ಉನ್ನತ ಶಿಕ್ಷಣಕ್ಕಾಗಿ 5,000 ಕೋಟಿ ರೂ. ಮೀಸಲು

ಸೊರಬ: ಶಿಕ್ಷಣದ ಮೂಲಕ ಜ್ಞಾನ ಕೊಟ್ಟರೆ ಅವರ ಬದುಕನ್ನು ಅವರೇ ಕಟ್ಟಿಕೊಳ್ಳುತ್ತಾರೆ. ಆ ನಿಟ್ಟಿನಲ್ಲಿ ಸರ್ಕಾರ ಉನ್ನತ ಶಿಕ್ಷಣಕ್ಕಾಗಿ 5,000 ಕೋಟಿ ರೂ. ಮೀಸಲಿರಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿ ನಿಲಯಗಳ ನೂತನ ಕಟ್ಟಡ ಹಾಗೂ ವಿದ್ಯಾರ್ಥಿ ಸಂಘ, ಕ್ರೀಡಾ ಸಂಘ ಮತ್ತು ಎನ್​ಎಸ್​ಎಸ್ ಘಟಕಗಳ ಉದ್ಘಾಟನೆ ನೆರವೇರಿಸಿ ಮಾತನಾಡಿ, ಮುಖ್ಯಮಂತ್ರಿಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಈಗಾಗಲೆ 500 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಾಲೆಗಳು ಹಾಗೂ 18 ಇಂಜಿನಿಯರಿಂಗ್ ಕಾಲೇಜುಗಳಿಗೆ ಅನುದಾನ ನೀಡಿದ್ದಾರೆ ಎಂದರು.

ಸರ್ಕಾರ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಹಿಂದೆ ಬೀಳುವುದಿಲ್ಲ. ತಾಲೂಕಿನಲ್ಲಿ ಇಂದು ಬಿಸಿಎಂ, ಎಸ್ಸಿ ಎಸ್ಟಿ ಹಾಸ್ಟೆಲ್​ನ್ನು ಉದ್ಘಾಟಿಸಲಾಗಿದೆ. ತಾಲೂಕಿಗೆ ಇನ್ನೂ 5 ಹಾಸ್ಟೆಲ್​ಗಳ ಅವಶ್ಯಕತೆ ಇದ್ದು, ಅವುಗಳಿಗೆ ಅನುದಾನ ನೀಡುವಂತೆ ಸಂಬಂಧಪಟ್ಟ ಸಚಿವರೊಂದಿಗೆ ರ್ಚಚಿಸಿ ಅನುದಾನ ಬಿಡುಗಡೆಗೊಳಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ವಿದ್ಯಾರ್ಥಿಗಳು ವಿದ್ಯಾರ್ಥಿ ಸಂಘಗಳನ್ನು ಸ್ಥಾಪಿಸಿಕೊಂಡು ರಾಜಕೀಯ ಪ್ರವೇಶ ಮಾಡಬಾರದು. ವಿದ್ಯಾರ್ಥಿ ಜೀವನದಲ್ಲಿ ಸಮಯಕ್ಕೆ ಹೆಚ್ಚಿನ ಮಹತ್ವ ನೀಡಿ ಉತ್ತಮ ಶಿಕ್ಷಣ ಪಡೆದು ತಾಯಿ, ತಂದೆ, ಕುಟುಂಬಕ್ಕೆ ನೆರವಾಗಬೇಕು. ಎಲ್ಲ ಸಂಪನ್ಮೂಲಗಳಿಗಿಂತ ಮಾನವ ಸಂಪನ್ಮೂಲ ದೊಡ್ಡದು. ಅದಕ್ಕೆ ಬೇಕಾಗುವ ಸಂಸ್ಕಾರಗಳನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವನಾಗಿ ಪಕ್ಷಾತೀತವಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬೇಕಾಗುವ ಅನುದಾನ ಭರಿಸಲು ನಾನು ಸಿದ್ಧ. ಸೊರಬದಂತಹ ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಕರ್ಯವುಳ್ಳ ಪಾಲಿಟೆಕ್ನಿಕ್ ಕಾಲೇಜು ಸ್ಥಾಪಿಸಿ ಆ ಮೂಲಕ ಗ್ರಾಮಾಂತರ ವಿದ್ಯಾರ್ಥಿಗಳು ದೇಶ-ವಿದೇಶದಲ್ಲಿ ಉದ್ಯೋಗ ಪಡೆಯುವಂತೆ ಮಾಡಿದ ಮಾಜಿ ಮುಖ್ಯಮಂತ್ರಿ ದಿ. ಎಸ್.ಬಂಗಾರಪ್ಪ ಅವರ ಶ್ರಮವನ್ನು ಜನತೆ ಎಂದಿಗೂ ಮರೆಯಬಾರದು ಎಂದರು.

ಶಾಸಕ ಕುಮಾರ್ ಬಂಗಾರಪ್ಪ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷೆ ನಯನಾ ಹೆಗಡೆ, ಸದಸ್ಯ ನಾಗರಾಜ ಚಿಕ್ಕಸವಿ, ಪಪಂ ಅಧ್ಯಕ್ಷ ಬೀಬಿ ಜುಲೇಖಾ, ಸದಸ್ಯರಾದ ಮಹೇಶಗೌಳಿ, ಎಂ.ಡಿ.ಉಮೇಶ, ಶ್ರೀರಂಜಿನಿ, ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಸಿಇಒ ಶಿವರಾಮೇಗೌಡ, ಪ್ರಾಚಾರ್ಯ ಜಯಪ್ಪ, ರವಿಶಂಕರ, ವಾಸುದೇವ ಅಪ್ಪಾಜಿ, ಜಂಗಮಶೆಟ್ಟಿ, ನಾಗಪ್ಪ ವಕೀಲ, ಫಯಾಜ್ ಅಹ್ಮದ್ ಇದ್ದರು.

ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಇದಕ್ಕೂ ಮೊದಲು ತತ್ತೂರಿನಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ, ಆನವಟ್ಟಿಯಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದ ಗುದ್ದಲಿ ಪೂಜೆ, ಮೂಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ, ಓಟೂರಿನಲ್ಲಿ ಎಎನ್​ಎಂ ವಸತಿಗೃಹಗಳನ್ನು ಸಚಿವರು ಉದ್ಘಾಟಿಸಿದರು.