ಹಿಂದುಳಿದವರನ್ನು ಸರ್ಕಾರವೇ ಸೈನ್ಯಕ್ಕೆ ಸೇರಿಸುತ್ತೆ!

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ಪ್ರಸ್ತುತ ಸನ್ನಿವೇಶದಲ್ಲಿ ಸೈನ್ಯಕ್ಕೆ ಸೇರಲು ಆಸಕ್ತಿ ಹೊಂದುವವರ ಸಂಖ್ಯೆ ತೀರಾ ಕಡಿಮೆಯಾಗುತ್ತಿದೆ, ಆಸಕ್ತಿ ಇದ್ದರೂ ನಿಯಮಗಳ ಕಾರಣ ಹಾಗೂ ಮಾಹಿತಿ ಕೊರತೆಯಿಂದ ಅವಕಾಶ ಗಿಟ್ಟಿಸುವುದು ತೀರಾ ಕಡಿಮೆ ಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆರಂಭಿಸಿರುವ ಹೊಸ ಪ್ರಯತ್ನಕ್ಕೆ ತಕ್ಕಮಟ್ಟಿನ ಯಶ ಸಿಗುತ್ತಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಈ ಸಾಲಿನಲ್ಲಿ 600 ಯುವಕರಿಗೆ ಸೈನ್ಯಕ್ಕೆ ಅರ್ಹತೆ ಸಿಗುವಂತೆ ಮಾಡುವ ಪ್ರಯತ್ನದಲ್ಲಿದೆ. ಜತೆಗೆ ಮುಂದಿನ ಸಾಲಿನಲ್ಲಿ ಕನಿಷ್ಠ ಮೂರು ಸಾವಿರ ಮಂದಿಯಾದರೂ ಅರ್ಹತೆ ಪಡೆಯಬೇಕೆಂಬ ದೊಡ್ಡ ಗುರಿ ಹೊಂದಿದೆ.

‘ಹಿಂದುಳಿದ ವರ್ಗಕ್ಕೆ ಸೇರಿದ ಯುವಕರಲ್ಲಿ ಸೈನ್ಯಕ್ಕೆ ಸೇರಲು ಆಸಕ್ತಿ ಹೊಂದಿರುವ ಅನೇಕರಿದ್ದಾರೆ. ಆದರೆ ಅವರಿಗೆ ಮಾಹಿತಿ ಕೊರತೆ, ಪೂರ್ವ ತಯಾರಿ ಇಲ್ಲದೇ ಅವರ ಆಶಯ ಈಡೇರುವುದಿಲ್ಲ. ಈ ಕಾರಣಕ್ಕೆ ಸರ್ಕಾರದಿಂದಲೇ ತರಬೇತಿ ಕೊಡಿಸಲಾಗುತ್ತದೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮೊಹಮದ್ ಮೊಹಿಸಿನ್ ವಿವರಿಸುತ್ತಾರೆ.

ಮೊದಲ ಪ್ರಯೋಗದಲ್ಲಿ ತರಬೇತಿ ಪಡೆದವರ ಪೈಕಿ 23 ಜನ ಸೈನ್ಯದಲ್ಲಿ ಪ್ರವೇಶ ಪಡೆದುಕೊಂಡರು. ಈ ಬಾರಿ ಆಗಸ್ಟ್ ನಲ್ಲಿ ಯೋಜನೆ ವ್ಯಾಪ್ತಿ ಹಿಗ್ಗಿಸಿದ್ದು, 500 ಮಂದಿಗೆ ತರಬೇತಿ ಕೊಡಲಾಗುತ್ತದೆ. ಬೆಂಗಳೂರು ಮತ್ತು ಬೆಳಗಾವಿಯಲ್ಲಿ ತರಬೇತಿ ನೀಡಲಾಗುತ್ತಿದೆ ಎಂದವರು ತಿಳಿಸುತ್ತಾರೆ.

ಏನೆಲ್ಲ ತರಬೇತಿ?: ಇಲಾಖೆ ತರಬೇತಿಗೆ ಅರ್ಜಿ ಆಹ್ವಾನಿಸಲಿದ್ದು, ಶೈಕ್ಷಣಿಕ ಅರ್ಹತೆ ಮತ್ತು ಎತ್ತರದ ಆಧಾರದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಬಳಿಕ ಫಿಸಿಕಲ್ ಫಿಟ್ನೆಸ್, ಪರೀಕ್ಷೆಗಳಿಗೆ ಅಗತ್ಯ ತರಬೇತಿ ನೀಡಲಾಗುತ್ತದೆ. ಜತೆಗೆ ವಿವಿಧ ಕೌಶಲಗಳನ್ನು ಹೇಳಿಕೊಡಲಾಗುತ್ತದೆ. ಒಂದೊಮ್ಮೆ ಸೈನ್ಯಕ್ಕೆ ಅವಕಾಶ ಸಿಗದೇ ಹೋದಲ್ಲಿ ಪೊಲೀಸ್ ಹುದ್ದೆಗೆ ನಡೆಯುವ ಆಯ್ಕೆ ವೇಳೆ ಈ ತರಬೇತಿ ಅನುಕೂಲಕ್ಕೆ ಬರಲಿದೆ. ಎರಡು ತಿಂಗಳು ಊಟ, ವಸತಿ ಸಹಿತ ಕೋಚಿಂಗ್ ನೀಡಲಾಗುತ್ತದೆ. ತರಬೇತಿಗೆ ಆಯ್ಕೆಯಾದ ಪ್ರತಿಯೊಬ್ಬರಿಗೂ ಸರ್ಕಾರವೇ 40 ಸಾವಿರ ರೂ. ವೆಚ್ಚ ಮಾಡಲಿದೆ. ಜಿಮ್ ನಿಗದಿತ ಅವಧಿಯಲ್ಲಿ ಓಡುವ ಸಾಮರ್ಥ್ಯ, ಎದೆ ಹಿಗ್ಗಿಸುವಿಕೆ ಸೇರಿ ಸೈನ್ಯ ಸೇರಲು ಅಗತ್ಯ ದೈಹಿಕ ಸಾಮರ್ಥ್ಯ ವೃದ್ಧಿಗೆ ತರಬೇತುದಾರರು ಮಾರ್ಗದರ್ಶನ ಮಾಡಲಿದ್ದಾರೆ. ಪ್ರಮುಖವಾಗಿ ಭಾಷೆ ಕಲಿಸಲಾಗುತ್ತದೆ, ಇಂಗ್ಲಿಷ್, ಗಣಿತ ಜ್ಞಾನ ನೀಡಲಾಗುತ್ತದೆ. ಮಾನಸಿಕ ಸ್ಥೈರ್ಯ ತುಂಬುವ ಜತೆಗೆ ಆಯ್ಕೆ ಸಂದರ್ಭ ಅನುಸರಿಸಬೇಕಾದ ಕನಿಷ್ಠ ಟೆಕ್ನಿಕ್​ಗಳನ್ನು ಹೇಳಿಕೊಡಲಾಗುತ್ತದೆ.

ಆರ್ಥಿಕವಾಗಿ ಹಿಂದುಳಿದ ಹಳ್ಳಿ ಹುಡುಗರಲ್ಲಿ ಅನೇಕರಿಗೆ ಸೈನ್ಯ ಸೇರುವ ಆಸೆ ಇರುತ್ತದೆ, ಅಂಥವರಿಗೆ ಪೂರ್ವ ತಯಾರಿ, ಮಾರ್ಗದರ್ಶನ ಇರುವುದಿಲ್ಲ. ಕೋಚಿಂಗ್ ಪಡೆದಲ್ಲಿ ಸುಲಭವಾಗಿ ಪ್ರವೇಶ ಪಡೆಯಬಹುದು. ಇದರಿಂದ ದೇಶಕ್ಕೂ ಲಾಭ, ಯುವಕರ ಸೈನ್ಯ ಸೇರುವ ಕನಸಿಗೂ ಇಂಬು ಕೊಟ್ಟಂತಾಗುತ್ತದೆ.

| ಮೊಹಮದ್ ಮೊಹಿಸಿನ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ