More

    ಇದು ಬಿಜೆಪಿ ಸರ್ಕಾರದ ಚುನಾವಣಾ ಬಜೆಟ್​: ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ

    ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಂಡನೆ ಮಾಡಿರುವ ಬಜೆಟ್​, ಬಿಜೆಪಿ ಸರ್ಕಾರದ ಚುನಾವಣಾ ಬಜೆಟ್​ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟೀಕಾ ಪ್ರಹಾರ ನಡೆಸಿದರು.

    ಬಜೆಟ್​ ಮಂಡನೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಇನ್ನು ಎರಡು ತಿಂಗಳಲ್ಲಿ ಚುನಾವಣೆ ಮುಗಿಯುತ್ತದೆ. ಇದು ಬಿಜೆಪಿ ಸರ್ಕಾರದ ನಿರ್ಗಮನದ ಬಜೆಟ್. ಈ ಬಾರಿ ಬಜೆಟ್ ಗಾತ್ರ 3 ಲಕ್ಷ ರೂ. ದಾಟಿದೆ. ಆದರೆ, ಕಳೆದ ಬಜೆಟ್​ನಲ್ಲಿ ಏನೇನೂ ಕಾರ್ಯಕ್ರಮ ಘೋಷಣೆ ಮಾಡಿದ್ದರೂ ಅದರಲ್ಲಿ 57 ಕಾರ್ಯಕ್ರಮ ಅನುಷ್ಠಾನ ಮಾಡಿಲ್ಲ. ಪ್ರಣಾಳಿಕೆಯಲ್ಲಿ 600 ಭರವಸೆ ಕೊಟ್ಟಿದ್ದರು ಆದರೆ, ಶೇ. 90 ಭರವಸೆ ಈಡೇರಿಸಿಲ್ಲ ಎಂದು ಹೇಳಿದರು.

    ನಾನು ಕೊನೆಯ ಬಜೆಟ್ ಮಂಡಿಸಿದಾಗ ಸರ್ಕಾರದ ಸಾಧನೆ ಏನೇನು ಅಂತಾ ವಿವರಿಸಿದ್ದೆ ಆದರೆ, ಈ ಬಜೆಟ್​ನಲ್ಲಿ ಸಾಧನೆ ಎಲ್ಲಿಯೂ ಕಾಣಿಸಲಿಲ್ಲ. ಏನು ಸಾಧನೆ ಮಾಡಿದ್ದೇವೆ ಅಂತಾ ಹೇಳಲೇ ಇಲ್ಲ. ಜನರಿಗೆ ಬರೀ ಸುಳ್ಳು ಭರವಸೆ ಕೊಟ್ಟಿದ್ದನ್ನು ಬಿಟ್ಟರೆ, ಸಾಧನೆ ಏನು ಮಾಡಲಿಲ್ಲ. ನಾವು ಎಸ್ಸಿ-ಎಸ್ಟಿಗೆ ಯೋಜನೆಗೆ ಮೂವತ್ತು ಸಾವಿರ ಕೋಟಿ ಇಟ್ಟಿದ್ದೆವು. ಈಗಲೂ ಮುವತ್ತು ಸಾವಿರ ಕೋಟಿ ಇಟ್ಟಿದ್ದಾರೆ. ಬಜೆಟ್ ದೊಡ್ಡದಾದ್ರು ಹಣ ಮಾತ್ರ ಹೆಚ್ಚಳ ಮಾಡಿಲ್ಲ. ಐವತ್ತು ಸಾವಿರ ಕೋಟಿ ಎಸ್ಸಿ-ಎಸ್ಟಿಗೆ ಮಿಸಲಿಡಬೇಕಿತ್ತು. ಇದು ಎಸ್ಸಿ-ಎಸ್ಟಿಗೆ ಮಾಡಿದ ದೊಡ್ಡ ದ್ರೋಹ ಎಂದು ಕಿಡಿಕಾರಿದರು.

    ಒಟ್ಟು ಸಾಲ 5,64,896 ಕೋಟಿ ರೂ. ಅಂತಾ ಹೇಳಿದ್ದಾರೆ. ನಾನು ಇದ್ದಾಗ ೨ ಲಕ್ಷ 42 ಸಾವಿರ ಕೋಟಿ ರೂ. ಇತ್ತು. ಸಮ್ಮಿಶ್ರ ಸರ್ಕಾರ 41 ಸಾವಿರ ಕೋಟಿ ರೂ. ಸಾಲ ಮಾಡಿತ್ತು. ಬಿಜೆಪಿ ಸರ್ಕಾರದಲ್ಲಿ 2 ಲಕ್ಷ 54 ಸಾವಿರ ‌ಕೋಟಿ ರೂ. ಸಾಲ‌ ಮಾಡಿದ್ದಾರೆ. ನಾವು ಐದು ವರ್ಷದಲ್ಲಿ ಒಂದು ಲಕ್ಷ ಕೋಟಿ ರೂ. ಸಾಲ ಮಾಡಿದ್ದೆವು. ಬಿಜೆಪಿ ಸರ್ಕಾರ ಅತಿ ಹೆಚ್ಚು ಸಾಲ ‌ಮಾಡಿದೆ. ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ. 34 ಸಾವಿರ ಕೋಟಿ ಸಾಲದ ಬಡ್ಡಿ ಕೊಡಬೇಕಿದೆ. ಯದ್ವಾ-ತದ್ವಾ ಸಾಲ ಮಾಡಿ, ಜನರನ್ನು ಸಾಲಗಾರರನ್ನಾಗಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಮುಂದಿನ ವರ್ಷ 77 ಸಾವಿರ ಕೋಟಿ ರೂ. ಸಾಲ‌ ಮಾಡುತ್ತೇವೆ ಅಂತ ಹೇಳಿದ್ದಾರೆ. ಸಾಲದ ಪ್ರಮಾಣ ಶೇ.95 ಜಾಸ್ತಿಯಾಗಿದೆ. ಸಾಲವು ಅಭಿವೃದ್ಧಿ ಬೆಳವಣಿಗೆ ಪ್ರಮಾಣಕ್ಕೆ ಹೊಡೆತ ಕೊಟ್ಟಿದೆ. ಚುನಾಯಿತ ಸರ್ಕಾರ ಪಾರದರ್ಶಕವಾಗಿರಬೇಕು. ಮತದಾರರ ಮುಂದೆ ಮುಚ್ಚಿಡುವ ಕೆಲಸ ಮಾಡಬಾರದು ಎಂದರು.

    2 ಗಂಟೆ 35 ನಿಮಿಷ ಬಜೆಟ್​ ಓದಿದ ಸಿಎಂ ಬೊಮ್ಮಾಯಿ: ಸೋಮವಾರಕ್ಕೆ ಕಲಾಪ ಮುಂದೂಡಿಕೆ

    ಜನರ ಕಿವಿಗೆ ಚಂಡು ಹೂ ಇಟ್ಟಿದ್ದಾರೆ… ಈ‌ ಬಾರಿಯ ಬಜೆಟ್​ನ್ನು ಜಾತ್ರೆ ಕನ್ನಡಕ‌ ಹಾಕಿಕೊಂಡು ನೋಡಬೇಕಷ್ಟೇ!

    ರಾಜ್ಯ ಬಜೆಟ್​ 2023| ಪ್ರಸಕ್ತ ವರ್ಷದಲ್ಲಿ 5 ಲಕ್ಷ ಮನೆಗಳ ನಿರ್ಮಾಣಕ್ಕೆ 5 ಸಾವಿರ ಕೋಟಿ ರೂ. ಮೀಸಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts