ಕಚೇರಿಗೆ ಲೇಟ್ ಆಗಿ ಬಂದರೆ ವೇತನ ಕಟ್: 900 ನೌಕರರಿಗೆ ರಜೆ, 200 ಜನರ ವೇತನ ಕಡಿತ

ಬೆಂಗಳೂರು: ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ಸಚಿವಾಲಯ ನೌಕರರಿಗೆ ಅರ್ಧದಿನ ರಜೆ ಹಾಗೂ ವೇತನ ಕಡಿತ ಮಾಡುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕ್ರಮಕ್ಕೆ ಸಚಿವಾಲಯ ನೌಕರರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಸರ್ಕಾರಿ ಕಚೇರಿ ಅವಧಿ ಬೆಳಗ್ಗೆ 10ರಿಂದ ಸಂಜೆ 5.30. ಬೆಳಗ್ಗೆ 10.10ರ ತನಕ ಕಚೇರಿಗೆ ಬರಲು ವಿನಾಯ್ತಿ ಇದೆ. ಆದರೆ 10.11ಕ್ಕೆ ಬಂದ ನೌಕರರಿಗೂ ವೇತನ ಹಾಗೂ ರಜೆ ಕಡಿತಕ್ಕೆ ಸರ್ಕಾರ ಮುಂದಾಗಿದೆ. ಸಚಿವಾಲಯದಲ್ಲಿ ಬಯೋಮೆಟ್ರಿಕ್ಸ್ ವ್ಯವಸ್ಥೆ ಇದ್ದು, ಅದನ್ನು ಆಧರಿಸಿ ಜನವರಿಯಿಂದ ಜುಲೈ ಅಂತ್ಯದ ತನಕ 900 ನೌಕರರಿಗೆ ಅರ್ಧದಿನ ರಜೆ, ಜುಲೈನಲ್ಲಿ 200ಕ್ಕೂ ಅಧಿಕ ಜನರಿಗೆ ವೇತನ. ಕಡಿತಕ್ಕೆ ಡಿಪಿಎಆರ್​ನ ಅಪರ ಮುಖ್ಯ ಕಾರ್ಯದರ್ಶಿ ವಿ.ಮಂಜುಳಾ ಶಿಫಾರಸು ಮಾಡಿದ್ದಾರೆ ಎಂದು ಸಚಿವಾಲಯದ ಮೂಲಗಳು ಖಚಿತಪಡಿಸಿವೆ. ಬೆಳಗ್ಗೆ ಕಚೇರಿಗೆ ಬರುವುದನ್ನು ಮಾತ್ರ ಗಂಭೀರವಾಗಿ ಪರಿಗಣಿಸುವ ಸರ್ಕಾರ ಸಂಜೆ ಹೆಚ್ಚಿನ ಸಮಯ ದುಡಿದರೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲವೆಂಬ ದೂರು ನೌಕರರದ್ದಾಗಿದೆ. ಆರು ತಿಂಗಳ ಕಾಲ ರಜೆ ಕಡಿತ ಮಾಡುತ್ತಿದ್ದ ಸರ್ಕಾರ, ಜುಲೈ ತಿಂಗಳಿನಿಂದ ವೇತನ ಕಡಿತಕ್ಕೆ ನಿರ್ಧಾರ ಮಾಡಿದೆ. ನೌಕರರಿಗೆ ಸಾಕಷ್ಟು ನೋಟಿಸ್ ನೀಡಲಾಗಿತ್ತು. ಅದರಿಂದ ಉಪಯೋಗವಾಗದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಪಿಎಆರ್ ಮೂಲಗಳು ಹೇಳುತ್ತವೆ. ಡಿಪಿಎಆರ್ ಕ್ರಮಕ್ಕೆ ಸಚಿವಾಲಯ ನೌಕರರ ಸಂಘ ಆಕ್ರೋಶ ವ್ಯಕ್ತಪಡಿಸಿದ್ದು, ಬೆಳಗ್ಗೆ ಕಚೇರಿಗೆ ಬರುವುದು ಮಾತ್ರವಲ್ಲ, ಸಂಜೆ ಹೆಚ್ಚಿನ ಕೆಲಸ ಮಾಡುವ ಅವಧಿಯನ್ನು ಲೆಕ್ಕಕ್ಕೆ ಪರಿಗಣಿಸಬೇಕು ಎಂದು ಅಭಿಪ್ರಾಯಪಟ್ಟಿದೆ.

ಸಿಎಸ್​ಗೆ ಮನವಿ: ಡಿಪಿಎಆರ್​ನ ಅಪರ ಮುಖ್ಯ ಕಾರ್ಯದರ್ಶಿ ಅವರು ಈ ಕ್ರಮದ ವಿರುದ್ಧ ಸಚಿವಾಲಯ ನೌಕರರ ಸಂಘ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಅಸಮಾಧಾನ ಹೊರ ಹಾಕಿದೆ. ಬೆಂಗಳೂರಿನಲ್ಲಿ ಸಂಚಾರದ ದಟ್ಟಣೆ ಹೆಚ್ಚಾಗಿದೆ. ಬೆಳಗ್ಗೆ 8ಕ್ಕೆ ಮನೆ ಬಿಟ್ಟರೂ ಸರಿಯಾದ ಸಮಯಕ್ಕೆ ಕೆಲವೊಮ್ಮೆ ತಲುಪಲು ಸಾಧ್ಯವಾಗುವುದಿಲ್ಲ. ಮೆಟ್ರೋ ಕಾಮಗಾರಿ, ಟೆಂಡರ್​ಶ್ಯೂರ್ ಕಾಮಗಾರಿಗಳಿಂದ ಯಾವಾಗ ಯಾವ ರಸ್ತೆಯಲ್ಲಿ ಸಂಚಾರದ ದಟ್ಟಣೆ ಇರುವುದೋ ಗೊತ್ತಾಗುವುದಿಲ್ಲ. ಆದ್ದರಿಂದ 10.30ರತನಕ ವಿನಾಯ್ತಿ ನೀಡಿ. 10.31ಕ್ಕೆ ಬಂದವರಿಗೆ ಶಿಕ್ಷೆ ವಿಧಿಸಿ, ಬೇಡವೆನ್ನುವುದಿಲ್ಲವೆಂದು ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಐಎಎಸ್​ಗೆ ಏಕಿಲ್ಲ?

ನೌಕರರಿಗಿರುವ ಪಂಚಿಂಗ್ ವ್ಯವಸ್ಥೆ ಐಎಎಸ್ ಅಧಿಕಾರಿಗಳಿಗೆ ಏಕೆ ತಂದಿಲ್ಲ ಎಂದು ಸಚಿವಾಲಯ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಸಹ ನೌಕರರೇ ಆಗಿದ್ದಾರೆ. ಅವರಲ್ಲಿ ಎಷ್ಟು ಜನ ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿರುತ್ತಾರೆ ಎಂದು ನೌಕರರು ಪ್ರಶ್ನಿಸಿದ್ದಾರೆ. ಸಂಜೆ ಜನರನ್ನು ನೋಡುವ ಸಂದರ್ಭ ಸಭೆಗಳನ್ನು ಇಟ್ಟುಕೊಳ್ಳುತ್ತಾರೆ. ಈ ಅಧಿಕಾರಿಗಳಿಗೂ ಪಂಚಿಂಗ್ ವ್ಯವಸ್ಥೆ ಹಾಗೂ ತಡವಾಗಿ ಬಂದರೆ ನೌಕರರಿಗೆ ನೀಡುವ ಶಿಕ್ಷೆ ಕೊಡಬೇಕೆಂದು ಒತ್ತಾಯಿಸಿದ್ದಾರೆ.

ಸಚಿವಾಲಯದಲ್ಲಿ ಸಿಬ್ಬಂದಿ ಕೊರತೆ ಇದೆ. ಆದರೂ ಸಿಎಸ್ ಜಾರಿಗೆ ತಂದ ಕಡತ ಯಜ್ಞ, ಇ-ಕಚೇರಿ ಎಲ್ಲಕ್ಕೂ ನೌಕರರು ಸಹ ಕಾರ ನೀಡಿದ್ದಾರೆ. ಆದರೂ ರಜೆ, ವೇತನ ಕಡಿತದಂತಹ ಶಿಕ್ಷೆ ನೀಡಿಕೆ ಬೇಡ.

| ಪಿ.ಗುರುಸ್ವಾಮಿ ಅಧ್ಯಕ್ಷ, ಸಚಿವಾಲಯ ನೌಕರರ ಸಂಘ