ಸರ್ಕಾರಿ ಶಾಲೆಗಳ ವಿಲೀನ ಕೈಬಿಟ್ಟ ಸರ್ಕಾರ

| ರುದ್ರಣ್ಣ ಹರ್ತಿಕೋಟೆ

ಬೆಂಗಳೂರು: ಸಾರ್ವಜನಿಕರು ಹಾಗೂ ಶಿಕ್ಷಣ ವಲಯದಿಂದ ಎದುರಾದ ಭಾರೀ ವಿರೋಧಕ್ಕೆ ಮಣಿದಿರುವ ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಬಜೆಟ್ ಘೋಷಣೆಯಿಂದ ಹಿಂದೆ ಸರಿದಿದೆ. ಬದಲಿಗೆ ಆರ್​ಟಿಇ ಅಡಿ ಸರ್ಕಾರಿ ಶಾಲೆಗಳಿಗೆ ಮೊದಲ ಆದ್ಯತೆ ನೀಡಿ ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವ ನಿರ್ಧಾರಕ್ಕೆ ಬಂದಿದೆ.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜುಲೈನಲ್ಲಿ ಮಂಡಿಸಿದ್ದ ಬಜೆಟ್​ನಲ್ಲಿ 28,847 ಸರ್ಕಾರಿ ಶಾಲೆಗಳನ್ನು ಒಂದು ಕಿಮೀ ವ್ಯಾಪ್ತಿಯಲ್ಲಿರುವ 8,530 ಶಾಲೆ ಗಳಲ್ಲಿ ವಿಲೀನ ಮಾಡುವುದಾಗಿ ಘೋಷಿಸಿದ್ದರು. ಸರ್ಕಾರದ ಈ ನಿರ್ಧಾರದ ವಿರುದ್ಧ ವಿರೋಧ ವ್ಯಕ್ತವಾಗಿತ್ತು. ಸಾರ್ವಜನಿಕರು, ಶಿಕ್ಷಣ ತಜ್ಞರು ಸರ್ಕಾರಿ ಶಾಲೆಗಳನ್ನು ಮುಚ್ಚುವುದು ಸರಿಯಲ್ಲ ಎಂದು ವಾದಿಸಿದ್ದರು. ಇದು ಕನ್ನಡವಿರೋಧಿ ಧೋರಣೆ, ಸರ್ಕಾರ ಖಾಸಗಿ ಶಾಲೆಗಳ ಲಾಬಿಗೆ ಮಣಿದು ಈ ನಿರ್ಧಾರಕ್ಕೆ ಬಂದಿದೆ ಎಂಬ ಟೀಕೆಗಳೂ ವ್ಯಕ್ತವಾಗಿದ್ದವು.

ಏನಾಗಿತ್ತು: ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ಹತ್ತಿರದ ಶಾಲೆಗಳಲ್ಲಿ ವಿಲೀನ ಮಾಡುವ ಪ್ರಕ್ರಿಯೆ 2011ರಲ್ಲಿಯೇ ಆರಂಭವಾಗಿತ್ತಾದರೂ, ಅಲ್ಲೊಂದು ಇಲ್ಲೊಂದು ಶಾಲೆಗಳನ್ನು ವಿಲೀನ ಮಾಡುವ ಕಾರ್ಯ ನಡೆದಿದೆ. ಆದರೆ ಕುಮಾರಸ್ವಾಮಿ ಒಮ್ಮೆಗೆ 28,847 ಶಾಲೆಗಳನ್ನು ವಿಲೀನ ಮಾಡುವ ನಿರ್ಧಾರಕ್ಕೆ ಬಂದಿದ್ದರು. ಈ ರೀತಿಯಾದರೆ ಸರ್ಕಾರಿ ಶಾಲೆಗಳೇ ಇಲ್ಲದಂತಾಗಿ ಬಡವರು ಖಾಸಗಿ ಶಾಲೆಗಳ ಮೇಲೆ ಅವಲಂಬಿತರಾಗಬೇಕಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ರಾಜ್ಯದಲ್ಲಿ 1 ರಿಂದ 10 ಮಕ್ಕಳಿರುವ ಸುಮಾರು 4,800 ಶಾಲೆಗಳಿದ್ದು, ಒಟ್ಟಾರೆ 30 ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆಯೂ ಇದೆ. ಸಮಸ್ಯೆಗಳನ್ನು ಪರಿಹರಿಸಿ ಶಾಲೆಗಳ ಬಲವರ್ಧನೆ ಮಾಡಬೇಕೇ ವಿನಾ ಮುಚ್ಚುವುದು ಸರಿಯಲ್ಲವೆಂಬ ವಾದ ಸಹ ಇತ್ತು. ಸರ್ಕಾರ ವಿಲೀನಕ್ಕೆ ಮುಂದಾಗಿರುವ ಶಾಲೆಗಳಲ್ಲಿ 25,321 ಶಿಕ್ಷಕರು ಹಾಗೂ 3.5 ಲಕ್ಷ ವಿದ್ಯಾರ್ಥಿಗಳು ಇದ್ದರು. ಬಹುತೇಕ ಏಕೋಪಾಧ್ಯಾಯ ಶಾಲೆಗಳಾಗಿದ್ದವು. ವಿದ್ಯಾರ್ಥಿಗಳ ಸಂಖ್ಯೆ ಸರಾಸರಿ 12.5ರಷ್ಟು ಇತ್ತು. ಬಜೆಟ್​ನಲ್ಲಿ 28,847 ಶಾಲೆಗಳ ವಿಲೀನಕ್ಕೆ ಘೋಷಣೆಯಾಗಿದ್ದರೂ ಶಿಕ್ಷಣ ಇಲಾಖೆ ತಕ್ಷಣಕ್ಕೆ 14,712 ಶಾಲೆಗಳನ್ನು ವಿಲೀನ ಮಾಡಲು ಪಟ್ಟಿ ಸಿದ್ಧ ಪಡಿಸಿತ್ತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ವರದಿ ನೀಡಿದೆ. ಸರ್ಕಾರಿ ಶಾಲೆಗಳನ್ನು ವಿಲೀನ ಮಾಡಬಾರದೆಂಬುದು ಪ್ರಾಧಿಕಾರದ ಒತ್ತಾಯವೂ ಆಗಿತ್ತು. ಬಜೆಟ್ ಘೋಷಣೆ ಕೈ ಬಿಟ್ಟಿರುವುದಕ್ಕೆ ಸರ್ಕಾರವನ್ನು ಅಭಿನಂದಿಸುತ್ತೇನೆ. ಸಬಲೀಕರಣ ವರದಿಯನ್ನು ಪೂರ್ಣ ಜಾರಿ ಮಾಡಬೇಕೆಂದು ಒತ್ತಾಯಿಸುತ್ತೇನೆ.

| ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ

ವಿರೋಧ ಏಕಿತ್ತು?: ಸರ್ಕಾರಿ ಶಾಲೆಗಳನ್ನು ಮುಚ್ಚಿದರೆಅಲ್ಲಿ ಖಾಸಗಿ ಶಾಲೆಗಳ ಹಾವಳಿ ಹೆಚ್ಚಾ ಗುತ್ತದೆ. 2016 ರಲ್ಲಿ ಸರ್ಕಾರ ಕೆಲ ಶಾಲೆಗಳನ್ನು ಮುಚ್ಚಿದ್ದು ಅಂತಹ ಕಡೆ ಖಾಸಗಿ ಶಾಲೆಗಳು ಹೆಚ್ಚಾಗಿ ಹುಟ್ಟಿಕೊಂಡಿವೆ. ಸರ್ಕಾರಿಶಾಲೆಗಳ ಕಟ್ಟಡಗಳು ಪಾಳು ಬೀಳುತ್ತವೆ ಎಂಬ ಕಾರಣಕ್ಕೆ ವಿಲೀನಕ್ಕೆ ವಿರೋಧ ಬಂದಿತ್ತು.

ಸಬಲೀಕರಣ ವರದಿ ಜಾರಿ ಇಲ್ಲ: ಸರ್ಕಾರಿ ಶಾಲೆಗಳ ಸಬಲೀಕರಣದ ಉದ್ದೇಶದಿಂದ ಕನ್ನಡ ಅಭಿವೃದಿಟಛಿ ಪ್ರಾಧಿಕಾರ ವರದಿಯೊಂದನ್ನು ಸರ್ಕಾರಕ್ಕೆ ಸಲ್ಲಿಸಿದೆ. ಸರ್ಕಾರಿ ನೌಕರರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮಕ್ಕಳು ಸರ್ಕಾರಿ ಶಾಲೆಗಳಲ್ಲಿಯೇ ಓದಿಸಬೇಕೆಂದು ವರದಿ ಶಿಫಾರಸು ಮಾಡಿದೆ. ಆರ್​ಟಿಇ ರದ್ದತಿಗೂ ಹೇಳಿತ್ತು. ಸರ್ಕಾರಿ ಶಾಲೆ ನಡೆಸಲು ವಿದ್ಯಾರ್ಥಿಗಳ ಸಂಖ್ಯೆ ಮಾನದಂಡ ಆಗಬಾರದೆಂದು ತಿಳಿಸಿತ್ತು. ಆ ವರದಿಯ ಬಹುತೇಕ ಅಂಶಗಳು ಜಾರಿಗೆ ಬಂದಿಲ್ಲ. ಆರ್​ಟಿಇಯಲ್ಲಿ ಈಗ ಸರ್ಕಾರಿ ಶಾಲೆಗೆ ಆದ್ಯತೆ ನೀಡಲಾಗಿದೆ. ಸರ್ಕಾರಿ ಶಾಲೆಗಳು ಇರುವ ಕಡೆ ಖಾಸಗಿ ಶಾಲೆಗೆ ಆರ್​ಟಿಇ ನೀಡುವುದಿಲ್ಲವೆಂಬ ಕೇರಳ ಮಾದರಿ ಅನುಸರಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳನ್ನು ಬಲಪಡಿಸು ವುದು ಸರ್ಕಾರಕ್ಕೆ ಅನಿವಾರ್ಯವೂ ಆಗಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ಹೇಳುತ್ತವೆ.

ವರದಿಯಲ್ಲಿ ಸ್ಪಷ್ಟನೆ: ಮುಖ್ಯಮಂತ್ರಿ ಕುಮಾರಸ್ವಾಮಿ ಫೆ.8ರಂದು ವಿಧಾನಸಭೆಯಲ್ಲಿ ಮಂಡಿಸಿರುವ ಕಳೆದ ಬಜೆಟ್ ಘೋಷಣೆಗಳ ಮೇಲೆ ಕೈಗೊಂಡ ಕ್ರಮದ ವರದಿಯಲ್ಲಿ ಸರ್ಕಾರಿ ಶಾಲೆಗಳ ವಿಲೀನ ಪ್ರಸ್ತಾಪ ಕೈಬಿಟ್ಟಿರುವುದಾಗಿ ಸ್ಪಷ್ಟವಾಗಿ ತಿಳಿಸಿದ್ದಾರೆ.

ಆಯಾ ಭಾಗದ ಮಕ್ಕಳಿಗೂ ಸರ್ಕಾರಿ ಶಾಲೆಯ ಅಗತ್ಯ ಬೀಳುತ್ತದೆ. ಯಾರನ್ನೂ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಆ ಪ್ರಸ್ತಾವನೆಯನ್ನೇ ಕೈಬಿಡಲಾಗಿದೆ.

| ಎಸ್.ಆರ್. ಉಮಾಶಂಕರ್, ಪ್ರಧಾನ ಕಾರ್ಯದರ್ಶಿ, ಶಿಕ್ಷಣ ಇಲಾಖೆ