ನೌಕರರಿಗೆ ಸಿಹಿಸುದ್ದಿ

| ವಿ.ಕೆ. ರವೀಂದ್ರ

ಕೊಪ್ಪಳ: ರಾಜ್ಯ ಸರ್ಕಾರಿ ನೌಕರರ ಪೂರ್ಣಪ್ರಮಾಣದ ನಿವೃತ್ತಿ ವೇತನ ಸೇವಾವಧಿಯನ್ನು ಮೂರು ವರ್ಷ ಕಡಿತಗೊಳಿಸಿ ಸರ್ಕಾರ ಆದೇಶಿಸಿದೆ.

ಸದ್ಯ ರಾಜ್ಯದಲ್ಲಿ ನೂತನ ಪಿಂಚಣಿ ಯೋಜನೆ ಜಾರಿಯಲ್ಲಿದ್ದು, ರದ್ದುಪಡಿಸುವಂತೆ ಸರ್ಕಾರಿ ನೌಕರರು ಹೋರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಪರಿಶೀಲಿಸಲು ಸರ್ಕಾರ ಅಪರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿಯನ್ನೂ ರಚಿಸಿದೆ. ತಮ್ಮ ಬೇಡಿಕೆ ಈಡೇರಿಸದ ಸರ್ಕಾರದ ವಿರುದ್ಧ ನೌಕರರು ಗರಂ ಆಗಿರುವಾಗಲೇ ನೌಕರರ ಪೂರ್ಣಪ್ರಮಾಣದ ನಿವೃತ್ತಿ ವೇತನ ಸೇವಾವಧಿಯನ್ನು 33 ವರ್ಷದಿಂದ 30 ವರ್ಷಕ್ಕೆ ಇಳಿಸಿ ಸರ್ಕಾರ ಆದೇಶಿಸಿದ್ದು, 2019ರ ಜ.1ರಿಂದಲೇ ಆದೇಶ ಜಾರಿ ಮಾಡಲಾಗಿದೆ. ಇದರಿಂದ ರಾಜ್ಯ ಸರ್ಕಾರಿ ನೌಕರರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ.

ಈ ಹಿಂದೆ ಸರ್ಕಾರಿ ನೌಕರರು ಪೂರ್ಣಪ್ರಮಾಣದ ನಿವೃತ್ತಿ ವೇತನ ಸೌಲಭ್ಯ ಪಡೆಯಲು ಕಡ್ಡಾಯವಾಗಿ 33 ವರ್ಷ ಸೇವೆ ಸಲ್ಲಿಸಬೇಕಿತ್ತು. ಇದರಿಂದ ಬೇರೆ ಹುದ್ದೆಗಳಿಗೆ ಹೋಗುವವರು, ಸ್ವಯಂ ನಿವೃತ್ತಿ ಹೊಂದುವ ನೌಕರರಿಗೆ ತೊಂದರೆಯಾಗಿತ್ತು. ಅಲ್ಲದೆ, ಹೊಸಬರಿಗೂ ಸರ್ಕಾರಿ ಸೇವೆಗೆ ಸೇರಲು ವಿಳಂಬವಾಗುತ್ತಿತ್ತು. ಹೀಗಾಗಿ ಸೇವಾವಧಿ ಕಡಿತಗೊಳಿಸಲು ನೌಕರರ ಸಂಘದಿಂದ ಹಲವು ವರ್ಷಗಳಿಂದ ಹೋರಾಟ ನಡೆದಿತ್ತು. ನೌಕರರ ಬೇಡಿಕೆ ಆಧರಿಸಿ ಎಂ.ಆರ್. ಶ್ರೀನಿವಾಸಮೂರ್ತಿ ನೇತೃತ್ವದ ಆರನೇ ವೇತನ ಆಯೋಗವೂ ಸೇವಾವಧಿ ಕಡಿತಗೊಳಿಸಲು ಶಿಫಾರಸು ಮಾಡಿತ್ತು. ಆಯೋಗದ ಶಿಫಾರಸು ಪರಿಗಣಿಸಿದ ಸರ್ಕಾರ, ರಾಜ್ಯ ಸರ್ಕಾರಿ ನೌಕರರು ಪೂರ್ಣಪ್ರಮಾಣದ ನಿವೃತ್ತಿ ವೇತನ ಸೇವಾವಧಿಯನ್ನು 3 ವರ್ಷ ಕಡಿತಗೊಳಿಸಿ ಜ.11ರಂದು ಆದೇಶಿಸಿದೆ.

6.5 ಲಕ್ಷ ನೌಕರರಿಗೆ ಅನುಕೂಲ: ನೂತನ ಆದೇಶ ದಿಂದ ರಾಜ್ಯದ 6.5 ಲಕ್ಷ ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ. 3 ವರ್ಷ ಮುಂಚಿತವಾಗಿ ಹಾಲಿ ನೌಕರರು ನಿವೃತ್ತಿ ಆಗುವುದರಿಂದ ಹಾಲಿ ನೌಕರರಿಗೆ ಸೇವಾವಧಿ ಬಡ್ತಿ, ಮುಂಬರುವ ನೌಕರರಿಗೂ ಹೆಚ್ಚಿನ ಅವಕಾಶಗಳು ಲಭಿಸಲಿವೆ.

ಪೂರ್ಣಪ್ರಮಾಣದ ನಿವೃತ್ತಿ ವೇತನದ ಸೇವಾವಧಿಯನ್ನು 33ರಿಂದ 30 ವರ್ಷಕ್ಕೆ ಇಳಿಸಲು ಹಿಂದಿನಿಂದಲೂ ಸರ್ಕಾರಕ್ಕೆ ಒತ್ತಾಯಿಸುತ್ತ ಬಂದಿದ್ದೇವೆ. ಆರನೇ ವೇತನ ಆಯೋಗ ಸೇವಾವಧಿ ಕಡಿತಗೊಳಿಸಲು ಶಿಫಾರಸು ಮಾಡಿತ್ತು. ಸದ್ಯ ಸರ್ಕಾರ 3 ವರ್ಷ ಸೇವಾವಧಿ ಕಡಿತಗೊಳಿಸಿದೆ.

| ಬೀರಪ್ಪ ಅಂಡಗಿ, ಅಂಗವಿಕಲ ನೌಕರರ ಸಂಘದ ರಾಜ್ಯಾಧ್ಯಕ್ಷ, ಕೊಪ್ಪಳ.