Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಮಳೆ ಆಶ್ರಿತ ರೈತರಿಗೆ ಸರ್ಕಾರದ ಧನವರ್ಷ

Saturday, 17.02.2018, 3:06 AM       No Comments

ಪ್ರಾಕೃತಿಕ ಸಂಕಷ್ಟದಲ್ಲಿ ಕೃಷಿಕರಿಗೆ ನೆರವಾಗುವ ಯೋಜನೆ ಪ್ರಕಟಿಸುವ ಮೂಲಕ ಸಿದ್ದರಾಮಯ್ಯ ಸರ್ಕಾರ ಕಾಳಜಿ ಪ್ರದರ್ಶಿಸಿದೆ. ಒಣಭೂಮಿ ರೈತರಿಗೆ ನೇರ ಆದಾಯ ನೆರವು ನೀಡುವ ‘ರೈತ ಬೆಳಕು’ ಯೋಜನೆ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಂದು ಹೇಳಿಕೊಂಡಿದೆ.

 

ಮಳೆಯಾಶ್ರಿತ ಬೆಳೆ ಬೆಳೆಯುವ ಪ್ರತಿ ರೈತನಿಗೆ ಬರ ಹಾಗೂ ಪ್ರಾಕೃತಿಕ ಸಂಕಷ್ಟದಲ್ಲಿ ನೆರವಾಗಲು ರೈತ ಬೆಳಕು ಯೋಜನೆಯಡಿ ಪ್ರತಿ ವರ್ಷ ಗರಿಷ್ಠ್ಠ 10,000 ರೂ.ಗಳ ಮಿತಿಗೆ ಒಳಪಟ್ಟು ಪ್ರತಿ ಹೆಕ್ಟೇರ್​ಗೆ 5,000 ರೂ.ಗಳನ್ನು ನೀಡಲಿದೆ. ಈ ಹಣವನ್ನು ರೈತರಿಗೆ ಬ್ಯಾಂಕ್ ಖಾತೆಗಳ ಮೂಲಕ ನೇರ ವರ್ಗಾವಣೆ ಮಾಡಲಾಗುತ್ತದೆ. 70 ಲಕ್ಷಕ್ಕೂ ಹೆಚ್ಚು ರೈತರಿಗೆ ಇದರಿಂದ ಪ್ರಯೋಜನವಾಗಲಿದ್ದು ಪ್ರತಿ ವರ್ಷ 3,500 ಕೋಟಿ ರೂ. ಖರ್ಚಾಗಲಿದೆ. ಸರ್ಕಾರದ ಈ ದಿಟ್ಟ ಹೆಜ್ಜೆ ಅನ್ನದಾತನ ಋಣ ತೀರಿಸುವ ನಮ್ಮ ಸಣ್ಣ ಪ್ರಯತ್ನ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಇದಲ್ಲದೆ ಬರ ಪ್ರದೇಶದ ರೈತರಿಗಾಗಿ ನೀರಾವರಿಗೆ 600 ಕೋಟಿ ರೂ. ವೆಚ್ಚ ಮಾಡುವುದಾಗಿ ತಿಳಿಸಿದ್ದಾರೆ.

# ರೈತರಿಗೆ ಸಮಾನ ಸಹಾಯಧನ: ಕೃಷಿ ಹೊಂಡ, ಪಾಲಿಹೌಸ್​ಗಳ ನಿರ್ವಣ, ಮಣ್ಣು ಆರೋಗ್ಯ ಕಾರ್ಡ್ ವಿತರಣೆ, ಹನಿ ನೀರಾವರಿಗೆ ಶೇ. 90 ಅನುದಾನ ನೀಡಲಾಗುವುದು.

# ಬಡ್ಡಿರಹಿತ ಸಾಲ: ದೇಶದಲ್ಲಿಯೇ ಮೊದಲ ಬಾರಿಗೆ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ನೀಡಿದ್ದ ಸರ್ಕಾರ, ಇದರ ಜತೆಗೆ ಶೇ.3ರ ಬಡ್ಡಿ ದರದಲ್ಲಿ 3 ಲಕ್ಷದಿಂದ 10 ಲಕ್ಷ ರೂ.ವರೆಗೆ ಸಾಲ ನೀಡಲಿದೆ. ಎಲ್ಲ ಬಗೆಯ ಕೃಷಿ ಸಾಲಗಳ ಅಸಲನ್ನು 2017ರ ಮಾರ್ಚ್ 31ರೊಳಗೆ ಪಾವತಿಸಿದ ರೈತರ 124.70 ಕೋಟಿ ರೂ. ಮೊತ್ತದ ಪೂರ್ಣ ಬಡ್ಡಿಯನ್ನು ಮನ್ನಾ ಮಾಡಲಾಗಿದ್ದು, ಕಳೆದ 4 ವರ್ಷಗಳ ಅವಧಿಯಲ್ಲಿ 10.7 ಲಕ್ಷ ರೈತರ 2,359 ಕೋಟಿ ರೂ. ಬಡ್ಡಿ ಮನ್ನಾ ಮಾಡಲಾಗಿದೆ. ಸಹಕಾರಿ ಬ್ಯಾಂಕ್​ಗಳಲ್ಲಿನ ರೈತರ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಿದ್ದೇವೆ. ರಾಜ್ಯದ 22,27,506 ರೈತರು ಇದರ ಪ್ರಯೋಜನ ಪಡೆದಿದ್ದು, ಒಟ್ಟು 8165 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ ಸಿಎಂ ತಿಳಿಸಿದ್ದಾರೆ.

ಪಂಚಾಯ್ತಿಯಲ್ಲೂ ಕೃಷಿ ಸಹಕಾರಿ ಸಂಘ

ಪ್ರತಿ ಗ್ರಾಮಪಂಚಾಯಿತಿಯ ವ್ಯಾಪ್ತಿಯಲ್ಲಿ ಪ್ರಾಥಮಿಕ ಕೃಷಿ ಸಹಕಾರಿ ಸಂಘ ಸ್ಥಾಪನೆ ಮಾಡಲಾಗುವುದು. ಎಲ್ಲ ಎಪಿಎಂಸಿಗಳಲ್ಲಿ ತಲಾ 5 ಕೋಟಿ ರೂ. ವೆಚ್ಚದಲ್ಲಿ ಗೋದಾಮು ನಿರ್ವಿುಸಲಾಗುತ್ತದೆ. ರಾಜ್ಯದ 157 ಕೃಷಿ ಮಾರುಕಟ್ಟೆಗಳಲ್ಲಿ ಆನ್​ಲೈನ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ರಾಜಸ್ಥಾನದ ನಂತರ ಅತ್ಯಂತ ಹೆಚ್ಚು ಒಣಭೂಮಿ ಇರುವ ಪ್ರದೇಶ ಕರ್ನಾಟಕವಾಗಿದ್ದು, ಈ ಹಿನ್ನೆಲೆಯಲ್ಲಿ ಮಳೆ ನೀರು ಸಂಗ್ರಹ ಮತ್ತು ಮರುಬಳಕೆಗೆ ಆದ್ಯತೆ ನೀಡಲಾಗಿದ್ದು, ರಾಜ್ಯದ 23 ಜಿಲ್ಲೆಗಳ 107 ತಾಲ್ಲೂಕುಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ.

ನೆಲಗಡಲೆ ರೈತರಿಗೆ ನೆರವು

# ತುಮಕೂರು, ಪಾವಗಡ, ಸಿರಾ ಮತ್ತು ಮಧುಗಿರಿ ತಾಲ್ಲೂಕುಗಳು, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ ತಾಲ್ಲೂಕುಗಳ ನೆಲಗಡಲೆ ಬೆಳೆಯುವ ರೈತರಿಗೆ 50 ಕೋಟಿ ರೂ. ಸಹಾಯ

# ಕಬ್ಬು ಕಟಾವು ಯಂತ್ರ ಖರೀದಿಗೆ ಸಹಾಯಧನಕ್ಕಾಗಿ 20 ಕೋಟಿ ರೂ. ಮೀಸಲು

# ನಾವು ಕಡಿತದಿಂದ ಮೃತ ರೈತರ ಹಾಗೂ ಕೃಷಿ ಕಾರ್ವಿುಕರ ಕುಟುಂಬಗಳಿಗೆ 2 ಲಕ್ಷ ರೂ.ಪರಿಹಾರ

# ಬಣವೆಗಳಿಗೆ ಬೆಂಕಿ ಬಿದ್ದ ಪ್ರಕರಣಗಳಲ್ಲಿ ಪರಿಹಾರ ದ್ವಿಗುಣಗೊಳಿಸಿದ್ದು 20,000 ರೂ.ಗೆ ಏರಿಸಲಾಗಿದೆ.

# ಚಾಮರಾಜನಗರ ಜಿಲ್ಲೆಯಲ್ಲಿ ನೂತನ ಕೃಷಿ ಕಾಲೇಜು ಸ್ಥಾಪನೆ

# ವಿಜಯಪುರದ ಮುದ್ದೇಬಿಹಾಳದಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆ

ತೋಟಗಾರಿಕೆ ಕ್ಷೇತ್ರ ಪುನಶ್ಚೇತನ

 ವಿದೇಶಿ ಹಾಗೂ ಅಪರೂಪದ ಹಣ್ಣುಗಳಾದ ಪ್ಯಾಷನ್ ಹಣ್ಣು, ರಾಂಬೂಟಾನ್, ದುರಿಯನ್, ಡ್ರ್ಯಾಗನ್ ಹಣ್ಣು, ಲಿಚಿ, ಮ್ಯಾಂಗೋಸ್ಟೀನ್, ಆಪಲ್​ಬರ್, ಬೆಣ್ಣೆಹಣ್ಣು, ನೇರಳೆ, ಸ್ಟ್ರಾಬೆರಿ ಇತ್ಯಾದಿ ಹಾಗೂ ಹೊಸ ಮತ್ತು ಬೀಜರಹಿತ ಸೀತಾಫಲ ಮತ್ತು ಸೀಬೆ ತಳಿಗಳನ್ನು ಬೆಳೆಯಲು ಕೇಂದ್ರ ಪುರಸ್ಕೃತ ಹಾಗೂ ರಾಜ್ಯವಲಯ ಯೋಜನೆಗಳಡಿ ಸ ರ್ಕಾರ ಉತ್ತೇಜನ ನೀಡಲಿದೆ. ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳ ಸಮಗ್ರ ಪೀಡೆ ಮತ್ತು ಸಮಗ್ರ ಪೋಷಕಾಂಶ ನಿರ್ವಹಣೆಗಾಗಿ ರೈತರಿಗೆ ನೆರವು ನೀಡಲಾಗುವುದು. ಇದಕ್ಕಾಗಿ 10 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ. ನಗರ ಮತ್ತು ನಗರಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟೊಮ್ಯಾಟೋ, ದಪ್ಪ ಮೆಣಸಿನಕಾಯಿ, ಬದನೆ ಮತ್ತು ಸೊಪ್ಪು-ತರಕಾರಿ ಬೆಳೆಗಳನ್ನು ಬೆಳೆಯಲು ಹೈಡ್ರೋಪೋನಿಕ್ಸ್ ತಂತ್ರಜ್ಞಾನದ ಬಳಕೆಯನ್ನು ಪ್ರೋತ್ಸಾಹಿಸಲು ಸರ್ಕಾರ ಮುಂದಾಗಿದೆ. ಸತತ ಬರ ಪರಿಸ್ಥಿತಿಯಿಂದ ಹಾನಿಗೊಳಗಾದ ತೆಂಗಿನ ತೋಟಗಳಲ್ಲಿ ಸಮಗ್ರ ನಿರ್ವಹಣಾ ಪದ್ಧತಿ ಅನುಸರಿಸಲು ಸಮಗ್ರ ಕೀಟ, ರೋಗ ಮತ್ತು ಪೋಷಕಾಂಶಗಳ ನಿರ್ವಹಣೆ ಮತ್ತು ಮರುನಾಟಿಗೆ ಆದ್ಯತೆ ನೀಡಲಿದೆ.

ಸಾವಯವ ಕೃಷಿ ಪ್ರದೇಶ 1.5 ಲಕ್ಷ ಹೆಕ್ಟೇರ್​ಗೆ ವಿಸ್ತರಣೆ, ಸಿರಿಧಾನ್ಯಗಳ ಕೃಷಿ ಪ್ರದೇಶ 60 ಸಾವಿರ ಹೆಕ್ಟೇರ್​ಗೆ ವಿಸ್ತರಿಸಲು 24 ಕೋಟಿ ರೂ. ಅನುದಾನ ಒದಗಿಸಲಾಗಿದೆ.

ನಂಜುಂಡಸ್ವಾಮಿ ಹೆಸರಲ್ಲಿ ಪೀಠ

ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಒಂದು ಕೋಟಿ ರೂ. ವೆಚ್ಚದಲ್ಲಿ ಪ್ರೊ.ನಂಜುಂಡಸ್ವಾಮಿ ಸಂಶೋಧನಾ ಪೀಠ ಸ್ಥಾಪಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಆ ಮೂಲಕ ತಮ್ಮ ಗುರುವಿಗೆ ನಮನ ಸಲ್ಲಿಸಿದ್ದಾರೆ. ರೈತ ಸಂಘಕ್ಕೆ ಪ್ರೊ. ನಂಜುಂಡಸ್ವಾಮಿ ಅಧ್ಯಕ್ಷರಾಗಿದ್ದಾಗ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದರು.

ರೇಷ್ಮೆ ಟೂರಿಸಂಗೆ ಆದ್ಯತೆ

# ಕೇಂದ್ರ ರೇಷ್ಮೆ ಮಂಡಳಿ ಸಹಯೋಗದೊಂದಿಗೆ ಬೆಂಗಳೂರು- ಮೈಸೂರು ಕಾರಿಡಾರ್​ನಲ್ಲಿ ರೇಷ್ಮೆ ಪ್ರವಾಸೋದ್ಯಮ ಅಭಿವೃದ್ಧಿ. ಚನ್ನಪಟ್ಟಣದ ರೇಷ್ಮೆ ಕೃಷಿ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಟೂರಿಸಂ ಲೈವ್ ಮ್ಯೂಸಿಯಂ ಸ್ಥಾಪನೆಗೆ 457 ಕೋಟಿ ರೂ. ಅನುದಾನ ನಿಗದಿಪಡಿಸಿದೆ.

# ತಲಘಟ್ಟಪುರದಲ್ಲಿ ಹಿಪ್ಪುನೇರಳೆ ಕೃಷಿ ಚಟುವಟಿಕೆ ರೇಷ್ಮೆ ವಸ್ತ್ರ ತಯಾರಿಸುವವರೆಗಿನ ಸಿಲ್ಕ್ ಮ್ಯೂಸಿಯಂ ಸ್ಥಾಪನೆ

# ಬಿಳಿಗಿರಿ ರಂಗನಬೆಟ್ಟದಲ್ಲಿ 40 ಎಕರೆ ಜಮೀನಿನಲ್ಲಿ ಸೋಲಿಗರಿಗೆ ರೇಷ್ಮೆ ಹುಳು ಸಾಕಾಣಿಕೆ ಶೆಡ್ ನಿರ್ವಣ.

ಸಣ್ಣ ನೀರಾವರಿಗೆ ದೊಡ್ಡ ನೆರವು

# ಸಣ್ಣ ನೀರಾವರಿಗೆ ಈ ಬಾರಿ 2114 ಕೋಟಿ ರೂ. ನೆರವು ನೀಡಲಾಗಿದೆ. 43 ತಾಲೂಕುಗಳಲ್ಲಿ ಅಂತರ್ಜಲ ಉತ್ತಮಪಡಿಸಲು ಚೆಕ್ ಡ್ಯಾಂ, ಬ್ಯಾರೇಜ್, ಬಾಂದಾರ ಮತ್ತು ರೀಚಾರ್ಜ್ ಶಾಫ್ಟ್ ರಚನೆಗೆ 50 ಕೋಟಿ ರೂ.

# ಸ್ಥಗಿತಗೊಂಡಿರುವ 183 ಏತ ನೀರಾವರಿ ಪುನಶ್ಚೇತನಕ್ಕೆ 100 ಕೋಟಿ ರೂ.

# ಮಂಗಳೂರಿನ ಹರೇಕಳ ಬಳಿ ನೇತ್ರಾವತಿಗೆ ಉಪ್ಪು ನೀರು ತಡೆಯಲು ಕಿಂಡಿ ಅಣೆಕಟ್ಟೆಗೆ 174 ಕೋಟಿ ರೂ.

# ಕೆ.ಆರ್. ಪುರ ಸಂಸ್ಕರಣಾ ಘಟಕದಿಂದ ಹೊಸಕೋಟೆಯ 30 ಕೆರೆಗಳಿಗೆ ನೀರು.

ಮಹಿಳೆ, ಅಂಗವಿಕಲರಿಗೂ ಅರ್ಜಿ ಶುಲ್ಕ ವಿನಾಯಿತಿ

ಇತ್ತೀಚಿನ ವರ್ಷಗಳಲ್ಲಿ, ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸಲ್ಲಿಸುತ್ತಿರುವ ಅರ್ಜಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಎಲ್ಲ ಪರಿಶಿಷ್ಟ ಜಾತಿ/ಪಂಗಡದ ಅರ್ಜಿದಾರರಿಗೆ ಈಗಾಗಲೇ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಪಡೆಯುವುದನ್ನು ಉತ್ತೇಜಿಸಲು ಮಹಿಳೆಯರು ಹಾಗೂ ಅಂಗವಿಕಲ ಅರ್ಜಿದಾರರಿಗೂ ಅರ್ಜಿ ಶುಲ್ಕ ವಿನಾಯಿತಿ ಸೌಲಭ್ಯ ವಿಸ್ತರಿಸಲಾಗುವುದು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್​ನಲ್ಲಿ ಒಣಭೂಮಿ ರೈತರಿಗೆ ನೆರವು ನೀಡುವ ಉದ್ದೇಶದಿಂದ ‘ರೈತ ಬೆಳಕು’ ಯೋಜನೆ ಆರಂಭಿಸಿರುವುದು, ಜಲಸಂಪನ್ಮೂಲ ಇಲಾಖೆಗೆ 15,998 ಕೋಟಿ ರೂ. ಅನುದಾನ ನೀಡಿರುವುದು ಕ್ರಾಂತಿಕಾರಕ ಕ್ರಮ. ಇದರಿಂದ ರಾಜ್ಯದ 70ಲಕ್ಷಕ್ಕೂ ಅಧಿಕ ರೈತರಿಗೆ ಪ್ರಯೋಜನವಾಗಲಿದೆ.

| ಎಂ.ಬಿ ಪಾಟೀಲ್ ನೀರಾವರಿ ಸಚಿವ


ಕಾಲ್ಪನಿಕ ವೇತನ ಬಡ್ತಿ ಸಮಸ್ಯೆ, ವೇತನ ಆಯೋಗದ ಹೊಸ ವೇತನ ಶ್ರೇಣಿಯ ಆಸೆ, ಅನುದಾನರಹಿತ ಶಾಲೆ-ಕಾಲೇಜುಗಳಿಗೆ ಅನುದಾನ ವಿಸ್ತರಣೆ, ಪದವಿ ಕಾಲೇಜುಗಳಿಗೆ ಅನುದಾನ, ಖಾಲಿ ಹುದ್ದೆಗಳ ಭರ್ತಿ ಈ ಎಲ್ಲದಕ್ಕೂ ಮಣ್ಣೆರಚುವ ಕೆಲಸ ಮಾಡಿದ್ದಾರೆ. ಶೈಕ್ಷಣಿಕವಾಗಿ ನಿಷ್ಪ್ರಯೋಜಕ ಬಜೆಟ್.

| ಅರುಣ ಶಹಾಪೂರ ವಿಧಾನಪರಿಷತ್ ಸದಸ್ಯ


ಕೃಷಿ ಕ್ಷೇತ್ರಕ್ಕೆ ಆದ್ಯತೆ ಸಿಕ್ಕಿದೆ. ರೈತ ಬೆಳಕು ಯೋಜನೆಯ ಮೂಲಕ 70 ಲಕ್ಷ ರೈತರಿಗೆ ಅನುಕೂಲವಾಗುತ್ತದೆ. ಶೇಂಗಾ ಪ್ರದೇಶ ಹೆಚ್ಚಳಕ್ಕೆ 50 ಕೋಟಿ ರೂ., ಅಂತರ್ಜಲ ಮರುಪೂರಣಕ್ಕೆ 183 ಏತ ನೀರಾವರಿ ಯೋಜನೆ ಘೋಷಿಸಿರುವುದು ಉತ್ತಮ.

| ಪ್ರೊ.ಎಂ.ಜಿ. ಚಂದ್ರಕಾಂತ್ ಕೃಷಿ ಆರ್ಥಿಕ ತಜ್ಞ


ಸಿಎಂ ಸಿದ್ದರಾಮಯ್ಯ ಅವರಿಗೆ ಬಜೆಟ್ ಮಂಡಿಸುವ ನೈತಿಕ ಹಕ್ಕಿಲ್ಲ. ಬಜೆಟ್ ಕಾಲಾವಧಿ 2 ತಿಂಗಳು ಎಂದು ಗೊತ್ತಿದ್ದರೂ ಚುನಾವಣೆ ಮೇಲೆ ಕಣ್ಣಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ಜೂಟಾಟ ಆಡಿಸುವಲ್ಲಿ ಸಿಎಂ ನಿಸ್ಸೀಮರು. ಜೂಟ್ ಹೇಳುವ ಜಾಯಮಾನ ಅವರದು.

| ಕೆ.ಎಸ್.ಈಶ್ವರಪ್ಪ ವಿಧಾನಪರಿಷತ್ ಪ್ರತಿಪಕ್ಷ ನಾಯಕ


ವೇತನ ಪರಿಷ್ಕರಣೆಗೆ ತಾತ್ವಿಕ ಒಪ್ಪಿಗೆ

ಬಜೆಟ್ ಮಂಡನೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, 6ನೇ ವೇತನ ಆಯೋಗದ ಶಿಫಾರಸಿನ ಅನ್ವಯ ಬಜೆಟ್​ನಲ್ಲಿ ಶೇ.30ರಷ್ಟು ವೇತನ ಪರಿಷ್ಕರಣೆ ಘೋಷಿಸಲಾಗಿದೆ. ಈ ಬಗ್ಗೆ ಸಚಿವ ಸಂಪುಟದಿಂದ ತಾತ್ವಿಕ ಒಪ್ಪಿಗೆಯನ್ನೂ ಪಡೆಯಲಾಗಿದೆ. ಇದರಿಂದ 10 ಸಾವಿರ ಕೋಟಿ ರು.ಗಳಿಗಿಂತ ಹೆಚ್ಚಿನ ಹೊರೆ ಬೊಕ್ಕಸದ ಮೇಲೆ ಉಂಟಾಗಲಿದೆ. ಕೃಷಿ ಸಾಲ ಮನ್ನಾ ಘೋಷಣೆ ಹಾಗೂ ವೇತನ ಹೆಚ್ಚಳದ ಪರಿಣಾಮ 14,805 ಕೋಟಿ ರು. ಕೊರತೆ ಆಗಲಿದೆ. ಅದನ್ನು ಸರಿದೂಗಿಸಲು ಪ್ರಯತ್ನಿಸಲಾಗಿದೆ ಎಂದರು.

ಅಂಗವಿಕಲರ ಮಾಸಾಶನ ಹೆಚ್ಚಳ

ಪ್ರಸಕ್ತ ವರ್ಷದಿಂದ ಶೇ.75ಕ್ಕೂ ಹೆಚ್ಚಿನ ಅಂಗವೈಕಲ್ಯ ಹೊಂದಿರುವವರಿಗೆ ನೀಡುತ್ತಿರುವ ಮಾಸಾಶನವನ್ನು 200 ರೂ. ಹಾಗೂ ಶೇ.75ಕ್ಕೂ ಕಡಿಮೆ ಅಂಗವೈಕಲ್ಯ ಹೊಂದಿರುವವರಿಗೆ ನೀಡುತ್ತಿರುವ ಮಾಸಾಶನವನ್ನು 100 ರೂ. ಹೆಚ್ಚಿಸಲಾಗುವುದು. ಇದರಿಂದ 8.46 ಲಕ್ಷ ಅಂಗವಿಕಲರಿಗೆ ಅನುಕೂಲವಾಗಲಿದ್ದು, 146 ಕೋಟಿ ರೂ. ಹೆಚ್ಚುವರಿಯಾಗಿ ನೀಡಲಾಗುವುದು.

ಬುದ್ಧಿಮಾಂದ್ಯ ವಯಸ್ಕರಿಗೆ ಸೂಕ್ತ ವೃತ್ತಿ ತರಬೇತಿ ನೀಡಿ, ಅವರನ್ನು ವೃತ್ತಿ ಚಟುವಟಿಕೆಗಳಲ್ಲಿ ತೊಡಗಿಸಲು ಪ್ರಾಯೋಗಿಕವಾಗಿ ರಾಜ್ಯದ 4 ಕಂದಾಯ ವಿಭಾಗಗಳಲ್ಲಿ ತಲಾ ಒಂದರಂತೆ ವೃತ್ತಿ ತರಬೇತಿ ಕೇಂದ್ರ ಸ್ಥಾಪಿಸಲು 1.80 ಕೋಟಿ ರೂ. ನೀಡಲಾಗುವುದು.

ಅಂಗವಿಕಲರ ಹಕ್ಕುಗಳ ಕಾಯ್ದೆ 2016ರ ಅನುಸಾರ ಅಂಗವಿಕಲತೆಯ ಪ್ರಮಾಣ ಹೊಂದಿರುವ ವ್ಯಕ್ತಿಗಳಿಗೆ ಎ ಮತ್ತು ಬಿ ಸಮೂಹದ ಹುದ್ದೆಗಳಲ್ಲಿ ಶೇ. 4 ಮೀಸಲಾತಿ ನೀಡಲಾಗುವುದು.

ಪಿಪಿಪಿ ಮಾದರಿಯಲ್ಲಿ ಟ್ರಕ್ ಟರ್ವಿುನಲ್ ಅಭಿವೃದ್ಧಿ

ಡಿ.ದೇವರಾಜ ಅರಸ್ ಟ್ರಕ್ ಟರ್ವಿುನಲ್ ಮುಖಾಂತರ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಮೈಸೂರಿನ ನಂಜನಗೂಡಿನ ವರ್ತಲ ರಸ್ತೆಯಲ್ಲಿ 6.5 ಎಕರೆ ಪ್ರದೇಶದಲ್ಲಿ 45 ಕೋಟಿ ರೂ.ವೆಚ್ಚದಲ್ಲಿ 2ನೇ ಹಂತದ ಟ್ರಕ್ ಟರ್ವಿುನಲ್, ಧಾರವಾಡ ಜಿಲ್ಲೆಯ ಅಂಚಟಗೇರಿ ಗ್ರಾಮದಲ್ಲಿ ಸಂಸ್ಥೆ ಹೊಂದಿರುವ 56.13 ಎಕರೆ ಜಮೀನಿನಲ್ಲಿ 110 ಕೋಟಿ ರೂ.ವೆಚ್ಚದಲ್ಲಿ ಟರ್ವಿುನಲ್ ಮತ್ತು ಲಾಜಿಸ್ಟಿಕ್ ಪಾರ್ಕ್ ವೇರ್ ಹೌಸ್, ಯಶವಂತಪುರ ಟ್ರಕ್ ಟರ್ವಿುನಲ್​ನಲ್ಲಿ 40 ಕೋಟಿ ರೂ. ವೆಚ್ಚದ ಬಹು ಮಹಡಿ ರ್ಪಾಂಗ್ ಕಟ್ಟಡ, ಚಿತ್ರದುರ್ಗದಲ್ಲಿ 14 ಎಕರೆ ಪ್ರದೇಶದಲ್ಲಿ 35 ಕೋಟಿ ರೂ.ವೆಚ್ಚದಲ್ಲಿ ಟ್ರಕ್ ಟರ್ವಿುನಲ್ ನಿರ್ವಣವಾಗಲಿದೆ.

ಸಾರ್ವಜನಿಕ ಕಟ್ಟಡಗಳಲ್ಲಿ ಮಹಿಳೆಯರಿಗೆ ಡ್ರೆಸ್ಸಿಂಗ್ ರೂಂ

ರಾಜ್ಯದಲ್ಲಿರುವ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಕಟ್ಟಡಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹಗಳೊಂದಿಗೆ ಡ್ರೆಸ್ಸಿಂಗ್ ರೂಮ್ಳನ್ನು ನಿರ್ವಿುಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಲೋಕೋಪಯೋಗಿ ಇಲಾಖೆ ನಿಯಮಕ್ಕೆ ಅಗತ್ಯ ತಿದ್ದುಪಡಿ ತರಲಾಗುತ್ತಿದೆ.

2018-19ನೇ ಸಾಲಿನಲ್ಲಿ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಒಟ್ಟು 9,271 ಕೋಟಿ ರೂ. ಒದಗಿಸಲಾಗಿದೆ.

# ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ-4ರಲ್ಲಿ (ಕೆಎಸ್​ಎಚ್​ಡಿಪಿ) 2,722 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ರಸ್ತೆಗಳನ್ನು 3,480 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ.

# ರಸ್ತೆ ಅಪಘಾತ ತಡೆಗಟ್ಟಲು ಇಲಾಖೆಯ ವಿವಿಧ ಯೋಜನೆಗಳಡಿ ರಸ್ತೆ ಸುರಕ್ಷತಾ ಕಾರ್ಯಕ್ರಮ ಕೈಗೊಳ್ಳಲು 150 ಕೋಟಿ ರೂ. ನಿಗದಿಪಡಿಸಲಾಗಿದೆ.

# ಕೆಆರ್​ಡಿಸಿಎಲ್​ನಿಂದ ವಿಶ್ವ ಬ್ಯಾಂಕ್ ನೆರವಿನೊಂದಿಗೆ ಕೈಗೊಳ್ಳಲಾಗುತ್ತಿರುವ 300 ಕಿ.ಮೀ. ಉದ್ದದ 5 ರಸ್ತೆಗಳನ್ನು ಪೂರ್ಣಗೊಳಿಸಲಾಗುವುದು. ರಸ್ತೆಗಳ ಕಾಮಗಾರಿ ಕೈಗೆತ್ತಿಕೊಳ್ಳಲು ಅತ್ಯಾಧುನಿಕ ಉಪಕರಣಗಳಿಂದ ರಸ್ತೆಗಳ ಮಾಹಿತಿ ಸಂಗ್ರಹಿಸಿ ಇವುಗಳ ಸಹಾಯದಿಂದ ವಾರ್ಷಿಕ ಕಾಮಗಾರಿಗಳ ಯೋಜನೆ ತಯಾರಿಸಿ ಆದ್ಯತೆ ಮೇಲೆ ರಸ್ತೆ ಕಾಮಗಾರಿ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುವುದು.

# ಇಲಾಖೆಯ ರಸ್ತೆ, ಸೇತುವೆ ಮತ್ತು ಕಟ್ಟಡಗಳ ವಿವರ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳ ವಿವರಗಳನ್ನು ಜಿಯೋ ಟ್ಯಾಗ್ ಮಾಡಿ ಜಿಐಎಸ್​ನಲ್ಲಿ ಅಳವಡಿಸಲಾಗುವುದು.

# ಬೆಂಗಳೂರು ಉತ್ತರ ತಾಲೂಕು ಬ್ಯಾತ ಗ್ರಾಮದಿಂದ ಹೆಸರಘಟ್ಟ ಫಾಮ್ರ್ ಮೂಲಕ ರಾಜಾನುಕುಂಟೆ-ಮಧುರೆ ರಸ್ತೆ ಸೇರುವ ರಸ್ತೆಗೆ ಪರ್ಯಾಯವಾಗಿ ಬಸವಣ್ಣ ದೇವಸ್ಥಾನದಿಂದ ಕುಕ್ಕನಹಳ್ಳಿ ಮಾರ್ಗವಾಗಿ ಹಾಗೂ ಮತ್ಕೂರು ಮಾರ್ಗವಾಗಿ ರಾಜಾನುಕುಂಟೆ-ಮಧುರೆ ರಸ್ತೆಗೆ ಸೇರುವ ರಸ್ತೆ ಅಭಿವೃದ್ಧಿಗೆ 12 ಕೋಟಿ ರೂ. ಒದಗಿಸಲಾಗುವುದು.

# ಬಿಡದಿ-ಹಾರೋಹಳ್ಳಿ ರಸ್ತೆ ಸರಪಳಿ 11.20ರಿಂದ 17.00 ಕಿ.ಮೀ.ವರೆಗೆ ಹಾರೋಹಳ್ಳಿ ಸೇರುವ ರಸ್ತೆಯನ್ನು 32 ಕೋಟಿ ರೂ. ಮೊತ್ತದಲ್ಲಿ ನಾಲ್ಕು ಪಥದ ರಸ್ತೆಯನ್ನಾಗಿ ವಿಸ್ತರಣೆ

# ಮಡಿಕೇರಿ-ತಲಕಾವೇರಿ ರಸ್ತೆಯ ಆಯ್ದ ಭಾಗಗಳಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಮರು ಡಾಂಬರೀಕರಣ ಹಾಗೂ ಅಭಿವೃದ್ಧಿ. ಹೊಸ ಕರ್ನಾಟಕ ಭವನ ನಿರ್ಮಾಣ ನವದೆಹಲಿಯಲ್ಲಿರುವ ಕರ್ನಾಟಕ ಭವನ-1 ರ ಮುಂಭಾಗವನ್ನು ಕೆಡವಿ ಮುಂದಿನ 2 ವರ್ಷಗಳಲ್ಲಿ 30 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ಭವನ ನಿರ್ವಿುಸಲಾಗುವುದು.

ಎಂಎಸ್ ಬಿಲ್ಡಿಂಗ್ ಬಳಿ ಬಹುಮಹಡಿ ರ್ಪಾಂಗ್

ಬೆಂಗಳೂರು ಎಂ.ಎಸ್. ಬಿಲ್ಡಿಂಗ್ ಹತ್ತಿರ 20 ಕೋಟಿ ರೂ.ಗಳ ವೆಚ ್ಚಲ್ಲಿ ಮಲ್ಟಿ ಲೆವೆಲ್ ಕಾರ್ ರ್ಪಾಂಗ್ ನಿರ್ವಿುಸಲಾಗುವುದು.

ಕುರಿಗಾರರ ಸಾಲ ಮನ್ನಾ

ಕುರಿ ಸಾಕಣೆದಾರರು ಸಹಕಾರಿ ಬ್ಯಾಂಕ್​ಗಳಲ್ಲಿ ಪಡೆದಿರುವ 50 ಸಾವಿರ ರೂ.ವರೆಗಿನ ಹೊರಬಾಕಿ ಮನ್ನಾ ಮಾಡಲಿದೆ. ಇದರಿಂದ 12,205 ಸಾಕಣೆದಾರರಿಗೆ ಪ್ರಯೋಜನವಾಗಲಿದ್ದು, 52 ಕೋಟಿ ರೂ. ವೆಚ್ಚ ಆಗಲಿದೆ. ಇದಲ್ಲದೆ ಕುರಿಗಾರರ ರಕ್ಷಣೆಗಾಗಿ ಟೆಂಟ್, ತಂತಿ ಬೇಲಿ ಮತ್ತು ಇತರೆ ಸಾಮಗ್ರಿಗಳಿಗೆ 4 ಕೋಟಿ ರೂ. ನೀಡಲಿದೆ.

# ಮೇವು ಭದ್ರತಾ ನೀತಿ ರಚನೆ.

# ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ ನೀಡುವ 187 ಕೋಟಿ ರೂ. ಸಾಲಕ್ಕೆ ಸರ್ಕಾರದ ಖಾತ್ರಿ.

# ಕೋಟಿ ವೆಚ್ಚದಲ್ಲಿ ಚರ್ಮ ಸಂಸ್ಕರಣಾ ಕೇಂದ್ರ ಸ್ಥಾಪನೆ

# 6 ಜಿಲ್ಲೆಗಳಲ್ಲಿ ಸುಸಜ್ಜಿತ ರೋಗ ತಪಾಸಣಾ ಕೇಂದ್ರ ಸ್ಥಾಪನೆಗೆ 3 ಕೋಟಿ ರೂ. ನೆರವು

# 5 ಕುರಿ/ಮೇಕೆ ಮಾರುಕಟ್ಟೆಗಳ ಅಭಿವೃದ್ಧಿಗೆ 7.50 ಕೋಟಿ

# 14 ಸಾವಿರ ಹಾಲು ಉತ್ಪಾದಕರ ಸಂಘದ ಸಿಬ್ಬಂದಿಗೆ ಪ್ರತಿ ಲೀಟರ್​ಗೆ 20 ಪೈಸೆಯಂತೆ 55 ಕೋಟಿ ರೂ. ಪ್ರೋತ್ಸಾಹಧನ ನೀಡಲಿದೆ.

ಮಹಿಳಾ ಮೀನುಗಾರರಿಗೆ ಶೂನ್ಯ ಬಡ್ಡಿಯಲ್ಲಿ ಸಾಲ

ಮಹಿಳಾ ಮೀನುಗಾರರಿಗೆ ಈಗಾಗಲೇ ವಾಣಿಜ್ಯ ಹಾಗೂ ಗ್ರಾಮೀಣ ಪ್ರಾದೇಶಿಕ ಬ್ಯಾಂಕ್​ಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ 50,000 ರೂ. ಸಾಲ. ಉಚಿತವಾಗಿ 35 ಎಂಎಂ ಸ್ಟೆ್ವೕರ್ ಮೆಶ್ ಬಲೆ ವಿತರಣೆ. ಇದಕ್ಕಾಗಿ, 2,500 ಟ್ರಾಲ್ ದೋಣಿಗಳಿಗೆ ತಲಾ 10,000 ರೂ.ಗಳಂತೆ 2.50 ಕೋಟಿ ರೂ. ಅನುದಾನ. ‘ಮತ್ಸ್ಯ ಜೋಪಾಸನೆ ಯೋಜನೆ’ಯಡಿ 10 ಶೀತಲೀಕೃತ ಘಟಕಗಳು ತಲಾ 10 ಲಕ್ಷ ರೂ. ವೆಚ್ಚದಲ್ಲಿ ಸ್ಥಾಪನೆ. ಉತ್ತರ ಕನ್ನಡ ಜಿಲ್ಲೆ, ಮುರುಡೇಶ್ವರದಲ್ಲಿ ಸುಮಾರು 165 ಯಾಂತ್ರೀಕೃತ ಮತ್ತು 460 ನಾಡದೋಣಿಗಳು ಕಾರ್ಯನಿರ್ವಹಿಸುತ್ತಿದ್ದು, ಈ ದೋಣಿಗಳ ಸುರಕ್ಷಿತ ಇಳಿದಾಣಕ್ಕೆ ಹೊರ ಬಂದರು ನಿರ್ವಿುಸಲು ಉದ್ದೇಶಿಸಲಾಗಿದೆ. ಇದರ ಪೂರ್ವಭಾವಿ ಅಧ್ಯಯನಕ್ಕೆ 1 ಕೋಟಿ ರೂ. ನೀಡಲಾಗಿದೆ.

# ಕಾರವಾರ ಬಂದರಿನಲ್ಲಿ 61 ಕೋಟಿ ರೂ. ವೆಚ್ಚದಲ್ಲಿ 250 ಮೀ ಉದ್ದದ ಕೋಸ್ಟಲ್ ಬರ್ತ್ ನಿರ್ಮಾಣ ಹಾಗೂ 425 ಮೀ. ಉದ್ದದ ತಡೆಗೋಡೆ ನಿರ್ವಣಕ್ಕೆ 90 ಕೋಟಿ ವೆಚ್ಚ ಮಾಡಲಿದೆ.

# ಹಳೇ ಮಂಗಳೂರು ಬಂದರಿನಲ್ಲಿ 65 ಕೋಟಿ ರೂ. ಮೊತ್ತದಲ್ಲಿ 300 ಮೀಟರ್ ಕೋಸ್ಟಲ್ ಬರ್ತ್ 29 ಕೋಟಿ ರೂ. ವೆಚ್ಚದಲ್ಲಿ ಬಂದರಿನ ಆಳವನ್ನು 7 ಮೀಟರ್​ವರೆಗೆ ಹೆಚ್ಚಿಸಲು ಯೋಜನೆ.

# ಒಟ್ಟಾರೆ 2018-19ನೇ ಸಾಲಿನಲ್ಲಿ ಇಲಾಖೆಗೆ 252 ಕೋಟಿ ರೂ. ಅನುದಾನ ಘೋಷಿಸಲಾಗಿದೆ.

20 ಲಕ್ಷ ಮನೆ ನಿರ್ಮಾಣ ಗುರಿ

ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮುಂದಿನ 5 ವರ್ಷಗಳಲ್ಲಿ 20 ಲಕ್ಷ ಮನೆ ನಿರ್ಮಾಣ ಮಾಡಲಾಗುವುದೆಂದು ಘೊಷಿಸಲಾಗಿದ್ದು, ವಸತಿ ಇಲಾಖೆಗೆ ಒಟ್ಟಾರೆ 3,942 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಕಳೆದ 5 ವರ್ಷ ವಸತಿಗಾಗಿ 15,391 ಕೋಟಿ ರೂ. ವೆಚ್ಚ ಮಾಡಲಾಗಿದೆ. ಅದರಲ್ಲಿ 9,145 ಕೋಟಿ ರೂ. (ಶೇ.59) ಪರಿಶಿಷ್ಟ ಫಲಾನುಭವಿಗಳಿಗಾಗಿ ಖರ್ಚು ಮಾಡಲಾಗಿದೆ.

# ರಾಜ್ಯದ ಎಲ್ಲ್ಲ ನಗರಗಳಿಗೂ ಬಹುಮಹಡಿ ಕಟ್ಟಡ ನಿರ್ಮಾಣ ಯೋಜನೆ ವಿಸ್ತರಿಸಿ ಮುಖ್ಯಮಂತ್ರಿಗಳ ನಗರ ವಸತಿ ಯೋಜನೆ ಜಾರಿಗೊಳಿಸಲಾಗುವುದು.

# ನಗರಪ್ರದೇಶದಲ್ಲಿ ವಸತಿ ಯೋಜನೆಗಳ ಅನುಷ್ಠಾನಕ್ಕಾಗಿ ಬಿಬಿಎಂಪಿಯಲ್ಲಿ 2000 ಎಕರೆ, ಮಹಾನಗರ ಪಾಲಿಕೆಗಳಲ್ಲಿ 500 ಎಕರೆ, ನಗರಸಭೆ/ ಪುರಸಭೆ ಪ್ರದೇಶಗಳಲ್ಲಿ 250 ಎಕರೆ ಹಾಗೂ ಇತರ ಪಟ್ಟಣ ಪ್ರದೇಶಗಳಲ್ಲಿ 100 ಎಕರೆ ಸರ್ಕಾರಿ ಜಮೀನನ್ನು ವಸತಿಗಾಗಿ ಮೀಸಲಿಡಲು ಉದ್ದೇಶಿಸಲಾಗಿದೆ.

# ರಾಜ್ಯ ಕೊಳೆಗೇರಿಗಳಲ್ಲಿ 40 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಅಂದಾಜಿದೆ. ಮಹಾನಗರ ಪಾಲಿಕೆಗಳ ವ್ಯಾಪ್ತಿಯ ಕೊಳೆಗೇರಿ ಪ್ರದೇಶಗಳಲ್ಲಿ ಟಿಡಿಆರ್ ಮತ್ತು ಹೆಚ್ಚುವರಿ ಎಫ್​ಎಆರ್ ನೀಡುವ ಮೂಲಕ ಅವುಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ.


ಈ ಬಾರಿಯ ಬಜೆಟ್​ನಲ್ಲಿ ಕೃಷಿಗೆ ಸ್ವಲ್ಪ ಮಾತ್ರ ಉತ್ತೇಜನ ಸಿಕ್ಕಿದೆ. ಬರಪೀಡಿತ ಪ್ರದೇಶಕ್ಕೆ ನೀರು ಬರಿಸಿ ಕೃಷಿ ಕ್ಷೇತ್ರದ ಬೆಳವಣಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಯತ್ನ ಕಾಣುತ್ತಿಲ್ಲ.

ಕೃಷಿ ವಲಯಕ್ಕೆ ತುಸು ಉತ್ತೇಜನ

| ಡಾ. ಪ್ರೇಮನಾಥ್ ಕೃಷಿ ತಜ್ಞರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಕೃಷಿ ಕ್ಷೇತ್ರಕ್ಕೆ ನೀಡಿರುವ ಆದ್ಯತೆ ದೊಡ್ಡ ಉತ್ತೇಜಕ ಅಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಪ್ರೋತ್ಸಾಹ ನೀಡುವಂತಿದೆ. ಕೃಷಿ ಕ್ಷೇತ್ರಕ್ಕೆ ಇನ್ನಷ್ಟು ಉತ್ತೇಜನವನ್ನು ನೀಡಬೇಕಾಗಿತ್ತು. ಕಾವೇರಿ ತೀರ್ಪಿನಿಂದ ಈಗ ಅನುಕೂಲವಾಗಿದೆ. ಆ ಅನುಕೂಲವನ್ನು ಬಜೆಟ್​ನಲ್ಲಿ ಒತ್ತು ನೀಡುವ ಮೂಲಕ ಬಳಸಿಕೊಳ್ಳಲು ಪ್ರಯತ್ನ ಮಾಡಬೇಕಾಗಿತ್ತು. ಆಂತಹ ಪ್ರಯತ್ನ ಕಂಡು ಬರುತ್ತಿಲ್ಲ. ರಾಜ್ಯದಲ್ಲಿ ಎರಡು ವೈರುಧ್ಯಗಳಿವೆ. ಬರಪೀಡಿತ ಪ್ರದೇಶ ಬರದಲ್ಲಿಯೇ ಮುಂದುವರೆಯುತ್ತಿದೆ, ಪ್ರವಾಹಪೀಡಿತ ಪ್ರದೇಶಗಳಲ್ಲಿ ಪ್ರವಾಹ ಇರುತ್ತದೆ. ಬರಪೀಡಿತ ಪ್ರದೇಶಕ್ಕೆ ನೀರು ತಂದು ಕೃಷಿ ಕ್ಷೇತ್ರದ ಬೆಳವಣಿಗೆಗೆ ಪ್ರೋತ್ಸಾಹ ನೀಡಿ ಹೆಚ್ಚಿಸುವ ಪ್ರಯತ್ನ ಕಾಣುತ್ತಿಲ್ಲ. ಅಂದರೆ ನೀರಿನ ನಿರ್ವಹಣೆಗೆ ಯಾವ ಮಟ್ಟದ ಆದ್ಯತೆ ಸಿಗಬೇಕಾಗಿತ್ತೋ ಅದು ಕಾಣುತ್ತಿಲ್ಲ. ನೀರಾವರಿಯಲ್ಲಿ ಇಂತಹ ಬದಲಾವಣೆಯ ಪ್ರಯತ್ನ ನಡೆದಿದ್ದರೆ ಕೃಷಿಯಲ್ಲಿ ಇನ್ನೂ ಹೆಚ್ಚಿನ ಕ್ರಾಂತಿಯನ್ನು ನಿರೀಕ್ಷೆ ಮಾಡಬಹುದಾಗಿತ್ತು. ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆಗೆ ಸ್ವಲ್ಪಮಟ್ಟಿಗೆ ಅನುಕೂಲ ಇದೆ, ಆದರೆ ಪರಿಸರ ಸಮತೋಲನ ಕಾಪಾಡುವ ಸಲುವಾಗಿ ಅರಣ್ಯಕ್ಕೆ ಇನ್ನೂ ಹೆಚ್ಚಿನ ಆದ್ಯತೆ ಸಿಕ್ಕಿದ್ದರೆ ಆ ಕ್ಷೇತ್ರಗಳ ಮೂಲಕ ಒಳ್ಳೆಯ ಬೆಳವಣಿಗೆ ಕಾಣಬಹುದಿತ್ತು. ಕೃಷಿ ಸಂಶೋಧನೆಗೆ ಒಂದು ಸಂಸ್ಥೆ ಆರಂಭ ಮಾಡಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಇಂತಹ ಸಂಸ್ಥೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆರಂಭಿಸಬೇಕಾಗಿತ್ತು. ಅದರಿಂದ ರೈತರಿಗೆ ಇನ್ನೂ ಹೆಚ್ಚಿನ ಅನುಕೂಲ ಕಲ್ಪಿಸಬಹುದಾಗಿತ್ತು. ಮಣ್ಣು ಪರೀಕ್ಷಾ ಕೇಂದ್ರಗಳನ್ನು ಕನಿಷ್ಠ ಜಿಲ್ಲೆಗೊಂದರಂತೆ ಮಾಡಿದ್ದರೆ ಒಳ್ಳೆಯದಾಗುತ್ತಿತ್ತು. ರೈತರಿಗೆ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ತಂದುಕೊಡಲು ಆವರ್ತನಿಧಿಯನ್ನು ಘೋಷಣೆ ಮಾಡದಿರುವುದು ಒಳ್ಳೆಯದಲ್ಲ. ಮುಂದಿನ ಬಜೆಟ್​ನಲ್ಲಾದರೂ ಸರ್ಕಾರಗಳು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲಿ. ಕೃಷಿ ಕ್ಷೇತ್ರ ಹಾಗೂ ಕೃಷಿ ಅವಲಂಬಿತ ಕ್ಷೇತ್ರಗಳಿಗೆ ಅನುದಾನ ಕಡಿಮೆಯಾಗುತ್ತಿದೆ. ಅದು ಇನ್ನಷ್ಟು ಜಾಸ್ತಿಯಾದರೆ ಮಾತ್ರ ಕೃಷಿ ಕ್ಷೇತ್ರದ ಬೆಳವಣಿಗೆಯನ್ನು ನಾವು ನಿರೀಕ್ಷೆ ಮಾಡಬಹುದು.

Leave a Reply

Your email address will not be published. Required fields are marked *

Back To Top