತೀರ್ಣ

| ವರುಣ ಹೆಗಡೆ ಬೆಂಗಳೂರು

ಪೌಷ್ಟಿಕ ಆಹಾರ ಒದಗಿಸಿ ತಾಯಿ, ಮಗುವಿನ ಅಪೌಷ್ಟಿಕತೆ ನಿವಾರಿಸುವ ಉದ್ದೇಶದಿಂದ ರಾಜ್ಯದಲ್ಲಿ ಆರಂಭಗೊಂಡ ‘ಮಾತೃಪೂರ್ಣ’ ಯೋಜನೆ ಪೂರ್ಣ ಫಲ ನೀಡುವಲ್ಲಿ ವಿಫಲವಾಗಿದೆ. ಗರ್ಭಿಣಿಯರು, ಬಾಣಂತಿಯರ ದೇಹಕ್ಕೆ ಶಕ್ತಿ ತುಂಬಬೇಕಾದ ಪೌಷ್ಟಿಕ ಆಹಾರದ ದುಡ್ಡು ಅಂಗನವಾಡಿ ಕಾರ್ಯಕರ್ತೆಯರು, ಸ್ಥಳೀಯ ಅಧಿಕಾರಿಗಳು ಹಾಗೂ ಟೆಂಡರ್​ದಾರರ ಜೇಬು ಸೇರುತ್ತಿದೆ.

ರಾಜ್ಯದಲ್ಲಿ 61 ಸಾವಿರ ಅಂಗನವಾಡಿ ಕೇಂದ್ರಗಳಿದ್ದು, ಅಂದಾಜು 1.25 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಟೆಂಡರ್ ಪ್ರಕ್ರಿಯೆಯಲ್ಲಿನ ಲೋಪದೋಷ, ಅಂಗನವಾಡಿ ಕೇಂದ್ರಗಳಲ್ಲಿನ ಮೂಲಸೌಕರ್ಯದ ಕೊರತೆ ಯೋಜನೆ ಹಳ್ಳಹಿಡಿಯಲು ಕಾರಣವಾಗಿದೆ.

ಸುಳ್ಳು ಲೆಕ್ಕ: ಮಾತೃಪೂರ್ಣ ಯೋಜನೆ ಫಲಾನುಭವಿಗಳ ಸಂಖ್ಯೆಯ ವಿಚಾರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ತಪ್ಪು ಲೆಕ್ಕ ತೋರಿಸುತ್ತಿದ್ದಾರೆ. ತಾಯಂದಿರು, ಗರ್ಭಿಣಿಯರು ಕೇಂದ್ರಕ್ಕೆ ಬರದಿದ್ದರೂ ಹಾಜರಾತಿ ತೋರಿಸಿ ಕೋಟ್ಯಂತರ ದುಡ್ಡು ಹೊಡೆಯಲಾಗುತ್ತಿದೆ. ತಾಯಂದಿರಿಗೆ 25 ದಿನ ಊಟ ಒದಗಿಸುವ ನಿಯಮವಿದ್ದರೂ ಕಲಬುರಗಿ ಜಿಲ್ಲೆಯಲ್ಲಿನ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ತಿಂಗಳು ಪೂರ್ತಿ ಊಟ ಒದಗಿಸಿರುವುದಾಗಿ ಲೆಕ್ಕ ತೋರಿಸಲಾಗಿದೆ. ಮೊಟ್ಟೆ, ಹಾಲನ್ನು ಫಲಾನುಭವಿಗಳ ಹೆಸರಿನಲ್ಲಿ ದುರುಪಯೋಗಪಡಿಸಿಕೊಳ್ಳುತ್ತಿರುವ ಪ್ರಕರಣಗಳೂ ಹೆಚ್ಚುತ್ತಿವೆ. ಅದೇ ರೀತಿ, ಕಳಪೆ ಗುಣಮಟ್ಟದ ಬೇಳೆಕಾಳು, ಆಹಾರ ಪದಾರ್ಥ ಪೂರೈಕೆ ಮಾಡಿದ ಆರೋಪ ಕೇಳಿಬಂದಿದೆ.

ಟೆಂಡರ್​ಗೆ ಲಾಬಿ!

ನೇರವಾಗಿ ಅಂಗನವಾಡಿ ಕಾರ್ಯಕರ್ತೆಯರ ಖಾತೆಗೆ ಹಣ ಜಮಾ ಮಾಡಬೇಕೆಂಬ ಸರ್ಕಾರಿ ಆದೇಶ ಉಲ್ಲಂಘಿಸಲಾಗುತ್ತಿದೆ. ತರಕಾರಿ ಹಾಗೂ ಬೇಳೆಕಾಳು, ಮೊಟ್ಟೆ ಪೂರೈಕೆಗೆ ಕೆಲವೆಡೆ ಟೆಂಡರ್ ಕರೆಯುತ್ತಿದ್ದಾರೆ. ಇದಕ್ಕೂ ಸ್ಥಳೀಯ ರಾಜಕೀಯ ಮುಖಂಡರಿಂದ ಲಾಬಿ ನಡೆಸಲಾಗುತ್ತಿದೆ. ಟೆಂಡರ್ ಪಡೆದವರು ಜಿಲ್ಲೆಯಲ್ಲಿನ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ತಿಂಗಳಿಗೆ ಎರಡು ಬಾರಿ ಆಹಾರ ಸಾಮಗ್ರಿ ಒದಗಿಸುವುದರಿಂದ ತರಕಾರಿ ಹಾಗೂ ಮೊಟ್ಟೆ ಕೆಡುತ್ತಿದೆ. ಪರಿಣಾಮ ಒಂದೆಡೆ ಮೊಟ್ಟೆಗಳ ಅಭಾವವಾದರೆ, ಇನ್ನೊಂದೆಡೆ ತರಕಾರಿರಹಿತ ಸಾಂಬಾರು ಮಾಡಬೇಕಾಗಿದೆ.

ಮಾತೃಪೂರ್ಣ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಿಸಿಯೂಟ ಸೇವನೆಯಿಂದ ತಾಯಿಯ ಆರೋಗ್ಯ ಸಹ ಸುಧಾರಿಸುತ್ತದೆ. ಹುಟ್ಟಿದ ಮಗು ಸರಾಸರಿ 2.5ಕೆ.ಜಿ. ತೂಕ ಇರಬೇಕಾಗುತ್ತದೆ. ಮಾತೃಪೂರ್ಣದಿಂದ ಇದು ಸಾಧ್ಯವಾಗುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಕೂಡ ತಾಯಂದಿರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಕೆಲವೊಂದು ಲೋಪದೋಷಗಳಿದ್ದು, ಅದನ್ನು ಸರಿಪಡಿಸಲಾಗುವುದು.

|ಸುರೇಖಾ ವಿಜಯಪ್ರಕಾಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕರು

ಗುರಿ ತಲುಪುವಲ್ಲಿ ವಿಫಲ

12 ಲಕ್ಷ ಗರ್ಭಿಣಿಯರ ಆರೋಗ್ಯ ಕಾಪಾಡುವ ಉದ್ದೇಶದಿಂದ ಮಾತೃಪೂರ್ಣ ಯೋಜನೆ ಆರಂಭಿಸಲಾಗಿದೆ. ಸರ್ಕಾರ 2017-18ನೇ ಸಾಲಿನಲ್ಲಿ ಯೋಜನೆಗೆ 302 ಕೋಟಿ ರೂ. ಮೀಸಲಿಟ್ಟಿತ್ತು. ಮಹಿಳೆ ಗರ್ಭಧರಿಸಿದ ದಿನದಿಂದ ಹೆರಿಗೆಯಾದ 6 ತಿಂಗಳವರೆಗೆ ಮೊಟ್ಟೆ ಅಥವಾ ಮೊಳಕೆಕಾಳು ಸಹಿತ ತಿಂಗಳಿಗೆ 25 ದಿನ ಊಟ ಒದಗಿಸಲಾಗುತ್ತದೆ. ಟೆಂಡರ್ ಪಡೆದವರು ಕಳಪೆ ಗುಣಮಟ್ಟದ ಅಕ್ಕಿ, ಬೇಳೆಕಾಳು, ಸಾಂಬಾರ ಪದಾರ್ಥ ಹಾಗೂ ತರಕಾರಿಯನ್ನು ಪೂರೈಸುತ್ತಿದ್ದಾರೆ. ಅಷ್ಟೇ ಅಲ್ಲ, ಪಡಿತರ ಅಕ್ಕಿಯನ್ನೇ ಬಳಸಿ ಅನ್ನ ಮಾಡುತ್ತಿರುವುದರಿಂದ ಊಟ ರುಚಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ನಿಗದಿತ ಗುರಿ ತಲುಪಲಾಗುತ್ತಿಲ್ಲ.

ಧೋಖಾ ಹೇಗೆ?

# ತಿಂಗಳಲ್ಲಿ 25 ದಿನ ಊಟ ನೀಡುವ ನಿಯಮವಿದ್ದರೂ 30 -31 ದಿನ ಲೆಕ್ಕ ನೀಡಿ ವಂಚನೆ

# ಕಳಪೆ ಗುಣಮಟ್ಟದ ಪದಾರ್ಥದ ಆಹಾರ ನೀಡಿ ಹಣ ಉಳಿಸಿಕೊಳ್ಳುವುದು

# ಶುದ್ಧ ಕುಡಿಯುವ ನೀರು, ಶೌಚಗೃಹ ವ್ಯವಸ್ಥೆ ಕಲ್ಪಿಸದಿರುವುದು

# ಪ್ರತಿ ಊಟಕ್ಕೆ 21 ರೂ. ನಿಗದಿಪಡಿಸಿದ್ದರೂ ಅದಕ್ಕಿಂತ ಕಡಿಮೆ ದರದಲ್ಲಿ ಊಟ ಪೂರೈಕೆ

# ತಾಯಂದಿರ ಹೆಸರಿನಲ್ಲಿ ಹೊರಗಿನವರಿಗೆ ಊಟ ಮಾಡಲು ಅವಕಾಶ

# ಅಂಗನವಾಡಿ ಕೇಂದ್ರಕ್ಕೆ ಬರುವ ಕೆಲ ತಾಯಂದಿರು ಮನೆಗೂ ಊಟ ಒಯ್ಯುತ್ತಿದ್ದಾರೆ

ಮಾತೃಪೂರ್ಣ ಯೋಜನೆಯಿಂದ ಅಂಗನವಾಡಿ ಕಾರ್ಯಕರ್ತೆಯರು ಸಮಗ್ರ ಶಿಶು ಅಭಿವೃದ್ಧಿ ಯೋಜನೆಯತ್ತ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪ್ರತಿ ಕೇಂದ್ರಕ್ಕೆ ಹೆಚ್ಚುವರಿಯಾಗಿ ತಲಾ ಒಬ್ಬರು ಕಾರ್ಯಕರ್ತೆಯನ್ನು ಸರ್ಕಾರ ನೇಮಿಸಬೇಕು.

| ಎಸ್.ವರಲಕ್ಷ್ಮಿ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ

ಸಮಸ್ಯೆ, ಸವಾಲು

# ತಾಯಂದಿರನ್ನು ಅಂಗನವಾಡಿಗೆ ಕರೆತರುವುದು ಸವಾಲು

# ಪ್ರತಿನಿತ್ಯ ಕಾರ್ಯಕರ್ತೆಯರೇ ಫೋನ್ ಮಾಡಿ ಖಚಿತಪಡಿಸಿಕೊಳ್ಳುವ ಪರಿಸ್ಥಿತಿ

# ಬಹುತೇಕ ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಣೆ.

# ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತರೇ ಅಡುಗೆಗೆ ಸಹಾಯ ಮಾಡಬೇಕಾದ ದುಸ್ಥಿತಿ.

# ಟೆಂಡರ್ ಪಡೆದವರು ತಿಂಗಳಿಗೆ 2 ಬಾರಿ ಮೊಟ್ಟೆ, ತರಕಾರಿ ಪೂರೈಸಲು, ಶೇಖರಿಸಲು ಸಮಸ್ಯೆ

#  ತಾಯಂದಿರು ಜತೆಗೆ ಬರುವ ಮೊದಲ ಮಗುವಿಗೂ ಮೊಟ್ಟೆ, ಊಟ ಕೇಳುತ್ತಿರುವುದು.

#  ಲೆಕ್ಕ ತೋರಿಸಲು ಮನೆಗೆ ಹೋಗಿ, ತಾಯಂದಿರ ಸಹಿ ಪಡೆಯಬೇಕಾದ ಪರಿಸ್ಥಿತಿ.

ನಿರಾಸಕ್ತಿಗೆ ಕಾರಣಗಳೇನು?

* ಜನ ಏನೆಂದುಕೊಂಡಾರೆಂಬ ಮುಜುಗರದಿಂದ ಕೆಲ ತಾಯಂದಿರು ಬರುತ್ತಿಲ್ಲ, ಅಂಗನವಾಡಿ ಕೇಂದ್ರಗಳಲ್ಲಿ ಸ್ಥಳಾವಕಾಶದ ಕೊರತೆ, ಗ್ರಾಮೀಣ ಪ್ರದೇಶದಲ್ಲಿ ದೂರದಲ್ಲಿರುವ ಅಂಗನವಾಡಿಗೆ ತೆರಳುವುದು ಕಷ್ಟ.

* ಕೇಂದ್ರ ಸರ್ಕಾರದ ಮಾತೃವಂದನ ಮಾದರಿ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವುದಿಲ್ಲ, ತರಕಾರಿ ಖರೀದಿಸಲು ಓರ್ವ ತಾಯಿಗೆ 2 ರೂ. ಮಾತ್ರ ಹಣ ಬಿಡುಗಡೆ.

ಯೋಜನೆ ಗುರಿ ಮೂಲೆಗುಂಪು

ಅಂಗನವಾಡಿ ಕಾರ್ಯಕರ್ತೆಯರಿಗೆ ಮಾತೃಪೂರ್ಣದ ಜವಾಬ್ದಾರಿ ಹೊರಿಸಿದ ಪರಿಣಾಮ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮೂಲೆಗುಂಪಾಗುತ್ತಿದೆ. ದಿನದ ಬಹುತೇಕ ಸಮಯವನ್ನು ಕಾರ್ಯಕರ್ತೆಯರು ಅಡುಗೆ ಮಾಡುವುದಕ್ಕೆ ಮೀಸಲಿಡಬೇಕಾಗುತ್ತದೆ. ಇದರಿಂದ ಮಕ್ಕಳೆಡೆಗೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ.