Wednesday, 21st November 2018  

Vijayavani

ಕಬ್ಬು ಬೆಳೆಗಾರರ ಹೋರಾಟಕ್ಕೆ ಕೇಸರಿ ಬಲ - ರಾಜ್ಯಾದ್ಯಂತ ಇಂದು ಬಿಜೆಪಿ ಬೃಹತ್ ಪ್ರತಿಭಟನೆ        ಗದಗಿನ ಕದಡಿ ಬಳಿ ಒಡೆದ ಕಾಲುವೆ- ಜಮೀನುಗಳಿಗೆ ನುಗ್ಗಿದ ಅಪಾರ ನೀರು - ಅಧಿಕಾರಿಗಳ ವಿರುದ್ಧ ಆಕ್ರೋಶ        ದ್ರಾಕ್ಷಿ ತೋಟದಲ್ಲಿ ಕರೆಂಟೂ, ನೆಲದಲ್ಲೂ ಕರೆಂಟು - ಚಿಕ್ಕಬಳ್ಳಾಪುರದ ಪವರ್​ ಗ್ರಿಡ್ ಕಂಟಕ        ಮದ್ದೂರು ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ - ಒಬ್ಬ ಲ್ಯಾಬ್ ಟೆಕ್ನೀಷಿಯನ್ ಸ್ಥಿತಿ ಗಂಭೀರ-        ಸ್ಯಾಂಡಲ್​ವುಡ್​​ನಲ್ಲಿ ಮತ್ತೊಂದು ಗಟ್ಟಿಮೇಳ - ಡಿ.11, 12ರಂದು ಹಸೆಮಣೆ ಏರುತ್ತೆ ಐಂದ್ರಿತಾ, ದಿಗಂತ್ ಜೋಡಿ       
Breaking News

ಬಿಬಿಎಂಪಿಗೆ ನಿರಾಶಾದಾಯಕ ಬಜೆಟ್

Saturday, 17.02.2018, 3:03 AM       No Comments

ಚುನಾವಣಾ ಹೊಸ್ತಿಲಲ್ಲಿ ಮಂಡಿಸಲಾಗಿರುವ ರಾಜ್ಯ ಬಜೆಟ್​ನಲ್ಲಿ ರಾಜಧಾನಿಯನ್ನು ಕಡೆಗಣಿಸಿರುವುದು ಎದ್ದುಕಾಣುತ್ತಿದೆ. ಕಳೆದ ನಾಲ್ಕು ಬಜೆಟ್​ಗಳಿಗೆ ಹೋಲಿಸಿದರೆ ಈ ಬಾರಿಯ ಬಜೆಟ್ ಬೆಂಗಳೂರಿನ ಮಟ್ಟಿಗೆ ನಿರಾಶಾದಾಯಕವಾಗಿದೆ. ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿರುವ ಸರ್ಕಾರ, ತ್ಯಾಜ್ಯ ನಿರ್ವಹಣೆಯಂತಹ ಮೂಲ ಸಮಸ್ಯೆಗಳತ್ತ ಮುಖ ಮಾಡಿಲ್ಲ. ನಾಲ್ಕು ವರ್ಷಗಳಿಂದ ರಸ್ತೆ ಗುಣಮಟ್ಟ ಹೆಚ್ಚಿಸುವತ್ತಲೇ ಸರ್ಕಾರ ಗಮನ ಹರಿಸಿದ್ದು, ಈ ಬಾರಿಯೂ ಅದನ್ನು ಮುಂದುವರಿಸಲಾಗಿದೆ. ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳಿಗೆ ಪರಿಹಾರ ನೀಡುವುದು ಮತ್ತು ತ್ಯಾಜ್ಯ ಸಮಸ್ಯೆ ನಿವಾರಣೆಗೆ ಅನುದಾನ ಮೀಸಲಿಡುವಲ್ಲಿ ಸರ್ಕಾರ ಎಡವಿದೆ. ಬೆಂಗಳೂರಿಗೆ ಅಗತ್ಯವಿರುವ ಯೋಜನೆಗಳ ಘೋಷಣೆಯನ್ನು ಈ ಬಾರಿ ಮಾಡಿಲ್ಲ. ಇವೆಲ್ಲದರಿಂದಾಗಿ ಬೆಂಗಳೂರಿಗೆ ರಾಜ್ಯ ಸರ್ಕಾರದ ಮಂಡಿಸಿರುವ ಆಯವ್ಯಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದೆ.

 

ಬಿಬಿಎಂಪಿಗೆ ಕಳೆದೆರಡು ಬಜೆಟ್​ನಲ್ಲಿ ಭರ್ಜರಿ ಕೊಡುಗೆ ನೀಡಿದ್ದ ರಾಜ್ಯ ಸರ್ಕಾರ, ಈ ಬಾರಿಯ ಬಜೆಟ್​ನಲ್ಲಿ ನಿರಾಸೆ ಮೂಡಿಸಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು 2018-19ನೇ ಸಾಲಿಗೆ ಕೇವಲ 2,500 ಕೋಟಿ ರೂ. ನೀಡುವುದಾಗಿ ಘೋಷಿಸಿದೆ.

ಡಾಂಬರು ರಸ್ತೆಗಳನ್ನು ವೈಟ್​ಟಾಪಿಂಗ್ ರಸ್ತೆಗಳಾಗಿ ಅಭಿವೃದ್ಧಿಪಡಿಸುವುದು, ಕೆರೆಗಳ ಪುನಶ್ಚೇತನ, ರಾಜಕಾಲುವೆ ದುರಸ್ತಿ ಇನ್ನಿತರ ಕಾಮಗಾರಿಗಳಿಗಾಗಿ 6,537 ಕೋಟಿ ರೂ. ನೀಡುವಂತೆ ಸರ್ಕಾರಕ್ಕೆ ಬಿಬಿಎಂಪಿ ಮನವಿ ಸಲ್ಲಿಸಿತ್ತು. ಆದರೆ, ಅದರಲ್ಲಿ ಅರ್ಧದಷ್ಟನ್ನೂ ನೀಡುವ ಮನಸ್ಸು ಮಾಡಿಲ್ಲ. ಆದರೆ, 2016-17ನೇ ಸಾಲಿನಲ್ಲಿ ಘೋಷಿಸಿದ್ದ 7,300 ಕೋಟಿ ರೂ. ಹಾಗೂ 2017-18ನೇ ಸಾಲಿನ 2,441 ಕೋಟಿ ರೂ. ಮೊತ್ತದ ಯೋಜನೆಗಳ ಅನುಷ್ಠಾನ ಮುಂದುವರಿಸುವುದಾಗಿ ಹೇಳಿದೆ.

2018-19ನೇ ಸಾಲಿಗೆ ಘೋಷಿಸಲಾಗಿರುವ 2,500 ಕೋಟಿ ರೂ. ಅನುದಾನದಲ್ಲಿ ಯಾವ ಕಾಮಗಾರಿಗೆ ಎಷ್ಟು ಹಣ ನೀಡಲಾಗುತ್ತಿದೆ ಎಂಬುದನ್ನು ತಿಳಿಸಿಲ್ಲ. ಹೀಗಾಗಿ ಯೋಜನೆಗಳನ್ನು ಘೋಷಿಸಲಾಗಿದ್ದರೂ, ಅದಕ್ಕೆ ಎಷ್ಟು ಹಣ ಖರ್ಚು ಮಾಡಲಾಗುತ್ತಿದೆ ಎಂಬುದರ ಬಗ್ಗೆ ಗೊಂದಲ ಮುಂದುವರಿಸಲಾಗಿದೆ.

ಬೆಂಗಳೂರಿನ ಮಟ್ಟಿಗೆ ಉತ್ತಮ ಬಜೆಟ್ ಇದಾಗಿದೆ. ಬಿಬಿಎಂಪಿ ಕೇಳಿದ ಯೋಜನೆಗಳನ್ನೆಲ್ಲ ಬಜೆಟ್​ನಲ್ಲಿ ಘೋಷಿಸಲಾಗಿದೆ. ಬಿಬಿಎಂಪಿ ಆರ್ಥಿಕವಾಗಿ ಸದೃಢವಾಗಲು ಮತ್ತು ಬೆಂಗಳೂರಿಗೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಮುಂಗಡಪತ್ರ ಸಹಕಾರಿಯಾಗಲಿದೆ.

| ಸಂಪತ್​ರಾಜ್ ಮೇಯರ್

ಯುವತಿಯರಿಗೆ ಆಶ್ರಯ

ಪ್ರತಿದಿನ ಉದ್ಯೋಗ ಸಂದರ್ಶನ, ಪ್ರವೇಶಪರೀಕ್ಷೆ ಸೇರಿ ಇನ್ನಿತರ ಕಾರಣಗಳಿಗಾಗಿ ಸಾವಿರಾರು ಯುವತಿಯರು ರಾಜ್ಯದ ಬೇರೆ ಬೇರೆ ಕಡೆಗಳಿಂದ ಬೆಂಗಳೂರಿಗೆ ಬರುತ್ತಾರೆ. ಹೀಗೆ ಬರುವ ಯುವತಿಯರಿಗೆ ಸೂಕ್ತ ವಸತಿ ವ್ಯವಸ್ಥೆಯಿರುವುದಿಲ್ಲ. ಹೀಗಾಗಿ ಅಂತಹ ಯುವತಿಯರಿಗಾಗಿಯೇ ಸ್ವಯಂಸೇವಾ ಸಂಸ್ಥೆ ಅಥವಾ ಖಾಸಗಿ ಸಹಭಾಗಿತ್ವ ಸಹಾಯದೊಂದಿಗೆ ಟ್ರಾನ್ಸಿಟ್ ಹಾಸ್ಟೆಲ್​ಗಳ ಆರಂಭಿಸಲು ಸರ್ಕಾರ ನಿರ್ಧರಿಸಿದೆ.

ಪಾಲಿಕೆ ಸದಸ್ಯರಾಗಿ ಪೌರಕಾರ್ವಿುಕರು

ಪ್ರತಿ 5 ವರ್ಷಕ್ಕೊಮ್ಮೆ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದವರನ್ನು ರಾಜ್ಯ ಸರ್ಕಾರ ಬಿಬಿಎಂಪಿಗೆ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡುತ್ತದೆ. ಅದರಂತೆ ಇನ್ನು ಮುಂದೆ ಪೌರಕಾರ್ವಿುಕ ವೃತ್ತಿ ಮಾಡುವ ಒಬ್ಬ ವ್ಯಕ್ತಿಯನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಿಸುವುದಾಗಿ ಬಜೆಟ್​ನಲ್ಲಿ ಘೋಷಿಸಲಾಗಿದೆ.

ಸಂಸ್ಕರಿಸಿದ ನೀರು ಬಳಕೆಗೆ ಒತ್ತು

ಬೆಂಗಳೂರು ಸೇರಿ ರಾಜ್ಯದ ಇತರ ನಗರಗಳ ಕೃಷಿ, ಕೈಗಾರಿಕೆ, ಥರ್ಮಲ್ ಘಟಕಗಳಿಗೆ ವರ್ಷದಿಂದ ವರ್ಷಕ್ಕೆ ನೀರಿನ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ಆ ಕ್ಷೇತ್ರಗಳಿಗೆ ಬೇಡಿಕೆಯಿರುವ ಹೆಚ್ಚುವರಿ ನೀರು ಪೂರೈಸಲು ತ್ಯಾಜ್ಯ ನೀರು ಸಂಸ್ಕರಿಸಿ ಮರು ಬಳಕೆ ಮಾಡುವಂತೆ ಹೊಸ ನೀತಿ ರೂಪಿಸಲಾಗುತ್ತದೆ. 2018-19ನೇ ಸಾಲಿನಲ್ಲಿ ಬೆಂಗಳೂರು ಸೇರಿ 10 ನಗರಗಳಲ್ಲಿ ಪ್ರಾಯೋಗಿಕವಾಗಿ ತ್ಯಾಜ್ಯ ನೀರು ಮರುಬಳಕೆ ಯೋಜನೆ ಜಾರಿಗೊಳಿಸಲಾಗುತ್ತದೆ.

ಬೆಂಗಳೂರಿಗೆ ಯಾವುದೇ ಅನುಕೂಲ ವಾಗುವಂತಹ ಯೋಜನೆಯನ್ನು ಬಜೆಟ್​ನಲ್ಲಿ ಘೋಷಿಸಿಲ್ಲ. ಕಳೆದ 4 ವರ್ಷಗಳಂತೆ ಈ ವರ್ಷವೂ ಸಿಎಂ ಸಿದ್ದರಾಮಯ್ಯ ಪೊಳ್ಳು ಬಜೆಟ್ ಮಂಡಿಸಿದ್ದಾರೆ.

| ಪದ್ಮನಾಭರೆಡ್ಡಿ ಬಿಬಿಎಂಪಿ ಪ್ರತಿಪಕ್ಷ ನಾಯಕ


ಬೆಳ್ಳಂದೂರು ಕೆರೆ ಕಾಯಕಲ್ಪಕ್ಕೆ ದಕ್ಕಿದ್ದು – 50 ಕೋಟಿ ರೂ

ಬೆಳ್ಳಂದೂರು ಕೆರೆಯಲ್ಲಿರುವ 1.2 ಲಕ್ಷ ಘನ ಮೀಟರ್ ಹೂಳು ಸ್ವಚ್ಛತೆಗೆ ಬಿಡಿಎಗೆ ಅಂದಾಜು 350 ಕೋಟಿ ರೂ. ಅಗತ್ಯವಿದೆ. ಕಳೆದ ಬಜೆಟ್​ನಲ್ಲಿ ಕೆರೆ ಸ್ವಚ್ಛತೆಗಾಗಿ ಬಿಡುಗಡೆ ಮಾಡಿದ್ದು 50 ಕೋಟಿ ರೂ. ಮಾತ್ರ. ಅನುದಾನದ ಅಲಭ್ಯತೆಯಿಂದ ಕೆರೆಯಲ್ಲಿನ ಕಳೆ ತೆಗೆಯುವ ಕಾರ್ಯ ಪೂರ್ಣವಾಗಿಲ್ಲ. ಇತ್ತೀಚೆಗೆ ಮತ್ತೆ ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕೆಂಗಣ್ಣಿಗೂ ಸರ್ಕಾರ ಗುರಿಯಾಗಿತ್ತು. ಕೆರೆಯ ಲ್ಲಿನ ಹೂಳು, ಬೇಲಿ ನಿರ್ವಣ, ಒತ್ತುವರಿ ತೆರವು ಸೇರಿ ಸಮಗ್ರ ಅಭಿವೃದ್ಧಿಗೆ 850 ಕೋಟಿ ರೂ. ಅವಶ್ಯಕತೆ ಇದ್ದು, ಸರ್ಕಾರ ಈ ನಿಟ್ಟಿನಲ್ಲಿ ಬಿಡಿಎಗೆ ಯಾವುದೇ ವಿಶೇಷ ಅನುದಾನ ನೀಡಿಲ್ಲ. ಈ ಮೂಲಕ ಕೆರೆ ಅಭಿವೃದ್ಧಿ, ಪರಿಸರ ಸಂರಕ್ಷಣೆ ವಿಭಾಗವನ್ನು ಸರ್ಕಾರ ನಿರ್ಲಕ್ಷಿಸಿದೆ ಎಂಬ ಅಸಮಾಧಾನ ಕೇಳಿಬಂದಿದೆ.

ಬಿಡಿಎ ವ್ಯಾಪ್ತಿಯಲ್ಲಿದ್ದ 117 ಕೆರೆಗಳ ಪೈಕಿ ಸಮಗ್ರ ಅಭಿವೃದ್ಧಿ ಕಂಡಿರುವುದು 12 ಮಾತ್ರ. 62 ಕೋಟಿ ರೂ. ವೆಚ್ಚದಲ್ಲಿ 17 ಕೆರೆಗಳ ಅಭಿವೃದ್ಧಿ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. 25 ಕೆರೆಗಳಿಗೆ ಬೇಲಿ ಅಳವಡಿಸಿದ್ದರೆ, ಇನ್ನೂ 70 ಕೆರೆಗಳ ಸರ್ವೆ ಪೂರ್ಣಗೊಳಿಸಿ, ಒತ್ತು ವರಿ ತೆರವು ಮಾಡಲು ಕ್ರಮ ಕೈಗೊಳ್ಳುವ ಭರವಸೆ ಯಷ್ಟೇ ಬಿಡಿಎಗೆ ಬಜೆಟ್​ನಿಂದ ಲಭಿಸಿದೆ.

ಇದಲ್ಲದೆ ಬೆಂಗಳೂರು ಪರಿಷ್ಕೃತ ಮಹಾಯೋಜನೆ -2031, ಕೋನದಾಸಪುರದಲ್ಲಿ ಇನ್ನೋವೇಟಿವ್ ಟೌನ್​ಶಿಪ್, ನಾಡಪ್ರಭು ಕೆಂಪೇಗೌಡ ಬಡಾವಣೆಯ 2ನೇ ಹಂತದ 5 ಸಾವಿರ ಸೈಟುಗಳ ಹಂಚಿಕೆ ಸೇರಿ ಹಳೇ ಯೋಜನೆಗಳನ್ನೇ ಉಲ್ಲೇಖಿಸಲಾಗಿದೆ.

ಬೆಂಗಳೂರು ನಗರದ ಅಭಿವೃದ್ಧಿಗೆ ಪೂರಕವಾದ ಬಜೆಟ್ ಇದಲ್ಲ. ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದರ ಜತೆಗೆ, ದೊಡ್ಡ ಮಟ್ಟದ ಹೂಡಿಕೆ, ಯೋಜನೆ ರೂಪಿಸುವುದು ಅಗತ್ಯ. ದೀರ್ಘಕಾಲದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಗತ್ಯ ಕಾರ್ಯಕ್ರಮ ರೂಪಿಸಬೇಕಿತ್ತು.

| ಶ್ರೀನಿವಾಸ್ ಅಲವಿಲ್ಲಿ ಸಿಟಿಜನ್ ಫಾರ್ ಬೆಂಗಳೂರು ಸಂಯೋಜಕ


ಮತದಾರರ ಓಲೈಕೆಗೆ ಕಸರತ್ತು

ವಿಧಾನಸಭೆ ಚುನಾವಣೆ 90 ದಿನವಷ್ಟೇ ಉಳಿದಿರುವಾಗ ತಮ್ಮ 13ನೇ ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ, ಮತದಾರರನ್ನು ಓಲೈಸಲು ಎಲ್ಲ ರೀತಿಯ ಕಸರತ್ತು ನಡೆಸಿದ್ದಾರೆ.

ಚುನಾವಣೆಯಲ್ಲಿ ಬೃಹತ್ ಪ್ರಮಾಣ ದಲ್ಲಿ ಮತ ಆಗಮಿಸುವ ಮಹಿಳೆಯರು, ಯುವಕರು, ಹಿಂದುಳಿದ ವರ್ಗ, ದಲಿತರು ಸೇರಿ ಎಲ್ಲ ಪ್ರಮುಖ ವರ್ಗಗಳ ಓಲೈಕೆಗೆ ಯಾವುದೇ ಕಸರತ್ತು ಬಿಟ್ಟಿಲ್ಲ.

ಮೊದಲನೆಯದಾಗಿ, ರಾಜ್ಯ ಸರ್ಕಾರಿ ನೌಕರರಿಗೆ ಶೇ.30 ವೇತನ ಹೆಚ್ಚಿಸುವ 6ನೇ ವೇತನ ಆಯೋಗದ ಶಿಫಾರಸನ್ನು ಸಂಪೂರ್ಣವಾಗಿ ಒಪ್ಪಲಾಗಿದೆ. ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ಪದವಿ ಶಿಕ್ಷಣ ಸಂಸ್ತೆಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿನ ಸುಮಾರು 73 ಸಾವಿರ ಬೋಧಕೇತರರೂ ಸೇರಿ 5.20 ಲಕ್ಷ ಸರ್ಕಾರ ನೌಕರರಿಗೆ ಇದರಿಂದ ಅನುಕೂಲವಾಗಲಿದೆ.

ಒಟ್ಟು ಜನಸಂಖ್ಯೆಯಲ್ಲಿ ಶೇ.50 ಮಹಿಳಾ ಮತದಾರರನ್ನು ಓಲೈಸಲು ಸಾಕಷ್ಟು ಕಸರತ್ತು ನಡೆಸಲಾಗಿದೆ. ಇಲಾಖೆಯ 2,503 ಮೇಲ್ವಿಚಾರಕಿ ಯರಿಗೆ ದ್ವಿಚಕ್ರ ವಾಹನ ಖರೀದಿಗೆ 50 ಸಾವಿರ ರೂ. ಬಡ್ಡಿರಹಿತ ಸಾಲದ ಜತೆಗೆ ಇಂಧನ ವೆಚ್ಚಕ್ಕೆ ಮಾಸಿಕ 1 ಸಾವಿರ ರೂ. ನೀಡುವ ನಿರ್ಧಾರ ಮಾಡಲಾಗಿದೆ. ಉದ್ಯೋಗಿನಿ ಯೋಜನೆಯಲ್ಲಿ 1 ಲಕ್ಷ ರೂ. ಇದ್ದ ಸಾಲದ ಮಿತಿಯನ್ನು 3 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಶೇ.75ಕ್ಕಿಂತ ಹೆಚ್ಚು ಹಾಗೂ ಶೇ.75ರೊಳಗಿನ ಅಂಗವೈಕಲ್ಯ ಹೊಂದಿರುವವರಿಗೆ ಕ್ರಮವಾಗಿ 200 ಹಾಗೂ 100 ರೂ. ಮಾಸಾಶನ ಹೆಚ್ಚಿಸಲಾಗಿದೆ.

ಎಸ್​ಸಿ ಎಸ್​ಟಿ ಸಮುದಾಯಕ್ಕೂ ಸಾಕಷ್ಟು ಗಮನ ನೀಡಲಾಗಿದ್ದು, ಐಐಟಿ, ಐಐಎಂ, ಐಐಎಸ್​ಸಿ, ಎನ್​ಐಟಿಯಂತಹ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು

1 ಲಕ್ಷ ರೂ.ನಿಂದ 2 ಲಕ್ಷಕ್ಕೆ ಹೆಚ್ಚಿಸಲಾಗಿದೆ. ದಲಿತ ಯುವಕ- ಯುವತಿಯರು ಬೇರೆ ಸಮುದಾಯದವರನ್ನು ಮದುವೆಯಾದರೆ ನೀಡುತ್ತಿದ್ದ ಪ್ರೋತ್ಸಾಹಧನ ಹೆಚ್ಚಳ, ದೇವದಾಸಿಯರ ಸಬಲೀಕರಣಕ್ಕೆ ಭೂ ಖರೀದಿಯಲ್ಲಿ ಆದ್ಯತೆ ನೀಡಲು ಉದ್ದೇಶಿಸಲಾಗಿದೆ.ಸೋಲಿಗ, ಜೇನುಕುರುಬ, ಬೋವಿ, ಮುಂತಾದ ಅನೇಕ ಸಮಯದಾಗಳಿಗೆ ನಿರ್ದಿಷ್ಟ ಯೋಜನೆಗಳನ್ನು ರೂಪಿಸಲಾಗಿದೆ.

ಸಂಗೊಳ್ಳಿ ರಾಯಣ್ಣ ಜನ್ಮಸ್ಥಳ ಅಭಿವೃದ್ಧಿಗೆ 267 ಕೋಟಿ ರೂ., ವಿದ್ಯಾಸಿರಿ ಯೋಜನೆಯಡಿ ಫಲಾನುಭವಿಗಳ ಸಂಖ್ಯೆ 1 ಲಕ್ಷಕ್ಕೆ ಏರಿಕೆ, ಹಿಂದುಳಿದ ವರ್ಗಳು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ಕೆನೆಪದರ ಆದಾಯ ಮಿತಿಯನ್ನು 8 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಸಮಾಜದ ಎಲ್ಲ ವರ್ಗಗಳು, ಮತದಾರರನ್ನು ಓಲೈಸಲು ಮುಂಗಡ ಪತ್ರವನ್ನು ಸಿಎಂ ಸಿದ್ದರಾಮಯ್ಯ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಇಷ್ಟೆಲ್ಲ ಕಸರತ್ತು ಫಲ ನೀಡುತ್ತದೆಯೇ ಎಂಬುದು ಮೇನಲ್ಲಿ ತಿಳಿಯಲಿದೆ.


ಬೆಂಗಳೂರಿಗರ ಮೂಗಿಗೆ ತುಪ್ಪ

| ಸಿ.ಎಸ್. ಸುಧೀರ್ ಸಿಇಒ ಇಂಡಿಯನ್ ಮನಿ ಡಾಟ್ ಕಾಂ

ಯಾವುದೇ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿಯಲು ಬೆಂಗಳೂರಿನ ಮತಗಳ ಮೇಲೆ ಕಣ್ಣಿಡುವುದು ನಿರ್ಣಾಯಕ. ಈ ಲೆಕ್ಕಾಚಾರದಲ್ಲಿ ನೋಡುವುದಾದರೆ ಸಿಲಿಕಾನ್ ಸಿಟಿಗೆ ಬಜೆಟ್​ನಲ್ಲಿ ಹೆಚ್ಚು ಒತ್ತು ಸಿಗಬೇಕಿತ್ತು.

ಸಿಎಂ ನಗರಗಳತ್ತ ಅಷ್ಟಾಗಿ ಗಮನಹರಿಸಿಲ್ಲ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. 17 ಸಾವಿರ ಕೋಟಿ ರೂ. ಮೊತ್ತದಲ್ಲಿ ಬೆಂಗಳೂರಿನ ಬಿಬಿಎಂಪಿ ಯೋಜನೆಗಳಿಗೆ ಸಿಕ್ಕಿರುವುದು 2,500 ಕೋಟಿ ರೂ. ಮಾತ್ರ.

ಪ್ರಸಕ್ತ ಸಾಲಿನ ಬಜೆಟ್​ನಲ್ಲಿ ಮೆಟ್ರೋ 3 ನೇ ಹಂತದ ಯೋಜನೆಗೆ ನಿರ್ದಿಷ್ಟ ಹಣ ನಿಗದಿ ಮಾಡಬಹುದು ಎಂಬ ನಿರೀಕ್ಷೆ ಈಡೇರಿಲ್ಲ. ಬೆಂಗಳೂರು ಸುತ್ತಲಿನ ಪಟ್ಟಣಗಳಿಗೆ ಉಪನಗರ ರೈಲು ಯೋಜನೆಗೆ ಹಣಕಾಸು ಸಿಗಲಿದೆ ಎಂಬ ನಿರೀಕ್ಷೆ ಸುಳ್ಳಾಗಿದೆ. ಹೈಟೆಕ್ ಉಪ ನಗರಗಳ ನಿರ್ಮಾಣ ಬಗ್ಗೆ ಸರ್ಕಾರ ಚಿಂತಿಸಿಲ್ಲ.

ನಗರದಲ್ಲಿ ನೀರಿನ ಬವಣೆ ನೀಗಿಸಲು ದೀರ್ಘಕಾಲಿಕ ಪರಿಹಾರ ಕ್ರಮಗಳ ಬಗ್ಗೆ ಸರ್ಕಾರ ಚಿಂತಿಸಿಲ್ಲ. ನಗರದಲ್ಲಿ ಮಳೆ ನೀರು ಕೊಯ್ಲನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿಲ್ಲ. ನಗರದ ಮೂಲಸೌಕರ್ಯಕ್ಕೆ ಒಂದಿಷ್ಟು ಒತ್ತು ಸಿಕ್ಕಿದೆ. ಮೇಲ್ಸೇತುವೆಗಳು, ಟೆಂಡರ್ ಶೂರ್ ರಸ್ತೆ, ವರ್ತಲ ರಸ್ತೆಗಳ ನಿರ್ವಣ, ಮಾರುಕಟ್ಟೆಗಳ ಸುಧಾರಣೆ, ಕಬ್ಬನ್ ಉದ್ಯಾನಕ್ಕೆ ಹೊಸ ಮೆರಗು, ಸುಧಾರಿತ ಪಾದಚಾರಿ ಮಾರ್ಗಗಳ ನಿರ್ವಣ, ತಗ್ಗು ಪ್ರದೇಶಗಳು ಜಲಾವೃತವಾಗುವುದನ್ನು ತಪ್ಪಿಸಲು ಸಮಗ್ರ ಯೋಜನೆ, ನಗರದ ಹಸಿರು ಹೆಚ್ಚಿಸಿ ಮಾಲಿನ್ಯ ತಗ್ಗಿಸಲು ರೂಪರೇಷೆ, ರ್ಪಾಂಗ್ ಸಮಸ್ಯೆ ತಪ್ಪಿಸಲು ಹೊಸ ನೀತಿ ಸೇರಿ ನಗರದ ಸಮಗ್ರ ಯೋಚನೆ ಬಗ್ಗೆ ಸಣ್ಣದಾಗಿ ಪ್ರಸ್ತಾಪಿಸಲಾಗಿದೆ. ಆದರೆ ನಗರದ ಒಟ್ಟಾರೆ ಮೂಲಸೌಕರ್ಯವನ್ನು ಗಣನೀಯವಾಗಿ ಸುಧಾರಿಸುವಂತಹ ಯೋಜನೆ ಬಜೆಟ್​ನಲ್ಲಿ ಕಾಣುತ್ತಿಲ್ಲ. ಮಧ್ಯಮ ವರ್ಗದ ಜನರಿಗೂ ಕೈಗೆಟುವಂತಹ ದರದಲ್ಲಿ ನಿವೇಶನ ಮತ್ತು ಮನೆಗಳನ್ನು ಕೊಡುವ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು ಎಂಬ ಜನಾಭಿಪ್ರಾಯಕ್ಕೆ ಮನ್ನಣೆ ಸಿಕ್ಕಿಲ್ಲ. ‘ಬಜೆಟ್ ಅನ್ನುವುದು ಅಂಕಿ ಅಂಶಗಳ ಗಣಿತವಲ್ಲ, ಜನರ ದುಡ್ಡಿನ ಲೆಕ್ಕ’ ಎಂದಿರುವ ಸಿಎಂ ಮಹಾನಗರ ಬೆಂಗಳೂರಿಗೆ ಬಜೆಟ್ ಘೊಷಣೆಗಳನ್ನು ಮಾಡುವಾಗ ರಾಜಕೀಯ ಗಣಿತ ಮರೆತಿದ್ದಾರೆ.


Leave a Reply

Your email address will not be published. Required fields are marked *

Back To Top