ನಿವೇಶನರಹಿತರಿಗೆ ನಿವೇಶನ ಕಲ್ಪಿಸಲು ಆಗ್ರಹ

ವಿಜಯಪುರ: ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಉಚಿತ ನಿವೇಶನ ಅಥವಾ ಕಡಿಮೆ ದರದಲ್ಲಿ ವಸತಿ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ನಿವೇಶನರಹಿತರ ಹೋರಾಟ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ್ದ ನಿವೇಶನರಹಿತರ ಹೋರಾಟ ಸಮಿತಿ ಪದಾಧಿಕಾರಿಗಳು ಜಿ+ ಮನೆಗಳ ಹಂಚಿಕೆಯಲ್ಲಿ ಪಾರದರ್ಶಕತೆ ಕಾಪಾಡಲು ಕ್ರಮಕೈಗೊಳ್ಳಬೇಕು. ಮನೆ ಹಂಚಿಕೆ ಮಾಡುವಲ್ಲಿ ಅವ್ಯವಹಾರ, ಮಧ್ಯವರ್ತಿಗಳ ಹಾವಳಿ ತಡೆಗಟ್ಟಲು ಕಾನೂನು ರೀತಿ ಕ್ರಮಕೈಗೊಳ್ಳಬೇಕು. ಸಂಬಂಧಿಸಿದ ಫಲಾನುಭವಿಗಳಿಗೆ ಸರ್ಕಾರಿ ಬ್ಯಾಂಕ್‌ಗಳಿಂದ ಸಾಲ ಒದಗಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಜಿ+ ಮನೆಗಳ ಕಾಮಗಾರಿಯಲ್ಲಿ ಕಳಪೆಯಾಗದಂತೆ ಸೂಕ್ತ ಕ್ರಮಕೈಗೊಳ್ಳಬೇಕು. ವಿಜಯಪುರ ಸುತ್ತಮುತ್ತಲಿನ ಸರ್ಕಾರಿ ಜಮೀನುಗಳಲ್ಲಿ ಅರ್ಹ ನಿವೇಶನರಹಿತರಿಗೆ ನಿವೇಶನ ಒದಗಿಸಬೇಕು. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಅರ್ಜಿ ಹಾಕಿರುವ 20ಸಾವಿರಕ್ಕೂ ಹೆಚ್ಚು ಜನರ ಸಮೀಕ್ಷೆ ನಡೆಸಿ ಅರ್ಹರ ಪಟ್ಟಿ ತಯಾರಿಸಿ, ಆದ್ಯತೆ ಮೇರೆಗೆ ನಿವೇಶನ ಅಥವಾ ವಸತಿ ಒದಗಿಸಲು ಕ್ರಮಕೈಗೊಳ್ಳಬೇಕು ಎಂಬಿತ್ಯಾದಿ ಬೇಡಿಕೆಗಳಿಗೆ ಆಗ್ರಹಿಸಿ ಸಮಿತಿ ಜಿಲ್ಲಾ ಸಂಚಾಲಕ ಬಾಳು ಜೇವೂರ ಹಾಗೂ ಜಿಲ್ಲಾ ಸಹ ಸಂಚಾಲಕ ಪೀರಾ ಜಮಾದಾರ ಮನವಿ ಸಲ್ಲಿಸಿದರು.

Leave a Reply

Your email address will not be published. Required fields are marked *