ಅಗ್ರಿಗೋಲ್ಡ್ ಆಸ್ತಿ ಹರಾಜಿಗೆ ಇನ್ನೂ ತೋರುತ್ತಿಲ್ಲ ಆಸಕ್ತಿ

| ಗೋವಿಂದರಾಜು ಚಿನ್ನಕುರ್ಚಿ

ಬೆಂಗಳೂರು: ಬಹುಕೋಟಿ ರೂಪಾಯಿ ವಂಚಿಸಿದ್ದ ಆಂಬಿಡೆಂಟ್ ಕಂಪನಿ ಆಸ್ತಿ ಜಪ್ತಿ ಹಾಗೂ ಹರಾಜು ಪ್ರಕ್ರಿಯೆಗೆ ರಾಜ್ಯ ಸರ್ಕಾರ ತೋರಿಸಿದ ಆಸಕ್ತಿ ‘ಅಗ್ರಿ ಗೋಲ್ಡ್ ಕಂಪನಿ’ ವಂಚನೆ ಕೇಸಲ್ಲಿ ತೋರಿಸದ್ದಕ್ಕೆ ಹಣ ಕಳೆದುಕೊಂಡ ಲಕ್ಷಾಂತರ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನಿಖೆ ಪೂರ್ಣವಾಗಿ ಎರಡೂವರೆ ವರ್ಷವಾದರೂ ಈವರೆಗೆ ಜಪ್ತಿ ಮಾಡಿಕೊಂಡ ಆಸ್ತಿ ಹರಾಜು ಪಕ್ರಿಯೆ ಆರಂಭವಾಗಿಲ್ಲ.

ರಾಜ್ಯ ಸರ್ಕಾರ ಸೂಚನೆ ಮೇರೆಗೆ ಸಿಐಡಿ ಆರ್ಥಿಕ ಅಪರಾಧಗಳ ತನಿಖಾ ವಿಭಾಗದ ಅಧಿಕಾರಿಗಳು ಅಗ್ರಿ ಗೋಲ್ಡ್ ಕಂಪನಿ ವಿರುದ್ಧದ 8 ವಂಚನೆ ಪ್ರಕರಣ ತನಿಖೆ ಪೂರ್ಣಗೊಳಿಸಿದೆ. ಜನರ ಹಣದಲ್ಲಿ ಅಗ್ರಿ ಗೋಲ್ಡ್ ಕಂಪನಿ ಅಧ್ಯಕ್ಷ, ನಿರ್ದೇಶಕ, ವ್ಯವಸ್ಥಾಪಕರು ತಮ್ಮ ಮತ್ತು ಕಂಪನಿ ಹೆಸರಿನಲ್ಲಿ ಕರ್ನಾಟಕ-ತಮಿಳುನಾಡಿನಲ್ಲಿ ಖರೀದಿಸಿದ್ದ ಅಪಾರ ಪ್ರಮಾಣದ ಸ್ಥಿರ-ಚರಾಸ್ಥಿ ಪತ್ತೆಹಚ್ಚಿ 2016 ಸೆಪ್ಟೆಂಬರ್​ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಇದಾದ ಒಂದೂವರೆ ವರ್ಷದ ಬಳಿಕ ಸರ್ಕಾರ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಅಧಿನಿಯಮ-2004ರ ಕಲಂ 3ರ ಪ್ರಕಾರ ಆಸ್ತಿ ಮುಟ್ಟಗೋಲು ಮತ್ತು ಹರಾಜು ಪ್ರಕ್ರಿಯೆಗೆ ವಿಶೇಷಾಧಿಕಾರಿಯಾಗಿ ರಾಮನಗರ ಎಸಿ ಕೃಷ್ಣಮೂರ್ತಿ ಅವರನ್ನು ನೇಮಿಸಿತು. ಆದರೆ, ವಶಕ್ಕೆ ಪಡೆದಿರುವ ಆಸ್ತಿ ಹರಾಜು ಪ್ರಕ್ರಿಯೆ ಮುಗಿದಿಲ್ಲ.

ಸಿಐಡಿ ಗುರುತಿಸಿದ್ದ ಆಸ್ತಿ ಸಂಬಂಧ ಗೆಜೆಟೆಡ್ ಅಧಿಸೂಚನೆ ಹೊರಡಿಸಿ ಮುಟ್ಟುಗೋಲು ಹಾಕಿಕೊಂಡಿದ್ದ ಆಸ್ತಿಯ ಆರ್​ಟಿಸಿ ಕಾಲಂ 11ರಲ್ಲಿ ಅಗ್ರಿ ಗೋಲ್ಡ್ ಹೆಸರು, ಮುಟ್ಟುಗೋಲು ಎಂದು ನಮೂದಿಸಿ ಮಾರಾಟಕ್ಕೆ ತಡೆ ನೀಡಲಾಗಿದೆ. ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಇದೇ ಪ್ರಕರಣ ಸಂಬಂಧ ವಿಚಾರಣೆ ನಡೆಯುತ್ತಿದ್ದು, ಅಂತಿಮ ತೀರ್ಪು ಬಂದ ಮೇಲೆ ಹರಾಜು ಪ್ರಕ್ರಿಯೆ ನಡೆಸಲಾಗುತ್ತದೆ. ಜತೆಗೆ ಹೈದರಾಬಾದ್ ಹೈಕೋರ್ಟ್ ಅಗ್ರಿ ಗೋಲ್ಡ್ ಕಂಪನಿಯ ಪ್ರಮುಖ ಕೇಸ್ ವಿಚಾರಣೆ ನಡೆಯುತ್ತಿದೆ. ರಾಜ್ಯ ಸರ್ಕಾರ ಪ್ರತ್ಯೇಕವಾಗಿ ಸ್ಥಳೀಯ ವಕೀಲರನ್ನು ನೇಮಿಸಿ ನಮ್ಮ ರಾಜ್ಯದಲ್ಲೂ ಹೂಡಿಕೆದಾರರು ಇದ್ದಾರೆ, ತಮಗೂ ಪಾಲು ಬರಬೇಕೆಂದು ವಾದ ಮಂಡಿಸಲಾಗಿದೆ. ಅಲ್ಲಿಂದಲೂ ಹಣ ಬಂದರೆ ಒಳಿತಾಗುತ್ತದೆ ಎಂದು ಕಾಯುತ್ತಿರುವುದಾಗಿ ವಿಶೇಷಾಧಿಕಾರಿ ಕೃಷ್ಣಮೂರ್ತಿ ತಿಳಿಸಿದ್ದಾರೆ.

1,639 ಕೋಟಿ ರೂ ಮೋಸ

ಅಗ್ರಿ ಗೋಲ್ಡ್ ಕಂಪನಿ ಹಾಗೂ ಅಂಗ ಕಂಪನಿಗಳ ಅಧ್ಯಕ್ಷರು-ನಿರ್ದೇಶಕರು ರಾಜ್ಯದಲ್ಲಿ 56 ಶಾಖೆ ತೆರೆದು 8,41,161 ಹೂಡಿಕೆದಾರರಿಂದ ಪಿಗ್ಮಿ ಮತ್ತು ಓನ್ ಟೈಂ ಡೆಪಾಸಿಟ್ ಇತ್ಯಾದಿ ರೂಪದಲ್ಲಿ 1,639 ಕೋಟಿ ರೂ. ಸಂಗ್ರಹಿಸಿರುವುದು ಸಿಐಡಿ ತನಿಖೆಯಿಂದ ಬಯಲಾಗಿದೆ. ಹಲವರು ಕಚೇರಿಗೆ ಬಂದು ಹೂಡಿಕೆದಾರರು ಎನ್ನುತ್ತಿದ್ದು, ಇವರ ಪಟ್ಟಿಯನ್ನು ಸಿಐಡಿಗೆ ರವಾನಿಸಿ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಲು ವಿಶೇಷಾಧಿಕಾರಿ ಮುಂದಾಗಿದ್ದಾರೆ.

200 ಕಡೆ 450 ಎಕರೆ ಭೂಮಿ

ಬೆಂಗಳೂರು, ರಾಮನಗರ, ಮಂಗಳೂರು, ಮಂಡ್ಯ, ಯಾದಗಿರಿ ಮತ್ತು ತ.ನಾಡಿನಲ್ಲಿ 200ಕ್ಕೂ ಅಧಿಕ ಕಡೆಗಳಲ್ಲಿ ಖರೀದಿಸಿರುವ ಕೋಟ್ಯಂತರ ರೂ. ಮೌಲ್ಯದ 450ಕ್ಕೂ ಅಧಿಕ ಎಕರೆ ಜಮೀನು, ಸೈಟು, ಬಿಲ್ಡಿಂಗ್, ಮನೆ ಪತ್ತೆ ಹಚ್ಚಿದ್ದಾರೆ. ವಿವಿಧ ಕಂಪನಿಯ 13 ಕಾರು ಜಪ್ತಿ ಮಾಡಿದ್ದಾರೆ. ಸಿಟಿ ಗ್ರೀನ್ ಫಾಮ್್ಸರ್ ಪ್ರೖೆ. ಲಿ ಹೆಸರಿನಲ್ಲಿ 16 ಕೋಟಿ ರೂ. ಮೌಲ್ಯದ ವಾಸದ ಮನೆ ಖರೀದಿಸಿರುವುದು, ರಾಮನಗರ ಜಿಲ್ಲೆ ಮಾದಪುರ-ಕೇತೋಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್​ನಲ್ಲಿ 25 ಕಡೆ ಖರೀದಿಸಿರುವ 31 ಎಕರೆ ಭೂಮಿ ಮಾರಾಟಕ್ಕೆ ಕರಾರು ಪತ್ರ ಮಾಡಿರುವುದು ಸಿಐಡಿ ಪತ್ತೆ ಹಚ್ಚಿದೆ. ಜತೆಗೆ ಹೊಸ ಆಸ್ತಿಗಳ ಮಾಹಿತಿ ಸಿಕ್ಕಿದ್ದು, ಸಂಬಂಧಪಟ್ಟ ತಹಸೀಲ್ದಾರ್​ಗಳನ್ನು ಸಂರ್ಪಸಿ ಮಾರಾಟ ಆಗದಂತೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಕೃಷ್ಣಮೂರ್ತಿ ತಿಳಿಸಿದ್ದಾರೆ.