More

    ಮಾಸಾಂತ್ಯಕ್ಕೆ ವಿಸ್ತರಣೆ?: ವಿದೇಶದಿಂದ ವಾಪಸ್ಸಾದ ಬಳಿಕ ಮತ್ತೊಂದು ಸುತ್ತಿನ ಚರ್ಚೆ

    ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸದ್ಯಕ್ಕೆ ಡೋಲಾಯಮಾನ. ಈ ವಿಷಯವಾಗಿ ವರಿಷ್ಠರ ಮಟ್ಟದಲ್ಲಿ ನಡೆದ ಚರ್ಚೆಯ ಸ್ವರೂಪ ಗಮನಿಸಿದರೆ, ಮಾಸಾಂತ್ಯಕ್ಕೆ ವಿಸ್ತರಣೆ ಖಚಿತವೆಂದು ಉನ್ನತ ಮೂಲಗಳು ತಿಳಿಸಿವೆ.

    ವಿದೇಶ ಪ್ರಯಾಣಕ್ಕೆ ಮುನ್ನ ಸಿಎಂ ಯಡಿಯೂರಪ್ಪ ಆಡಿರುವ ವಿಶ್ವಾಸಭರಿತ ಮಾತುಗಳು ಈ ವಿಷಯಕ್ಕೆ ಪುಷ್ಠಿ ನೀಡಿದೆ. ‘ಅರ್ಹ ಶಾಸಕರ’ ದುಗುಡ-ದುಮ್ಮಾನ ದೂರ ಮಾಡುವ ಕಸರತ್ತು ಸಿಎಂ ಹೇಳಿಕೆ ಹಿಂದಿದ್ದರೂ ಪಕ್ಷದ ಮೂಲ ಆಕಾಂಕ್ಷಿಗಳಲ್ಲಿ ಉತ್ಸಾಹ ಹೆಚ್ಚಿಸಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುವ ಮಾರ್ಗಮಧ್ಯೆ ವಿಮಾನದಲ್ಲಿ ಅಮಿತ್ ಷಾ ಜತೆ ಸಚಿವ ಸಂಪುಟ ವಿಸ್ತರಣೆ ಕುರಿತು ಸಿಎಂ ರ್ಚಚಿಸಿದ್ದಾರೆ ಎನ್ನಲಾಗಿದ್ದು, ದಾವೋಸ್​ನಿಂದ ವಾಪಸ್ಸಾದ ಬಳಿಕ ರಾಜ್ಯ ನಾಯಕರ ಜತೆ ಮತ್ತೊಮ್ಮೆ ರ್ಚಚಿಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತದ ಪಟ್ಟಿಯೊಂದಿಗೆ ದೆಹಲಿಗೆ ತೆರಳಲಿದ್ದಾರೆ. ಸಂಪುಟ ಪುನಾರಚನೆಯಲ್ಲಿ ಸೇರಬಹುದಾದ ಸಚಿವರ ಪಟ್ಟಿಯೊಂದು ಈಗಾಗಲೇ ಅಮಿತ್ ಷಾ ಕೈ ಸೇರಿದೆ. ಆದರೆ, ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ.ನಡ್ಡಾ ಜ.20ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಹೀಗಾಗಿ ಸಿಎಂ ಸ್ವದೇಶಕ್ಕೆ ಮರಳಿದ ಬಳಿಕ ದೆಹಲಿಗೆ ತೆರಳಿದಾಗ ಷಾ ಹಾಗೂ ನಡ್ಡಾ ಜತೆಗೂ ಸಮಾಲೋಚಿಸಿ ಅನುಮತಿ ಪಡೆಯಲಿದ್ದಾರೆ.

    ಋಣ ತೀರಿಸುವುದು ಮುಖ್ಯ

    ಮೈಸೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರ ಋಣ ಪಕ್ಷದ ಮೇಲಿದೆ. ಅವರಿಂದಾಗಿಯೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಅವರ ಋಣ ತೀರಿಸುವ ಕೆಲಸ ಮಾಡುತ್ತೇವೆ. ಅವರನ್ನು ಸಚಿವರನ್ನಾಗಿ ಮಾಡುವುದು ಅಥವಾ ಸ್ಥಾನಮಾನ ಕೊಡುವುದು ಮುಖ್ಯವಲ್ಲ. ಅವರ ಋಣ ತೀರಿಸುವುದು ಮುಖ್ಯ. ಆದಷ್ಟು ಬೇಗ ಪೂರ್ಣ ಪ್ರಮಾಣದ ಸಚಿವ ಸಂಪುಟ ಆಗಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

    ಎಲ್ಲರಿಗೂ ಮಂತ್ರಿಗಿರಿ ಖಾತರಿಯಿಲ್ಲ

    ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಸಚಿವ ಪದವಿ ಖಾತರಿ ಇಲ್ಲ. ಡಿಸಿಎಂ ಹುದ್ದೆಗಳು ಮೂರರಿಂದ ನಾಲ್ಕಕ್ಕೇರಲಿವೆ. ಹಾಲಿ ಮೂವರ ಪೈಕಿ ಒಬ್ಬರನ್ನು ಕೈಬಿಟ್ಟು ಹೊಸದಾಗಿ ಇಬ್ಬರ ಸೇರ್ಪಡೆಯಾಗಲಿದ್ದು, ಪ್ರಬಲ ವಾಲ್ಮೀಕಿ ಸಮಾಜದ ನಾಯಕರೊಬ್ಬರಿಗೆ ಡಿಸಿಎಂ ಹುದ್ದೆ ಖಚಿತವಿಲ್ಲವೆನ್ನಲಾಗಿದೆ. ಪಕ್ಷದ ಮೂಲ ಆಕಾಂಕ್ಷಿಗಳ ಪೈಕಿ ನಾಲ್ವರಿಗೆ ಅವಕಾಶ ಸಿಗುವ ಸಾಧ್ಯತೆಗಳಿವೆ. ಹೀಗಾಗಿ ಹಾಲಿ ಸಚಿವರಲ್ಲಿ ಇಬ್ಬರನ್ನು ಕೈಬಿಟ್ಟರೂ ಅಚ್ಚರಿಯಿಲ್ಲ. ರಿಜ್ವಾನ್ ಅರ್ಷದ್​ರಿಂದ ತೆರವಾದ ಮೇಲ್ಮನೆ ಸದಸ್ಯತ್ವ ಲಕ್ಷ್ಮಣ ಸವದಿ ಪಾಲಾಗಲಿದೆ. ಎಂಟಿಬಿ ನಾಗರಾಜ್, ಎಚ್.ವಿಶ್ವನಾಥ್ ಮತ್ತು ಆರ್.ಶಂಕರ್ ಜೂನ್​ನಲ್ಲಿ ಎಂಎಲ್​ಸಿ ಆದ ನಂತರವೇ ಸಚಿವರಾಗಲಿದ್ದಾರೆ. ಸರ್ಕಾರ ಹಾಗೂ ಪಕ್ಷಕ್ಕೆ ಧಕ್ಕೆಯಾಗದ ರಾಜಿಸೂತ್ರ ಸಿದ್ಧಪಡಿಸುವ ಹೊಣೆ ಬಿಎಸ್​ವೈ ಹೆಗಲೇರಿದ್ದು, ವಿಳಂಬಕ್ಕೆ ಇದುವೇ ಕಾರಣವೆನ್ನಲಾಗಿದೆ.

    ಸಂಪುಟ ವಿಸ್ತರಣೆ ವೇಳೆ 17 ಜನರನ್ನು ಪರಿಗಣಿಸಲೇಬೇಕು. ಬಿಜೆಪಿ ದೊಡ್ಡ ಪಕ್ಷ. ಆದ್ದರಿಂದ ಒಡಕು ಧ್ವನಿಗಳು ಸಹಜ. ಯಾರು ಏನೇ ಮಾತನಾಡಿದರೂ ಸಂಪುಟ ವಿಸ್ತರಣೆ ಸಿಎಂ ವಿವೇಚನೆಗೆ ಬಿಟ್ಟ ವಿಚಾರ.

    | ಎಚ್.ವಿಶ್ವನಾಥ್ ಮಾಜಿ ಸಚಿವ

    ಚರ್ಚೆಯಾಗಿದೆ

    ಸಂಪುಟ ವಿಸ್ತರಣೆ ಸಂಬಂಧ ಅಮಿತ್ ಷಾ ಜತೆ ಬಿಎಸ್​ವೈ ಮಾತನಾಡಿದ್ದಾರೆ. ದಾವೋಸ್​ನಿಂದ ಮರಳಿದ ಕೂಡಲೇ ದಿಲ್ಲಿಗೆ ತೆರಳಿ ವರಿಷ್ಠರ ಜತೆ ರ್ಚಚಿಸುವರು. ಡಿಸಿಎಂ ಸ್ಥಾನ ಕುರಿತು ವರಿಷ್ಠರು ಹಾಗೂ ಮುಖ್ಯಮಂತ್ರಿ ನಿರ್ಣಯ ಕೈಗೊಳ್ಳುವರು. ಪಕ್ಷ ಹಾಗೂ ಸರ್ಕಾರದ ಹಿತದೃಷ್ಟಿಯಿಂದ ವರಿಷ್ಠರು ಸೂಕ್ತ ನಿರ್ಣಯ ಕೈಗೊಳ್ಳುವರು ಎಂದು ಡಿಸಿಎಂ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಸಂಪುಟ ವಿಸ್ತರಣೆ ಕುರಿತು ಅಮಿತ್ ಷಾ ಜತೆ ಚರ್ಚೆಯಾಗಿದೆ. ದಾವೋಸ್​ನಿಂದ ಮರಳಿದ ಬಳಿಕ ದೆಹಲಿಗೆ ತೆರಳಿ ಮತ್ತೊಮ್ಮೆ ರ್ಚಚಿಸಿ ವಿಸ್ತರಿಸಲು ನಿರ್ಧರಿಸಿರುವೆ.

    | ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts