ಸರ್ಕಾರದಿಂದ ವೀರಶೈವ-ಲಿಂಗಾಯತ ನೌಕರರ ಕಡೆಗಣನೆ

ಮೈಸೂರು: ವರ್ಗಾವಣೆ, ನೇಮಕಾತಿ ಹಾಗೂ ಬಡ್ತಿ ವಿಚಾರದಲ್ಲಿ ರಾಜ್ಯದಲ್ಲಿ ವೀರಶೈವ-ಲಿಂಗಾಯತ ಸಮುದಾಯದ ನೌಕರರಿಗೆ ಸರ್ಕಾರದಿಂದ ಅನ್ಯಾಯವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದರು. ನಗರದ ಕಲಾಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ವೀರಶೈವ-ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ 10ನೇ ರಾಜ್ಯಮಟ್ಟದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ವರ್ಗಾವಣೆ ಸಂದರ್ಭದಲ್ಲಿ ನಮ್ಮ ವೀರಶೈವ ನೌಕರರನ್ನು ಮೂಲೆ ಗುಂಪು ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ನಮ್ಮ ಸಮುದಾಯದ ನೌಕರರಿಗೆ ಶಕ್ತಿ ಮತ್ತು ಯೋಗ್ಯತೆ ಇದ್ದರೂ ಕೆಲಸಕ್ಕೆ ಬಾರದ ಸ್ಥಾನದಲ್ಲಿ ಕೂರಿಸಿ ಸಮಾಜಕ್ಕೆ ದ್ರೋಹ ಮಾಡುತ್ತಿರುವುದು ಸಹಜವಾಗಿಯೇ ಸಮಾಜಕ್ಕೆ ನೋವುಂಟು ಮಾಡಿದೆ. ಇದನ್ನು ಸರಿಪಡಿಸಬೇಕಾಗಿದೆ. ಆದರೆ, ಈಗಿರುವ ಸರ್ಕಾರಕ್ಕೆ ನಾವೇನಾದರೂ ಹೇಳಿದರೆ ಅರ್ಥಮಾಡಿಕೊಳ್ಳುವ ಶಕ್ತಿ ಇಲ್ಲ. ಆ ದಿಕ್ಕಿನಲ್ಲಿ ಪ್ರಯತ್ನ ಮಾಡಬೇಕು. ಅನ್ಯಾಯವಾದಾಗ ಬೀದಿಗಿಳಿದು ಹೋರಾಟ ಮಾಡಿದಾಗ ಮಾತ್ರ ಸರ್ಕಾರಕ್ಕೆ ಬಿಸಿಮುಟ್ಟುತ್ತದೆ ಎಂದು ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿಎಸ್​ವೈ ಕರೆ ನೀಡಿದರು.

ಬೀದಿಗಿಳಿದು ಹೋರಾಡಿ: ವೀರಶೈವ-ಲಿಂಗಾಯತರಾಗಿ ಹುಟ್ಟಿರುವುದೇ ತಪ್ಪೆಂಬ ರೀತಿಯಲ್ಲಿ ನಮ್ಮನ್ನು ಮೂಲೆಗುಂಪು ಮಾಡುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಕೇವಲ ಬಡ್ತಿ ವಿಚಾರದಲ್ಲಿ ಮಾತ್ರವಲ್ಲ ವರ್ಗಾವಣೆ, ನೇಮಕಾತಿಯಲ್ಲೂ ನಮ್ಮ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಇದನ್ನು ಬಹಳ ದಿನ ಸಹಿಸಿಕೊಂಡು ಇರಲು ಸಾಧ್ಯವಿಲ್ಲ. ಅನ್ಯಾಯದ ವಿರುದ್ಧ ಸಿಡಿದೇಳಬೇಕಾಗುತ್ತದೆ. ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಯುವ ಸಮುದಾಯ ಹೋರಾಟಕ್ಕೆ ಧುಮುಕಬೇಕು. ಇಂಥ ಸಂದರ್ಭದಲ್ಲಿ ನಾನು ಸಮಾಜದೊಂದಿಗೆ ಇರುತ್ತೇನೆ ಎಂದು ಬಿಎಸ್​ವೈ ಭರವಸೆ ನೀಡಿದರು.

ನಾನು ಸಿಎಂ ಆಗಿದ್ದಾಗ ಸರ್ಕಾರಿ ನೌಕರರ ಸೌಲಭ್ಯಕ್ಕಾಗಿ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣ ಆಗಿರಲಿಲ್ಲ. ನೌಕರರ ಕಷ್ಟ ಅರಿತು ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿದೆ. ಇದನ್ನು ನೌಕರರು ಅರ್ಥ ಮಾಡಿಕೊಳ್ಳ ಬೇಕು. ವಿಧಾನಸಭಾ ಚುನಾವಣೆಯಲ್ಲಿ ನಮಗೆ ಎಲ್ಲ ವಾತಾ ವರಣ ಅನುಕೂಲ ಇದ್ದಂತಹ ಸಂದರ್ಭದಲ್ಲಿ ನಾವು ಸ್ವಲ್ಪ ಎಡವದಿದ್ದಿದ್ದರೆ ನಮಗೆ ಹಾಗೂ ನಿಮಗೂ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಮುಂದೆ ಇಂಥ ಪರಿಸ್ಥಿತಿ ಆಗದ ರೀತಿಯಲ್ಲಿ ಎಚ್ಚರಿಕೆ ವಹಿಸಬೇಕು ಎಂದರು.

ಸಮುದಾಯ ಒಗ್ಗಟ್ಟಾಗುವುದು ಮುಖ್ಯ

ನಾವು ಎಲ್ಲ ಸಮಾಜದವರನ್ನು ಪ್ರೀತಿಸಬೇಕು. ಇದೇ ವೇಳೆ ನಮ್ಮ ಸಮುದಾಯದವರು ಒಗ್ಗಟ್ಟಾಗಿರುವುದು ಕೂಡ ಅಷ್ಟೇ ಮುಖ್ಯ. ನಾವು ಯಾವುದೇ ಸಮಾಜವನ್ನು ದೂರ ಇಟ್ಟಿಲ್ಲ. ಎಲ್ಲ ಸಮಾಜದವರನ್ನು ಗೌರವಿಸುವ ಯಾವುದಾದರೊಂದು ಧರ್ಮ ಇದ್ದರೆ ಅದು ವೀರಶೈವ -ಲಿಂಗಾಯತ ಧರ್ಮ ಮಾತ್ರ. ವಿರೋಧ ಪಕ್ಷದಲ್ಲಿ ನಾವು ಮೂರ್ನಾಲ್ಕು ಜನ ಎದ್ದು ನಿಂತರೆ ಯಾರನ್ನು ಬೇಕಾದರೂ ಮಣಿಸುವ ವಿಶ್ವಾಸ ನಮಗಿದೆ. ವೀರಶೈವ ನೌಕರರ ಬೇಡಿಕೆಯನ್ನು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸಮಸ್ಯೆ ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ಯಡಿಯೂರಪ್ಪ ಭರವಸೆ ನೀಡಿದರು. ವೀರಶೈವ ಲಿಂಗಾಯತ ಒಳಪಂಗಡಗಳ ಕಚ್ಚಾಟ ತೊಡೆದು ಹಾಕಲು ನೀವು (ಸಂಘ) ವಿಶೇಷ ಪ್ರಯತ್ನ ಮಾಡುತ್ತಿದ್ದೀರಿ. ನಾವು ಒಳಪಂಗಡದ ಚೌಕಟ್ಟಿನಿಂದ ಹೊರ ಬಂದಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಅದನ್ನು ಕಾರ್ಯ ರೂಪಕ್ಕೆ ತರುವ ಪ್ರಯತ್ನ ಮಾಡಬೇಕೆ. ವೀರಶೈವ ತತ್ವದ ಆಧಾರದಲ್ಲಿ ಹೇಳುವುದಾದರೆ ಸಮುದಾಯದ ನೌಕರರೆಲ್ಲ ಕಾಯಕ ದಾಸೋಹಿಗಳು ಎಂದರು.

ಸರ್ಕಾರ ಜಾತಿ ನೋಡಕೂಡದು

ವರ್ಗಾವಣೆ ವಿಚಾರದಲ್ಲಿ ವೀರಶೈವ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರ್ಕಾರ ಸರಿಪಡಿಸಬೇಕು. ಜಾತಿ ನೋಡುವುದು ಸರ್ಕಾರಕ್ಕೆ ಶೋಭೆ ತರುವಂಥ ದ್ದಲ್ಲ. ರಾಜ್ಯ ಸರ್ಕಾರ ಮೂರ್ನಾಲ್ಕು ಜಿಲ್ಲೆಗಳಿಗೆ, ಒಂದು ಜನಾಂಗಕ್ಕೆ ಸೀಮಿತ ಎನ್ನುವುದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾದದ್ದು. ಸರ್ಕಾರ ಸ್ವಾರ್ಥ ರಾಜಕಾರಣ ನಡೆಸುತ್ತಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಜನ ದಂಗೆ ಏಳುವ ಪರಿಸ್ಥಿತಿ ನಿರ್ವಣಗೊಳ್ಳುತ್ತದೆ ಎಂದು ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದರು.

ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿ

ನಾನು ಕಾಂಗ್ರೆಸ್​ನಲ್ಲಿದ್ದರೂ ಬಿ.ಎಸ್. ಯಡಿಯೂರಪ್ಪ ಆದಷ್ಟು ಬೇಗ ಮುಖ್ಯಮಂತ್ರಿ ಆಗಲಿ ಎಂದು ಬಯಸುತ್ತೇನೆ ಎಂದು ಮಾಜಿ ಶಾಸಕ ಅಶೋಕ್ ಖೇಣಿ ಹೇಳಿದರು. ನನಗೆ ಜಾತಿ ಇಲ್ಲ. ಜಾತ್ಯತೀತ ವ್ಯಕ್ತಿ. ಕೆಲವರು ಜಾತಿ ಮೇಲೆ ಪಕ್ಷದಲ್ಲಿ ಗುರುತಿಸಿಕೊಳ್ಳುತ್ತಾರೆ. ನನಗೆ ಅದು ಇಷ್ಟವಿಲ್ಲ ಎಂದರು.

6ರಂದು ಕಲಬುರಗಿಗೆ ಪ್ರಧಾನಿ ಮೋದಿ

ಕಲಬುರಗಿ: ನೂತನ ವಿದ್ಯಾಲಯ ಮೈದಾನದಲ್ಲಿ ಮಾ.6ರಂದು ಆಯೋಜಿಸಿರುವ ಬಿಜೆಪಿ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದ್ದಾರೆ. ಅಂದು ಬೆಳಗ್ಗೆ 10ಕ್ಕೆ ಎನ್.ವಿ. ಮೈದಾನದಲ್ಲಿ ಸಮಾವೇಶ ಆಯೋಜಿಸಲಾಗಿದ್ದು, 11.30ಕ್ಕೆ ಕಲಬುರಗಿಗೆ ಪ್ರಧಾನಿ ಆಗಮಿಸಲಿದ್ದಾರೆ. ಆಯುಷ್ಮಾನ್ ಭಾರತ ಫಲಾನುಭವಿಗಳ ಜತೆ ಸಂವಾದವೂ ನಡೆಸಲಿದ್ದಾರೆ ಎಂದು ತಿಳಿಸಿದರು. ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್​ನ ಅತೃಪ್ತ ಶಾಸಕ ಡಾ.ಉಮೇಶ್ ಜಾಧವ್ ಬಿಜೆಪಿ ಸೇರ್ಪಡೆ ವಿಚಾರ ಅಂತಿಮಗೊಂಡಿಲ್ಲ. ಪಕ್ಷದ ವರಿಷ್ಠರು ತೀರ್ವನಿಸಲಿದ್ದಾರೆ. ರಾಜೀನಾಮೆ ನೀಡುವ ಬಗ್ಗೆ ಜಾಧವ್ ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.