Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಆರೋಗ್ಯ ವಿಮೆ ಈ ತಿಂಗಳೇ ಆರಂಭ

Saturday, 17.02.2018, 3:05 AM       No Comments

ರಾಜ್ಯದ ಜನರು ನಿರೀಕ್ಷಿಸುತ್ತಿದ್ದ ಸರ್ವರಿಗೂ ಆರೋಗ್ಯ ವಿಮೆ ಕಲ್ಪಿಸುವ ‘ಆರೋಗ್ಯ ಕರ್ನಾಟಕ ಯೋಜನೆ’ಯನ್ನು (ಯೂನಿವರ್ಸಲ್ ಹೆಲ್ತ್ ಕವರೇಜ್) ಈ ತಿಂಗಳಿನಿಂದಲೇ ಆರಂಭಿಸುವುದಾಗಿ ಸರ್ಕಾರ ಬಜೆಟ್​ನಲ್ಲಿ ಘೋಷಿಸಿದೆ.

ವರ್ಷಾಂತ್ಯದೊಳಗೆ ರಾಜ್ಯಾದ್ಯಂತ ಜಾರಿಗೊಳಿಸುವು ದಾಗಿಯೂ ಭರವಸೆ ನೀಡಿದೆ. ಕಳೆದ ವರ್ಷದ ಬಜೆಟ್​ನಲ್ಲಿಯೂ ಸಾರ್ವತ್ರಿಕ ಆರೋಗ್ಯ ಯೋಜನೆ ಘೋಷಿಸಲಾಗಿತ್ತು. ಆದರೆ ಯೋಜನೆಗೆ ಅಂತಿಮ ರೂಪುರೇಷೆ ನೀಡಿ ಈ ವರ್ಷ ಜಾರಿಗೆ ತರಲಾಗುತ್ತಿದೆ.

ಆರೋಗ್ಯ ವಲಯಕ್ಕೆ ಸಂಬಂಧಿಸಿದ ನೀತಿ ಮತ್ತು ಯೋಜನೆಗಳ ಸುಧಾರಣೆಗಾಗಿ ಪರಿಣಾಮಕಾರಿ ಕ್ರಮಗಳನ್ನು ಶಿಫಾರಸು ಮಾಡಲು ‘ರಾಜ್ಯ ಆರೋಗ್ಯ ಪರಿಷತ್ತು’ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ಕಾರ್ಯಕ್ಷಮತೆ ಮತ್ತು ಖಾಸಗಿ ವೈದ್ಯಕೀಯ ಕಾಯ್ದೆ ಅನುಷ್ಠಾನದ ಮೇಲೆ ನಿಗಾ ವಹಿಸುವುದು ಪರಿಷತ್ತಿನ ಮುಖ್ಯ ಕಾರ್ಯೋದ್ದೇಶವಾಗಿರಲಿದೆ.

ಒಟ್ಟಾರೆ 2018-19ನೇ ಸಾಲಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 6,645 ಕೋಟಿ ರೂ.ಗಳನ್ನು ಸರ್ಕಾರ ಮೀಸಲಿಟ್ಟಿದೆ.

ಸರ್ಕಾರಿ ಆಸ್ಪತ್ರೆಗಳಿಗೆ ಎನ್​ಎಬಿಎಚ್ ಪ್ರಮಾಣೀಕರಣ

ಗುಣಮಟ್ಟದ ಆರೋಗ್ಯ ಸೇವೆಗಳ ಸುಧಾರಣೆಗಾಗಿ ಎಲ್ಲ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳನ್ನು ನ್ಯಾಷನಲ್ ಅಕ್ರೆಡಿಟೇಶನ್ ಬೋರ್ಡ್ ಫಾರ್ ಹಾಸ್ಪಿಟಲ್ಸ್ ಆಂಡ್ ಹೆಲ್ತ್ ಸರ್ವೀಸಸ್ (ಎನ್​ಎಬಿಎಚ್) ಅಡಿಯಲ್ಲಿ ಪ್ರಮಾಣೀಕರಿಸಲಾಗುವುದು. ದಿನನಿತ್ಯ ಆಸ್ಪತ್ರೆಗೆ ಭೇಟಿ ಕೊಡುವ ಹೊರರೋಗಿಗಳು, ಒಳರೋಗಿಗಳ ಸಂಖ್ಯೆ, ಶಿಶು ಜನನ ಪ್ರಮಾಣವನ್ನು ಆಸ್ಪತ್ರೆಗಳಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಲಾಗುವುದು. ಈ ಮೂಲಕ ಸಾರ್ವಜನಿಕ ಹೊಣೆಗಾರಿಕೆ ಹೆಚ್ಚಿಸುವ ಉದ್ದೇಶ ಸರ್ಕಾರದ್ದಾಗಿದೆ.

30 ಲಕ್ಷ ಫಲಾನುಭವಿಗಳಿಗೆ ಅಡುಗೆ ಅನಿಲ ಭಾಗ್ಯ

ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ 30 ಲಕ್ಷ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡಲು ಉದ್ದೇಶಿಸಲಾಗಿದೆ. ಸಿಲಿಂಡರ್ ಭದ್ರತಾ ಠೇವಣಿ 1,450 ರೂ, 2 ಬರ್ನರ್ ಗ್ಯಾಸ್ ಸ್ಟೌವ್ 1000 ರೂ, ಎರಡು ಭರ್ತಿ ಸಿಲಿಂಡರ್ ಸೇರಿ ಒಟ್ಟು 4,040 ರೂ. ವೆಚ್ಚದಲ್ಲಿ ಅನಿಲ ಸಂಪರ್ಕವನ್ನು ಸರ್ಕಾರ ನೀಡಲಿದೆ. ಇದಕ್ಕಾಗಿ ಸರ್ಕಾರ 1,350 ಕೋಟಿ ರೂ. ಮೀಸಲಿರಿಸಿದೆ. ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸರ್ಕಾರ ಪ್ರತಿ ಕ್ವಿಂಟಾಲ್​ಗೆ ಲಾಭಾಂಶವನ್ನು 87 ರೂ.ಗಳಿಂದ 100 ರೂ.ಗೆ ಹೆಚ್ಚಿಸಿದೆ.

ಗ್ರಾಮೀಣ ಆರೋಗ್ಯ ಸೇವೆಗೆ ಒತ್ತು

ಗ್ರಾಮೀಣ ಪ್ರದೇಶಗಳಲ್ಲಿ ಗುಣಮಟ್ಟದ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಪ್ರತಿ 5 ಸಾವಿರ ಜನಸಂಖ್ಯೆಗೆ ಹಾಲಿ ಇರುವ ಉಪಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಜತೆಗೆ ಹೆಚ್ಚುವರಿಯಾಗಿ 9 ಸಾವಿರ ಆರೋಗ್ಯ ಮತ್ತು ಸೌಖ್ಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಪ್ರಸಕ್ತ ವರ್ಷದಲ್ಲಿ 571 ಕೇಂದ್ರಗಳ ಸ್ಥಾಪನೆ ಮೂಲಕ ಮುಂದಿನ ಏಳು ವರ್ಷಗಳಲ್ಲಿ ಗುರಿ ಸಾಧಿಸುವ ಉದ್ದೇಶವಿದೆ.

ಇತರ ಪ್ರಮುಖ ನಿರ್ಧಾರಗಳು

# ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಸೇವೆಗಳ ಬಲವರ್ಧನೆಗೆ ಶಿಶು ಹಾಗೂ ತಾಯಿ ಮರಣ ಪ್ರಮಾಣ ಕಡಿಮೆಗೊಳಿಸಲು ಒತ್ತು. ದೇಶದ ಇತರ ಕೆಲವು ರಾಜ್ಯಗಳಲ್ಲಿ ಈ ಪ್ರಮಾಣ ಅತಿ ಕಡಿಮೆಯಿದ್ದು ರಾಜ್ಯದಲ್ಲೂ ಮುಂದಿನ 7 ವರ್ಷಗಳಲ್ಲಿ ಆ ಮಟ್ಟ ತಲುಪಲು ನಿರ್ಧಾರ.

# ಪ್ರಾಥಮಿಕ ಆರೋಗ್ಯ ಆರೈಕೆಯಲ್ಲಿ ನಿರ್ದಿಷ್ಟ ತಂತ್ರಜ್ಞಾನ ಬಳಕೆ ಮೂಲಕ ಅಸಾಂಕ್ರಾಮಿಕ ರೋಗಗಳ ಶೀಘ್ರ ಪತ್ತೆ ಮತ್ತು ಚಿಕಿತ್ಸೆ.

# ಮಾನಸಿಕ ಆರೋಗ್ಯ ಅಧಿನಿಯಮ 2017ರನ್ವಯ ಮಾನಸಿಕ ಅಸ್ವಸ್ಥರ ಆರೈಕೆ ಕಾರ್ಯಕ್ರಮಗಳ ಪುನಾರಚನೆ.

ವಿಶೇಷ ಅಭಿವೃದ್ಧಿ ಯೋಜನೆ ಅಡಿ ಹಂಚಿಕೆ (2018-19ನೇ ಸಾಲಿಗೆ) ಕೋಟಿ ರೂ.ಗಳಲ್ಲಿ


 ಉತ್ತರ ಕರ್ನಾಟಕ ನಿರ್ಲಕ್ಷ್ಯ

ಹುಬ್ಬಳ್ಳಿ: ಬಜೆಟ್​ಗೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಸಮಾಧಾನ ವ್ಯಕ್ತಪಡಿಸಿದ್ದು, ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ರೂಪಿಸಿರುವ ಬಜೆಟ್ ಇದಾಗಿದ್ದರೂ ಉತ್ತರ ಕರ್ನಾಟಕ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡದೆ ಮೂಗಿಗೆ ತುಪ್ಪ ಸವರಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ. ಭೌಗೋಳಿಕ ಅಭಿವೃದ್ಧಿ ಗಮನಿಸಿದರೆ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದ್ದಾರೆ ಎಂದು ಸಂಸ್ಥೆಯ ಪದಾಧಿಕಾರಿಗಳು ದೂರಿದ್ದಾರೆ. ಸಂಸ್ಥೆಯ ಅಧ್ಯಕ್ಷ ವಿ.ಪಿ. ಲಿಂಗನಗೌಡರ, ಉತ್ತರ ಕರ್ನಾಟಕದ ಕೈಗಾರಿಕೆ, ಔದ್ಯೋಗಿಕ ಅಭಿವೃದ್ಧಿ ನಿರ್ಲಕ್ಷಿಸಲಾಗಿದೆ. ನೆಪಮಾತ್ರಕ್ಕೆ ಎನ್ನುವಂತೆ ಒಂದೆರಡು ಯೋಜನೆಯನ್ನು ಈ ಭಾಗಕ್ಕೆ ನೀಡಲಾಗಿದೆ ಎಂದಿದ್ದಾರೆ. ಜವಳಿ ಉದ್ಯಮ ಪುನಶ್ಚೇತನಕ್ಕಾಗಿ ಹುಬ್ಬಳ್ಳಿ-ಧಾರವಾಡದಲ್ಲಿ ಟೆಕ್ಸಟೈಲ್ ಪಾರ್ಕ್ ಸ್ಥಾಪಿಸುವಂತೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೆವು. ಪ್ಲಾಸ್ಟಿಕ್ ಉತ್ಪಾದನೆ, ತರಬೇತಿಗಾಗಿ ಕೇಂದ್ರ ಸರ್ಕಾರ ಈ ಭಾಗದಲ್ಲಿ ಸಿಪೆಕ್ಟ್ ಕೇಂದ್ರ ಸ್ಥಾಪಿಸಲು ಸಿದ್ಧವಿದ್ದು, ಅಗತ್ಯ ಜಾಗ ನೀಡುವಂತೆ ಕೇಂದ್ರ ಸಚಿವ ಅನಂತಕುಮಾರ ಕೇಳಿದ್ದರು. ಈ ವಿಷಯವನ್ನು ಸಿಎಂ ಗಮನಕ್ಕೆ ತರಲಾಗಿತ್ತು. ಆದರೆ ಬಜೆಟ್​ನಲ್ಲಿ ಪ್ರಸ್ತಾಪ ಮಾಡಲಿಲ್ಲ ಎಂದು ಅವರು ಹೇಳಿದರು. ಸಂಸ್ಥೆಯ ಮಾಜಿ ಅಧ್ಯಕ್ಷ ರಮೇಶ ಪಾಟೀಲ, ಬೆಂಗಳೂರಿನಲ್ಲಿ ಮೆಟ್ರೋ, ಫ್ಲೈ ಓವರ್ ನಿರ್ಮಾಣ ಸೇರಿದಂತೆ ಅಲ್ಲಿನ ಅಭಿವೃದ್ಧಿಯನ್ನು ಮಾತ್ರ ಕೇಂದ್ರೀಕರಿಸುತ್ತಿರುವ ರಾಜ್ಯ ಸರ್ಕಾರ, ಇತರ ಮಹಾನಗರಗಳನ್ನು ನಿರ್ಲಕ್ಷಿಸುತ್ತ ಬಂದಿದೆ. ರಾಜ್ಯ ಸರ್ಕಾರದ ವರ್ತನೆ ಹಾಗೂ ಅನ್ಯಾಯ ಗಮನಿಸಿದರೆ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ಹೋರಾಟ ನಡೆಸದೆ ಬೇರೆ ದಾರಿ ಇಲ್ಲದಂತಾಗುತ್ತದೆ ಎಂದರು. ಹೆಸರಿಗಷ್ಟೇ ಹುಬ್ಬಳ್ಳಿಯನ್ನು ಎರಡನೇ ರಾಜಧಾನಿಯೆಂದು ಕರೆಯಲಾಗುತ್ತಿದ್ದು, ಇಲ್ಲಿನ ಅಭಿವೃದ್ಧಿಗೆ ಇದುವರೆಗೆ ಸರ್ಕಾರದಿಂದ ಯಾವುದೇ ಕಾರ್ಯವಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಸಂಸ್ಥೆಯ ಮಾಜಿ ಗೌರವ ಕಾರ್ಯದರ್ಶಿ ಸಿದ್ದೇಶ್ವರ ಕಮ್ಮಾರ, ಬೆಂಗಳೂರಿನಲ್ಲಿ ಹೊಸ ಬೈಪಾಸ್, ಅಂಡರ್​ಪಾಸ್ ಮಾಡುವ ಸರ್ಕಾರ, ಹುಬ್ಬಳ್ಳಿಯಲ್ಲಿ ಫ್ಲೈಓವರ್ ನಿರ್ವಣಕ್ಕೆ ಆಸಕ್ತಿ ತೋರುತ್ತಿಲ್ಲ. ಈ ಭಾಗದ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ ಸಹ ನಿರ್ಲಕ್ಷ್ಯ್ಕೆ ಕಾರಣ ಎಂದರು.


 ಅನಾರೋಗ್ಯ ತಡೆಗೆ ಕ್ರಮ ಅಗತ್ಯ

| ಡಾ .ಎಂ.ವಿ. ಜಾಲಿ ವೈದ್ಯಕೀಯ ನಿರ್ದೇಶಕರು, ಕೆಎಲ್​ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ, ಬೆಳಗಾವಿ

ಗ್ರಾಮೀಣ ಭಾರತದಲ್ಲಿ ಶೇ. 88 ಕಾಯಿಲೆಗಳು ಪ್ರಾಥಮಿಕವಾಗಿದ್ದು, ಅವುಗಳನ್ನು ಬೇರುಮಟ್ಟದಲ್ಲಿ ಚಿವುಟಿ ಹಾಕಲು ವ್ಯವಸ್ಥಿತಿವಾದ ಯೋಜನೆಯೊಂದನ್ನು ರೂಪಿಸಬೇಕಾಗಿದೆ. ಪ್ರತಿವರ್ಷ ಬಜೆಟ್​ನಲ್ಲಿ ಆರೋಗ್ಯಕ್ಕಾಗಿ ಸಾಕಷ್ಟು ಹಣ ವ್ಯಯಿಸಲಾಗುತ್ತಿದ್ದು, ಅನಾರೋಗ್ಯಕ್ಕೆ ಕಾರಣವಾಗುವ ಮದ್ಯ, ತಂಬಾಕು ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಕ್ರಮ ಕೈಗೊಳ್ಳಬೇಕು. ಕೇವಲ ಆಸ್ಪತ್ರೆ ನಿರ್ವಿುಸಿ ವೈದ್ಯರಿಲ್ಲದಿದ್ದರೆ ಯೋಜನೆ ಮತ್ತು ಹಣ ನಿಷ್ಪ್ರಯೋಜಕವಾಗುತ್ತದೆ. ಅನಾರೋಗ್ಯಕ್ಕೆ ಈಡಾಗುವ ಮೊದಲು ಅವುಗಳನ್ನು ತಡೆಗಟ್ಟುವ ವಿಧಾನಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ರಾಜ್ಯದ ಪ್ರತಿ ತಾಲೂಕುಗಳಲ್ಲಿ ಆಸ್ಪತ್ರೆಗಳಿದ್ದು, ಅಲ್ಲಿ ತಜ್ಞ ವೈದ್ಯರ ಕೊರತೆ ಎದ್ದುಕಾಣುತ್ತಿದೆ. ತಾಯಿ ಮತ್ತು ಮಗುವಿನ ಆರೈಕೆಯಲ್ಲಿ ತೀವ್ರತರವಾದ ತೊಂದರೆ ಉಂಟಾಗುತ್ತಿದೆ. ಸರ್ಕಾರವು ಈಗಾಗಲೇ ಯೋಜಿಸಿದಂತೆ ಡಯಾಲಿಸಿಸ್ ಮತ್ತು ನವಜಾತ ಶಿಶು ತೀವ್ರ ನಿಗಾ ಘಟಕ ತೆರೆದರೆ ಒಳ್ಳೆಯದು. ಅದಕ್ಕಿಂತ ಮುಖ್ಯವಾಗಿ ಅವಶ್ಯ ಇರುವ ಮಾನವ ಸಂಪನ್ಮೂಲ ಒದಗಿಸಿಕೊಡಬೇಕು. ನುರಿತ ತಜ್ಞವೈದ್ಯರು, ದಾದಿಯರು, ತಂತ್ರಜ್ಞರನ್ನು ತರಬೇತಿಗೊಳಿಸಿ ಆರೋಗ್ಯ ಸೇವೆ ಜನಸಾಮಾನ್ಯರಿಗೆ ಲಭಿಸುವಂತೆ ಎಚ್ಚರಿಕೆ ವಹಿಸಬೇಕು. ಪ್ರಸಕ್ತ ಸಾಲಿನಲ್ಲಿ ಆರೋಗ್ಯ ಕ್ಷೇತ್ರಕ್ಕೆ 6,645 ಕೋಟಿ ರೂ. ಕಾಯ್ದಿರಿಸಲಾಗಿದ್ದು, ಒಳ್ಳೆಯ ಬೆಳವಣಿಗೆ. ಆದರೆ ಆ ಹಣ ಖಜಾನೆಯಲ್ಲಿ ಕೊಳೆಯದೇ ಅಥವಾ ಮತ್ಯಾರದೋ ಪಾಲಾಗದೇ ಸಂಪೂರ್ಣ ಹಣ ಅನಾರೋಗ್ಯ ಹೋಗಲಾಡಿಸುವ ಮಹತ್ತರ ಕಾರ್ಯಕ್ಕೆ ಬಳಕೆಯಾಗಬೇಕು. ಕರ್ನಾಟಕ ಆರೋಗ್ಯ ಎಂಬ ಯೋಜನೆ ಜಾರಿಗೆ ತರಲಾಗುತ್ತಿದ್ದು, ಇದರ ರೂಪುರೇಷೆಗಳು ಅತ್ಯಂತ ಸರಳ ಮತ್ತು ನೀತಿ ಬದ್ಧವಾಗಿರಬೇಕು. ಗಂಭೀರ ಕಾಯಿಲೆಗಳು ಕಂಡುಬಂದಾಗ ಸರ್ಕಾರಿ ಆಸ್ಪತ್ರೆ ಸೂಚನೆಗಾಗಿ ಕಾಯದೇ ನೇರವಾಗಿ ನುರಿತ ತಜ್ಞವೈದ್ಯರ ಬಳಿ ಚಿಕಿತ್ಸೆ ಪಡೆಯಲು ಅನುಕೂಲ ಕಲ್ಪಿಸಬೇಕು. ಸರ್ಕಾರಿ ಆಸ್ಪತ್ರೆ ಅಲೆದಾಡಿ ಭ್ರಷ್ಟತನಕ್ಕೆ ದಾರಿಮಾಡಿಕೊಡಬಾರದು. ರೋಗಾಣುಗಳನ್ನು ಹರಡುವ ನೀರು ಮತ್ತು ಅಸ್ವಚ್ಛತೆಯನ್ನು ಹೋಗಲಾಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಶುದ್ಧ ನೀರು ಒದಗಿಸಿ ಸ್ವಚ್ಛ ಗ್ರಾಮಗಳನ್ನಾಗಿ ಪರಿವರ್ತಿಸಬೇಕು. ಗ್ರಾಮೀಣ ಆರೋಗ್ಯ ಘಟಕಗಳು ಕೇವಲ ಔಷಧ ನೀಡುವ ಕೇಂದ್ರವಾಗದೆ ಜನರಲ್ಲಿ ಜಾಗೃತಿ ಮೂಡಿಸುವ ಆಸ್ಪತ್ರೆಗಳಾಗಬೇಕಿದೆ.

 

ಕಿತ್ತೂರು ಚನ್ನಮ್ಮನ ಐಕ್ಯಸ್ಥಳ ಬೈಲಹೊಂಗಲ, ಕಾರ್ಯಕ್ಷೇತ್ರ ಕಿತ್ತೂರಿಗೆ ವಿಶೇಷ ಯೋಜನೆ ಅನುಷ್ಠಾನಗೊಳಿಸದಿರುವುದು ನಿರಾಸೆ ಮೂಡಿಸಿದೆ. ರೈತರ ಸಾಲಮನ್ನಾ, ಶೇ.3ರ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ಸಾಲ ಯೋಜನೆಯಿಂದ ರೈತರಲ್ಲಿ ಆತ್ಮವಿಶ್ವಾಸ ಮೂಡಿಸಿದೆ.

¬| ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಲಿಂಗಾಯತ ಪಂಚಮಸಾಲಿ ಪೀಠ, ಕೂಡಲಸಂಗಮ

 


ಸಿದ್ದರಾಮಯ್ಯ ಅವರ ಬಜೆಟ್ ಪ್ರಾದೇಶಿಕ ಅಸಮಾನತೆ, ಮಹಿಳಾ ಸಮಾನತೆ ತರಲು ಪೂರಕವಾಗಿದೆ. ಮಹಿಳೆಯರಿಗೆ ಸ್ನಾತಕೋತ್ತರ ಶಿಕ್ಷಣದವರೆಗೆ ಉಚಿತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿರುವುದು ವರದಾನ. ಐದು ಎಕರೆ ಒಣಭೂಮಿಯುಳ್ಳ ರೈತರಿಗೆ 10 ಸಾವಿರ ರೂ. ಪೊ›ೕತ್ಸಾಹಧನ ಘೊಷಿಸಿರುವುದು ಶ್ಲಾಘನೀಯ.

| ವಿನಯ ಕುಲಕರ್ಣಿ ಗಣಿ, ಭೂವಿಜ್ಞಾನ ಸಚಿವ


ಕಳೆದ ಬಾರಿಯ ಬಿಜೆಪಿ ಹಾಗೂ ಈಗಿನ ಸರ್ಕಾರ ನೀಡಿದ ಅನುದಾನಗಳ ನಡುವೆ ಹೋಲಿಕೆ ಮಾಡುವ ಮೂಲಕ ಸರ್ಕಾರ ರಾಜಕೀಯ ಮಾಡಿದೆ. ರೈತರು, ಬಡವರನ್ನು ನಿರ್ಲಕ್ಷಿ್ಯಸಲಾಗಿದೆ. ಆರನೇ ವೇತನ ಆಯೋಗದ ಪ್ರಸ್ತಾಪ ಮಾಡಲಾಗಿದೆಯೇ ಹೊರತು ಅನುಷ್ಠಾನದ ಕುರಿತು ಪ್ರಸ್ತಾಪಿಸಿಲ್ಲ.

ಜಗದೀಶ್ ಶೆಟ್ಟರ್ ವಿಧಾನಸಭೆ ಪ್ರತಿಪಕ್ಷ ನಾಯಕ


ಬಜೆಟ್​ನಲ್ಲಿ ಆರೋಗ್ಯ ವಿಷಯಕ್ಕೆ ಆದ್ಯತೆ ನೀಡಲಾಗಿದೆ. ಆದರೆ ಯೂನಿವರ್ಸಲ್ ಹೆಲ್ತ್ ಕಾರ್ಡ್ ಕಲ್ಪನೆ ಉತ್ತಮವಾಗಿದ್ದರೂ, ಅದನ್ನು ಅನುಷ್ಠಾನಕ್ಕೆ ತರುವುದು ಕಷ್ಟದ ಕೆಲಸ. ತಾಲೂಕು ಆಸ್ಪತ್ರೆಗಳಿಗೂ ಡಯಾಲಿಸಿಸ್ ಕೇಂದ್ರ ವಿಸ್ತರಿಸಿರುವುದು, ಕ್ಯಾನ್ಸರ್ ಚಿಕಿತ್ಸಾ ಘಟಕ ಆರಂಭಿಸಿರುವುದು ಸ್ವಾಗತಾರ್ಹ.

| ಡಾ.ಸಿ.ಎನ್.ಮಂಜುನಾಥ್ ನಿರ್ದೇಶಕರು, ಜಯದೇವ ಹೃದ್ರೋಗ ಆಸ್ಪತ್ರೆ

 


ಕೆರೆ ತುಂಬಿಸಲು ಭರಪೂರ ನೆರವು

ನೀರಾವರಿ ಇಲಾಖೆಗೆ ಕಳೆದ ವರ್ಷಕ್ಕಿಂತ 69 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಿರುವ ಸಿಎಂ, ಬಜೆಟ್ ಮೊತ್ತವನ್ನು 15,998 ಕೋಟಿಗೆ ಏರಿಸಿದ್ದಾರೆ.

ನೀರಾವರಿಗೆ 50 ಸಾವಿರ ಕೋಟಿ ರೂ. ಮೀಸಲಿಡುವುದಾಗಿ ನೀಡಿದ್ದ ಭರವಸೆಯನ್ನು ಅವರು ಉಳಿಸಿಕೊಂಡಿದ್ದು, 5 ವರ್ಷದಲ್ಲಿ 58,393 ಕೋಟಿ ರೂ. ನೆರವು ಕೊಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಾರಿಯೂ ಕೆರೆ ತುಂಬಿಸುವ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

ತುಂಗಭದ್ರ ಜಲಾಶಯ ನೀರು ಸಾಮರ್ಥ್ಯ ಕೊರತೆ ನೀಗಿಸುವುದಕ್ಕಾಗಿ ನವಿಲೆ ಬಳಿ ಸಮತೋಲನ ಜಲಾಶಯ ನಿರ್ವಣಕ್ಕೆ ಯೋಜನಾ ವರದಿ ಸಿದ್ಧಪಡಿಸಲು ನಿರ್ಧರಿಸಲಾಗಿದೆ.

# ಶಹಪೂರ ಮತ್ತು ಸುರಪುರ ತಾಲೂಕಿಗೆ ನೀರಾವರಿ ಒದಗಿಸಲು ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆ ವಿಸ್ತರಣೆ

# ಹುನಗುಂದ ತಾಲೂಕು ನೀರಾವರಿಗಾಗಿ ನಂದವಾಡಗಿ ಏತ ನೀರಾವರಿ ಯೋಜನೆ ವಿಸ್ತರಣೆ

# ರಾಮದುರ್ಗ ತಾಲೂಕಿನ 46 ಕೆರೆಗಳಿಗೆ 540 ಕೋಟಿ ರೂ. ವೆಚ್ಚದಲ್ಲಿ ಘಟಪ್ರಭ ನೀರು ಹರಿಸುವ ಸಾಲಾಪುರ ಯೋಜನೆ

# ಬಾಗಲಕೋಟೆ ಜಿಲ್ಲೆ ಸಸಾಲಟ್ಟಿ ಏತ ನೀರಾವರಿಗೆ 140 ಕೋಟಿ ರೂ.

# ಬೆಳಗಾವಿ ಜಿಲ್ಲೆ ಸತ್ತಿಗೇರಿ ಏತ ನೀರಾವರಿಗೆ 210 ಕೋಟಿ ರೂ.

# ಅಥಣಿ ತಾಲೂಕಿನ 17 ಕೆರೆಗಳಿಗೆ ನೀರು ತುಂಬಿಸಲು 137 ಕೋಟಿ ರೂ.

# ಮುಧೋಳ ತಾಲೂಕಿನ ಮಂಟೂರು ಕೆರೆ ತುಂಬಿಸಲು 50 ಕೋಟಿ ರೂ.

# ಗೋಕಾಕ ತಾಲೂಕಿನ ಗುತ್ತಿ ಬಸವಣ್ಣ ಏತ ನೀರಾವರಿ ಮತ್ತು ಮಾರ್ಕಂಡೇಯ ಕಾಲುವೆಗಾಗಿ 250 ಕೋಟಿ ರೂ.

# ಅರಕಲಗೂಡು ತಾಲೂಕು ಕೊಣನೂರು ಸುತ್ತಮುತ್ತ 40 ಕೆರೆ ತುಂಬಿಸಲು 30 ಕೋಟಿ ರೂ.

# ಹಾಸನ ತಾಲೂಕಿನ ಚನ್ನಪಟ್ಟಣ, ಸತ್ಯವಂಗಲ, ಹುಣಸಿನಕೆರೆ ಪುನಶ್ಚೇತನ ಮತ್ತು ಹಂದಿನಕೆರೆಯಿಂದ ಸತ್ಯವಂಗಲ ಕೆರೆಗೆ ನೀರು ತುಂಬಿಸಲು 20 ಕೋಟಿ ರೂ.

# ಕೃಷ್ಣಾ ಮೇಲ್ದಂಡೆ ಯೋಜನೆಯ ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣಕ್ಕೆ 750 ಕೋಟಿ ರೂ.

# ತುಂಗಭದ್ರೆಯಿಂದ ಜಗಳೂರು ತಾಲೂಕಿನ 46 ಕೆರೆಗೆ ನೀರು ಹರಿಸಲು 250 ಕೋಟಿ ರೂ.

# ಚಿತ್ರದುರ್ಗ ಜಿಲ್ಲೆ ಭರಮಸಾಗರ ಹೋಬಳಿಯ 33 ಕೆರೆಗಳಿಗೆ ನೀರು ಹರಿಸಲು 250 ಕೋಟಿ

# ದಾವಣಗೆರೆ ತಾಲೂಕಿನ ಬೇತೂರು ಮತ್ತಿತರ ಗ್ರಾಮಗಳ ಕೆರೆಗೆ ನೀರು ತುಂಬಿಸಲು 135 ಕೋಟಿ

# ಜಮಖಂಡಿ ತಾಲೂಕಿನ ಗಲಗಲಿ ಮರೆಗುದ್ದಿ ಏತ ನೀರಾವರಿ ಯೋಜನೆಗೆ 100 ಕೋಟಿ

ಗ್ರಾಪಂ ದಾಖಲೆ ಡಿಜಿಟಲೀಕರಣ ಸದಸ್ಯರಿಗೆ ಸೆಟಲೈಟ್ ಪಾಠ

ಮಾಹಿತಿ ತಂತ್ರಜ್ಞಾನ ಯುಗಕ್ಕೆ ಪೂರಕವಾಗಿ ಗ್ರಾಮಪಂಚಾಯಿತಿ ಕಚೇರಿಗಳನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಲು ರಾಜ್ಯ ಸರ್ಕಾರ ಹೊರಟಿದೆ. ಎಲ್ಲ ದಾಖಲೆಗಳನ್ನು ಗಣಕೀಕರಣಗೊಳಿಸುವ ಪ್ರಾಯೋಗಿಕ ಯೋಜನೆಗೆ 5 ಕೋಟಿ ರೂ. ಮೀಸಲಿಡಲಾಗಿದೆ. ಇದಲ್ಲದೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸದಸ್ಯರ ಸಾಮರ್ಥ್ಯ ನಿರ್ವಣ, ಸ್ಥಳೀಯ ನಾಯಕತ್ವ ಉತ್ತೇಜನಕ್ಕಾಗಿ ಎಲ್ಲ ಗ್ರಾಪಂಗಳಲ್ಲಿ ಉಪಗ್ರಹ ಸ್ವೀಕೃತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಈ ಮೂಲಕ ಸದಸ್ಯರಿಗೆ ನಾಯಕತ್ವ ಬೆಳವಣಿಗೆ ತರಬೇತಿ ನೀಡುವುದು ಸರ್ಕಾರದ ಉದ್ದೇಶ.

ಜಲಕೃಷಿ ಕಾರ್ಯಕ್ರಮ ಅನುಷ್ಠಾನ: ಗ್ರಾಮೀಣ ಜನರಿಗೆ ವಾಸಿಸುವ ಸ್ಥಳದಲ್ಲಿಯೇ ಉದ್ಯೋಗ ಸೃಷ್ಟಿಸುವ ಉದ್ದೇಶದೊಂದಿಗೆ ಮೀನುಗಾರಿಕೆ ಇಲಾಖೆಯ ‘ನೀಲಿ ಕ್ರಾಂತಿ’ ಮತ್ತು ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮಾರ್ಗಸೂಚಿಗಳನ್ನು ಅನುಸರಿಸಿ ಜಲ ಕೃಷಿ ಕಾರ್ಯಕ್ರಮವನ್ನು ಸರ್ಕಾರ ಅನುಷ್ಠಾನಗೊಳಿಸಲಿದೆ. ಮನರೇಗಾ ಫಲಾನುಭವಿಗಳು ನಿರ್ವಿುಸಿರುವ ಕೊಳಗಳಿಗೆ ಅನುಷ್ಠಾನಕ್ಕೆ ಅನುಮತಿ ನೀಡಲಾಗುವುದು.

ಕುಂದುಕೊರತೆ ನಿವಾರಣಾ ಪ್ರಾಧಿಕಾರ

ಪ್ರತಿ ಜಿಲ್ಲಾ ಪಂಚಾಯಿತಿಯಲ್ಲಿ ‘ಕುಂದುಕೊರತೆ ನಿವಾರಣಾ ಪ್ರಾಧಿಕಾರ’ ಸ್ಥಾಪಿಸಲು ಸರ್ಕಾರ ಮುಂದಾಗಿದ್ದು ಅವುಗಳ ರಕ್ಷಣೆಗೆ ನಿರ್ವಹಣಾ ವೆಚ್ಚವನ್ನೂ ನೀಡಲಿದೆ. ಗ್ರಾಮೀಣ ರಸ್ತೆಗಳ ನಿರ್ವಹಣೆ ಮತ್ತು ಅಭಿವೃದ್ಧಿಯಲ್ಲಿ ಗುಣಮಟ್ಟ ರಕ್ಷಣೆಗೆ ವೃತ್ತಕ್ಕೊಂದರಂತೆ 8 ವೃತ್ತಗಳಿಗೆ ಪ್ರತ್ಯೇಕ ಗುಣನಿಯಂತ್ರಣ ಉಪವಿಭಾಗ ಸ್ಥಾಪಿಸಲಿದೆ.

ಕರ್ನಾಟಕ ಮಾಹಿತಿ ಕೇಂದ್ರ ಸ್ಥಾಪನೆ

ಇಲಾಖೆಗಳ ನಡುವಿನ ಸಹಕಾರ ವೃದ್ಧಿ ಮೂಲಕ ಕಾರ್ಯಕ್ರಮ ಸಂಯೋಜನೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಕರ್ನಾಟಕ ಮಾಹಿತಿ ಕೇಂದ್ರವನ್ನು ಸರ್ಕಾರ ಸ್ಥಾಪಿಸಲಿದೆ. ಪ್ರತಿ ಇಲಾಖೆಯ ಭೌತಿಕ ಮತ್ತು ಆರ್ಥಿಕ ಪ್ರಗತಿ ದತ್ತಾಂಶಗಳನ್ನು ಕೇಂದ್ರದಿಂದ ವಿವಿಧ ಇಲಾಖೆಗಳ ಮುಖ್ಯಸ್ಥರು ಪಡೆಯಬಹುದಾಗಿದೆ.

ಹೈಕ ಮಂಡಳಿಯಿಂದ ಕಾಮಗಾರಿ: ಈ ವರ್ಷ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮುಖಾಂತರ ವಿವಿಧ ಕಾಮಗಾರಿಗಳಿಗೆ 1,500 ಕೋಟಿ ರೂ. ವೆಚ್ಚ ಮಾಡಲಿದೆ.

# ಮಲೆನಾಡು , ಬಯಲು ಸೀಮೆ , ಕರಾವಳಿ ಅಭಿವೃದ್ಧಿ ಮಂಡಳಿಗಳಿಗೆ ಕ್ರಮವಾಗಿ 70 ಕೋಟಿ ರೂ., 55 ಕೋಟಿ ರೂ., 25 ಕೋಟಿ ರೂ. ಒದಗಿಸಲಾಗುವುದು.

# ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಗಳಿಗಾಗಿ 600 ಕೋಟಿ ರೂ.

# 14 ಹಿಂದುಳಿದ ತಾಲೂಕುಗಳಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕ ಸುಧಾರಿಸಲು ಅಗತ್ಯಕ್ಕೆ ತಕ್ಕಂತೆ ಶಾಲೆ, ಆಸ್ಪತ್ರೆಗಳ ಆರಂಭ.

 

35 ವಿದ್ಯುತ್ ಉಪಕೇಂದ್ರಗಳ ಸ್ಥಾಪನೆ

 ರಾಜ್ಯದ ವಿದ್ಯುತ್ ಜಾಲ ಬಲಪಡಿಸುವುದಕ್ಕಾಗಿ 35 ಹೊಸ ವಿದ್ಯುತ್ ಉಪಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಯಾದಗಿರಿಯ ರಾಮಸಮುದ್ರ, ರಾಯಚೂರಿನ ಯಾಪಲದಿನ್ನಿ, ಗಂಗಾವತಿ ಬಳಿಯ ಯರಡೋನ ಮತ್ತು ಬೆನ್ನೂರು, ಕುಷ್ಟಗಿಯ ತಾವರಗೆರೆ, ಹಗರಿಬೊಮ್ಮನಹಳ್ಳಿ ಬಳಿಯ ಬಾಚಿಗೊಂಡನಹಳ್ಳಿ, ಮುದ್ದೇಬಿಹಾಳ ಸಮೀಪದ ತಾಳಿಕೋಟೆ, ಇಂಡಿಯ ರೋಡಗಿ , ಬಾದಾಮಿಯ ಹೆಬ್ಬಳ್ಳಿ, ಥಾರವಾಡದ ಗರಗ, ರೋಣದ ಬೆಳವಣಿಕಿ, ಮಂಗಳೂರಿನ ಮುಲ್ಕಿ, ಪುತ್ತೂರಿನ ಮಾಡಾವು, ಚನ್ನಗಿರಿಯ ನಲ್ಲೂರು, ಬೆಂಕಿಕೆರೆ, ಚಳ್ಳಕೆರೆಯ ವಿಶ್ವೇಶ್ವರಪುರ, ಮಧುಗಿರಿಯ ತೆರಿಯೂರು, ಕುಣಿಗಲ್​ನ ತಿಪ್ಪೂರು, ಬಂಗಾರಪೇಟೆಯ ಟಿ.ಗೊಲ್ಲಹಳ್ಳಿ, ಆನೆಕಲ್​ನ ಸಮಂದೂರು, ಕೋರಮಂಗಲ, ಬೆಂಗಳೂರು ಪೂರ್ವ ತಾಲೂಕಿನ ದೂರವಾಣಿ ನಗರ, ಹೊಸಕೋಟೆಯ ಮಂಡೂರು, ಚನ್ನಪಟ್ಟಣದ ಬಿ.ವಿ.ಹಳ್ಳಿ, ಅರಕಲಗೂಡಿನ ರುದ್ರಪಟ್ಟಣ, ಕೆ.ಆರ್.ಪೇಟೆಯ ಗಂಗೇನಹಳ್ಳಿ, ಮಂಡ್ಯದ ತುಂಬೆಕೆರೆ, ಪಿರಿಯಾಪಟ್ಟಣದ ಕಣಗಾಲು ಮತ್ತು ಕಿತ್ತೂರು, ಟಿ.ನರಸೀಪುರದ ಮಡವಾಡಿ ,ಮಲಿಯೂರು, ನಂಜನಗೂಡಿನ ಹೆಮ್ಮರಗಾಲ ಮತ್ತು ಚಂದ್ರವಾಡಿಯನ್ನು ಆಯ್ಕೆ ಮಾಡಲಾಗಿದೆ.

ವನ್ಯಜೀವಿ ದಾಳಿ ಸಂತ್ರಸ್ತರಿಗೆ ಮಾಸಾಶನ

ವನ್ಯ ಜೀವಿ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ಈಗಾಗಲೇ 5 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುತ್ತಿದ್ದು, ಇನ್ನು ಮುಂದೆ ಅದರ ಜತೆಗೆ, 2 ಸಾವಿರ ಮಾಸಾಶನವನ್ನು 5 ವರ್ಷಗಳವರೆಗೆ ನೀಡಲಾಗುವುದು. ರಾಜ್ಯ ಸರ್ಕಾರ ಅರಣ್ಯ, ಪರಿಸರ, ವನ್ಯಜೀವಿ ಸಂರಕ್ಷಣೆಗೆ ಒಟ್ಟಾರೆ 1,949 ಕೋಟಿ ರೂ. ಮೀಸಲಿರಿಸಿದೆ. ನದಿಗಳ ಎರಡೂ ಬದಿಯ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಗಿಡಗಳನ್ನು ನೆಡಲು 10 ಕೋಟಿ ರೂ. ತೆಗೆದಿರಿಸಲಾಗಿದೆ.

ಮರ ಮಾರಾಟಕ್ಕೆ ವ್ಯವಸ್ಥೆ

ರೈತರು ಬೆಳೆದ ಮರಗಳ ಮಾರಾಟದಲ್ಲಿನ ಅಡಚಣೆ ನಿವಾರಿಸಿ ವ್ಯವಸ್ಥಿತ ಮಾರುಕಟ್ಟೆ ಕಲ್ಪಿಸಲು ತಾಲೂಕು ಅಥವಾ ಜಿಲ್ಲಾ ಕೇಂದ್ರಗಳಲ್ಲಿ ಸಣ್ಣ ಮರ ಸಂಗ್ರಹಾಲಯ ಸ್ಥಾಪಿಸಲಾಗುವುದು. ರೈತರು ಬೆಳೆದ ಮರಗಳನ್ನು ಡಿಪೋಗಳಲ್ಲಿ ಅರಣ್ಯ ಇಲಾಖೆ ಮತ್ತು ಎಪಿಎಂಸಿ ಸಮನ್ವಯದೊಂದಿಗೆ ಬಹಿರಂಗ ಹರಾಜಿನಲ್ಲಿ ಮಾರಾಟ ಮಾಡಲಾಗುವುದು. ಈ ಉದ್ದೇಶಕ್ಕಾಗಿ 5 ಕೋಟಿ ರೂ. ಒದಗಿಸಲಾಗುವುದು.

 

ರೈತ ಸದಸ್ಯ ಅಸುನೀಗಿದರೆ ಸಾಲ ಮನ್ನಾ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಬೆಳೆ ಸಾಲ ಪಡೆದ ರೈತ ಸದಸ್ಯರು ನಿಧನ ಹೊಂದಿದರೆ 1 ಲಕ್ಷ ರೂ.ವರೆಗಿನ ಸಾಲವನ್ನು ಮನ್ನಾ ಮಾಡಲು ತೀರ್ವನಿಸಲಾಗಿದೆ. ಇದರ ವೆಚ್ಚವನ್ನು ಅಪೆಕ್ಸ್ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್​ಗಳ ಸಹಭಾಗಿತ್ವದಲ್ಲಿ ಸರ್ಕಾರ ಭರಿಸಲಿದೆ. ಜತೆಗೆ ರೈತರ ಉತ್ಪನ್ನಗಳಿಗೆ ಹೆಚ್ಚಿನ ಧಾರಣೆ ದೊರಕಿಸಲು ಆಯ್ದ 25 ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ದ್ವಿದಳ ಧಾನ್ಯ, ಎಣ್ಣೆ ಬೀಜಗಳು ಹಾಗೂ ಆಹಾರ ಧಾನ್ಯಗಳ ಗುಣವಿಶ್ಲೇಷಣ ಪ್ರಯೋಗಾಲಯಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಪ್ರತಿ ಸಮಿತಿಗೆ 10 ಲಕ್ಷ ರೂ. ವೆಚ್ಚದಂತೆ 2.50 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ವಸತಿರಹಿತ 1000 ಹಮಾಲರಿಗೆ ವಸತಿ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ. ಜತೆಗೆ ಧಾರವಾಡದ ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಹಾಗೂ ವಿಜಯಪುರ ಡಿಸಿಸಿ ಬ್ಯಾಂಕುಗಳ ಶತಮಾನೋತ್ಸವ ಕಟ್ಟಡಕ್ಕೆ ತಲಾ 3 ಕೋಟಿ ರೂ. ನೀಡಲಿದೆ. ಸಹಕಾರ ಇಲಾಖೆಗೆ ಒಟ್ಟು 5,837 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

Leave a Reply

Your email address will not be published. Required fields are marked *

Back To Top