ರಾಜ್ಯ ಸರ್ಕಾರದಿಂದ ಕರ್ನಾಟಕ ಆಧಾರ್ ಇಂದೇ ಜಾರಿ

|ರಮೇಶ ದೊಡ್ಡಪುರ

ಬೆಂಗಳೂರು: ಕರ್ನಾಟಕ ಆಧಾರ್ ಕಾಯ್ದೆ ಆಗಸ್ಟ್ 1ರಿಂದ ಜಾರಿಗೆ ಬರಲಿದ್ದು, ಸರ್ಕಾರದ ಯೋಜನೆಗಳಲ್ಲಿ ಭ್ರಷ್ಟಾಚಾರ, ಫಲಾನುಭವಿಗಳನ್ನು ಗುರುತಿಸುವಲ್ಲಿ ಪಾರದರ್ಶಕತೆಯ ಕೊರತೆ ಹಾಗೂ ಪಿಂಚಣಿ ಯೋಜನೆಗಳಲ್ಲಿ ಮಧ್ಯವರ್ತಿಗಳ ಹಾವಳಿಯ ಕೊರಗನ್ನು ನಿವಾರಿಸುವ ಆಶಾಭಾವನೆ ಇದೆ.

ಕರ್ನಾಟಕ ಆಧಾರ್ (ಹಣಕಾಸು ಮತ್ತು ಇತರ ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳ ಉದ್ದೇಶಿತ ವಿತರಣೆ) ಕಾಯ್ದೆ 2018ಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ.

ಕೇಂದ್ರ ಸರ್ಕಾರದ ಆಧಾರ್ ಕಾಯ್ದೆಗೆ ಅನುಗುಣವಾಗಿ ರೂಪಿಸಲಾಗಿರುವ ಕಾಯ್ದೆಯ ಆಧಾರದಲ್ಲಿ ರಾಜ್ಯ ಸರ್ಕಾರ ಅಧಿಸೂಚನೆಯೊಂದನ್ನು ಸದ್ಯದಲ್ಲೇ ಹೊರಡಿಸಿ, ಯಾವ್ಯಾವ ಸ್ಕೀಮ್ಳಲ್ಲಿ ಆಧಾರ್ ಸಂಖ್ಯೆ ನೀಡಬೇಕು ಎಂದು ತಿಳಿಸಲಿದೆ. ಆಧಾರ್ ಕಡ್ಡಾಯ ಮಾಡಬಾರದು ಎಂಬ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅಲ್ಲಿಯವರೆಗೂ ಕೆಲ ವಿನಾಯಿತಿಯನ್ನೂ ಕಾಯ್ದೆಯಲ್ಲಿ ನೀಡಲಾಗಿದೆ.

ಆಗಸ್ಟ್ 1ರಿಂದ ಆರಂಭಗೊಂಡು 3 ತಿಂಗಳೊಳಗೆ ರಾಜ್ಯ ಸರ್ಕಾರ ಈ ಬಗ್ಗೆ ಅಧಿಸೂಚನೆ ಹೊರಡಿಸಲಿದೆ. ಸರ್ಕಾರದ ವಿವಿಧ ಇಲಾಖೆಗಳ ಆಯ್ದ ಯೋಜನೆಗಳನ್ನು, ನಂತರ ಕಾಲಕಾಲಕ್ಕೆ ವಿವಿಧ ಯೋಜನೆಗಳನ್ನು ಸೇರಿಸಲಾಗುತ್ತದೆ. ಆಧಾರ್ ಬಳಸುವ ಮತ್ತು ಗೌಪ್ಯತೆ ಕಾಪಾಡಿಕೊಳ್ಳುವ ವಿಧಾನವನ್ನೂ ಸ್ಪಷ್ಟಪಡಿಸುತ್ತದೆ.

149 ಸ್ಕೀಮ್ಳ ಜಾರಿ: ರಾಜ್ಯದಲ್ಲಿ ಕೇಂದ್ರದ ಸಹಾಯಾನುದಾನದ 62 ಹಾಗೂ ನೇರವಾಗಿ ರಾಜ್ಯ ಸರ್ಕಾರದ 87 ಸೇರಿ ಒಟ್ಟು 149 ಯೋಜನೆಗಳು ಜಾರಿಯಲ್ಲಿವೆ. ಕೇಂದ್ರದ ಯೋಜನೆಗಳಲ್ಲಿ ಪ್ರಮುಖವಾಗಿ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ, ಅಂಗವಿಕಲ ವೇತನ, ವಿಧವಾ ವೇತನ, ಹಿರಿಯ ನಾಗರಿಕರ ಪಿಂಚಣಿ, ಜನನಿ ಸುರಕ್ಷಾ ಯೋಜನೆ, ಕ್ಷೀರ ಸಂಜೀವಿನಿ ಯೋಜನೆ, ನರೇಗಾ, ಮಧ್ಯಾಹ್ನದ ಬಿಸಿಯೂಟ, ಪೌಷ್ಟಿಕಾಂಶ ಯೋಜನೆ, ಉಜ್ವಲಾ, ಪ್ರಧಾನ ಮಂತ್ರಿ ಆವಾಸ್ ಯೋಜನೆಗಳು ಪ್ರಮುಖವಾದವು. ರಾಜ್ಯ ಸರ್ಕಾರ ಪ್ರಮುಖವಾಗಿ ಮುಖ್ಯಮಂತ್ರಿ ಅನಿಲ ಭಾಗ್ಯ, ಮೈತ್ರಿ, ಆಸಿಡ್ ಸಂತ್ರಸ್ತ ಮಹಿಳೆಯರಿಗೆ ಪರಿಹಾರ, ಎಸ್​ಸಿ-ಎಸ್​ಟಿ ವಿದ್ಯಾರ್ಥಿವೇತನ, ಸಂಧ್ಯಾ ಸುರಕ್ಷಾ ಯೋಜನೆ, ಮಣ್ಣು ಆರೋಗ್ಯ ಕಾರ್ಡ್, ವಿದ್ಯಾಸಿರಿ, ಬಸವ ವಸತಿ, ಕ್ಷೀರಧಾರೆ ಯೋಜನೆಗಳನ್ನು ಜಾರಿ ಮಾಡುತ್ತಿದೆ.

90 ಸಾವಿರ ಕೋಟಿ ರೂ. ಉಳಿತಾಯ: ಕೇಂದ್ರ ಸರ್ಕಾರ 2016ರಲ್ಲಿ ಆಧಾರ್ ಕಾಯ್ದೆ ಜಾರಿಗೆ ತಂದ ಬಳಿಕ ತನ್ನ ಅಧೀನದ 56 ಸಚಿವಾಲಯಗಳ 435 ಯೋಜನೆಗಳಲ್ಲಿ ಆಧಾರ್ ಅಳವಡಿಸಿ ನೇರ ನಗದು ವರ್ಗಾವಣೆ(ಡಿಬಿಟಿ) ಮಾಡುತ್ತಿದೆ. ಹೀಗಾಗಿ ಸೋರಿಕೆ ಆಗುತ್ತಿದ್ದ 90 ಸಾವಿರ ಕೋಟಿ ರೂ. ಕೇಂದ್ರ ಸರ್ಕಾರಕ್ಕೆ ಉಳಿತಾಯವಾಗಿದೆ.

ಸದ್ಯ ಆಧಾರ್ ಕಡ್ಡಾಯವಲ್ಲ: ಆಧಾರ್ ಸಂಖ್ಯೆ ಇಲ್ಲದವರು ಆಧಾರ್ ನೋಂದಣಿ ಕೇಂದ್ರಕ್ಕೆ ತೆರಳಿ ನೋಂದಣಿ ಮಾಡಿಸಬೇಕು. ಆಧಾರ್ ಸಂಖ್ಯೆ ದೊರಕುವವರೆಗೂ ನೋಂದಣಿ ಸಂಖ್ಯೆ(ಇ ಐಡಿ) ನೀಡಿ ಯೋಜನೆಯ ಲಾಭ ಪಡೆಯಬಹುದು. ಇಷ್ಟರ ನಂತರವೂ ಆಧಾರ್ ಇಲ್ಲದಿದ್ದರೆ ಸರ್ಕಾರ ಸೂಚಿಸುವ ಇತರ ಯಾವುದೇ ದಾಖಲೆ ಪಡೆಯುವ ಮೂಲಕ ಯೋಜನೆಯ ಲಾಭ ನೀಡಬೇಕು. ಹೆಚ್ಚಿನ ಫಲಾನುಭವಿಗಳನ್ನು ಸೇರಿಸಲು ಮತ್ತು ಪಾರದರ್ಶಕತೆ ತರಲು ಆಧಾರ್ ನೋಂದಣಿ ಮಾಡಿಸಲಾಗುತ್ತದೆ. ಸದ್ಯ ಅದು ಕಡ್ಡಾಯವಲ್ಲ, ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ ಎಂದು ಮೂಲಗಳು ಹೇಳಿವೆ.

2 ವರ್ಷದೊಳಗೆ ಅಗತ್ಯ ಬದಲಾವಣೆ: ಕಾಯ್ದೆ ಜಾರಿಗೆ ಎದುರಾಗುವ ತೊಂದರೆಗಳ ನಿವಾರಣೆಗೆ 2 ವರ್ಷ ಅವಕಾಶ ನೀಡಲಾಗಿದೆ. ಮುಖ್ಯ ಕಾಯ್ದೆಗೆ ವಿರೋಧವಾಗದಂತೆ ಆದೇಶ ಹೊರಡಿಸಿ, ರಾಜ್ಯಪತ್ರದಲ್ಲಿ ಪ್ರಕಟಿಸಿ ಉಪಬಂಧಗಳನ್ನು ಸೇರಿಸಬಹುದು. ಆದರೆ 2 ವರ್ಷದ ನಂತರ ಇಂಥ ಯಾವುದೇ ಬದಲಾವಣೆ ಮಾಡಬಾರದು ಎಂದು ಕಾಯ್ದೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ರಾಷ್ಟ್ರಮಟ್ಟದಲ್ಲಿ ಆಧಾರ್ ಲಾಭ

  • 3.79 ಕೋಟಿ ನಕಲಿ ಎಲ್​ಪಿಜಿ ಸಂಪರ್ಕ ನಿಷೇಧ
  • 2.75 ಕೋಟಿ ನಕಲಿ, ನಕಲು ಪಡಿತರ ಚೀಟಿ ರದ್ದು
  • ಗ್ರಾಮೀಣಾಭಿವೃದ್ಧಿಯಲ್ಲಿ ನಕಲಿ ಫಲಾನುಭವಿಗಳನ್ನು ರದ್ದುಪಡಿಸಿದ್ದರಿಂದ ಶೇ.10 ಹಣ ಉಳಿತಾಯ
  • ಅಲ್ಪಸಂಖ್ಯಾತ ಇಲಾಖೆಯಲ್ಲಿ 5.26 ಲಕ್ಷ ನಕಲಿ ಫಲಾನುಭವಿಗಳ ರದ್ದು
  • ಸಮಾಜ ಕಲ್ಯಾಣ ಇಲಾಖೆಯಲ್ಲಿ 1.79 ಲಕ್ಷ ನಕಲಿ ಫಲಾನುಭವಿಗಳ ರದ್ದು