More

    ತಿಂಗಳೊಳಗೆ ಅರ್ಚಕರ ಸಮಸ್ಯೆಗೆ ಪರಿಹಾರ ಮುಜರಾಯಿ ಸಚಿವ ಕೋಟ ಶ್ರೀನಿವಾಸಪೂಜಾರಿ ಹೇಳಿಕೆ

    ಚಿಕ್ಕಬಳ್ಳಾಪುರ : ಆಲಯಕ್ಕೆ ಬರುವ ಭಕ್ತರಿಗೆ ಧೈರ್ಯ ತುಂಬಿ ಕಳುಹಿಸಬೇಕು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅರ್ಚಕರಿಗೆ ಸಲಹೆ ನೀಡಿದರು.
    ನಗರದ ಶ್ರೀದೇವಿ ಪ್ಯಾಲೇಸ್‌ನಲ್ಲಿ ರಾಜ್ಯ ಧಾರ್ಮಿಕ ದತ್ತಿ ದೇವಾಲಯಗಳ ಅರ್ಚಕರು ಮತ್ತು ಆಗಮಿಕರ ಸಂಘ ಬುಧವಾರ ಆಯೋಜಿಸಿದ್ದ ಜಿಲ್ಲಾ ಅರ್ಚಕರು ಮತ್ತು ಆಗಮಿಕರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
    ಆಲಯಗಳು ದುಃಖ, ದುಮ್ಮಾನ, ಆತಂಕ ನಿವಾರಣೆಯ ಆಧ್ಯಾತ್ಮಿಕ ತಾಣಗಳು. ಜನರು ಹೊಸ ಬದುಕು ಕಟ್ಟಿಕೊಳ್ಳಲು ಆತ್ಮಸ್ಥೈರ್ಯ ಮೂಡಿಸುತ್ತವೆ. ಇದಕ್ಕೆ ಅರ್ಚಕರು ಸಮಸ್ಯೆ ಹೇಳಿಕೊಳ್ಳುವ ಭಕ್ತರಿಗೆ ಧೈರ್ಯ ತುಂಬಬೇಕು. ದೇವರು ಮತ್ತು ಭಕ್ತರ ನಡುವೆ ಸಂಪರ್ಕ ಸೇತುವೆಯಾಗಬೇಕು ಎಂದರು.
    ತಿಂಗಳೊಳಗೆ ವಿಧಾನಸೌಧದಲ್ಲಿ ಸಭೆ ಕರೆದು, ಅರ್ಚಕರ ಸಮಸ್ಯೆಗಳ ಕುರಿತು ಚರ್ಚಿಸಲಿದ್ದು ಮುಖ್ಯಮಂತ್ರಿಗಳ ಗಮನಸೆಳೆದು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
    ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ರಾಜ್ಯದ 110 ದೇವಾಲಯಗಳಲ್ಲಿ ಏ.26 ರಂದು ಸಾಮೂಹಿಕ ವಿವಾಹ ನಡೆಸಲಾಗುವುದು. ತಲಾ ಒಂದು ಜೋಡಿಗೆ 55 ಸಾವಿರ ರೂ ನೀಡಲಾಗುತ್ತದೆ ಎಂದರು.
    ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಮಾತನಾಡಿ, ಹಿಂದು ಧರ್ಮ, ದೇಶದ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳು ಇಂದಿಗೂ ಉಳಿದಿರಲು ಅರ್ಚಕರೇ ಪ್ರಮುಖ ಕಾರಣ. ನಗರ ಪ್ರದೇಶ ಅನೇಕ ದೇವಾಲಯಗಳಿಗೆ ಹೆಚ್ಚಿನ ಆದಾಯ ಬರುತ್ತಿದೆ. ಹಾಗೆಯೇ ಕುಗ್ರಾಮದಲ್ಲಿನ ಕೆಲ ದೇವಾಲಯಗಳಲ್ಲಿ ದೀಪ ಹಚ್ಚಲು ಎಣ್ಣೆಗೆ ಹಣ ಸಿಗುತ್ತಿಲ್ಲ ಎಂದು ವಿಷಾದಿಸಿದರು.
    ಹಿಂದೆ ರಾಜಮಹಾರಾಜರ ಕಾಲದಲ್ಲಿ ಆಲಯಗಳ ಆದಾಯಕ್ಕಾಗಿ ಜಮೀನು, ದೇಣಿಗೆ ಸೇರಿ ಅಗತ್ಯ ನೆರವು ನೀಡಲಾಗುತ್ತಿತ್ತು. ಆದರೆ, ಈಗ ಸಂಪನ್ಮೂಲ ಕೊರತೆ ಇದೆ. ಈ ನಿಟ್ಟಿನಲ್ಲಿ ಆಲಯಗಳ ಅಭಿವೃದ್ಧಿಗೆ ಸರ್ಕಾರದಿಂದ ಸೂಕ್ತ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.
    ಶಾಸಕ ಡಾ ಕೆ.ಸುಧಾಕರ್ ಮಾತನಾಡಿ, ಪ್ರಸ್ತುತ ಜಾತಿಗೊಂದರಂತೆ ಆಲಯಗಳು ನಿರ್ಮಾಣವಾಗುತ್ತಿದ್ದು ಸಮಾಜದಲ್ಲಿ ಗುರುತಿಸಿಕೊಳ್ಳುವಲ್ಲಿ ಮತೀಯ ಅಂಶಗಳೇ ಪ್ರಮುಖವಾಗುತ್ತಿವೆ. ಇದರ ಬದಲಿಗೆ ಧರ್ಮ, ಸಂಸ್ಕೃತಿ, ಪರಂಪರೆ, ಏಕತೆ ಉಳಿಸುವ ಕೆಲಸವಾಗಬೇಕು ಎಂದರು.
    ಮಹರ್ಷಿ ಆನಂದ ಗುರೂಜಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಲಿಂಗಪ್ಪ, ಮಾಜಿ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್, ತಾಲೂಕು ಮಾಜಿ ಅಧ್ಯಕ್ಷ ಅಗಲಗುರ್ಕಿ ಚಂದ್ರಶೇಖರ್ ಮತ್ತಿತರರು ಇದ್ದರು.
    ಅರ್ಚಕರ ಸಮಸ್ಯೆಗಳ ಪ್ರಸ್ತಾಪ : ಸರ್ಕಾರ ನೀಡುತ್ತಿರುವ ತಸ್ತಿಕ್ ಹಣ ಬಿಡುಗಡೆ ವಿಳಂಬವಾಗುತ್ತಿದೆ. ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಸರ್ಮಪಕವಾಗಿ ಸ್ಪಂದಿಸುತ್ತಿಲ್ಲ. ಸಿ ದರ್ಜೆ ಆಲಯದ ಪರ್ಯಾಯ ಅರ್ಚಕರಿಗೆ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ ಎಂದು ರಾಜ್ಯ ಧಾರ್ಮಿಕ ದತ್ತಿ ದೇವಾಲಯಗಳ ಅರ್ಚಕರ ಮತ್ತು ಆಗಮಿಕರ ಸಂಘದ ಅಧ್ಯಕ್ಷ ಉ.ವೇ.ವಿದ್ವಾನ್ ಡಾ ಜಾನಕಿರಾಮ್ ತಿಳಿಸಿದರು.
    ಅರ್ಚಕರಿಗೆ ವಸತಿ ಯೋಜನೆಯಡಿ ನಿವೇಶನ, ಪ್ರತಿ ವರ್ಷ ಎರಡು ಜತೆ ಸಮವಸ, ಗುರುತಿನ ಚೀಟಿ ವಿತರಣೆ, ಆಲಯಗಳ ಜೀರ್ಣೋದ್ಧಾರ, ಮೂಲಸೌಕರ್ಯ ಕಲ್ಪಿಸುವಿಕೆ, ಸ್ವಚ್ಛತೆಗೆ ಆದ್ಯತೆ, ಪ್ರತಿ ತಿಂಗಳು ತಸ್ತಿಕ್ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts