ಮಠಗಳ ಮೇಲಣ ಭಕ್ತಿ ಕುಂದಿಲ್ಲವಯ್ಯ!

ರಾಜ್ಯದ ಧಾರ್ವಿುಕ ಕ್ಷೇತ್ರಗಳ ಅಭಿವೃದ್ಧಿಗೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಉದಾರ ನೆರವು ನೀಡಿದ್ದರು. ಬಳಿಕ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಮಠ-ಮಾನ್ಯಗಳಿಗೆ ನೆರವು ನೀಡಿದ್ದರಾದರೂ ಅಷ್ಟೊಂದು ಉದಾರತೆ ತೋರಿರಲಿಲ್ಲ. ಈಗಿನ ಸಮ್ಮಿಶ್ರ ಸರ್ಕಾರ ಬಹುತೇಕ ಎಲ್ಲ ಜಿಲ್ಲೆಗಳ ಆಯ್ದ ಧಾರ್ವಿುಕ ತಾಣಗಳು ಹಾಗೂ ಸಮಾಜಸೇವಾ ಸಂಘಟನೆಗಳಿಗೆ ಅಂದಾಜು 60 ಕೋಟಿ ರೂ. ಅನುದಾನ ಘೋಷಿಸಿದೆ. ಇದಲ್ಲದೆ, ಹಿಂದೂ ರುದ್ರಭೂಮಿಗಳನ್ನು ಅಭಿವೃದ್ಧಿಪಡಿಸಲು 20 ಕೋಟಿ ರೂ. ಹಾಗೂ ಮಾನಸ ಸರೋವರ ಯಾತ್ರಿಗಳಿಗೆ ನೀಡಲಾಗುತ್ತಿರುವ ಪ್ರೋತ್ಸಾಹಧನವನ್ನು 30 ಸಾವಿರ ರೂ.ಗೆ ಏರಿಸಿದೆ. ಇದಕ್ಕಾಗಿ 10 ಕೋಟಿ ರೂ.ಗಳನ್ನು ಬಜೆಟ್​ನಲ್ಲಿ ಮೀಸಲಿಟ್ಟಿದೆ.

ಅನುದಾನ ಪಡೆದ ಮಠ-ಮಾನ್ಯ, ಧಾರ್ವಿುಕ ಕೇಂದ್ರಗಳ ವಿವರ ಇಂತಿದೆ.

# ಮೇಲುಕೋಟೆಯ ಸಮಗ್ರ ಅಭಿವೃದ್ಧಿಗಾಗಿ ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರ ರಚಿಸಿ 5 ಕೋಟಿ ರೂ. ಅನುದಾನ.

# ಚಿತ್ರದುರ್ಗದ ಬುದ್ಧ, ಬಸವ, ಅಂಬೇಡ್ಕರ್ ಪ್ರತಿಷ್ಠಾನಕ್ಕೆ 1 ಕೋಟಿ ರೂ., ಜಿಲ್ಲೆಯ ಶ್ರೀ ಕಬೀರಾನಂದ ಆಶ್ರಮಕ್ಕೆ 1 ಕೋಟಿ ರೂ., ಹೊಸದುರ್ಗ ತಾಲೂಕಿನ ಬಿ.ವಿ.ನಗರ, ಮಧುರೆಯ ಶ್ರೀ ಭಗೀರಥ ಗುರುಪೀಠಕ್ಕೆ 1 ಕೋಟಿ ರೂ., ಚಿತ್ರದುರ್ಗದ ದಲಿತ ಹಿಂದುಳಿದ ಮಠಾಧೀಶ ಒಕ್ಕೂಟ ಸಭಾಭವನಕ್ಕೆ 1 ಕೋಟಿ ರೂ., ಹೊಸದುರ್ಗದ ಕನಕಗುರು ಪೀಠ ಕಾಗಿನೆಲೆ ಶಾಖೆಗೆ 1 ಕೋಟಿ ರೂ., ಹಿರಿಯೂರು ತಾಲೂಕಿನ ಶ್ರೀ ಮಹಾಶಿವಶರಣ ಹರಳಯ್ಯ ಗುರುಪೀಠಕ್ಕೆ 1 ಕೋಟಿ ರೂ.,

# ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಶ್ರೀ ಬಸವಭೃಂಗೇಶ್ವರ ಮಹಾಸಂಸ್ಥಾನ ಮಠಕ್ಕೆ 1 ಕೋಟಿ, ಶಿವಗಂಗೆಯ ಶ್ರೀ ಮಹಾಲಕ್ಷ್ಮೀ ತಿಗಳರ ಮಹಾಸಂಸ್ಥಾನ ಟ್ರಸ್ಟ್ ಗೆ 1 ಕೋಟಿ, ಕೊರಟಗೆರೆ ತಾಲೂಕಿನ ತಂಗನಹಳ್ಳಿಯ ಶ್ರೀ ಕಾಶಿ ಅನ್ನಪೂರ್ಣೆಶ್ವರಿ ಮಹಾಸಂಸ್ಥಾನಕ್ಕೆ 1 ಕೋಟಿ, ಶಿರಾ ತಾಲೂಕಿನ ಶ್ರೀ ಜಗದ್ಗುರು ಛಲವಾದಿ ಪೀಠಕ್ಕೆ 1 ಕೋಟಿ, ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೋಬಳಿಯ ಶ್ರೀ ಬೆಟ್ಟಹಳ್ಳಿ ಮಠಕ್ಕೆ 1 ಕೋಟಿ ರೂ. ಕೊರಟಗೆರೆೆ ತಾಲೂಕಿನ ಬಾಳೆಹೊನ್ನೂರು ಶಾಖಾಮಠದ ಸಿದ್ದರಬೆಟ್ಟ ಪುಣ್ಯಕ್ಷೇತ್ರಕ್ಕೆ 1 ಕೋಟಿ ರೂ., ಮಧುಗಿರಿ ತಾಲೂಕು ತಗ್ಗಿಹಳ್ಳಿಯ ಶ್ರೀ ರಾಮಕೃಷ್ಣ ಆಶ್ರಮಕ್ಕೆ 1 ಕೋಟಿ ರೂ. ನೀಡಲಾಗಿದೆ.

# ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲೂಕಿನ ಬಿ.ಮಲ್ಲೇನಹಳ್ಳಿಯ ಶ್ರೀ ವಿರಕ್ತಮಠಕ್ಕೆ 1 ಕೋಟಿ ರೂ.

# ಹಾವೇರಿ ಜಿಲ್ಲೆಯ ಶ್ರೀ ಅಂಬಿಗರ ಚೌಡಯ್ಯ ಗುರುಪೀಠಕ್ಕೆ 1 ಕೋಟಿ ರೂ., ಶ್ರೀ ಗುದ್ದಲಿಂಗೇಶ್ವರ ಮಠಕ್ಕೆ 1 ಕೋಟಿ ರೂ.

# ಬಾಗಲಕೋಟ ಜಿಲ್ಲೆ ನೀರಲಕೇರಿಯ ಶ್ರೀ ಸಿದ್ಧಾರೂಢ ಜೀಣೋದ್ಧಾರ ಸಮಿತಿಗೆ 1 ಕೋಟಿ ರೂ., ಮುಧೋಳ ತಾಲೂಕಿನ ಶಿರೋಳದ ಶ್ರೀ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮ ಟ್ರಸ್ಟ್ ಕಮಿಟಿ ಮಹಾಲಿಂಗಾಪುರ ಮತ್ತು ಶ್ರೀ ಮಾತೃಶ್ರೀ ಉಮಾತಾಯಿ ಟ್ರಸ್ಟ್​ಗೆ 1 ಕೋಟಿ ರೂ.

# ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಶ್ರೀ ಗುರುದೇವ ಮಠಕ್ಕೆ 1 ಕೋಟಿ ರೂ.

# ಬೆಳಗಾವಿ ಜಿಲ್ಲೆ ಪಿ.ಜಿ. ಗೋಕಾಕ ತಾಲೂಕಿನ ಸಿದ್ದಲಿಂಗನಗರ, ಸುಕ್ಷೇತ್ರ ಹುಣಶ್ಯಾಳದ ಶ್ರೀ ಸಿದ್ದಲಿಂಗ ಕೈವಲ್ಯಾಶ್ರಮಕ್ಕೆ 1 ಕೋಟಿ ರೂ.

# ಹಂಪಿ ಗಾಯತ್ರಿಪೀಠದ ಜ್ಞಾನ ದಾಸೋಹ ನಿಲಯಕ್ಕೆ 1 ಕೋಟಿ ರೂ.

# ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಸೋಮನಕೊಪ್ಪದ ಶ್ರೀ ಪೂರ್ಣಾನಂದಸ್ವಾಮಿ ಸೋಲ್ ಟ್ರಸ್ಟ್​ಗೆ 1 ಕೋಟಿ ರೂ.

# ವಿರುಪುರದ ಶ್ರೀ ಗುರುರಾಮಾಂಜನೇಯ ವಜ್ರದೇಹಿ ಮಠ ಟ್ರಸ್ಟ್​ಗೆ 1 ಕೋಟಿ ರೂ.

# ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರ ಶ್ರೀಧಾಮಕ್ಕೆ 1 ಕೋಟಿ ರೂ.

# ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕು ಹೊಸ್ಮಾರುನ ಬಲ್ಲೋಯಟ್ಟು ಮಠ ಗುರುಕೃಪಾ ರೂರಲ್ ಡೆವಲಪ್​ವೆುಂಟ್ ಎಜುಕೇಷನಲ್ ಆಂಡ್ ರೀಸರ್ಚ್ ಟ್ರಸ್ಟ್​ಗೆ 1 ಕೋಟಿ ರೂ.

# ವಿಜಯಪುರ ಜಿಲ್ಲೆ ಶ್ರೀ ಆಸಂಗಿಹಾಳ ಮಠ ಮತ್ತು ಆಲಮೇಲ ವಿರಕ್ತಮಠಗಳಿಗೆ 1 ಕೋಟಿ ರೂ.

# ಗದಗ ಜಿಲ್ಲೆಯ ಲಕ್ಷೆ್ಮೕಶ್ವರ ತಾಲೂಕಿನ ಬಾಲೆಹೊಸೂರಿನ ಶ್ರೀ ದಿಂಗಾಲೇಶ್ವರ ಮಠಕ್ಕೆ 1 ಕೋಟಿ ರೂ.

# ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಹಂಚಿನಸಿದ್ದಾಪುರದ ಶ್ರೀ ಸಿದ್ದರಾಮೇಶ್ವರಸ್ವಾಮಿ ಟ್ರಸ್ಟ್​ಗೆ 1 ಕೋಟಿ ರೂ.

ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್​ಗೆ 1 ಕೋಟಿ ರೂ.

#ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠಕ್ಕೆ 2 ಕೋಟಿ ರೂ.

# ಶ್ರೀ ಕ್ಷೇತ್ರ ಉಜ್ಜಯಿನಿ ಸದ್ಧರ್ಮ ಪೀಠಕ್ಕೆ 2 ಕೋಟಿ ರೂ.

# ಶಿವಮೊಗ್ಗದ ಶ್ರೀ ರೇಣುಕಾನಂದ ಸ್ವಾಮೀಜಿ ನಾರಾಯಣಗುರು ಮಹಾಸಂಸ್ಥಾನ ಮಠಕ್ಕೆ 3 ಕೋಟಿ ರೂ.

# ಧಾರವಾಡ ಜಿಲ್ಲೆಯ ಶ್ರೀ ಮುರುಘಾಮಠ ಶತಮಾನೋತ್ಸವ ದಾಸೋಹ ನಿಲಯಕ್ಕೆ 3 ಕೋಟಿ ರೂ.

# ಬಾರ್ಕೂರು ಮಹಾಸಂಸ್ಥಾನ ಮಠಕ್ಕೆ 3 ಕೋಟಿ ರೂ.

# ಹೇಮ-ವೇಮ ಸದ್ಬೋಧನ ವಿದ್ಯಾಪೀಠ ಶ್ರೀ ಮಹಾಯೋಗಿ ವೇಮನ ಸಂಸ್ಥಾನಕ್ಕೆ 3 ಕೋಟಿ ರೂ.

# ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠಕ್ಕೆ 3 ಕೋಟಿ ರೂ.

# ತುಮಕೂರಿನ ಶ್ರೀ ಸಿದ್ಧಗಂಗಾಮಠದಲ್ಲಿ ನಿರ್ವಿುಸುತ್ತಿರುವ ಪ್ರಾರ್ಥನಾ ಮಂದಿರಕ್ಕೆ 5 ಕೋಟಿ ರೂ.

# ಬೆಂಗಳೂರಿನ ಸೊನ್ನೇನಹಳ್ಳಿಯ ಸ್ಪಟಿಕಪುರಿ ಮಹಾಸಂಸ್ಥಾನ ಶಾಖಾಮಠಕ್ಕೆ 5 ಕೋಟಿ ರೂ. ಬೆಂಗಳೂರಿನ ಪುಷ್ಪಗಿರಿ ಮಹಾಸಂಸ್ಥಾನ ಮಠದ ಸಿದ್ಧರಾಮೇಶ್ವರ ಭವನದ ನಿರ್ವಣಕ್ಕೆ 2 ಕೋಟಿ ರೂ. ನೀಡಲಾಗಿದೆ.

ವೀರಾಪುರ, ಬಾನಂದೂರು ಅಭಿವೃದ್ಧಿಗೆ ತಲಾ -ಠಿ;25 ಕೋಟಿ
ಧಾರ್ವಿುಕ ಕ್ಷೇತ್ರದ ಮಹಾನ್ ಚೇತನಗಳಾದ ಶ್ರೀ ಶಿವಕುಮಾರಸ್ವಾಮೀಜಿ ಮತ್ತು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಹುಟ್ಟೂರಿನ ಅಭಿವೃದ್ಧಿಗೆ ರಾಜ್ಯ ಸರ್ಕಾರ ಅನುದಾನ ಪ್ರಕಟಿಸಿದೆ. ಶ್ರೀ ಶಿವಕುಮಾರಸ್ವಾಮೀಜಿ ಹುಟ್ಟೂರಾದ ಮಾಗಡಿ ತಾಲೂಕಿನ ವೀರಾಪುರ ಮತ್ತು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಹುಟ್ಟೂರು ರಾಮನಗರ ತಾಲೂಕು ಬಿಡದಿ ಹೋಬಳಿ ಬಾನಂದೂರು ಸಮಗ್ರ ಅಭಿವೃದ್ಧಿಗೆ ತಲಾ 25 ಕೋಟಿ ರೂಪಾಯಿ ಮೀಸಲಿಡಲಾಗಿದೆ. ವೀರಾಪುರದಲ್ಲಿ ವಿಶ್ವದರ್ಜೆಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಬಜೆಟ್​ನಲ್ಲಿ ಘೊಷಣೆ ಮಾಡಿದ್ದಾರೆ. ಅದೇ ರೀತಿ ಬಾನಂದೂರಿನಲ್ಲಿ ಪಶ್ಚಿಮ ಬಂಗಾಳದ ಬೇಲೂರು ಮಠದ ಮಾದರಿಯಲ್ಲಿ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರ ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.

ದೋಣಿಗಳಿಗೆ ಡಿಜಿಟಲ್ ಸ್ಪರ್ಶ
ಮೀನುಗಾರಿಕೆಗೆ ತೆರಳುವ ದೋಣಿಗಳು ನಾಪತ್ತೆಯಾಗುವ ಪ್ರಕರಣಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಸರ್ಕಾರ, ಇಸ್ರೋ ಅಧಿಕೃತಗೊಳಿಸಿರುವ ಡಿಎಟಿ ಉಪಕರಣವನ್ನು ಸಮುದ್ರಕ್ಕೆ ಇಳಿಯುವ ದೋಣಿಗಳಿಗೆ ಅಳವಡಿಸಿಕೊಳ್ಳಲು ಅನುಕೂಲವಾಗುವಂತೆ ಶೇ. 50 ಸಹಾಯಧನ ಪ್ರಕಟಿಸಿದೆ. ಇದಕ್ಕಾಗಿ 3 ಕೋಟಿ ರೂ. ಮೀಸಲಿಟ್ಟಿದೆ. ರಾಜ್ಯದಲ್ಲಿ ಡೀಸೆಲ್ ಮತ್ತು ಸೀಮೆಎಣ್ಣೆ ಪಾಸ್​ಬುಕ್ ಪಡೆದಿರುವ ದೋಣಿಗಳಿಗೆ ಸಬ್ಸಿಡಿ ನೀಡಲು 148.5 ಕೋಟಿ ರೂ. ನೀಡಲಾಗಿದೆ. ಒಳನಾಡು ಮತ್ತು ಹಿನ್ನೀರಿನಲ್ಲಿ ಸಿಗಡಿ ಮತ್ತು ಮೀನುಕೃಷಿಯನ್ನು ಪ್ರೋತ್ಸಾಹಿಸಲು 400 ಘಟಕಗಳಿಗೆ ಸಹಾಯಧನ ನೀಡಲು ನಿರ್ಧರಿಸಿದೆ.

4 ಹೊಸ ತಾಲೂಕು ರಚನೆ
ಭೌಗೋಳಿಕ ಮತ್ತು ಆಡಳಿತಾತ್ಮಕ ಅಗತ್ಯಗಳಿಗಾಗಿ ರಾಮನಗರ ಜಿಲ್ಲೆಯ ಹಾರೋಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು, ಬಾಗಲಕೋಟೆ ಜಿಲ್ಲೆಯ ತೇರದಾಳ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಳಸಾವನ್ನು ತಾಲೂಕು ಕೇಂದ್ರವಾಗಿಸುವುದಾಗಿ ಸರ್ಕಾರ ಘೋಷಿಸಿದೆ. ಈ ಮೂಲಕ ಪ್ರಸ್ತುತ 227 ಇರುವ ತಾಲೂಕುಗಳ ಸಂಖ್ಯೆ 231ಕ್ಕೆ ಏರಿಕೆಯಾಗಲಿದೆ. ಬಾಗಲಕೋಟೆಯಲ್ಲಿ 10, ಚಿಕ್ಕಮಗಳೂರಿನಲ್ಲಿ 9, ರಾಮನಗರದಲ್ಲಿ 5, ಚಿಕ್ಕಬಳ್ಳಾಪುರದಲ್ಲಿ 7 ತಾಲೂಕುಗಳಾದಂತಾಗಲಿದೆ. ಆದರೆ, ಈ ಸ್ಥಳಗಳಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಯಾವುದೇ ಅನುದಾನವನ್ನು ನಿಗದಿಗೊಳಿಸಿಲ್ಲ.

21 ಜಿಲ್ಲೆಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಲ್ಯಾಬ್
ರಾಜ್ಯದ 21 ಜಿಲ್ಲೆಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಯೋಗಾಲಯ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ 42 ಕೋಟಿ ರೂ. ವೆಚ್ಚ ಮಾಡಲಾಗುವುದು. ಜತೆಗೆ, 8 ಕೋಟಿ ರೂ. ವೆಚ್ಚದಲ್ಲಿ 16 ಉಪ ಪ್ರಯೋಗಾಲಯಗಳು, 10 ಕೋಟಿ ರೂ. ವೆಚ್ಚದಲ್ಲಿ 10 ಆಟೋಮೆಟೆಡ್ ಫ್ಲೋ ಅನಲೈಸರ್​ಗಳನ್ನು ಖರೀದಿಸಲು ಉದ್ದೇಶಿಸಲಾಗಿದೆ. ಒಟ್ಟಾರೆ 60 ಕೋಟಿ ರೂ. ವೆಚ್ಚದಲ್ಲಿ ಪ್ರಯೋಗಾಲಯಗಳನ್ನು ಅಭಿವೃದ್ಧಿಪಡಿಸಲಾಗುವುದು.

ಜನಾರೋಗ್ಯದ ಕಾಳಜಿ ಮುಖ್ಯ

| ಡಾ.ಆನಂದ ಪಾಂಡುರಂಗಿ ಖ್ಯಾತ ಮನೋವೈದ್ಯರು ಧಾರವಾಡ

ಬಡ ಹಾಗೂ ಮಧ್ಯಮ ವರ್ಗದ ಪರ, ಅದರಲ್ಲೂ ಗ್ರಾಮೀಣ ಭಾಗಕ್ಕೆ ವಿಶೇಷ ಸ್ಕೀಮ್ ಘೂಷಿಸಿರುವುದು ಆಶಾದಾಯಕವಾಗಿದೆ. 2017-18ರಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಆರೋಗ್ಯ ಕರ್ನಾಟಕ ಯೋಜನೆಯನ್ನು ಕೇಂದ್ರದ ಆಯುಷ್ಮಾನ್ ಯೋಜನೆ ಜತೆ ವಿಲೀನಗೊಳಿಸಿ ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆ ಅನುಷ್ಠಾನಗೊಳಿಸಿ ಅದಕ್ಕೆ ಈ ವರ್ಷ 950 ಕೋಟಿ ರೂ ಮೀಸಲಿಟ್ಟಿರುವುದಾಗಿ ಸಿಎಂ ಹೇಳಿರುವುದು ಆಶಾದಾಯಕ ಬೆಳವಣಿಗೆ. ಆದರೆ, ಈಗಾಗಲೇ ಇರುವ ಆಯುಷ್ಮಾನ್ ಭಾರತ ಆರೋಗ್ಯ ಯೋಜನೆ ಸಮರ್ಪಕ ಅನುಷ್ಠಾನಕ್ಕೂ ಹೆಚ್ಚು ಒತ್ತು ನೀಡಬೇಕಿದೆ. ತುಮಕೂರಿನಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ, ಕಾರವಾರ ಮತ್ತು ಕೊಡಗಿನ ಜಿಲ್ಲಾಸ್ಪತ್ರೆ ಸಾಮರ್ಥ್ಯವನ್ನು 450 ಹಾಸಿಗೆಗೆ ಏರಿಸುವುದು, ಹುಬ್ಬಳ್ಳಿಯಲ್ಲಿ ಕ್ಯಾನ್ಸರ್ 3 ನೇ ಹಂತದ ಸಂಶೋಧನಾ ಕೇಂದ್ರಕ್ಕೆ ಅನುದಾನ ಕೊಟ್ಟಿರುವುದು ಸೇರಿ ಹಲವು ಜಿಲ್ಲಾ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದಾಗಿ ಹೇಳಿದ್ದಾರೆ. ಜತೆಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕಿದೆ.

ಹಿಂದುಳಿದ ಪ್ರದೇಶಗಳಲ್ಲಿ ಮಹಿಳೆಯರೂ ದುಡಿಮೆಗೆ ಹೋಗುವುದು ಕಡ್ಡಾಯ ಹಾಗೂ ಅನಿವಾರ್ಯ. ಗರ್ಭಿಣಿಯಾಗಿದ್ದರೂ ಕೆಲಸ ಮಾಡುವವರು ಇಂದಿಗೂ ಅನೇಕರಿದ್ದಾರೆ. ಅಂಥವರಿಗೆ ಈಗ ಘೊಷಿಸಿರುವ ಮಾತೃಶ್ರೀ ಯೋಜನೆಯ ಲಾಭ ತಲುಪಬೇಕು. ಹೊಸ ಆಸ್ಪತ್ರೆಗಳ ಸ್ಥಾಪನೆ ಸಾಲದು. ಈಗಿರುವ ಆಸ್ಪತ್ರೆಗಳ ಸ್ಥಿತಿಗತಿ ಸುಧಾರಣೆ ಅತ್ಯವಶ್ಯ. ಎಲ್ಲ ಜಿಲ್ಲೆಗಳಲ್ಲಿ ಸರ್ಕಾರಿ ಆಯುರ್ವೆದಿಕ್ ಮತ್ತು ಹೋಮಿಯೋಪಥಿ ಘಟಕ ತೆರೆಯಲು ಹೊರಟಿರುವುದು ಉತ್ತಮ ಬೆಳವಣಿಗೆ. ಸರ್ಕಾರಿ ಔಷಧ ಕೇಂದ್ರಗಳಿಗೆ ಸ್ವಂತ ಕಟ್ಟಡ, ವಿಜಯಪುರದಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ಹೊಸ ಆಸ್ಪತ್ರೆ, ಗಡಿ ಜಿಲ್ಲೆ ಬೆಳಗಾವಿಯ ಖಾನಾಪುರದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ಸ್ಥಾಪನೆ ಇವೆಲ್ಲ ಒಳ್ಳೆಯ ಘೊಷಣೆಗಳು. ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಯಲ್ಲಿ ಮಂಗನಕಾಯಿಲೆ ಸಂಶೋಧನಾ ಕೇಂದ್ರ ತೆರೆಯಲು ಕೋಟಿ ರೂ. ಕೊಡುವುದಾಗಿ ಸಿಎಂ ಘೂಷಿಸಿದ್ದಾರೆ. ಹೊಸ ಘೊಷಣೆಗಳ ಮಧ್ಯೆ ಜಾರಿಯಲ್ಲಿರುವ ಯೋಜನೆಗಳನ್ನು ಬಂದ್ ಮಾಡದೇ ಎಲ್ಲರಿಗೂ ಆರೋಗ್ಯ ಭಾಗ್ಯ ಸಿಗಬೇಕಿರುವುದು ಅಗತ್ಯ. ಜನಪ್ರಿಯತೆ ಜತೆ ಜನಾರೋಗ್ಯದ ಕಳಕಳಿಯೂ ಇದ್ದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿತ ಯೋಜನೆಗಳು ಉದ್ದೇಶ ಈಡೇರಿಸುವಲ್ಲಿ ಸಫಲವಾಗಬಲ್ಲವು.

ಹಾಸನ ಏರ್​ಪೋರ್ಟ್​ಗೆ ಹಣ
ಹಾಸನ ವಿಮಾನ ನಿಲ್ದಾಣ ಅಭಿವೃದ್ಧಿಗೆ ಒತ್ತು ನೀಡುವ ಘೋಷಣೆಯನ್ನು ಸರ್ಕಾರ ಮಾಡಿದೆ. ಬೀದರ್ ನಾಗರಿಕ ವಿಮಾನ ನಿಲ್ದಾಣದ ಹೊಸ ಟರ್ವಿುನಲ್ ಕಟ್ಟಡವನ್ನು 32 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲು ನಿರ್ಧರಿಸಿದೆ. ಚಿಕ್ಕಮಗಳೂರು, ಶಿವಮೊಗ್ಗ ನಿಲ್ದಾಣಗಳಲ್ಲಿ ಏರ್​ಸ್ಟ್ರಿಪ್ ಅಭಿವೃದ್ಧಿಗೊಳಿಸಲಿದೆ. ಪ್ರಮುಖ ನಗರಗಳಲ್ಲಿ ಸುಗಮ ಸಂಚಾರ ಹಾಗೂ ವಾಹನ ದಟ್ಟಣೆ ನಿವಾರಣೆಗಾಗಿ ರಸ್ತೆ ಮೇಲುಸೇತುವೆ/ಕೆಳರಸ್ತೆಗಳಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಹಾಗೂ ನಿರ್ವಣಕ್ಕಾಗಿ 70 ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿದೆ.

ರೈಲುಹಳಿ ತಡೆಗೋಡೆ
ಮಾನವ-ಆನೆ ಸಂಘರ್ಷದಿಂದ ರಾಜ್ಯದಲ್ಲಿ ಸಾಕಷ್ಟು ನಷ್ಟವಾಗಿದ್ದು, ಇದರ ನಿಯಂತ್ರಣ ಬಹುದೊಡ್ಡ ಸವಾಲು. ಪ್ರಾಣ ಹಾನಿ, ಬೆಳೆಹಾನಿಯಿಂದ ಆಗುತ್ತಿರುವ ಸಂಕಷ್ಟವನ್ನು ಪರಿಗಣಿಸಿ ‘ರೈಲುಹಳಿ ತಡೆಗೋಡೆ’ ನಿರ್ವಿುಸುವ ಹೊಸ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಉಪಯೋಗಿಸಿದ ರೈಲುಹಳಿಗಳಿಂದ ಅಂದಾಜು 520 ಕಿ.ಮೀ. ತಡೆಗೋಡೆಯನ್ನು ಮೂರು ವರ್ಷದೊಳಗೆ ನಿರ್ವಿುಸಲು 621 ಕೋಟಿ ರೂ. ನೀಡಲಾಗಿದೆ. ಈ ಪೈಕಿ 2019-20ರಲ್ಲಿ 200 ಕಿ.ಮೀ. ರೈಲುಹಳಿ ತಡೆಗೋಡೆಯನ್ನು 100 ಕೋಟಿ ರೂ.ವೆಚ್ಚದಲ್ಲಿ ನಿರ್ವಿುಸಲಾಗುವುದು.

4 ಲಕ್ಷ ಮನೆ ನಿರ್ವಣದ ಗುರಿ
ವಸತಿರಹಿತರಿಗೆ ಸೂರು ಕಟ್ಟಿಕೊಡುವ ನಿಟ್ಟಿನಲ್ಲಿ 2019-20ನೇ ಸಾಲಿನಲ್ಲಿ ರಾಜ್ಯ ಸರ್ಕಾರ 4 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಳಿಸುವ ಗುರಿ ಹೊಂದಿದೆ. 2018-19ರಲ್ಲಿ ಬಡ ವರ್ಗದವರಿಗೆ ಸೂರು ಕಲ್ಪಿಸಲು 4,676 ಕೋಟಿ ರೂ. ಅನುದಾನ ಒದಗಿಸಿ, 2.5 ಲಕ್ಷ ಮನೆಗಳನ್ನು ನಿರ್ವಿುಸಲಾಗಿದೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.

ವಿವಿಧ ವಸತಿ ಯೋಜನೆಗಳಲ್ಲಿ ಇಷ್ಟು ಬೃಹತ್ ಪ್ರಮಾಣದ ಮನೆಗಳನ್ನು ನಿರ್ವಿುಸುವ ಗುರಿ ಹೊಂದಲಾಗಿದೆ. ಇದರೊಂದಿಗೆ, ಸಿದ್ಧ ಉಡುಪು ಕಾರ್ವಿುಕರಿಗೆ ಬಾಡಿಗೆ ಆಧಾರದ ವಸತಿ ಯೋಜನೆ ಜಾರಿಗೊಳಿಸಲಿದ್ದು, ಇದಕ್ಕಾಗಿ ಮುಂಬರುವ ಆರ್ಥಿಕ ವರ್ಷದಲ್ಲಿ 50 ಕೋಟಿ ರೂ. ವೆಚ್ಚ ಮಾಡುವುದಾಗಿ ಸರ್ಕಾರ ಘೋಷಿಸಿದೆ.

ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ 1500 ಕೋಟಿ ರೂಪಾಯಿ
ಪ್ರಾದೇಶಿಕ ಅಸಮಾನತೆ ನಿವಾರಿಸುವ ನಿಟ್ಟಿನಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 1500 ಕೋಟಿ ರೂ., ಮಲೆನಾಡು ಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ 70 ಕೋಟಿ ರೂ., ಬಯಲುಸೀಮೆ ಅಭಿವೃದ್ಧಿ ಪ್ರಾಧಿಕಾರಕ್ಕೆ 95 ಕೋಟಿ ರೂ., ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ 30 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಶಾಸಕರ ಸ್ಥಳೀಯ ಅಭಿವೃದ್ಧಿ ಯೋಜನೆಗಳಿಗಾಗಿ 600 ಕೋಟಿ ರೂ. ಒದಗಿಸಲಾಗಿದೆ.

7940 ಕಿ.ಮೀ. ರಸ್ತೆ ನಿರ್ವಣಕ್ಕೆ ಪಣ: ಅಂದಾಜು 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ವಿವಿಧ ವಲಯಗಳ ಒಟ್ಟು 7940 ಕಿ.ಮೀ ಉದ್ದದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸರ್ಕಾರ ಹೇಳಿದೆ. ಈ ನಿಟ್ಟಿನಲ್ಲಿ ರಸ್ತೆ ಮತ್ತು ಸೇತುವೆಗಳ ಸುಧಾರಣೆ ಮತ್ತು ನವೀಕರಣ ಕಾಮಗಾರಿಗಳಿಗಾಗಿ 5,690 ಕೋಟಿ ರೂ. ಮೀಸಲಿರಿಸಲಾಗಿದೆ.

ಆರೋಗ್ಯಕ್ಕೆ 950 ಕೋಟಿ ರೂ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಯುಷ್ಮಾನ್ ಭಾರತ್ ಜತೆಗೆ ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಯೋಜನೆ ಒಗ್ಗೂಡಿಸಿ, ರಾಜ್ಯದಿಂದ 950 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಸಿಎಂ ಕುಮಾರಸ್ವಾಮಿ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಇದಕ್ಕೆ 409 ಕೋಟಿ ರೂ. ನೀಡಲಿದೆ.

ಕ್ಯಾನ್ಸರ್ ವಿರುದ್ಧ ಹೋರಾಟಕ್ಕೆ ಬಲ: ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾಸ್ಪತ್ರೆ ಆವರಣದಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ವಿಶೇಷ ಸೌಲಭ್ಯಗಳುಳ್ಳ ಕ್ಯಾನ್ಸರ್ ಆಸ್ಪತ್ರೆ ನಿರ್ವಣಕ್ಕೆ ಸರ್ಕಾರ ಸಿದ್ಧತೆ ನಡೆಸಿದೆ. ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಸ್ತನ ಕ್ಯಾನ್ಸರನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಲು ಎಲ್ಲ ಜಿಲ್ಲೆಗಳಲ್ಲಿ ಡಿಜಿಟಲ್ ಸ್ತನರೇಖನ ವ್ಯವಸ್ಥೆ (ಮ್ಯಾಮೋಗ್ರಾಮ್ ಹಾಗೂ ಪ್ಯಾಪ್ಸ್​ಮೀರ್ ಸ್ಕಾ್ಯನಿಂಗ್ ವ್ಯವಸ್ಥೆಯನ್ನು 10 ಜಿಲ್ಲೆಗಳಲ್ಲಿ ಈ ವರ್ಷ ಆರಂಭಿಸಲಿದೆ.

ಮತ್ತೊಂದೆಡೆ, ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗಾಗಿ ಈ ಸಾಲಿನಲ್ಲಿ 1 ಕೋಟಿ ರೂ. ವೆಚ್ಚದಲ್ಲಿ 49 ತಾಲೂಕು ಆಸ್ಪತ್ರೆಗಳಲ್ಲಿ ಪೌಷ್ಟಿಕ ಪುನಶ್ಚೇತನ ಕೇಂದ್ರಗಳನ್ನು ಸ್ಥಾಪಿಸುವ ಘೋಷಿಸಲಾಗಿದೆ.

ಮಂಗನ ಕಾಯಿಲೆ ಲಸಿಕೆಗೆ 5 ಕೋಟಿ ರೂ.: ಮಲೆನಾಡು ಮತ್ತಿತರ ಭಾಗಗಳಲ್ಲಿ ವ್ಯಾಪಿಸುತ್ತಿರುವ ಮಂಗನ ಕಾಯಿಲೆಗೆ ಲಸಿಕೆ ತಯಾರಿಸಲು ರಾಜ್ಯ ಸರ್ಕಾರ ಐದು ಕೋಟಿ ರೂ. ಮೀಸಲಿರಿಸಿದೆ. ಪ್ರಸ್ತುತ 7 ಜಿಲ್ಲೆಗಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದೆ. ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಮಂಗನ ಕಾಯಿಲೆ ಸಂಶೋಧನಾ ಮತ್ತು ಚಿಕಿತ್ಸಾ ಘಟಕ ಆರಂಭಕ್ಕೆ 5 ಕೋಟಿ ರೂ. ಒದಗಿಸಲಾಗಿದೆ.

# ಸೂಕ್ತ ಸಂಗ್ರಹ, ಶೇಖರಣೆ, ವಿತರಣೆಗಾಗಿ 4 ವಿಭಾಗೀಯ ಮಾದರಿ ರಕ್ತನಿಧಿ ಕೇಂದ್ರ ಸ್ಥಾಪನೆಗೆ 10 ಕೋಟಿ ರೂ.
# ತಜ್ಞರ ಕೊರತೆ ನೀಗಿಸಲು ಆಯ್ದ 11 ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ ಡಿಎನ್​ಬಿ ಕೇಂದ್ರ ಪ್ರಾರಂಭಿಸಲು ನಿರ್ಧಾರ
# ಬೆಂಗಳೂರಿನ ಸಂಜಯ್ ಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯಲ್ಲಿ ಕ್ರೀಡಾ ರೋಗಿಗಳ ವಿಭಾಗ, ರೋಬಾಟಿಕ್ ಶಸ್ತ್ರಚಿಕಿತ್ಸೆ ಸೌಲಭ್ಯ ಆರಂಭ.

ಪಡಿತರ ವಿಚಕ್ಷಣಾ ದಳ ಸ್ಥಾಪನೆ
ರಾಜ್ಯದಲ್ಲಿ ಪಡಿತರ ವಿತರಣೆಯಲ್ಲಾಗುವ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ವಿಭಾಗಕ್ಕೆ ವಿಚಕ್ಷಣಾ ದಳ ರಚಿಸಲು ಸರ್ಕಾರ ತೀರ್ವನಿಸಿದೆ. ಇದು ಆಹಾರ ಪದಾರ್ಥಗಳ ಸಮರ್ಪಕ ವಿತರಣೆಯನ್ನು ಗಮನಿಸಲಿದ್ದು, ಸೋರಿಕೆ ತಡೆಗಟ್ಟಲಿದೆ. ಅನ್ನಭಾಗ್ಯ ಯೋಜನೆಗೆ ಈ ಸಾಲಿನಲ್ಲಿ 4.07 ಕೋಟಿಗಿಂತ ಹೆಚ್ಚು ಫಲಾನುಭವಿಗಳಿಗೆ ಆಹಾರ ಧಾನ್ಯ ವಿತರಿಸಲು 3,700 ಕೋಟಿ ರೂ. ಅನುದಾನ ಒದಗಿಸಲಾಗಿದೆ.

ಡ್ರೋನ್ ಸಮೀಕ್ಷೆ: ಕಲಬುರಗಿ, ವಿಜಯಪುರ, ದಕ್ಷಿಣಕನ್ನಡ, ಮೈಸೂರು, ಗದಗ, ದಾವಣಗೆರೆ, ಧಾರವಾಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಡ್ರೋನ್​ಗಳ ಮೂಲಕ ಭೂಮಿಯ ಮರು ಸಮೀಕ್ಷೆ ಕಾರ್ಯ ಕೈಗೊಳ್ಳುವ ಉದ್ದೇಶವನ್ನು ಸರ್ಕಾರ ಹೊಂದಿದೆ.

ಹಿಂದೆ ಹೀಗಿತ್ತು…
ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಹೊಸ ಹೊಸ ಯೋಜನೆಗಳಿಗೆ ಬಜೆಟ್ ಆದ್ಯತೆ ನೀಡುತ್ತಲೇ ಬಂದಿದೆ. 1974ರಲ್ಲಿ ಹಣಕಾಸು ಸಚಿವರಾಗಿದ್ದವರು ಎಂ.ವೈ. ಘೋರ್ಪಡೆ. ತಮ್ಮ ಆಯವ್ಯಯದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಚನೆಗೆ ಅವರು ಒತ್ತು ನೀಡಿದರು. ಭೂಸುಧಾರಣೆ, ಆಹಾರ ಭದ್ರತೆ, ಗುಡ್ಡಗಾಡು ಅಭಿವೃದ್ದಿಗೆ ಕೂಡ ಆಯವ್ಯಯದಲ್ಲಿ ಆದ್ಯತೆ ನೀಡಿದರು. 1976-77ರಲ್ಲಿ ಭೂಸಾರ ಸಂರಕ್ಷಣೆ, ಸಣ್ಣ ರೈತರ ಅಭಿವೃದ್ಧಿ ಏಜೆನ್ಸಿಗೆ ಸರ್ಕಾರ ಮುಂದಾಯಿತು. ಗ್ರಾಮಾಂತರ ಬ್ಯಾಂಕ್​ಗಳ ಸ್ಥಾಪನೆ, ಲಿಡ್ಕರ್ ಸ್ಥಾಪನೆಗೆ ಬಜೆಟ್​ನಲ್ಲಿ ಗಮನಹರಿಸಲಾಯಿತು. 1977-78ರಲ್ಲಿ ಶಾಲಾ ಮಕ್ಕಳಿಗೆ ಪೌಷ್ಟಿಕಾಂಶ ಒದಗಿಸಲು ಅನುದಾನ ಒದಗಿಸಲಾಯಿತು. ಗ್ರಾಮೀಣ ವಸತಿ, ಅಂಗವಿಕಲರಿಗೆ ವಿಶೇಷ ಕಾರ್ಯಕ್ರಮ, ವೃದ್ದಾಪ್ಯ ಪಿಂಚಣಿ 40 ರೂ.ಗೆ ಏರಿಕೆ ಮಾಡಿದ್ದು ಕೂಡ ಈ ವರ್ಷವೇ. 1978-79ರಲ್ಲಿ ಎಸ್.ಎಂ. ಯಾಹ್ಯಾ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಅಭಿವೃದ್ಧಿ ಮಂಡಳಿ ಸ್ಥಾಪನೆ, ಅನುದಾನಿತ ಶಾಲಾ ಶಿಕ್ಷಕರಿಗೆ ಚೆಕ್ ಮೂಲಕ ವೇತನ ಪಾವತಿಯನ್ನು ಪ್ರಕಟಿಸಿದರು.

ಆಲಮಟ್ಟಿ ಡ್ಯಾಂ ಎತ್ತರಿಸಲು, ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಹಣ ತೆಗೆದಿಟ್ಟಿಲ್ಲ. ಪೊಲೀಸ್ ಇಲಾಖೆಯನ್ನು ನಿರ್ಲಕ್ಷಿಸಿದ್ದು, ಔರಾದ್ಕರ್ ವರದಿ ಜಾರಿ ಬಗ್ಗೆ ಪ್ರಸ್ತಾಪವಿಲ್ಲ. ಉತ್ತರ ಕರ್ನಾಟಕದಲ್ಲಿ ಬೆಳೆಗಳಿಗೆ ಪೋ›ತ್ಸಾಹಧನ ಇಲ್ಲ. ರಾಜೀವ್ ಗಾಂಧಿ ಆರೋಗ್ಯ ವಿವಿ ವಿಂಗಡಿಸಿ ಉತ್ತರ ಕರ್ನಾಟಕದಲ್ಲಿ ಒಂದು ಹೊಸ ಆರೋಗ್ಯ ವಿಶ್ವವಿದ್ಯಾನಿಲಯ ಸ್ಥಾಪಿಸಬಹುದಿತ್ತು.

| ಮಹಾಂತೇಶ ಮ. ಕವಟಗಿಮಠ ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ