ನೌಕರಿ ವಂಚನೆಗೆ ಬ್ರೇಕ್

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಉದ್ಯೋಗದ ಹೆಸರಲ್ಲಿ ಹೆಚ್ಚುತ್ತಿರುವ ವಂಚನೆ, ಮಾನವ ಕಳ್ಳಸಾಗಣೆಯಂತಹ ದುಷ್ಕೃತ್ಯಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ, ವಂಚಕ ಸಂಸ್ಥೆಗಳಿಗೆ ಮೂಗುದಾರ ಹಾಕುವುದಕ್ಕಾಗಿ ವಿಧೇಯಕಾಸ್ತ್ರ ಸಿದ್ಧಪಡಿಸಿದೆ. ಆ ಮೂಲಕ ನೌಕರರಿಗೆ ಕಾನೂನಿನ ರಕ್ಷಾಕವಚ ಕಲ್ಪಿಸಲು ಮುಂದಾಗಿದೆ.

ಖಾಸಗಿ ಸಂಸ್ಥೆ ಹಾಗೂ ಸರ್ಕಾರದಲ್ಲಿ ಗುತ್ತಿಗೆ ಅಥವಾ ಹೊರಗುತ್ತಿಗೆಯಲ್ಲಿ, ವಿದೇಶಗಳಲ್ಲಿ, ಬೇರೆ ರಾಜ್ಯಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಜಾಹೀರಾತು ನೀಡುವ ಸಂಸ್ಥೆಗಳು ಕಮೀಷನ್​ನತ್ತ ಗಮನ ಹರಿಸುತ್ತವೆಯೇ ಹೊರತು ಉದ್ಯೋಗಿಗಳಿಗೆ ಶಾಸನಾತ್ಮಕ ಸೌಲಭ್ಯ ನೀಡುತ್ತಿಲ್ಲ. ಇಂತಹ ಎಷ್ಟು ಸಂಸ್ಥೆಗಳು ರಾಜ್ಯದಲ್ಲಿವೆ ಎಂಬ ಮಾಹಿತಿಯೂ ಸರ್ಕಾರದ ಬಳಿ ಇಲ್ಲ. ಹೀಗಾಗಿ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಇಂತಹ ಕಂಪನಿಗಳ ಮೇಲೆ ನಿಯಂತ್ರಣ ಸಾಧಿಸುವ ಸಲುವಾಗಿಯೇ ಸರ್ಕಾರ ಕಾಯ್ದೆ ರಚನೆಗೆ ನಿರ್ಧರಿಸಿದೆ.

ಇದೇ ಮೊದಲಲ್ಲ: ದೆಹಲಿ, ಜಾರ್ಖಂಡ್ ಸೇರಿದಂತೆ ಕೆಲ ರಾಜ್ಯಗಳಲ್ಲಿ ಈಗಾಗಲೇ ಇಂತಹ ಕಾನೂನು ಅಸ್ತಿತ್ವದಲ್ಲಿದ್ದು, ಅದರ ಮೂಲಕವೇ ಉದ್ಯೋಗಸ್ಥರ ಬದುಕಿಗೆ ಭದ್ರತೆ ನೀಡುವ ಪ್ರಯತ್ನ ನಡೆದಿದೆ.

ಕ್ರಮಕ್ಕೆ ಅಧಿಕಾರ: ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡಿ ವಂಚನೆ ಎಸಗುವ ನಕಲಿ ಕಂಪನಿ ಗಳ ಮೇಲೆ ಸರ್ಕಾರಕ್ಕೆ ನಿಯಂತ್ರಣ ಇಲ್ಲ. ಹೀಗಾಗಿ ಇಂಥ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕಾಗಿ ಕಾಯ್ದೆಯತ್ತ ಚಿತ್ತ ಹರಿಸಿದೆ.

ಮಾನವ ಕಳ್ಳಸಾಗಣೆ: ಅನೇಕ ಸಂಸ್ಥೆಗಳು ಉದ್ಯೋಗಿಗಳನ್ನು ಯಾವುದೇ ಶಾಸನಬದ್ಧ ಸೌಲಭ್ಯವಿಲ್ಲದೆಯೇ ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳಿಗೆ ಕಳುಹಿಸುತ್ತವೆ. ಇನ್ನೂ ಕೆಲವು ಸಂಸ್ಥೆಗಳು ವಿದೇಶಗಳಲ್ಲಿ ಕೆಲಸ ಕೊಡಿಸುವುದಾಗಿ ಹೆಣ್ಣು ಮಕ್ಕಳನ್ನು ನಂಬಿಸಿ ಕರೆದೊಯ್ದು ವೇಶ್ಯಾವಾಟಿಕೆ ಜಾಲಕ್ಕೆ ತಳ್ಳುತ್ತಿರುವ ಆರೋಪಕ್ಕೂ ಗುರಿಯಾಗಿವೆ.

ಕಾನೂನು ಏನು?: ವಂಚನೆಗೀಡಾದವರು ಕೊಡುವ ದೂರಿನ ಹಿನ್ನೆಲೆಯಲ್ಲಿ ವಂಚಕ ಕಂಪನಿಗಳನ್ನು ಮಟ್ಟಹಾಕುವುದಕ್ಕಾಗಿ ಕರ್ನಾಟಕ ಖಾಸಗಿ ಉದ್ಯೋಗ ಏಜೆನ್ಸಿ (ನಿಬಂಧನೆಗಳು) ವಿಧೇಯಕ 2018ನ್ನು ಸರ್ಕಾರ ರೂಪಿಸಿದೆ. ಬಜೆಟ್ ಅಧಿವೇಶನದಲ್ಲಿ ಈ ವಿಧೇಯಕ ಮಂಡನೆ ಆಗಲಿದೆ.

2 ವರ್ಷ ಶಿಕ್ಷೆ

ನಿಯಮ ಉಲ್ಲಂಘಿಸುವವರು 2 ವರ್ಷಗಳ ತನಕ ವಿಸ್ತರಿಸ ಬಹುದಾದ ಸಜೆ ಜತೆಗೆ ದಂಡ ಪಾವತಿಸಬೇಕಾಗುತ್ತದೆ. ಇನ್​ಸ್ಪೆಕ್ಟರ್​ಗಳ ವರದಿ ಆಧರಿಸಿ ಶಿಕ್ಷೆ ನಿಗದಿಯಾಗುತ್ತದೆ. ಈ ಪ್ರಕರಣಗಳಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವಂತಿಲ್ಲ. ನಿಯಮ ಉಲ್ಲಂಘನೆ ದೃಢಪಟ್ಟಲ್ಲಿ ಸಂಸ್ಥೆಗಳ ಲೈಸನ್ಸ್ ರದ್ದುಗೊಳ್ಳುತ್ತದೆ.

ವಿಧೇಯಕದಲ್ಲೇನಿದೆ?

# ಎಲ್ಲ ಖಾಸಗಿ ಏಜೆನ್ಸಿಗಳೂ ಸರ್ಕಾರದಲ್ಲಿ ನೋಂದಣಿಯಾಗಬೇಕು. ಕಚೇರಿ ಮುಂಭಾಗದಲ್ಲಿ ನೋಂದಣಿ ಸಂಖ್ಯೆ ಸಹಿತ ಎಲ್ಲ ವಿವರಗಳನ್ನು ಪ್ರಕಟಿಸಬೇಕು.

# ನೋಂದಣಿ ಮಾಡದ ಸಂಸ್ಥೆ ಯಾವುದೇ ನೇಮಕ ಮಾಡುವಂತಿಲ್ಲ.

# ಜಾಹೀರಾತು ನೀಡುವ ಸಂಸ್ಥೆ ಕಡ್ಡಾಯವಾಗಿ ರಾಜ್ಯದ ಯಾವುದೇ ಭಾಗದಲ್ಲಾದರೂ ಕಚೇರಿ ಹೊಂದಿರಬೇಕು.

# ಪ್ರತಿ ವರ್ಷ ನೋಂದಣಿ ನವೀಕರಣವಾಗಬೇಕು.

# ಉದ್ಯೋಗಕ್ಕಾಗಿ ಬರುವವರಿಂದ ಯಾವುದೇ ಶುಲ್ಕ ಪಡೆಯುವಂತಿಲ್ಲ.

# ಎಷ್ಟು ಜನರಿಗೆ ಉದ್ಯೋಗ ಸಿಕ್ಕಿದೆ ಎಂಬ ಮಾಹಿತಿಯ ರಿಜಿಸ್ಟರ್ ಹೊಂದಿರಬೇಕು.

# ಪ್ರತಿ ತಿಂಗಳು ಸರ್ಕಾರಕ್ಕೆ ವರದಿ ಸಲ್ಲಿಸಬೇಕು.

# ಸರ್ಕಾರ ನಿಗದಿ ಮಾಡಿದ ಕನಿಷ್ಠ ವೇತನ ಉದ್ಯೋಗಿಗಳ ಖಾತೆಗೆ ನೇರವಾಗಿ ಪಾವತಿಯಾಗಬೇಕು

# ಪಿಎಫ್, ವಿಮೆ, ರಜೆ ಸೌಲಭ್ಯಗಳನ್ನು ಕಡ್ಡಾಯವಾಗಿ ನೀಡಬೇಕು.

# ಪೋಟೋ ಗುರುತಿನ ಚೀಟಿ ನೀಡಬೇಕು

# 18 ವರ್ಷದ ಒಳಗಿನವರಿಗೆ ಉದ್ಯೋಗ ನೀಡುವಂತಿಲ್ಲ.

ಅಸಂಘಟಿತ ವಲಯದ ಕಾರ್ವಿುಕರ ಸಮಸ್ಯೆಗಳಿಗೆ ಮುಕ್ತಿ ಕಾಣಿಸಬೇಕಿದೆ. ಈಗ ಖಾಸಗಿ ಉದ್ಯೋಗ ಏಜೆನ್ಸಿಗಳ ಮೇಲೆ ನಿಯಂತ್ರಣವಿಲ್ಲ. ಅದಕ್ಕಾಗಿ ಬೇರೆ ರಾಜ್ಯಗಳಲ್ಲಿ ಇರುವಂತಹ ಕಾಯ್ದೆಯನ್ನು ನಮ್ಮಲ್ಲೂ ತರಲಾಗುತ್ತಿದೆ.

| ಆಮ್ಲಾನ್ ಆದಿತ್ಯಾ ಬಿಸ್ವಾಸ್ ಪ್ರಧಾನ ಕಾರ್ಯದರ್ಶಿ, ಕಾರ್ವಿುಕ ಇಲಾಖೆ

ಇವರಿಗಿಲ್ಲ ನೋಂದಣಿ ಹಕ್ಕು

# ಖಾಸಗಿ ಸಂಸ್ಥೆಗಳಲ್ಲಿ ಶಿಕ್ಷೆಗೆ ಒಳಗಾದವರು

# ಸರ್ಕಾರದ ಸೇವೆಯಿಂದ ವಜಾ ಆದವರು

# ನ್ಯಾಯಾಲಯದಲ್ಲಿ ಶಿಕ್ಷೆಗೆ ಗುರಿಯಾದವರು

ಏನೆಲ್ಲ ಸೌಲಭ್ಯ

ಅಸಂಘಟಿತ ಕಾರ್ವಿುಕರಿಗೆ ಕನಿಷ್ಠ ವೇತನ, ವಾರದ ರಜೆ, ಹಬ್ಬಗಳ ರಜೆ, ಹೆರಿಗೆ ರಜೆ, ವಿಮೆ, ಭವಿಷ್ಯ ನಿಧಿ.