ರಾಜ್ಯ ಕಾಂಗ್ರೆಸ್​​​​ ಅತೃಪ್ತರ ಬಂಡಾಯ ದೆಹಲಿಗೆ ಶಿಫ್ಟ್

ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಕಂಟಕವಾಗಿ ಪರಿಣಮಿಸಿರುವ ಕಾಂಗ್ರೆಸ್​ ಶಾಸಕರ ಅತೃಪ್ತಿಯನ್ನು ಶಮನ ಗೊಳಿಸಲು ಕಾಂಗ್ರೆಸ್​ ನಾಯಕರು ದೆಹಲಿಗೆ ತೆರಳಿದ್ದಾರೆ. ಇಂದು ಕೈ ಹೈಕಾಂಡ್​ ಜತೆ ಚರ್ಚಿಸಿ ಸಮಸ್ಯೆಯನ್ನು ಇತ್ಯರ್ಥ ಪಡಿಸುವ ಸಾಧ್ಯತೆ ಇದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಜಿ. ಪರಮೇರ್ಶವರ್​, ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಅವರು ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಮಾಜಿ ಸಚಿವ ಸತೀಶ್​ ಜಾರಕಿಹೊಳಿ ಸಹ ದೆಹಲಿಗೆ ತೆರಳಲಿದ್ದು, ರಾಹುಲ್​ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

ಇಂದು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರೊಂದಿಗೆ ಕೈ ನಾಯಕರು ಚರ್ಚೆ ನಡೆಸಲಿದ್ದು, ಜಾರಕಿಹೊಳಿ ಸಹೋದರರ ಸಮಸ್ಯೆ ಪರಿಹಾರಕ್ಕೆ ಮತ್ತು ವಿಧಾನ ಪರಿಷತ್​ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಕುರಿತು ಚರ್ಚೆ ನಡೆಯಲಿದೆ. ಜತೆಗೆ ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳ ನೇಮಕಾತಿ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.