ಇಂದಿನಿಂದ ಮಹಿಳಾ ಸಾಹಿತ್ಯ ಸಮ್ಮೇಳನ

ಚಿಕ್ಕಮಗಳೂರು: ರಾಜ್ಯಮಟ್ಟದ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಮಾ.2 ಮತ್ತು 3 ರಂದು ಚಿಕ್ಕಮಗಳೂರು ನಗರ ಸಾಕ್ಷಿಯಾಗಲಿದ್ದು, ಸಾರಸ್ವತ ಲೋಕದ ಲೇಖಕಿಯರು ಪಾಲ್ಗೊಳ್ಳುವ ಮೂಲಕ ವಿಶೇಷ ಸಾಂಸ್ಕೃತಿಕ ಲೋಕ ಅನಾವರಣಗೊಳ್ಳಲಿದೆ.

ಇನ್ಪೋಸಿಸ್ ಮುಖ್ಯಸ್ಥೆ ಡಾ. ಸುಧಾಮೂರ್ತಿ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿದ್ದು, ಬೆಳಗ್ಗೆ 9 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭಗೊಳ್ಳಲಿದ್ದು, ಸಾರೋಟು ಜತೆಗೆ ಡೊಳ್ಳು ಕುಣಿತ, ವೀರಗಾಸೆ, ಚಿಟ್ಟಿಮೇಳ, ಎಲ್ಲ ಬಗೆಯ ಪಟ ಕುಣಿತ, ಪೂಜಾ ಕುಣಿತ ಹೀಗೆ ವಿವಿಧ ಕಲಾತಂಡಗಳು ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಮೆರುಗು ನೀಡಲಿವೆ. ವಿಶೇಷವೆಂದರೆ ಕಲಾತಂಡಗಳಲ್ಲಿಯೂ ಮಹಿಳಾ ಕಲಾವಿದರಷ್ಟೇ ಗಮನ ಸೆಳೆಯಲಿದ್ದಾರೆ.

ಮೆರವಣಿಗೆಯು ನಗರದ ಎಂಜಿ ರಸ್ತೆಯ ಶ್ರೀ ಪ್ರಸನ್ನ ಗಣಪತಿ ದೇವಾಲಯದಿಂದ ಆರಂಭಗೊಂಡು ನಾಯ್ಡು ಬೀದಿ, ತೊಗರಿಹಂಕಲ್ ವೃತ್ತದ ಮೂಲಕ ಆಗಮಿಸಿ ಸಮಾರಂಭ ನಡೆಯುವ ಕುವೆಂಪು ಕಲಾಮಂದಿರ ಸೇರಲಿದೆ.

25 ಲಕ್ಷ ರೂ.ವೆಚ್ಚ ನಿರೀಕ್ಷೆ:
ಸಮ್ಮೇಳನಕ್ಕೆ ಈಗಾಗಲೇ ಕೇಂದ್ರ ಕನ್ನಡಸಾಹಿತ್ಯ ಪರಿಷತ್​ನಿಂದ 10 ಲಕ್ಷ ರೂ. ನೀಡಿದ್ದು, ಒಟ್ಟು 25 ಲಕ್ಷ ರೂ.ವರೆಗೆ ವೆಚ್ಚವಾಗುವ ನಿರೀಕ್ಷೆ ಇದೆ. ಸಮ್ಮೇಳನದಲ್ಲಿ ಮಾ.2 ರಂದು ಬೆಳಗ್ಗೆ ಉದ್ಘಾಟನೆ, ಹಗಲು ವಿವಿಧ ಗಮನಾರ್ಹ ಗೋಷ್ಠಿಗಳು, ಎರಡೂ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಮಾರೋಪ ಸಮಾರಂಭ ನಡೆಯಲಿವೆ. ಎರಡು ದಿನವೂ ಕಾಲ ಊಟ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ನಗರದ 6 ವಸತಿಗೃಹಗಳಲ್ಲಿ 115 ಕೊಠಡಿಗಳನ್ನು ಕಾಯ್ದಿರಿಸಲಾಗಿದ್ದು, ಗಣ್ಯರು ತಂಗಿದ್ದಾರೆ.  
ರಾಜ್ಯ ಸಮಿತಿ ಕಾರ್ಯಕಾರಿ ಸದಸ್ಯರು, ಜಿಲ್ಲಾಧ್ಯಕ್ಷರು, 5 ಗಡಿನಾಡ ಘಟಕಗಳ ಅಧ್ಯಕ್ಷರು ಸೇರಿ 44 ಪದಾಧಿಕಾರಿಗಳು, 60 ಲೇಖಕಿಯರು, ಕವಯತ್ರಿಯರು, ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಉದ್ಘಾಟನೆ ವೇಳೆ ಜಿಲ್ಲೆಯ ಜನಪ್ರತಿನಿಧಿಗಳು ಮಾತ್ರವಲ್ಲದೆ, ಜಿಲ್ಲೆಯ ಸಾಹಿತಿಗಳು, ಕಲಾವಿದರು, ಕವಯತ್ರಿಯರು ಹಾಗೂ ಸಾಧಕಿಯರಿಗೂ ಆದ್ಯತೆ ನೀಡಲಾಗುತ್ತಿದೆ.