ಆರ್ಥಿಕತೆಗೆ ಅನರ್ಹರ ಎಫೆಕ್ಟ್!

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಉತ್ತಮ ಬಜೆಟ್ ನೀಡಿರುವುದಾಗಿ ಬೀಗುತ್ತಿದ್ದಾರೆ. ಆದರೆ, ಅಭಿವೃದ್ಧಿ ವೆಚ್ಚವನ್ನು ಹೆಚ್ಚಿಸುವ ದೃಷ್ಟಿಯಿಂದ ಸಹಾಯಧನ ಆಧಾರಿತ ಯೋಜನೆಗಳಲ್ಲಿ ಅನರ್ಹ ಫಲಾನುಭವಿಗಳನ್ನು ಗುರುತಿಸುವ ವಿತ್ತೀಯ ನಿರ್ವಹಣೆ ಪರಿಶೀಲನಾ ಸಮಿತಿಯ ಶಿಫಾರಸನ್ನೇ ಕಡೆಗಣಿಸಿರುವ ಪರಿಣಾಮಗಳು ಬೇರೆ ಬೇರೆ ರೂಪದಲ್ಲಿ ಬೀರುವ ಆತಂಕ ಎದುರಾಗಿದೆ.

ಕೇಂದ್ರ ಸರ್ಕಾರ ನೀಡುತ್ತಿರುವ ಜಿಎಸ್​ಟಿ ನಷ್ಟ ಪರಿಹಾರ 2022-23ಕ್ಕೆ ನಿಲ್ಲಲಿದೆ. ಅದರಿಂದ ಅಭಿವೃದ್ಧಿಯ ವೆಚ್ಚದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ ಎಂಬ ಕಾರಣಕ್ಕೆ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯು ಕೆಲವೊಂದು ಸಲಹೆಗಳನ್ನು ಸರ್ಕಾರಕ್ಕೆ ನೀಡಿದೆ. ಆಡಳಿತಾತ್ಮಕ ವೆಚ್ಚದ ಸುಧಾರಣೆಗೆ ಸಂಬಂಧಿಸಿ ಮಾಡಿರುವ ಶಿಫಾರಸುಗಳು ಬಜೆಟ್​ನಲ್ಲಿ ಕಂಡು ಬರುತ್ತಿಲ್ಲ.

ಆಧಾರ್ ಲಿಂಕ್​ಗೆ ಸೂಚನೆ

ಎಲ್ಲ ಯೋಜನೆಗಳಲ್ಲೂ ಫಲಾನುಭವಿಗಳಿಗೆ ನೇರ ನಗದು ಪಾವತಿ ಮಾಡುವ ಯೋಜನೆ ಜಾರಿಗೆ ತಂದು ಆಧಾರ್ ಲಿಂಕ್ ಮಾಡಿದರೆ ಅನುಕೂಲ ಎಂದು ಸಮಿತಿ ಹೇಳಿತ್ತು. ಆದರೆ ಸರ್ಕಾರ ಆ ನಿಟ್ಟಿನಲ್ಲಿ ಗಮನ ಹರಿಸಲಿದೆ ಎಂಬುದನ್ನು ಕುಮಾರಸ್ವಾಮಿ ಬಜೆಟ್​ನಲ್ಲಿ ಹೇಳಿಲ್ಲ.

ನೌಕರಿ ಕಡಿತಕ್ಕೆ ಸಲಹೆ

ಸರ್ಕಾರಿ ನೌಕರರಲ್ಲಿ ಲಿಪಿಕ ಹಾಗೂ ಸಹಾಯಕ ಸಿಬ್ಬಂದಿ ಹುದ್ದೆಗಳನ್ನು ಕಡಿತ ಮಾಡಬೇಕು. ಕ್ಷೇತ್ರ ಸಿಬ್ಬಂದಿಯನ್ನು ಮಾತ್ರ ನೇಮಕ ಮಾಡಬೇಕು. ವಿವಿಧ ವೃಂದ ಹಾಗೂ ಇಲಾಖೆಗಳನ್ನು ವಿಲೀನ ಮಾಡಲು ಕ್ರಮ ಜರುಗಿಸಬೇಕು. ಖಾಲಿ ಹುದ್ದೆಗಳ ಮರು ನಿಯೋಜನೆ ಮೂಲಕ ಆಡಳಿತಾತ್ಮಕ ವೆಚ್ಚ ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಹಣಕಾಸು ಇಲಾಖೆಗೆ ಸೂಚನೆ ನೀಡಿದ್ದಾರೆ. ಸುಮಾರು 2.5 ಲಕ್ಷ ಹುದ್ದೆಗಳು ಈಗಾಗಲೇ ಖಾಲಿಯಾಗಿವೆ. ಆದರೆ ಮತ್ತಷ್ಟು ಕಡಿತವಾದರೆ ಕೆಲಸ ಮಾಡಲು ನೌಕರರೇ ಇಲ್ಲದಂತಾಗುತ್ತದೆ.

ಎಷ್ಟಿದೆ ಜಿಎಸ್​ಟಿ ಪರಿಹಾರ?: ರಾಜ್ಯಕ್ಕೆ ಜಿಎಸ್​ಟಿ ಪರಿಹಾರ 2018-19ರಲ್ಲಿ 10,800 ಕೋಟಿ ರೂ.ಗಳಿದೆ. 2019-20ಕ್ಕೆ 17249 ಕೋಟಿ ರೂ.ಗಳು ಸಿಗಬಹುದೆಂಬ ಅಂದಾಜಿದೆ. 2022-23ಕ್ಕೆ ಪರಿಹಾರ ಅಂತ್ಯವಾಗುವುದರಿಂದ ಮತ್ತಷ್ಟು ವರ್ಷ ಮುಂದುವರಿಸಬೇಕೆಂದು ಜಿಎಸ್​ಟಿ ಕೌನ್ಸಿಲ್ ಹಾಗೂ ಕೇಂದ್ರ ಸರ್ಕಾರದ ಮುಂದೆ ಮನವಿ ಮಾಡುವ ನಿರ್ಧಾರಕ್ಕೆ ಸರ್ಕಾರ ಬಂದಿದೆ.

ಏಕೆಂದರೆ ತೆರಿಗೆಯೇತರ ಆದಾಯ ಕಡಿಮೆಯಾಗಿ ಆಡಳಿತಾತ್ಮಕ ವೆಚ್ಚ ಹೆಚ್ಚಾಗುತ್ತಿದೆ. ಆದ್ದರಿಂದಲೇ ಸಮಿತಿ ಹಲವು ಸುಧಾರಣೆಗಳಿಗೆ ಹೇಳಿತ್ತು. ಪ್ರತಿ ವರ್ಷದಂತೆ ಸಮಿತಿ ಹೇಳುವುದು, ಸರ್ಕಾರ ಅದನ್ನು ನಿರ್ಲಕ್ಷಿಸುವುದು ಮುಂದುವರಿದಿದೆ. ಆದರೆ, ಮುಂದಿನ ವರ್ಷಗಳಲ್ಲಿ ವೇತನದಂತಹ ಹೊರೆ ಹೆಚ್ಚಾಗುತ್ತದೆ. ಜಿಎಸ್​ಟಿ ಪರಿಹಾರ ನಿಂತರೆ ಸಮಸ್ಯೆ ಬಿಗಡಾಯಿಸುತ್ತದೆ. ಆದೇ ಕಾರಣಕ್ಕಾಗಿಯೇ ಸಮಿತಿ ಸಹ ಆತಂಕ ವ್ಯಕ್ತಪಡಿಸಿದೆ.

ಮರು ಸಮೀಕ್ಷೆಗೆ ಸೂಚನೆ: ಮುಂದಿನ ವರ್ಷಗಳಲ್ಲಿ ವೆಚ್ಚ ಹೆಚ್ಚಾಗುವ ಎಲ್ಲ ಸೂಚನೆಗಳು ಇರುವುದರಿಂದಲೇ ಸಹಾಯಧನಗಳನ್ನು ಆಧರಿಸಿದ ಯೋಜನೆಗಳನ್ನು ಜಿಲ್ಲಾ ಮಟ್ಟದಲ್ಲಿ ಮರು ಸಮೀಕ್ಷೆಗೆ ಸಮಿತಿ ಸೂಚನೆ ನೀಡಿದೆ.

ಸಾಮಾಜಿಕ ಸುರಕ್ಷಾ ಪಿಂಚಣಿ, ಅನ್ನಭಾಗ್ಯ, ಕ್ಷೀರಧಾರೆ, ಕೃಷಿ ಪಂಪ್​ಸೆಟ್​ಗೆ ಉಚಿತ ವಿದ್ಯುತ್, ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಗಳಲ್ಲಿ ಅನರ್ಹ ಫಲಾನುಭವಿಗಳನ್ನು ತೆಗೆದು ಹಾಕಿ ಅರ್ಹರಿಗೆ ಮಾತ್ರ ನೀಡಬೇಕೆಂದು ಕಟ್ಟುನಿಟ್ಟಿನ ಸೂಚನೆಯನ್ನು ಸಮಿತಿ ನೀಡಿತ್ತು.

ಆದರೆ, ಸಹಾಯಧನ ಆಧಾರಿತ ಯೋಜನೆಗಳಿಗೆ ನೀಡುವ ಮೊತ್ತ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಲೇ ಇದೆ. 2018-19ರಲ್ಲಿ 22,989.70 ಕೋಟಿ ರೂ.ಗಳಿರುವ ಸಹಾಯಧನ ಆಧಾರಿತ ಯೋಜನೆಗಳು, 2019-20ರಲ್ಲಿ 25,174.60 ಕೋಟಿ ರೂ.ಗಳಿಗೆ ತಲುಪಲಿದೆ. ಪ್ರತಿ ವರ್ಷ ಹೆಚ್ಚಳ ಮಾಡುತ್ತಲೇ ಹೋದರೆ ಮುಂದೇನು ಎಂಬುದು ಆರ್ಥಿಕ ತಜ್ಞರ ಪ್ರ್ರ್ನೆಯಾಗಿದೆ.

ನೀರಾವರಿ ಪಂಪ್​ಸೆಟ್​ಗಳಿಗೆ 10 ಎಚ್​ಪಿ ತನಕ ಮಾತ್ರ ಉಚಿತ ವಿದ್ಯುತ್ ಇದೆ. ಆದರೆ, 4.5 ಲಕ್ಷ ಅನಧಿಕೃತ ಪಂಪ್​ಸೆಟ್​ಗಳಿವೆ. 10 ಎಚ್​ಪಿಗಿಂತ ಹೆಚ್ಚಿನ ಸಾಮರ್ಥ್ಯದ ಪಂಪ್​ಸೆಟ್​ಗಳು ಉಚಿತ ವಿದ್ಯುತ್ ಪಡೆಯುತ್ತಿವೆ. ಇದರ ಮರು ಸಮೀಕ್ಷೆ ಅಗತ್ಯದ ಬಗ್ಗೆ ಎಸ್ಕಾಂಗಳು ಗಮನಹರಿಸುವಂತೆ ಸರ್ಕಾರ ಕ್ರಮ ಜರುಗಿಸಬೇಕಾಗಿದೆ. ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿಯಲ್ಲಿ ಕೇವಲ ಒಂದು ಬಲ್ಬ್​ಗೆ ಮಾತ್ರ ಬಿಲ್ ಇರಬಾರದೆಂದು ಹೇಳಿದೆ. ಆದರೆ, ಅದಕ್ಕಿಂತ ಹೆಚ್ಚಿರುವವರ ಮನೆಗೆ ಮೀಟರ್ ಹಾಕಬೇಕೆಂದು ಸರ್ಕಾರ ಹಿಂದೆಯೇ ಹೇಳಿದ್ದರೂ ನಿರ್ಲಕ್ಷ್ಯ ಮುಂದುವರಿದಿರುವ ಬಗ್ಗೆ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.

ಆತಂಕದಲ್ಲಿ ವಿತ್ತೀಯ ಕೊರತೆ

ರಾಜ್ಯದ ವಿತ್ತೀಯ ಕೊರತೆ ಜಿಎಸ್​ಡಿಪಿಯ ಶೇ. 3ರ ಒಳಗೆ ಇರಬೇಕು. ಆದರೆ, 2.85ರ ಹತ್ತಿರ ಬಂದಿರುವುದನ್ನು ಮಧ್ಯಮಾವಧಿ ವಿತ್ತೀಯ ಯೋಜನೆ ಗುರುತಿಸಿದೆ. ಸಾಲದ ಪ್ರಮಾಣ ಹೆಚ್ಚಾಗಿರುವುದು ಇದಕ್ಕೆ ಕಾರಣವಾಗಿದೆ. ಸರ್ಕಾರ ನಿಯಂತ್ರಣಕ್ಕೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ.