ಸೇಡಂ, ದೊಡ್ಡಬಳ್ಳಾಪುರದಲ್ಲಿ ಸಾಲಮನ್ನಾ ಪ್ರಾಯೋಗಿಕ ಜಾರಿ

ಬೆಂಗಳೂರು: ರಾಜ್ಯ ಸರ್ಕಾರದ ಬಹುನಿರೀಕ್ಷಿತ ಸಾಲಮನ್ನಾ ಯೋಜನೆ ಫಲಕ್ಕಾಗಿಯೇ ರೈತರು ಕಾದು ಕುಳಿತಿದ್ದರೆ, ಸರ್ಕಾರ ಎರಡು ತಾಲೂಕುಗಳಲ್ಲಿ ಪ್ರಾಯೋಗಿಕ ಜಾರಿಗೆ ಮುಂದಾಗಿದೆ. ರಾಷ್ಟ್ರೀಕೃತ ಬ್ಯಾಂಕ್​ಗಳು ಸಲ್ಲಿಸಿರುವ ದಾಖಲೆಗಳ ಪರಿಶೀಲನೆಯನ್ನು ಮೊದಲಿಗೆ ಸೇಡಂ ಹಾಗೂ ದೊಡ್ಡಬಳ್ಳಾಪುರ ತಾಲೂಕುಗಳಲ್ಲಿ ಕೈಗೊಳ್ಳಲಿದೆ.

ಪ್ರಸ್ತುತ ರಾಷ್ಟ್ರೀಕೃತ ಬ್ಯಾಂಕ್​ಗಳು ಕೃಷಿ ಸಾಲ ಪಡೆದ ರೈತರ ಮಾಹಿತಿ ಒದಗಿಸಿದ್ದು, ಇದನ್ನು ಸರ್ಕಾರ ಅಭಿವೃದ್ಧಿ ಪಡಿಸಿದ ತಂತ್ರಾಂಶದಲ್ಲಿ ಅಳವಡಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಸೇಡಂ ಮತ್ತು ದೊಡ್ಡಬಳ್ಳಾಪುರ ತಾಲೂಕುಗಳಲ್ಲಿ ನ.5ರಿಂದ ಪ್ರಾಯೋಗಿಕವಾಗಿ ಸಾಲ ಮನ್ನಾ ಪ್ರಕ್ರಿಯೆ ಆರಂಭಿಸಲಾಗಿದ್ದು, ನ.12ರಿಂದ ಬ್ಯಾಂಕಿಗೆ ಭೇಟಿ ನೀಡಿ ಆಧಾರ್, ರೇಷನ್ ಕಾರ್ಡ್ ಮತ್ತು ಅವರು ಹೊಂದಿರುವ ಕೃಷಿ ಭೂಮಿ ಮಾಹಿತಿ ಒದಗಿಸುವಂತೆ ಸೂಚಿಸಲಾಗುವುದು. ಆ ಬಳಿಕ ಇತರ ತಾಲೂಕುಗಳಲ್ಲಿ ಈ ಪ್ರಕ್ರಿಯೆ ಪ್ರಾರಂಭಿಸಲಾಗುತ್ತದೆ.

20 ಲಕ್ಷ ರೈತರ 41 ಸಾವಿರ ಕೋಟಿ ರೂ. ಸಾಲಮನ್ನಾ ಯೋಜನೆ ಘೋಷಿಸಿ, ನವೆಂಬರ್ ಅಂತ್ಯದೊಳಗೆ ಋಣಮುಕ್ತ ಪತ್ರ ನೀಡಲಾಗುತ್ತದೆ ಎಂದು ಸರ್ಕಾರ ಹೇಳಿತ್ತು. ಆದರೆ, ನಿಧಾನಗತಿ ಧೋರಣೆ ಅನುಸರಿಸುತ್ತಿರುವುದು ರೈತರಲ್ಲಿ ಆತಂಕವನ್ನು ಹೆಚ್ಚಿಸಿದೆ.

ಶೀಘ್ರ ಸಹಾಯವಾಣಿ

ಸಹಕಾರಿ ಬ್ಯಾಂಕ್​ಗಳಲ್ಲಿ ಮಾಹಿತಿ ಪರಿಶೀಲನಾ ಪ್ರಕ್ರಿಯೆ ಆರಂಭ ವಾಗಿದ್ದು, ನವೆಂಬರ್ ಅಂತ್ಯದೊಳಗೆ 6000 ಶಾಖೆಗಳಲ್ಲಿ ಪರಿಶೀಲಿಸಲಾಗುವುದು. ಡಿಸಿಗಳು ಈ ಯೋಜನೆಗೆ ನೋಡಲ್ ಅಧಿಕಾರಿಗಳಾಗಿರುತ್ತಾರೆ. ರೈತರಿಗಾಗಿ ಸಹಾಯವಾಣಿ ಆರಂಭವಾಗಲಿದೆ.

ಮುನೀಶ್ ಮೌದ್ಗಿಲ್ ನೇತೃತ್ವದ ತಂಡ ವಿಶೇಷ ತಂತ್ರಾಂಶ ರೂಪಿಸಿದ್ದು, ಯೋಜನೆಯ ಪಾರದರ್ಶಕ ಜಾರಿಗೆ ಕ್ರಮ ವಹಿಸಲಾಗುತ್ತಿದೆ. ಅರ್ಹ ರೈತರಿಗೆ ಆತಂಕ ಬೇಡ. ಬ್ಯಾಂಕ್​ಗಳು ರೈತರನ್ನು ಶೋಷಿಸಿದಲ್ಲಿ ಕ್ರಮ ಕೈಗೊಳ್ಳಲು ಡಿಸಿಗಳಿಗೆ ಸೂಚಿಸಿರುವೆ.

| ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ರೈತರ ಹಿತಾಸಕ್ತಿಗೆ ಗರಿಷ್ಠ ಆದ್ಯತೆ

ಬೆಳಗಾವಿ: ರೈತರು ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ 6 ತಿಂಗಳ ಹಿಂದೆ ಕಾನೂನು ಪ್ರಕ್ರಿಯೆ ಆರಂಭಿಸಲಾಗಿದ್ದು, ಕರ್ನಾಟಕ ಸರ್ಕಾರ ಹೊರಡಿಸಿರುವ ಅಧಿಸೂಚನೆ ಗಮನಕ್ಕೆ ಬಂದಿದ್ದು, ರೈತರ ಹಿತಾಸಕ್ತಿಗೆ ಆದ್ಯತೆ ನೀಡಿ ಸರ್ಕಾರದ ಜತೆ ಈ ವಿಚಾರವನ್ನು ಬ್ಯಾಂಕ್ ಬಗೆಹರಿಸಿಕೊಳ್ಳಲಿದೆ ಎಂದು ಆಕ್ಸಿಸ್ ಬ್ಯಾಂಕ್​ನ ಪ್ರಾದೇಶಿಕ ಶಾಖೆ ಮುಖ್ಯಸ್ಥ ಸದಾಶಿವ ಮಲ್ಯ ತಿಳಿಸಿದ್ದಾರೆ.

ಬ್ಯಾಂಕ್ ಅಧಿಕಾರಿಗಳು, ರೈತರ ಜತೆ ನಾಳೆ ಡಿಸಿ ಸಭೆ

ಬೆಂಗಳೂರು: ಸಾಲ ಪಡೆದ ರೈತರ ವಿರುದ್ಧ ಮೊಕದ್ದಮೆ ಹೊರಡಿಸಿರುವ ಆಕ್ಸಿಸ್ ಬ್ಯಾಂಕ್ ಹಾಗೂ ರೈತ ಪ್ರತಿನಿಧಿಗಳ ಜತೆಗೆ ಬೆಳಗಾವಿ ಜಿಲ್ಲಾಧಿಕಾರಿ ನ.7ರಂದು ಸಭೆ ನಡೆಸಲಿದ್ದಾರೆ. ಬೆಳಗಾವಿ ಜಿಲ್ಲೆಯ ರೈತರಿಗೆ ಆಕ್ಸಿಸ್ ಬ್ಯಾಂಕ್ ಕೊಲ್ಕತ್ತ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದು, ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದೆ. ಈ ಪ್ರಕರಣ ಸಂಬಂಧ ಸಿಎಂ ಕುಮಾರಸ್ವಾಮಿ ಸೋಮವಾರ ಸಹ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಜತೆ ರ್ಚಚಿಸಿದರು. ಬ್ಯಾಂಕಿನ ಅಧಿಕಾರಿಗಳೊಂದಿಗೆ ಸೌಹಾರ್ದಯುತವಾಗಿ ರ್ಚಚಿಸಿ, ರೈತರಿಗೆ ತೊಂದರೆಯಾಗದಂತೆ ಸಮಸ್ಯೆ ಬಗೆಹರಿಸಬೇಕೆಂದು ಸಿಎಂ ಸೂಚನೆ ನೀಡಿದ್ದಾರೆ.

ನೋಟಿಸ್ ಹಿಂಪಡೆಯಲು ನಿರ್ದೇಶನ

ಬೈಲಹೊಂಗಲ: ಹಬ್ಬದ ನಿಮಿತ್ತ ಕೋಲ್ಕತ್ತ ನ್ಯಾಯಾಲಯಕ್ಕೆ ರಜೆ ಇದೆ. ಈಗಾಗಲೇ ಆಕ್ಸಿಸ್ ಬ್ಯಾಂಕ್ ಮುಖ್ಯ ಕಚೇರಿಯಿಂದ ಸೂಚನೆ ಬಂದಿದ್ದು, ರೈತರಿಗೆ ನೀಡಿರುವ ನೋಟಿಸ್ ಮತ್ತು ಅರೆಸ್ಟ್ ವಾರೆಂಟ್ ಹಿಂಪಡೆಯುವಂತೆ ನಿರ್ದೇಶನ ನೀಡಲಾಗಿದೆ. ಯಾವ ರೈತರೂ ಆತಂಕಕ್ಕೆ ಒಳಗಾಬಾರದು ಎಂದು ಆಕ್ಸಿಸ್ ಬ್ಯಾಂಕ್ ವಿಭಾಗೀಯ ಸಾಲ ವಸೂಲಾತಿ ಅಧಿಕಾರಿ ರಾಜಕುಮಾರ್ ಜಿ. ಹೇಳಿದ್ದಾರೆ. ಅರೆಸ್ಟ್ ವಾರಂಟ್ ಜಾರಿ ಖಂಡಿಸಿ ನಗರದ ಆಕ್ಸಿಸ್ ಬ್ಯಾಂಕ್​ಗೆ ಸೋಮವಾರ ಮುತ್ತಿಗೆ ಹಾಕಿದ ರೈತರಿಗೆ ಅವರು ಈ ಭರವಸೆ ನೀಡಿದರು. ಸಾಲ ಮರುಪಾವತಿಗೆ ಸಣ್ಣಪುಟ್ಟ ಸಮಸ್ಯೆಗಳಿದ್ದು, ರ್ಚಚಿಸಲು ದಿನಾಂಕ ನಿಗದಿಗೆ ಪಟ್ಟು ಹಿಡಿದಾಗ ನ.13ರಂದು ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ ಕರೆಯುವ ತೀರ್ಮಾನ ಕೈಕೊಳ್ಳಲಾಯಿತು.

ವಿವಿಧೆಡೆ ಪ್ರತಿಭಟನೆ: ಚಾಮರಾಜನಗರ, ಶಿವಮೊಗ್ಗ, ಹುಬ್ಬಳ್ಳಿ, ಹಾವೇರಿ, ಚಿತ್ರದುರ್ಗ ಸೇರಿ ಹಲವೆಡೆ ರೈತರು ಪ್ರತಿಭಟಿಸಿ, ಬ್ಯಾಂಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ ಅರೆಸ್ಟ್ ವಾರೆಂಟ್ ಜಾರಿ ಹುನ್ನಾರ ಮುಂದುವರಿಸಿದರೆ ಆಕ್ಸಿಸ್ ಬ್ಯಾಂಕ್ ಹಠಾವೋ ಚಳವಳಿ ನಡೆಸಬೇಕಾಗುತ್ತದೆ.

| ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ