Wednesday, 12th December 2018  

Vijayavani

ಟ್ರಿನಿಟಿ ಸರ್ಕಲ್​​​ ಬಳಿ ಬಿರುಕು ಬಿಟ್ಟ ಪಿಲ್ಲರ್ - 10 ಕಿಮೀ ವೇಗದಲ್ಲಿ ಮೆಟ್ರೋ ಓಡಾಟ - ಸಮಸ್ಯೆ ಬಗೆಹರಿಸೋದಾಗಿ ಹೇಳಿದ ಸಿಎಂ        ಸದನದ ಹೊರಗೆ NPS ಆದೇಶ ಹಿನ್ನೆಲೆ - ಸಿಎಂ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಬಿಜೆಪಿ ಸಿದ್ದತೆ -  ಸಂಕಷ್ಟ ತಂದ ಪೆನ್ಶನ್‌ ಸ್ಕೀಂ        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -  ರಾಜ್ಯಪಾಲರನ್ನು ಭೇಟಿಯಾಗಿ ಕಾಂಗ್ರೆಸ್ ಹಕ್ಕು ಮಂಡನೆ        ನಾಳೆ ಕೆಸಿಆರ್ ಪಟ್ಟಾಭಿಷೇಕ- ಪ್ರಮಾಣವಚನಕ್ಕೆ ಚಂದ್ರಶೇಖರ್ ರಾವ್ ಸಿದ್ಧತೆ - ರಾಜ್ಯಪಾಲರನ್ನು ಭೇಟಿಯಾದ ನಾಯಕ        ಶ್ರೀರಂಗಪಟ್ಟಣದಲ್ಲಿ ಶೂಟಿಂಗ್ ವೇಳೆ ಅವಾಂತರ - ಭರತ ಬಾಹುಬಲಿ ತಂಡದ ಮೇಲೆ ಹೆಜ್ಜೇನು ದಾಳಿ -ಏಳು ಮಂದಿ ಆಸ್ಪತ್ರೆಗೆ       
Breaking News

105 ಕಿ.ಮೀ. ಮೆಟ್ರೋ ವರ್ತುಲ ಮಾರ್ಗ

Saturday, 17.02.2018, 3:05 AM       No Comments

ನಗರದ ಸಂಚಾರ ದಟ್ಟಣೆ ನಿವಾರಣೆಗಾಗಿ ನಮ್ಮ ಮೆಟ್ರೋ ಜಾಲವನ್ನು ಮತ್ತಷ್ಟು ವಿಸ್ತರಣೆಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. 3ನೇ ಹಂತದ ಮೆಟ್ರೋ ಜಾಲವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದು, ಆ ಮೂಲಕ 105.5 ಕಿ.ಮೀ. ಹೊಸ ಮಾರ್ಗ ನಿರ್ವಣವಾಗಲಿದೆ. ಬಿಎಂಟಿಸಿಯಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ನಿರ್ಭಯಾ ನಿಧಿಯಡಿ ಸಿಸಿ ಕ್ಯಾಮರಾ ಅಳವಡಿಕೆ, ಉಪನಗರ ರೈಲು ಯೋಜನೆಯನ್ನು ಅನುಷ್ಠಾನಗೊಳಿಸುವ ಭರವಸೆಯನ್ನು ಬಜೆಟ್​ನಲ್ಲಿ ಸರ್ಕಾರ ನೀಡಿದೆ.

ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಪರಿಹಾರ ಕಂಡುಹಿಡುಯುವ ನಿಟ್ಟಿನಲ್ಲಿ ಮೆಟ್ರೋ ಜಾಲವನ್ನು ಮತ್ತಷ್ಟು ವಿಸ್ತರಿಸಲು ಸರ್ಕಾರ ಮುಂದಾಗಿದೆ. ಮೆಟ್ರೋ 1 ಮತ್ತು 2ನೇ ಹಂತದ ನಂತರ ಮೆಟ್ರೋ 3ನೇ ಹಂತದ ಮಾರ್ಗವನ್ನು ಸರ್ಕಾರ ಘೋಷಿಸಿದ್ದು, ಈ ಮೂಲಕ ನಗರದ ಬಹುತೇಕ ಪ್ರದೇಶಕ್ಕೆ ಮೆಟ್ರೋ ಸಂಪರ್ಕ ಸಿಕ್ಕಂತಾಗಲಿದೆ.

ಪ್ರಸ್ತುತ ಮೆಟ್ರೋ ಮೊದಲನೇ ಹಂತ ನಗರದ 4 ದಿಕ್ಕುಗಳನ್ನಷ್ಟೇ ಸಂರ್ಪಸುತ್ತಿದೆ. ಮೆಟ್ರೋ 2ನೇ ಹಂತದಲ್ಲಿ ನಗರದ ಮತ್ತಷ್ಟು ಪ್ರಮುಖ ಪ್ರದೇಶಗಳಿಗೆ ಮೆಟ್ರೋ ಸಾಗಲಿದೆ. 3ನೇ ಹಂತದಲ್ಲಿ ವರ್ತಲ ಮೆಟ್ರೋ ಯೋಜನೆ ಜಾರಿಯಾಗುತ್ತಿದೆ. ಮೆಟ್ರೋ 1 ಮತ್ತು 2ನೇ ಹಂತವನ್ನು ಸಂರ್ಪಸುವಂತೆ ವೃತ್ತಾಕಾರವಾಗಿ ಹೊಸ ಮಾರ್ಗ ನಿರ್ವಣವಾಗಲಿದೆ.

ಎಲ್ಲಿಂದ-ಎಲ್ಲಿಗೆ?: 3ನೇ ಹಂತದಲ್ಲಿ ಜೆ.ಪಿ.ನಗರ ಮೆಟ್ರೋ ನಿಲ್ದಾಣದಿಂದ ನಾಯಂಡಹಳ್ಳಿ-ಪೀಣ್ಯ-ಹೆಬ್ಬಾಳದ ಮೂಲಕ ಹೊರ ವರ್ತಲ ರಸ್ತೆಯಲ್ಲೇ ಕೆ.ಆರ್.ಪುರದವರೆಗೆ, ಟೋಲ್​ಗೇಟ್​ನಿಂದ ಮಾಗಡಿ ಮುಖ್ಯ ರಸ್ತೆಯ ಮೂಲಕ ಕಡಬಗೆರೆ, ಗೊಟ್ಟಿಗೆರೆ ಮಾರ್ಗ ವಿಸ್ತರಣೆಯಾಗಿ ಬಸವಾಪುರದವರೆಗೆ, ಆರ್.ಕೆ. ಹೆಗಡೆ ನಗರದಿಂದ ಏರೋಸ್ಪೇಸ್ ಪಾರ್ಕ್, ಕೋಗಿಲು ಕ್ರಾಸ್​ನಿಂದ ರಾಜಾನುಕುಂಟೆ, ಬೊಮ್ಮಸಂದ್ರದಿಂದ ಅತ್ತಿಬೆಲೆ, ಇಬ್ಬಲೂರಿನಿಂದ ಕಾರ್ಮಲ್​ರಾಮ್ ಮಾರ್ಗ ನಿರ್ವಣಕ್ಕೆ ಸರ್ಕಾರ ನಿರ್ಧರಿಸಿದೆ.

105 ಕಿ.ಮೀ.ಯ 3ನೇ ಹಂತ ಪೂರ್ಣವಾದ ಬಳಿಕ ಮೊದಲನೇ ಹಂತದ 43 ಕಿ.ಮೀ., 2 ನೇ ಹಂತದ 72 ಕಿ.ಮೀ. ಸೇರಿ ಒಟ್ಟು 200 ಕಿ.ಮೀ.ಗೂ ಹೆಚ್ಚು ಉದ್ದದ ಮೆಟ್ರೋ ಮಾರ್ಗ ಬೆಂಗಳೂರು ನಗರದಲ್ಲಿರಲಿದೆ. ಸರ್ಕಾರ ತಿಳಿಸಿರುವ 3 ನೇ ಹಂತದಲ್ಲಿ ಮಾರತಹಳ್ಳಿ-ಟ್ರಿನಿಟಿ ಮೆಟ್ರೋ ಮಾರ್ಗ ಕೈಬಿಡಲಾಗಿದೆ. ಈ ಮಾರ್ಗದಲ್ಲಿ ಪಾಡ್ ಟ್ಯಾಕ್ಸಿ ನಿರ್ವಣಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿರುವ ಕಾರಣ ಈ ಮಾರ್ಗವನ್ನು 3ನೇ ಹಂತದಿಂದ ಕೈಬಿಡಲಾಗಿದೆ ಎನ್ನಲಾಗಿದೆ.

 2021ಕ್ಕೆ 2ನೇ ಹಂತ ಪೂರ್ಣ!

ನಮ್ಮ ಮೆಟ್ರೋ 2ನೇ ಹಂತ ಸಂಪೂರ್ಣವಾಗಿ ಸಂಚಾರಮುಕ್ತಗೊಳ್ಳಲು 2021ರ ಮಾರ್ಚ್ ವರೆಗೆ ಕಾಯಬೇಕು. ಈ ಕುರಿತು ಬಜೆಟ್​ನಲ್ಲೇ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. 26 ಸಾವಿರ ಕೋಟಿ ರೂ. ವೆಚ್ಚದ 72 ಕಿ.ಮೀ. ಮಾರ್ಗ 2021 ಮಾರ್ಚ್ ಒಳಗೆ ಸಂಚಾರಮುಕ್ತಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಯೋಜನೆಗೆ ಒಪ್ಪಿಗೆ ನೀಡುವ ಸಂದರ್ಭದಲ್ಲಿ 2020ರೊಳಗೆ 2ನೇ ಹಂತ ಪೂರ್ಣಗೊಳಿಸುವ ಗುರಿಯನ್ನು ಬಿಎಂಆರ್​ಸಿಎಲ್​ಗೆ ಸರ್ಕಾರ ನೀಡಿತ್ತು.

ಉಪನಗರ ರೈಲು ಯೋಜನೆಗೆ ಎಸ್​ಪಿವಿ ರಚಿಸಲು ನಿರ್ಧಾರ

ಕೇಂದ್ರ ಸರ್ಕಾರ ಬಜೆಟ್​ನಲ್ಲಿ 17 ಸಾವಿರ ಕೋಟಿ ರೂ. ಯೋಜನಾ ವೆಚ್ಚದ ಬೆಂಗಳೂರು ಉಪನಗರ ರೈಲು ಯೋಜನೆ ಘೋಷಿಸಿರುವುದನ್ನು ಸ್ವಾಗತಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಯೋಜನೆ ಅನುಷ್ಠಾನಗೊಳಿಸಲು ವಿಶೇಷ ಉದ್ದೇಶ ವಾಹಕ (ಎಸ್​ಪಿವಿ) ರಚಿಸಲು ನಿರ್ಧರಿಸುವುದಾಗಿ ಹೇಳಿದ್ದಾರೆ.

2013ರಿಂದ ರಾಜ್ಯ ಸರ್ಕಾರ ಬೆಂಗಳೂರು ಉಪನಗರ ರೈಲು ಯೋಜನೆ ಅನುಷ್ಠಾನಕ್ಕೆ ಕಾರ್ಯೋನ್ಮುಖವಾಗಿದೆ. 2016ರಲ್ಲಿ ರಾಜ್ಯ ಸರ್ಕಾರ ಡೆಮು (ಡೀಸೆಲ್ ಚಾಲಿತ) ರೈಲುಗಳ ಬದಲಾಗಿ ಮೆಮು(ಎಲೆಕ್ಟ್ರಿಕ್ ರೈಲು) ರೈಲು ಖರೀದಿಗೆ ತನ್ನ ಪಾಲಿನ 280 ಕೋಟಿ ರೂ. ನೀಡಿದೆ. ಯೋಜನೆ ಜಾರಿಗೆ ರೈಲ್ವೆ ಇಲಾಖೆ ಜತೆ ಕೈಜೋಡಿಸಲಾಗುವುದು. 1,745 ಕೋಟಿ ರೂ. ವೆಚ್ಚದಲ್ಲಿ ಯೋಜನೆಯ ಮೊದಲನೇ ಹಂತ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದ್ದು,

ಎಸ್​ಪಿವಿಯ ಈಕ್ವಿಟಿಗಾಗಿ ರಾಜ್ಯ ಸರ್ಕಾರ 349 ಕೋಟಿ ರೂ. ಬಿಡುಗಡೆಗೊಳಿಸಿದೆ ಎಂದು ಬಜೆಟ್ ಭಾಷಣದಲ್ಲಿ ತಿಳಿಸಿದರು. ಎಸ್​ಪಿವಿ ರಚನೆಗೆ ಸರ್ಕಾರ ಸಿದ್ಧವಾಗಿರುವುದನ್ನು ಗಮನಿಸಿದರೆ ಯೋಜನಾ ವೆಚ್ಚದ ಶೇ.60 ನ್ನು ಎಸ್​ಪಿವಿಯೇ ಸಾಲದ ಮೂಲಕ ಭರಿಸುವ ಸಾಧ್ಯತೆಯಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ತಲಾ ಶೇ.20 ಯೋಜನಾ ವೆಚ್ಚ ಭರಿಸುವ ಸಾಧ್ಯತೆಯಿದೆ. ಆದರೆ, ಈ ಕುರಿತು ಅಧಿಕೃತವಾದ ಒಪ್ಪಂದ ರೈಲ್ವೆ ಇಲಾಖೆ ಜತೆ ಇನ್ನಷ್ಟೇ ಆಗಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಯೋಜನೆ ಅನುಷ್ಠಾನಕ್ಕೆ ಆಸಕ್ತಿವಹಿಸಿರುವುದು ಸ್ವಾಗತಾರ್ಹ. ಈ ಆಸಕ್ತಿ ಬಜೆಟ್​ಗೆ ಸೀಮಿತವಾಗದೆ ಶೀಘ್ರ ಯೋಜನೆ ಕಾರ್ಯರೂಪಕ್ಕೆ ತರುವ ಕುರಿತು ಕೆಲಸ ಆರಂಭಿಸಬೇಕು. ಎಸ್​ಪಿವಿ ರಚಿಸಿ ಮೊದಲ ಹಂತದ ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಕರ್ನಾಟಕ ರೈಲ್ವೆ ವೇದಿಕೆ ಸದಸ್ಯ ಕೃಷ್ಣ ಪ್ರಸಾದ್ ಆಗ್ರಹಿಸಿದ್ದಾರೆ.

ಸಾವಿರ ಬಸ್​ನಲ್ಲಿ ಸಿಸಿ ಕ್ಯಾಮರಾ

ಮಹಿಳಾ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ, ಕೇಂದ್ರ ಸರ್ಕಾರದ ನಿರ್ಭಯಾ ನಿಧಿ ಉಪಯೋಗಿಸಿಕೊಂಡು ಬಿಎಂಟಿಸಿಯ 1 ಸಾವಿರ ಬಸ್​ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಈಗಾಗಲೇ ನಿಗಮದ 600ಕ್ಕೂ ಅಧಿಕ ಬಸ್​ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಯಾಗಿದ್ದು, ನೂತನವಾಗಿ ಸೇರ್ಪಡೆಯಾಗುತ್ತಿರುವ ಬಸ್​ಗಳಲ್ಲಿ ಸಿಸಿ ಕ್ಯಾಮರಾವಿದೆ. ಹಳೆಯ ಬಸ್​ಗಳಿಗೂ ಸಿಸಿ ಕ್ಯಾಮರಾ ಅಳವಡಿಕೆಗೆ ಇದೀಗ ಸರ್ಕಾರ ನಿರ್ಧರಿಸಿದೆ.

ಘೋಷಣೆಯಾಗದ ಬಸ್ ಸೇವೆ!

ಗಾರ್ವೆಂಟ್ಸ್ ಕಾರ್ವಿುಕರಿಗೆ ಮತ್ತು ಕಟ್ಟಡ ಕಾರ್ವಿುಕರಿಗೆ ರಿಯಾಯಿತಿ ದರದ ಇಂದಿರಾ ಪಾಸ್ ಮತ್ತು ಮಹಿಳೆಯರ ಪ್ರಯಾಣಕ್ಕಾಗಿ ಮಾತ್ರ ಇಂದಿರಾ ಬಸ್ ಸೇವೆ ಆರಂಭಿಸುವ ಉದ್ದೇಶವನ್ನು ಸಾರಿಗೆ ಸಚಿವರು ಹೊಂದಿದ್ದರು. ಈ ಯೋಜನೆ ಬಜೆಟ್​ನಲ್ಲಿ ಘೋಷಣೆಯಾಗುವ ನಿರೀಕ್ಷೆಯಿತ್ತಾದರೂ ಪ್ರಕಟವಾಗಿಲ್ಲ. ಕಳೆದೆರಡು ಬಜೆಟ್​ನಿಂದ ಇದ್ದ ರಿಯಾಯಿತಿ ದರದ ಪಾಸ್ ನಿರೀಕ್ಷೆ ಮತ್ತೆ ಹುಸಿಯಾಗಿದೆ.

ಮಾರ್ಗ ಬದಲು ಅನುಮಾನ?

ಜೆ.ಪಿ. ನಗರ-ನಾಯಂಡಹಳ್ಳಿ ಹೊರವರ್ತಲ ಮಾರ್ಗದಲ್ಲಿ ಹೊಸ ಮೇಲ್ಸೇತುವೆ, ಅಂಡರ್​ಪಾಸ್ ಮುಂತಾದ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಈ ಮಾರ್ಗ ವಾಗಿ ಮೆಟ್ರೋ ಕಾಮಗಾರಿ ಅಸಾಧ್ಯ. ಈ ಕಾರಣದಿಂದ 3ನೇ ಹಂತದಲ್ಲಿ ಬರುವ ಜೆ.ಪಿ. ನಗರ- ಹೆಬ್ಬಾಳ- ಕೆ.ಆರ್. ಪುರ ಮೆಟ್ರೋ ಮಾರ್ಗವನ್ನು ಜೆ.ಪಿ. ನಗರದ ಬದಲಾಗಿ ಕೆಂಗೇರಿ ಬಳಿಯಿಂದ ಪ್ರಾರಂಭಿಸಲು ನಿಗಮ ಚಿಂತನೆ ನಡೆಸಿದೆ. ಆದರೆ, ಬಜೆಟ್​ನಲ್ಲಿ ಜೆ.ಪಿ. ನಗರದಿಂದಲೇ ನಾಯಂಡಹಳ್ಳಿ-ಹೆಬ್ಬಾಳ-ಕೆ.ಆರ್.ಪುರ ಮಾರ್ಗ ನಿರ್ವಣವಾಗಲಿದೆ ಎಂದು ಘೋಷಿಸಿರುವುದು ಮಾರ್ಗ ಬದಲಾವಣೆ ಬಗ್ಗೆ ಗೊಂದಲ ಮೂಡಿಸಿದೆ.

ಚುನಾವಣೆ ಕಾಲದಲ್ಲಿ ಮಂಡನೆ ಮಾಡುವ ಬಜೆಟ್ ಕೇವಲ ಗಿಮಿಕ್ ಅಷ್ಟೆ. ಇದರಿಂದ ಯಾವ ನಿರೀಕ್ಷೆಯೂ ಇಲ್ಲ. ಉತ್ತರಪ್ರದೇಶ, ಮಹಾರಾಷ್ಟ್ರಗಳಲ್ಲಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಆದರೆ, ಸಿದ್ದರಾಮಯ್ಯವವರು 8 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿರುವೆ ಎಂದು ಹೇಳಿಕೊಳ್ಳುತ್ತಿದ್ದಾರೆ.

| ಶೋಭಾ ಕರಂದ್ಲಾಜೆ ಸಂಸದೆ


ಕಾಫಿ ಬೆಳೆಗಾರರ ಹತ್ತು ಎಕರೆವರೆಗಿನ ಅನಧಿಕೃತ ಸಾಗುವಳಿಯನ್ನು ಭೋಗ್ಯದ ಮೇಲೆ ನೀಡುವ ತೀರ್ಮಾನ ಸ್ವಾಗತಾರ್ಹ. ನಂಜುಂಡಸ್ವಾಮಿ ಹೆಸರಿನಲ್ಲಿ ಜಿಕೆವಿಕೆಯಲ್ಲಿ ಕೃಷಿ ಸಂಶೋಧನೆ ಕೇಂದ್ರಕ್ಕೆ 11 ಕೋಟಿ ರೂ. ನಿಗದಿ, ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್​ಪಾಸ್ ಉತ್ತಮ ಘೋಷಣೆ.

| ಸಚಿನ್ ಮೀಗಾ ಅಧ್ಯಕ್ಷರು ಕೆಪಿಸಿಸಿ ಕಿಸಾನ್ ಘಟಕ

 


 

ಚುನಾವಣೆ ಹಿನ್ನೆಲೆಯಲ್ಲಿ ಜನರಿಗೆ ಸಿಹಿಯಾದ ಬಜೆಟ್ ನೀಡಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಎಲ್ಲ ವರ್ಗದವರಿಗೂ ನಿರಾಸೆ ಉಂಟಾಗಿದೆ. ಬಜೆಟ್​ನಲ್ಲಿ ಯಾವುದೇ ಜನಪರ ಘೋಷಣೆ ಇಲ್ಲದಿರುವುದನ್ನು ಗಮನಿಸಿದರೆ ಸಿದ್ದರಾಮಯ್ಯ ಸರ್ಕಾರ ಚುನಾವಣೆಗೂ ಮುನ್ನವೇ ಸೋಲನ್ನೊಪ್ಪಿಕೊಂಡಂತಿದೆ.

| ಆರ್. ಅಶೋಕ್ ಶಾಸಕ


ಚುನಾವಣೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮೂಲಕ ಹೆಬ್ಬಾವು ಬಿಡಬಹುದೆಂಬ ನಿರೀಕ್ಷೆ ಮಾಡಿದ್ದೆವು. ಆದರೆ, ನೀರುಹಾವನ್ನು ಬಿಟ್ಟಿದ್ದಾರೆ. ಬಜೆಟ್ ಎಲ್ಲರ ನಿರೀಕ್ಷೆ ಹುಸಿಗೊಳಿಸಿದ್ದು, ಆಡಳಿತ ಪಕ್ಷದ ಸದಸ್ಯರಿಗೇ ಬೇಸರ ತರಿಸಿದೆ. ಅವರು ಮೇಜುಕುಟ್ಟಿ ಹರ್ಷ ವ್ಯಕ್ತಪಡಿಸುವ ಆಸಕ್ತಿಯನ್ನೂ ತೋರಲಿಲ್ಲ.

| ಸಿ.ಟಿ. ರವಿ ಶಾಸಕ


ಕೆರೆ ಸಂರಕ್ಷಣೆ ನಿರೀಕ್ಷೆ ಹುಸಿ

ಬೆಂಗಳೂರು: ಸಿಲಿಕಾನ್ ಸಿಟಿಯ ಕುಡಿಯುವ ನೀರು, ಒಳಚರಂಡಿ ಸೌಕರ್ಯಕ್ಕೆ ಈ ಬಾರಿಯ ಬಜೆಟ್​ನಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡಿಲ್ಲ. ಕೆರೆಗಳ ಸಂರಕ್ಷಣೆಗೆ ಈ ಬಾರಿ ಹೆಚ್ಚಿನ ಒತ್ತು ಸಿಗಬಹುದೆಂಬ ನಿರೀಕ್ಷೆಯೂ ಹುಸಿಯಾಗಿದೆ.

ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ಕಡಿಮೆಗೊಳಿಸುವುದು, ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಕಾಮಗಾರಿ ಪೂರ್ಣಗೊಳಿಸುವುದು, ಕೇಂದ್ರ ಸರ್ಕಾರದ ಅಮೃತ್ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಒಳಚರಂಡಿ ಮಾರ್ಗಗಳ ಪುನಶ್ಚೇತನ ಕಾಮಗಾರಿ ಪೂರ್ಣಗೊಳಿಸುವುದು, ಬಿಬಿಎಂಪಿಗೆ ಸೇರ್ಪಡೆಯಾಗಿರುವ 110 ಹಳ್ಳಿಗಳ ಒಳಚರಂಡಿ, ಕುಡಿಯುವ ನೀರಿನ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಸರ್ಕಾರ ತಿಳಿಸಿದೆ.

ನೀರಿನ ವಿಚಾರದಲ್ಲಿ ಕಾವೇರಿ ನದಿಯನ್ನು ಬೆಂಗಳೂರು ಅವಲಂಬಿಸಬೇಕಿದೆ. ಏಷ್ಯನ್ ಅಭಿವೃದ್ಧಿ ಬ್ಯಾಂಕ್ ವರದಿ ಬಿತ್ತರಿಸಿದ್ದ ಬಿಬಿಸಿ ವಾಹಿನಿ ಕೂಡ ರಾಜಧಾನಿಗೆ ಕಾದಿರುವ ಅಪಾಯದ ಕುರಿತು ಎಚ್ಚರಿಕೆ ನೀಡಿತ್ತು. ಕೆರೆಗಳ ಸಂರಕ್ಷಣೆ ಅತ್ಯಗತ್ಯ ಎಂಬ ಹಿನ್ನೆಲೆಯಲ್ಲಿ ಈ ಬಾರಿ ಬಜೆಟ್​ನಲ್ಲಿ ಸಹಜವಾಗಿಯೇ ಹಲವು ಘೋಷಣೆಗಳನ್ನು ನಿರೀಕ್ಷಿಸಲಾಗಿತ್ತು.

ಯೋಜನೆಗಳ ಮುಂದುವರಿಕೆ

# 2012-13 ರಲ್ಲಿ ಕೈಗೊಂಡ ಲೆಕ್ಕಕ್ಕೆ ಸಿಗದ ನೀರಿನ ಸೋರಿಕೆ ಪ್ರಮಾಣ ಇಳಿಕೆ ಮಾಡುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಂಡು 2017-18ರವರೆಗೆ ಶೇ. 49ರ ಸೋರಿಕೆ ಪ್ರಮಾಣವನ್ನು ಶೇ. 40ಕ್ಕೆ ಇಳಿಸಲಾಗಿದೆ. 2018-19ಕ್ಕೆ ಶೇ. 37ಕ್ಕೆ ಇಳಿಸುವ ಗುರಿ.

# ಜಪಾನ್ ಅಂತಾರಾಷ್ಟ್ರೀಯ ಸಹಕಾರಿ ಸಂಸ್ಥೆ (ಜೈಕಾ) ನೆರವಿನೊಂದಿಗೆ ಕಾವೇರಿ ನೀರು ಸರಬರಾಜು ಯೋಜನೆ 4ನೇ ಘಟ್ಟದ 2ನೇ ಹಂತದಲ್ಲಿ 937 ಕೋಟಿ ರೂ. ವೆಚ್ಚದಲ್ಲಿ 336 ದಶಲಕ್ಷ ಲೀಟರ್ ಸಾಮರ್ಥ್ಯದ 10 ಎಸ್​ಟಿಪಿಗಳ ನಿರ್ಮಾಣ ಕಾರ್ಯ ಪೂರ್ಣ.

# ರಾಜ್ಯ ಸರ್ಕಾರದ ಮೆಗಾಸಿಟಿ ಯೋಜನೆಯಡಿ 1,209 ಕೋಟಿ ರೂ. ವೆಚ್ಚದಲ್ಲಿ 440 ಎಂಎಲ್​ಡಿ ಸಾಮರ್ಥ್ಯದ 4 ಎಸ್​ಟಿಪಿಗಳ ಪ್ರಾರಂಭ, ಅಮೃತ್ ಯೋಜನೆಯಡಿಯಲ್ಲಿ 129 ಕೋಟಿ ರೂ.ಗಳ ವೆಚ್ಚದಲ್ಲಿ 5 ಎಸ್​ಟಿಪಿಗಳ ನಿರ್ವಣ, ಒಟ್ಟಾರೆ 2020ರ ವೇಳೆಗೆ 1,572 ದಶಲಕ್ಷ ಲೀಟರ್ ಸಂಸ್ಕರಿಸುವ ಘಟಕಗಳ ನಿರ್ಮಾಣ ಕಾರ್ಯ ಪೂರ್ಣ.

# ನಗರದಲ್ಲಿ ಒಳಚರಂಡಿ ಕೊಳವೆ ಮಾರ್ಗಗಳ ಪುನಶ್ಚೇತನ ಹಾಗ ಜಲರೇಚಕ ಯಂತ್ರಗಳ ಸ್ಥಾಪನೆಗಾಗಿ 800 ಕೋಟಿ ರೂ. ವೆಚ್ಚದಲ್ಲಿ 11 ವಿವಿಧ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

# ಬಿಬಿಎಂಪಿ ವ್ಯಾಪ್ತಿಗೆ ಸೇರಿರುವ 110 ಹಳ್ಳಿಗಳಿಗೆ ಕುಡಿಯುವ ನೀರು ಮತ್ತು ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ಕಡಿಮೆ ಮಾಡುವ ಯೋಜನೆಗೆ ಈಗಾಗಲೇ 1,500 ಕೋಟಿ ರೂ.ಗಳನ್ನು ಒದಗಿಸಲಾಗಿದ್ದು, -ಠಿ;1,000 ಕೋಟಿ ವೆಚ್ಚದಲ್ಲಿ ಈ ಗ್ರಾಮಗಳಿಗೆ ಒಳಚರಂಡಿ ವ್ಯವಸ್ಥೆ ಜಾಲ 2019ರ ಮಾರ್ಚ್ ವೇಳೆಗೆ ಪೂರ್ಣಗೊಳಿಸುವ ಗುರಿ.

# ಕೊಳಚೆ ಪ್ರದೇಶಗಳಲ್ಲಿ ಎಸ್ಸಿ, ಎಸ್ಟಿ ಕುಟುಂಬಗಳಿಗೆ ಪ್ರತಿ ತಿಂಗಳು 10 ಸಾವಿರ ಲೀಟರ್ ಕುಡಿಯುವ ನೀರನ್ನು ಉಚಿತವಾಗಿ ನೀಡುವ ಸಂಬಂಧ ಕಳೆದ ಬಜೆಟ್​ನಲ್ಲಿ ಘೋಷಿಸಿದಂತೆ 31 ಕೋಟಿ ರೂ. ಬಾಕಿ ಬಿಲ್ ಹಾಗೂ ಬಿಲ್​ನ ಮೇಲಿನ 22 ಕೋಟಿ ರೂ.ಗಳನ್ನು ಸರ್ಕಾರ ಮನ್ನಾ ಮಾಡಿದೆ.

# ಜೈಕಾ ನೆರವಿನೊಂದಿಗೆ 5,500 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ಐದನೇ ಹಂತದ ವಿಸ್ತರಣೆ, 2023ರ ವೇಳೆಗೆ ಬೆಂಗಳೂರಿಗೆ 775 ದಶಲಕ್ಷ ಲೀಟರ್ ನೀರು ಮತ್ತು 110 ಹಳ್ಳಿಗಳ ವ್ಯಾಪ್ತಿಯಲ್ಲಿ ಎಸ್​ಟಿಪಿಗಳ ನಿರ್ಮಾಣ

# ತಿಪ್ಪಗೊಂಡನಹಳ್ಳಿ ಮತ್ತು ಹೆಸರಘಟ್ಟ ಜಲಾಶಯಗಳ ಪುನಶ್ಚೇತನಕ್ಕೆ 340 ಕೋಟಿ ರೂ.ಗಳನ್ನು ಒದಗಿಸಲಾಗುವುದು. ಎತ್ತಿನಹೊಳೆಯಿಂದ ಲಭ್ಯವಾಗುವ 2.5 ಟಿಎಂಸಿ ನೀರನ್ನು ಬೆಂಗಳೂರು ನಗರಕ್ಕೆ ಪೂರೈಸಲಾಗುವುದು. 2021ರೊಳಗಾಗಿ ಪ್ರತಿದಿನ ಈ ಯೋಜನೆ ಮೂಲಕ ನಗರಕ್ಕೆ 200 ಎಂಎಲ್​ಡಿ ನೀರು ನೀಡಲಾಗುತ್ತದೆ.

ಸರ್ಕಾರ ಕಳೆದ ವರ್ಷವೇ ಜಲಮಂಡಳಿಗೆ ಸಂಬಂಧಿಸಿದಂತೆ ಹೆಚ್ಚು ಅನುದಾನ ಒದಗಿಸಿದೆ. ಕೊಳೆಗೇರಿ ಪ್ರದೇಶಗಳಲ್ಲಿನ ಮನೆಗಳಿಗೆ ನೀರಿನ ಬಾಕಿ ಶುಲ್ಕ ಮತ್ತು ಅದರ ಮೇಲಿನ ಬಡ್ಡಿಯನ್ನು ಕಳೆದ ವರ್ಷವೇ ಮನ್ನಾ ಮಾಡಿದೆ. ಅಲ್ಲದೇ 10 ಸಾವಿರ ಲೀಟರ್​ವರೆಗೆ ಉಚಿತ ನೀರು ಒದಗಿಸಲು ಪ್ರತಿವರ್ಷ ಸರ್ಕಾರ ಹಣ ಬಿಡುಗಡೆ ಮಾಡಬೇಕಿದೆ. ಇದಲ್ಲದೇ 110 ಹಳ್ಳಿಗಳಿಗೆ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಯೋಜನೆ ಕೈಗೊಳ್ಳಲಾಗಿದ್ದು, ದೀರ್ಘಾವಧಿಯ ಬಹಳಷ್ಟು ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ಅನುದಾನ ನೀಡಿದ್ದು, ಅವುಗಳನ್ನು ಪೂರ್ಣಗೊಳಿಸುವತ್ತ ಗಮನಹರಿಸಲಾಗುವುದು.

| ಕೆಂಪರಾಮಯ್ಯ ಜಲಮಂಡಳಿ ಪ್ರಧಾನ ಅಭಿಯಂತರ


ಮೂಲಸೌಕರ್ಯಗಳ ಬಗ್ಗೆ ಗಮನವಿಲ್ಲ

| ಕಾತ್ಯಾಯಿನಿ ಚಾಮರಾಜ್ ನಗರ ಯೋಜನಾ ತಜ್ಞೆ

ರಸ್ತೆ ಮೇಲ್ದರ್ಜೆಗೇರಿಸಿದರಷ್ಟೇ ಬೆಂಗಳೂರು ಅಭಿವೃದ್ಧಿಯಾಗುತ್ತದೆ ಎಂದು ಸರ್ಕಾರ ತಿಳಿದಂತಿದೆ. ಅದಕ್ಕಾಗಿಯೇ ಕಳೆದ ಮೂರು ವರ್ಷಗಳಿಂದ ರಸ್ತೆಗಳಿಗಾಗಿಯೇ 7 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಹಣ ಮೀಸಲಿಡಲಾಗುತ್ತಿದೆ. ಅದನ್ನು ಹೊರತುಪಡಿಸಿದರೆ ಉಳಿದ ಯಾವುದೇ ಪ್ರಮುಖ ಯೋಜನೆಗಳಿಗೆ, ಸಮಸ್ಯೆ ನಿವಾರಣೆಗೆ ಹಣ ಮೀಸಲಿಟ್ಟಿಲ್ಲ. ಆಮೂಲಕ ನಗರ ಮೂಲ ಸೌಕರ್ಯ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನಹರಿಸಿಲ್ಲ. ಪ್ರಮುಖವಾಗಿ ತ್ಯಾಜ್ಯ ಸಮಸ್ಯೆ ನಿವಾರಣೆ, ಮಳೆಯಿಂದ ಉಂಟಾಗುವ ಪ್ರವಾಹಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ಯಾವುದೇ ಯೋಜನೆ ಘೋಷಿಸಿಲ್ಲ. ಪ್ರತಿ ವಾರ್ಡ್​ನಲ್ಲೂ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ. ಅಲ್ಲದೆ ಆ ಬಗ್ಗೆ ಬಿಬಿಎಂಪಿಗೆ ಖಡಕ್ ಎಚ್ಚರಿಕೆಯನ್ನೂ ನೀಡಿದೆ. ಆದರೆ, ಅದಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಯೋಜನೆ ಪ್ರಕಟಿಸಿಲ್ಲ ಹಾಗೂ ಅನುದಾನ ಮೀಸಲಿಟ್ಟಿಲ್ಲ. ಮಳೆ ಬಂದಾಗಲೆಲ್ಲ ನಗರದಲ್ಲಿ ಪ್ರವಾಹದ ಸ್ಥಿತಿ ನಿರ್ವಣವಾಗುತ್ತಿದೆ. ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲೂ ಸರ್ಕಾರ ಮುಂದಾಗಿಲ್ಲ. ಮೆಟ್ರೋ ರೈಲು ವ್ಯವಸ್ಥೆ ಗಟ್ಟಿಗೊಳಿಸಲು ಹೊಸ ಯೋಜನೆ ರೂಪಿಸಿದೆ.

ಅದರೆ, ಬಿಎಂಟಿಸಿಯನ್ನು ನಿರ್ಲಕ್ಷಿಸಲಾಗಿದೆ. ರಸ್ತೆಗೆ ಕೋಟ್ಯಂತರ ರೂ. ಖರ್ಚು ಮಾಡಿ ಭೂ ಸಾರಿಗೆಗೆ ಅದರಲ್ಲೂ ಸಮೂಹ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡದಿರುವುದು ದುರದೃಷ್ಟಕರ. ಬಿಎಂಟಿಸಿ ಬಸ್​ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಯನ್ನು ಪ್ರಸ್ತಾಪಿಸಿದ್ದು ಬಿಟ್ಟರೆ ಪ್ರಯಾಣಿಕರಿಗೆ ಅನುಕೂಲವಾಗುವಂತಹ ಬೇರೆ ಯಾವುದೇ ಯೋಜನೆಯನ್ನು ಪ್ರಸ್ತಾಪಿಸಿಲ್ಲ.

ಬೆಂಗಳೂರಿನಲ್ಲಿ ಬಹುಮಹಡಿ ವಸತಿ ಕಟ್ಟಡ ನಿರ್ವಣಕ್ಕೆ 2 ಸಾವಿರ ಎಕರೆ ಮೀಸಲಿರಿಸುವುದಾಗಿ ತಿಳಿಸಲಾಗಿದೆ. ಆದರೆ, ಆ ಮನೆಗಳ ನಿರ್ಮಾಣ ಯಾವಾಗ, ಅದಕ್ಕೆ ಹಣ ಎಷ್ಟು ಮೀಸಲಿಡಲಾಗಿದೆ, ಆ ಮನೆಗಳನ್ನು ಯಾರಿಗೆ ಹಂಚಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಹೀಗಾಗಿ ಈ ಯೋಜನೆ ಕೇವಲ ಬಜೆಟ್ ಪುಸ್ತಕಕ್ಕೆ ಸೀಮಿತವಾಗಲಿದೆ ಎಂಬ ಅನುಮಾನವಿದೆ. ಉಳಿದಂತೆ ಕೊಳೆಗೇರಿಗಳ ಅಭಿವೃದ್ಧಿ ಬಗ್ಗೆ ಯಾವುದೇ ರೀತಿಯ ಯೋಜನೆಗಳನ್ನು ಘೋಷಿಸಿಲ್ಲ. ಇದು ಕೂಡ ಸರ್ಕಾರ ಕೊಳೆಗೇರಿಗಳ ಬಗ್ಗೆ ನಿರ್ಲಕ್ಷ್ಯ ಹೊಂದಿರುವುದರ ಸಂಕೇತವಾಗಿದೆ.

ಈ ಎಲ್ಲ ಕಾರಣಗಳಿಂದಾಗಿ ಬೆಂಗಳೂರಿನ ಮಟ್ಟಿಗೆ ರಾಜ್ಯ ಸರ್ಕಾರದ ಬಜೆಟ್ ಸಿಹಿಗಿಂತ ಕಹಿಯೇ ಹೆಚ್ಚಾಗಿದೆ. ನಗರಕ್ಕೆ ಅಗತ್ಯವಿರುವ ಯಾವುದೇ ಯೋಜನೆ ಘೋಷಣೆ ಮಾಡದೆ ನಿರ್ಲಕ್ಷ್ಯ ವಹಿಸುವ ಮೂಲಕ, ಬಜೆಟ್ ನಿರರ್ಥಕ ಎನ್ನುವಂತಾಗಿದೆ.


ಬಜೆಟ್ ಭಾಷಣದಲ್ಲಿಯೇ ಬಿಜೆಪಿಗೆ ಲೆಕ್ಕ ನೀಡಿದ ಸಿಎಂ

ಬೆಂಗಳೂರು: ಆಯವ್ಯಯ ಎಂದರೆ ನನ್ನ ಪಾಲಿಗೆ ಕೇವಲ ನಿರ್ಜೀವ ಲೆಕ್ಕಗಳ ಗಣಿತವಲ್ಲ, ರಾಜ್ಯದ ಪ್ರತಿಯೊಬ್ಬ ಪ್ರಜೆಯ ನಿತ್ಯ ಬದುಕಿನ ಲೆಕ್ಕ ಎಂದು ಬಜೆಟ್ ಭಾಷಣದಲ್ಲಿ ಪ್ರಕಟಿಸುವ ಮೂಲಕ, ಲೆಕ್ಕ ಕೊಡಿ ಎಂಬ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರಿಗೆ ಉತ್ತರ ನೀಡಿದ್ದಾರೆ.

ಇತ್ತೀಚೆಗೆ ಸಂವಿಧಾನ ಬದಲಾವಣೆ ಕುರಿತಂತೆ ನಡೆದಿರುವ ವ್ಯಾಪಕ ಚರ್ಚೆಗೆ ಪ್ರತಿಯಾಗಿ, ಒಬ್ಬ ಸಾಮಾನ್ಯ ರೈತನ ಮಗನಿಗೂ 13ನೇ ಬಾರಿ ಬಜೆಟ್ ಮಂಡನೆ ಭಾಗ್ಯ ಬಂದಿರುವುದೇ ನಿಜವಾದ ಪ್ರಜಾಪ್ರಭುತ್ವದ ಸೌಂದರ್ಯ. ಇದಕ್ಕಾಗಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್​ಗೆ ತಲೆ ಬಾಗುತ್ತೇನೆ ಎಂದು ಬಜೆಟ್ ಲಿಖಿತ ಭಾಷಣದಲ್ಲಿ ಹೇಳಿದ್ದಾರೆ.

ಲೆಕ್ಕ ಕೇಳುವ ಹಕ್ಕು ರಾಜ್ಯದ ಜನತೆಗೆ ಇದೆ. ಆ ಹಕ್ಕನ್ನು ಗೌರವಿಸುವುದು ನನ್ನ ಧರ್ಮ. ಪಾರದರ್ಶಕ ಹಾಗೂ ಪ್ರಾಮಾಣಿಕತೆಯಿಂದ ಆಯವ್ಯಯ ದಲ್ಲಿ ಆ ಲೆಕ್ಕವನ್ನು ಒಪ್ಪಿಸಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.

ಕೊಟ್ಟ ಭರವಸೆಗಳೆಲ್ಲವನ್ನೂ ಈಡೇರಿಸಿ, ಸುಭದ್ರ ಹಾಗೂ ಸಮರ್ಥ ನೀಡಿದ್ದೇನೆ ಎಂಬುದನ್ನು ಭಾಷಣದ ಆರಂಭದಲ್ಲೇ ಹೇಳಿದ್ದ ಸಿದ್ದರಾಮಯ್ಯ, ನಾಲ್ಕು ದಶಕಗಳ ನಂತರ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವ ಮೂಲಕ ರಾಜ್ಯದ ಜನತೆಯ ಆಶಯ ಸಾಕಾರಗೊಳಿಸಿದ ಹೆಮ್ಮೆ ನಮ್ಮದು ಎಂದು ವಿರೋಧ ಪಕ್ಷಗಳು ಮತ್ತು ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಅರ್ಥಶಾಸ್ತ್ರವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡದಿದ್ದರೂ ಅನುಭವಕ್ಕಿಂತ ಮಿಗಿಲಾದ ಜ್ಞಾನ ಬೇರೆ ಇಲ್ಲ ಎಂದು ತಮ್ಮ 13 ಬಜೆಟ್ ಭಾಷಣದ ಹಿಂದಿನ ಗುಟ್ಟು ಬಿಚ್ಚಿಟ್ಟಿದ್ದಾರೆ. ರಾಜ್ಯದ ಬೊಕ್ಕಸದಲ್ಲಿರುವುದು ಜನರ ಬೆವರಿನ ಹಣ, ನಾನು ಅದನ್ನು ನಿರ್ವಹಿಸುವ ಟ್ರಸ್ಟಿ ಮಾತ್ರ, ಆ ಎಚ್ಚರಿಕೆ ನನ್ನಲ್ಲಿ ಸದಾ ಇದೆ ಎಂದು ತಿಳಿಸಿದ್ದಾರೆ.

ಅಹಿಂದ ಸರ್ಕಾರ ಎಂಬ ಪ್ರತಿಪಕ್ಷಗಳ ಅಪಸ್ವರಕ್ಕೆ ಸಮರ್ಥನೆ ಕೊಟ್ಟಿರುವ ಅವರು, ಜಾತಿ, ಧರ್ಮ, ಪ್ರದೇಶವನ್ನು ಮೀರಿದ ಸಾಮಾನ್ಯ ಮನುಷ್ಯನ ಹಿತಚಿಂತನೆಯನ್ನೇ ಕಳೆದ ಐದು ಬಜೆಟ್​ಗಳಲ್ಲಿ ಪ್ರಧಾನವಾಗಿ ಕಾಣಬಹುದು. ಸಮಾನತೆ ತತ್ವವನ್ನು ದೇಶಕ್ಕೆ ಬೋಧಿಸಿದ ಮಹಾಪುರುಷರ ಆಶಯಗಳನ್ನು ಸರ್ಕಾರ ಎತ್ತಿ ಹಿಡಿದಿದೆ ಎಂದಿದ್ದಾರೆ.

ಹಸಿವಿನ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಗೆದ್ದಿದೆ ಎಂದು ಹೇಳುವ ಮೂಲಕ ಅನ್ನಭಾಗ್ಯ ಯೋಜನೆ ಗ್ರಾ್ಯಂಡ್ ಸಕ್ಸಸ್ ಆಗಿದೆ ಎಂಬುದನ್ನು ಸಿದ್ದರಾಮಯ್ಯ ಮತ್ತೊಮ್ಮೆ ಹೇಳಿದ್ದಾರೆ.

‘ಫೈವ್ಸ್ ಫಾಮುಲಾ’ ಖಚಿತಪಡಿಸಿದ ಮುಖ್ಯಮಂತ್ರಿ

‘ನಮ್ಮ ಸರ್ಕಾರವೆಂದರೆ ನೇಗಿಲಯೋಗಿ ಅರಸುವ ಮಳೆಯ ಸಿಂಚನ (ಫಾರ್ಮರ್), ಅದು ಪುಟ್ಟ ಕಂದನೊಳಗಿನ ಪೌಷ್ಟಿಕತೆ, ಅದು ವಿದ್ಯಾರ್ಥಿಗಳಿಗೆ ದೊರೆಯುವ ಕೆನೆಹಾಲಿನ ಶಿಕ್ಷಣ (ಸ್ಟುಡೆಂಟ್), ಯುವಕರ ಪಾಲಿನ ಕೌಶಲಪೂರ್ಣ ಉದ್ಯೋಗ (ಯೂತ್), ಮಹಿಳೆಯರಿಗೆ ಸ್ವಾವಲಂಬನೆಯ ಮೂಲಕ ಒದಗಿಸುವ ಸ್ಥೈರ್ಯ (ವಿಮೆನ್), ವೃದ್ಧರ ಪಾಲಿನ ಊರುಗೋಲು ಸರ್ಕಾರ’ ಎಂದು ಸಿದ್ದರಾಮಯ್ಯ ಬಣ್ಣಿಸಿದ್ದಾರೆ. ಇದೇ ವೇಳೆ ಐದನೇ ವೇತನ ಆಯೋಗದ ಶಿಫಾರಸು ಯಥಾವತ್ತಾಗಿ (ಎಂಪ್ಲಾಯಿಸ್) ಮೂಲಕ ಫೈವ್ಸ್ (ಫಾರ್ಮರ್-ಯೂತ್-ವಿಮೆನ್-ಎಂಪ್ಲಾಯಿಸ್-ಸ್ಟುಡೆಂಟ್) ಫಾಮುಲಾ ಆಧಾರದ ಮೇಲೆ ಬಜೆಟ್​ನ ತಿರುಳು ಇರುವುದನ್ನು ಖಚಿತಪಡಿಸಿದ್ದಾರೆ. ‘ನಾವು ಕೇವಲ ಕನಸು ಬಿತ್ತುವವರಲ್ಲ, ಬಿತ್ತಿದ ಕನಸನ್ನು ನನಸು ಮಾಡುವವರು. ನಮ್ಮ ಪ್ರಗತಿಪರ ನೀತಿಗಳು ದೇಶಕ್ಕೆ ಮಾದರಿ. ಪರಿಶಿಷ್ಟರಿಗೆ ಜನಸಂಖ್ಯೆಗೆ ಅನುಗುಣವಾಗಿ ಯೋಜನಾ ಗಾತ್ರದ ಪಾಲು ವಿನಿಯೋಗಿಸಲು ಉಪಯೋಜನೆ ಕಾಯ್ದೆ, ಮೌಢ್ಯ ನಿಷೇಧ ಕಾಯ್ದೆ, ಭೂಸುಧಾರಣೆಗೆ ತಿದ್ದುಪಡಿ ಹಾಗೂ ಲಿಂಗತ್ವ ಸಮಾನತೆ ಕಾಯ್ದೆಗಳು ದೇಶದಲ್ಲೇ ಮಾದರಿ’ ಎಂದು ವಿಶ್ಲೇಷಿಸಿದ್ದಾರೆ. ಕನ್ನಡಿಗರು ಹೆಮ್ಮೆ ಪಡುವಂತಾಗಿದೆ. ಈ ಬಗ್ಗೆ ನನಗೆ ಆತ್ಮಸಂತೃಪ್ತಿ ಇದೆ ಎಂದು ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Back To Top