Friday, 16th November 2018  

Vijayavani

Breaking News

ಆಡಳಿತಕ್ಕೆ ಈ ಕ್ಷಣ ತಂತ್ರಜ್ಞಾನ ಸ್ಪರ್ಶ

Saturday, 17.02.2018, 3:04 AM       No Comments

ಕಂದಾಯ ಇಲಾಖೆಗೆ ಆಧುನಿಕ ಡಿಜಿಟಲ್ ಸ್ಪರ್ಶ ನೀಡುವುದರ ಜತೆಗೆ ಜನಾನುರಾಗಿ ಯೋಜನೆಗಳನ್ನು ಘೋಷಿಸಲಾಗಿದೆ. ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಕಾರಣವಾಗಿರುವ ಜಾತಿ, ಆದಾಯ ಹಾಗೂ ವಾಸ ಪ್ರಮಾಣಪತ್ರ ವ್ಯವಸ್ಥೆಗೆ ಬದಲಾವಣೆ ತರಲು ಆನ್​ಲೈನ್ ಅಥವಾ ಕೌಂಟರ್​ನಲ್ಲಿ ಪ್ರಮಾಣಪತ್ರ ನೀಡುವ ‘ಈ ಕ್ಷಣ’ ಯೋಜನೆ ಪ್ರಸ್ತಾಪಿಸಲಾಗಿದೆ. ಆರಂಭದಲ್ಲಿ ನಗರ ಪ್ರದೇಶದಲ್ಲಿ ಯೋಜನೆ ಅನುಷ್ಠಾನವಾಗಲಿದ್ದು, ಹಂತಹಂತದಲ್ಲಿ ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ.

ಭೂ ಮಾಲೀಕತ್ವದ ವಿಶ್ವಾಸಾರ್ಹತೆ ಉಳಿಸಲು ಹಾಗೂ ಪಹಣಿ ಕಾಣೆಯಾದರೂ ಮಾಲೀಕರಿಗೆ ಮಾಹಿತಿ ಒದಗಿಸಲು ಪ್ರಾಯೋಗಿಕವಾಗಿ ‘ಭೂ ನಾಮಕರಣ’(ಲ್ಯಾಂಡ್ ಟೈಟಲಿಂಗ್) ಯೋಜನೆ ಜಾರಿ ಮಾಡಲಾಗುತ್ತಿದೆ. ರಾಜ್ಯದ ಮೂರು ತಾಲೂಕುಗಳಲ್ಲಿ ಈ ಯೋಜನೆ ಆರಂಭದಲ್ಲಿ ಅನುಷ್ಠಾನಕ್ಕೆ ಬರಲಿದೆ.

ಕಂದಾಯ ಇಲಾಖೆಯ ಇನ್ನೊಂದು ಡಿಜಿಟಲ್ ಸ್ಪರ್ಶದಲ್ಲಿ ಬೆಂಗಳೂರು ನಗರದಲ್ಲಿ ಸ್ಥಿರಾಸ್ತಿ ಮಾರುಕಟ್ಟೆ ಮೌಲ್ಯಗಳ ಅಪಮೌಲ್ಯ ತಡೆಗಟ್ಟಲು ಕಾವೇರಿ ತಂತ್ರಾಂಶ ಬರಲಿದೆ. ಬಿಬಿಎಂಪಿಯ ಜಿಐಎಸ್​ನ್ನು ಡಾಟಾ ಬೇಸ್​ನೊಂದಿಗೆ ಸಂಯೋಜನೆಗೊಳಿಸಲಾಗುತ್ತದೆ. ಹಾಗೆಯೇ ಹವಾಮಾನ ಮುನ್ಸೂಚನೆ ಹಾಗೂ ಸಿಡಿಲು ಮುನ್ನೆಚ್ಚರಿಕೆ ಆಪ್ ಅಭಿವೃದ್ಧಿಪಡಿಸಲಾಗುತ್ತಿದೆ.

ನೋಂದಣಿ ಮತ್ತು ಮುದ್ರಾಂಕವೂ ಡಿಜಿಟಲ್: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾನೂನು ಹಾಗೂ ಪಾರಂಪರಿಕ ದಾಖಲೆಗಳನ್ನು ಹಂತಹಂತವಾಗಿ ಸ್ಕಾ್ಯನಿಂಗ್ ಹಾಗೂ ಡಿಜಿಟಲೀಕರಣ ಮಾಡಲು ‘ಸುರಭಿ’ ಎನ್ನುವ ಯೋಜನೆ ಘೋಷಿಸಲಾಗಿದೆ. ಈ ಮೂಲಕ ರಾಜಸ್ವ ಸಂಗ್ರಹದಲ್ಲಿಯೂ ಸುಧಾರಣೆಯಾಗುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 9 ಸಾವಿರ ಕೋಟಿ ರೂ ರಾಜಸ್ವ ಗುರಿ ಹೊಂದಲಾಗಿದ್ದು, ಜನವರಿ ಅಂತ್ಯಕ್ಕೆ 7291.58 ಕೋಟಿ ರೂ ಸಂಗ್ರಹವಾಗಿದೆ. ಇದು ಜನವರಿ ಮಾಸಾಂತ್ಯಕ್ಕೆ ಶೇ.100.75ರ ಗುರಿ ಸಾಧಿಸಿದಂತಾಗಿದೆ. ಮುಂದಿನ ಆರ್ಥಿಕ ವರ್ಷಕ್ಕೆ 10,400 ಕೋಟಿ ರೂ ಗುರಿ ನಿಗದಿಪಡಿಸಲಾಗಿದೆ.

ಸಾಮಾಜಿಕ ಭದ್ರತೆಗೆ ಪಿಂಚಣಿ ಹೆಚ್ಚಳ

ಸಾಮಾಜಿಕ ಭದ್ರತೆಗಾಗಿರುವ ವೃದ್ಧಾಪ್ಯ ವೇತನ, ನಿರ್ಗತಿಕ ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ ಹಾಗೂ ಮೈತ್ರಿ ಯೋಜನಗಳಲ್ಲಿನ ಪಿಂಚಣಿಯನ್ನು ಹೆಚ್ಚಿಸಲಾಗಿದೆ. ಹಾಲಿ ಇರುವ ಮಾಸಿಕ 500 ರೂ ಪಿಂಚಣಿ ಮೊತ್ತವನ್ನು 600 ರೂಗೆ ಏರಿಸಲಾಗಿದೆ. ಇದರಿಂದ 48 ಲಕ್ಷ ಫಲಾನುಭವಿಗಳಿಗೆ ಲಾಭವಾಗಲಿದ್ದು, ಸರ್ಕಾರಕ್ಕೆ ಹೆಚ್ಚುವರಿಯಾಗಿ 576 ಕೋಟಿ ರೂ ಖರ್ಚಾಗುತ್ತದೆ.

ಭೂ ಮಾಪನಕ್ಕೆ ‘ಪಂಚ’ ಆಪ್!

ಭೂ ಮಾಪನ ಇಲಾಖೆಯ ಕಾರ್ಯನಿರ್ವಹಣೆಯನ್ನು ಸ್ಮಾರ್ಟ್ ಗೊಳಿಸಲು ಸರ್ಕಾರ 5 ಮೊಬೈಲ್ ಆಪ್ ಬಿಡುಗಡೆ ಮಾಡುತ್ತಿದೆ. ಇದರಿಂದ ಸಾರ್ವಜನಿಕರಿಗೆ ಭೂ ಮಾಪನ ಕುರಿತ ಮಾಹಿತಿಯು ಅಂಗೈನಲ್ಲಿಯೇ ಲಭ್ಯವಾಗಲಿದೆ.

1. ಸಂಯೋಜನೆ: ಇಲಾಖೆಯ ಸಾರ್ವಜನಿಕ ಸೇವೆ ಪಡೆಯಲು

2. ದಿಶಾಂಕ್: ನಾಗರಿಕರು ತಾವು ನಿಂತಿರುವ ಸ್ಥಳದ ಸರ್ವೆ ಸಂಖ್ಯೆ ಹಾಗೂ ನಕಾಶೆ ಪಡೆಯಲು

3. ಸಮೀಕ್ಷೆ: ಎಲ್ಲ ಪೋಡಿ, ಅಳತೆ ಮತ್ತು 11-ಇ ಕೆಲಸಗಳನ್ನು ಡಿಜಿಟಲ್ ನಕಾಶೆ ನೀಡುವು ಸವಲತ್ತು

4. ಆಧಾರ್ ಸಂಗ್ರಹಣೆ: ಆಧಾರ್ ಸಂಖ್ಯೆ ಸಂಗ್ರಹಿಸಲು

5. ಮೌಲ್ಯ: ಯಾವುದೇ ಸ್ಥಿರಾಸ್ತಿ ಮಾರ್ಗಸೂಚಿ ಮೌಲ್ಯ ತಿಳಿಯಲು

 

ಪ್ರಮುಖ ಘೋಷಣೆಗಳು

# ಬಾಕಿ ಉಳಿದಿರುವ 1568 ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆ

# 2500 ಗ್ರಾಮಗಳಲ್ಲಿ ಪೋಡಿ ಮುಕ್ತ ಅಭಿಯಾನ

# ರುದ್ರಭೂಮಿ ಜಮೀನು ಖರೀದಿಗೆ 10 ಕೋಟಿ ರೂ

# ಸರ್ಕಾರಿ ಜಮೀನಿನಲ್ಲಿ ದೀರ್ಘಕಾಲದಿಂದ ಅನಧಿಕೃತವಾಗಿ ಕಾಫಿ ಬೆಳೆಯುತ್ತಿರುವರಿಗೆ ಗರಿಷ್ಠ 10 ಎಕರೆವರೆಗೆ ಗುತ್ತಿಗೆ

# ಕರ್ನಾಟಕ ಭೂ ಸುಧಾರಣಾ ನಿಯಮದಿಂದ ಬಾಧಿತರಾದ 4110 ಹಿಂದು ಧಾರ್ವಿುಕ ಸಂಸ್ಥೆಗಳಿಗೆ ಇನಾಮು ರದ್ದತಿಯಲ್ಲಿ ಸಂದಾಯ ಮಾಡಬೇಕಾದ 48 ಸಾವಿರ ರೂ ತಸ್ತೀಕ್ ಮೊತ್ತ ಸಂದಾಯಕ್ಕೆ 20 ಕೋಟಿ ರೂ

# ತಿರುಮಲದಲ್ಲಿ ಭಕ್ತರ ಅನುಕೂಲಕ್ಕೆ 20 ಕೋಟಿ ರೂ ಅತಿಥಿ ಗೃಹ ನಿರ್ಮಾಣ

ಪ್ರವಾಸಿ ತಾಣಗಳ ಕಿರುಚಿತ್ರ

ಬಜೆಟ್​ನಲ್ಲಿ ಪ್ರವಾಸೋದ್ಯಮಕ್ಕೆ 459 ಕೋಟಿ ರೂ. ಅನುದಾನ ನೀಡಲಾಗಿದೆ. ಜತೆಗೆ ಅನೇಕ ಯೋಜನೆಗಳನ್ನು ಘೊಷಿಸಲಾಗಿದೆ. ರಾಜ್ಯದ ಪ್ರವಾಸಿ ತಾಣಗಳ ಕುರಿತು ಕಿರುಚಿತ್ರಗಳನ್ನು ಮಾಡಿ, ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅದನ್ನು ಪ್ರದರ್ಶಿಸುವ ಸಲುವಾಗಿ ಮೊದಲ ಬಾರಿಗೆ ‘ಚಲನಚಿತ್ರ ಪ್ರವಾಸೋದ್ಯಮ ನೀತಿ’ ಜಾರಿಗೊಳಿಸುವುದಾಗಿ ಸರ್ಕಾರ ಹೇಳಿದೆ. ಕಲೆ, ಸಂಸ್ಕೃತಿ, ಪರಂಪರೆ ಪ್ರಚಾರಕ್ಕೆ ಕಲಬುರಗಿಯಲ್ಲಿ ‘ಕಲಬುರಗಿ ಕಲಾವನ’ವನ್ನು ನಿರ್ವಿುಸುವ ಘೋಷಣೆಯನ್ನು ಸರ್ಕಾರ ಮಾಡಿದೆ.

ಕರಾವಳಿ ಪ್ರವಾಸೋದ್ಯಮ

ಪಾರಂಪರಿಕ ಪ್ರವಾಸಿ ತಾಣಗಳಲ್ಲಿ ಪ್ರವಾಸಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ವಿಶ್ವ ಪಾರಂಪರಿಕ ಪ್ರವಾಸಿ ತಾಣಗಳಾದ ಹಂಪಿ, ಬೇಲೂರು-ಹಳೇಬೀಡು, ಶ್ರವಣಬೆಳಗೊಳ, ನಂದಿಬೆಟ್ಟ, ಸನ್ನತಿ ಹಾಗೂ ಕಲಬುರುಗಿ ಕೋಟೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಪ್ರವಾಸೋದ್ಯಮ ದೃಷ್ಟಿಯಿಂದ ಕರಾವಳಿ ಪ್ರದೇಶ ಬಹುಮುಖ್ಯವಾದುದು. ಕರಾವಳಿಯ ಆಯ್ದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಹೌಸ್​ಬೋಟ್ ಸೌಲಭ್ಯ ಒದಗಿಸುವುದಾಗಿ ಸರ್ಕಾರ ಘೋಷಿಸಿದೆ.

ದೆಹಲಿ ಹಾಟ್ ಮಾದರಿ

ಕರಕುಶಲ ವಸ್ತುಗಳು ಮತ್ತು ವಿವಿಧ ಆಹಾರೋತ್ಪನ್ನಗಳ ಮಾರಾಟಕ್ಕೆ ದೆಹಲಿ ಸರ್ಕಾರ ‘ದೆಹಲಿ ಹಾಟ್’ ಆರಂಭಿಸಿತ್ತು. ರಾಜ್ಯ ಸರ್ಕಾರ ಈ ಮಾದರಿಯನ್ನು ಅನುಕರಣೆ ಮಾಡಲು ಮುಂದಾಗಿದೆ. ಮೈಸೂರಿನಲ್ಲಿರುವ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರಕ್ಕೆ ಸೇರಿದ ಜಮೀನಿನಲ್ಲಿ ‘ಮೈಸೂರು ಹಾಟ್’ ಅಭಿವೃದ್ಧಿಪಡಿಸಲಾಗುವುದು ಎಂದು ಸರ್ಕಾರ ಹೇಳಿದೆ.

ಆಕಳಿಸಿದರು ಮೈಮುರಿದರು ಕೊನೆಗೆ ಎದ್ದೇ ಹೋದರು…!

ಈ ಸರ್ಕಾರದ ಕೊನೆಯ ಬಜೆಟ್ ಬಗ್ಗೆ ಶಾಸಕರಿಗೆ ಅದೇನೋ ನಿರಾಸಕ್ತಿ. ಪ್ರತಿಪಕ್ಷ, ಆಡಳಿತ ಪಕ್ಷ ಎನ್ನದೇ ಎಲ್ಲ ಪಕ್ಷದ ಬಹುಪಾಲು ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಭಾಷಣ ಆಲಿಸುವ ವ್ಯವಧಾನವೇ ಇರಲಿಲ್ಲ. ಶಾಸನ ಸಭೆಯಲ್ಲಿ ವರ್ಷಕ್ಕೊಮ್ಮೆ ಮಂಡನೆಯಾಗುವ ಬಜೆಟ್ ಮಂಡನೆ ಘಳಿಗೆ ಒಂದು ಗಂಭೀರ ಸಂದರ್ಭ. ಆದರೆ ಶುಕ್ರವಾರ ಬಹುಪಾಲು ಶಾಸಕರು ತಮಗೆ ನಿಗದಿಯಾದ ಆಸನ ಬಿಟ್ಟು ಓಡಾಡಿಕೊಂಡಿದ್ದರು. ಆರಂಭದಲ್ಲಿ 170ರಷ್ಟಿದ್ದ ಹಾಜರಾತಿ ನಿಧಾನವಾಗಿ ಕಡಿಮೆಯಾಗುತ್ತಾ ಬಂದಿತು. ಬಹುಪಾಲು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಭಾಂಗಣದಿಂದ ಹೊರಗೇ ಇದ್ದರು. ಸಚಿವರೊಬ್ಬರು ಅನೌಪಚಾರಿಕವಾಗಿ ಪ್ರತಿಕ್ರಿಯಿಸಿ, ಇಷ್ಟೆಲ್ಲ ಓದುವ ಅಗತ್ಯವಿತ್ತೇ ಎಂದು ಕೈ ಸಂಜ್ಞೆ ಮಾಡಿದರು. ಖಾಲಿ ಖುರ್ಚಿಗಳಿಗೆ 4 ಗಂಟೆಗೂ ಅಧಿಕ ಸಮಯ ಸಿಎಂ ಭಾಷಣ ಮಾಡಿದರು.

ಹಸಿರು ಶಾಲಿನ ಸ್ವಾಗತ ಸೀಬೆಹಣ್ಣಿನ ಮುಕ್ತಾಯ

ಬೆಳಗ್ಗೆ 10.50ಕ್ಕೆ ಬಜೆಟ್ ಪುಸ್ತಕದೊಂದಿಗೆ ವಿಧಾನಸೌಧಕ್ಕೆ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ರೈತರೊಬ್ಬರು ಹಸಿರು ಶಾಲು ಹೊದಿಸಿ ಬರಮಾಡಿಕೊಂಡರು. ಬಳಿಕ ಮಂತ್ರಿ ಪರಿಷತ್ ಸಭೆಯಲ್ಲಿ ಬಜೆಟ್ ಮಂಡನೆಗೆ ಒಪ್ಪಿಗೆ ಪಡೆದುಕೊಂಡ ಅವರು 11.39ರಿಂದ ಬಜೆಟ್ ಓದಲು ಆರಂಭಿಸಿದರು. ಭಾಷಣದ ಮಧ್ಯೆ ಎಲ್ಲೂ ವಿರಾಮ ತೆಗೆದುಕೊಳ್ಳದೇ ನಿರರ್ಗಳವಾಗಿ ಬಜೆಟ್ ಮಂಡನೆ ಮುಗಿಸಿದಾಗ ಸಮಯ ಮಧ್ಯಾಹ್ನ 3.47 ಆಗಿತ್ತು. ಭಾಷಣ ಮುಗಿದ ಕೂಡಲೇ ಖುರ್ಚಿಯಲ್ಲಿ ಆಸೀನರಾದ ಸಿದ್ದರಾಮಯ್ಯ ಒಂದೆರಡು ಕ್ಷಣ ಆಯಾಸ ನಿವಾರಿಸಿಕೊಂಡರು. ಅಷ್ಟರಲ್ಲಾಗಲೇ ಸಚಿವರು, ಶಾಸಕರು ಸಿದ್ದರಾಮಯ್ಯನವರನ್ನು ಸುತ್ತುವರಿದು ಅಭಿನಂದಿಸಿದರು. ಸದನ ಮುಗಿದು ಸಿಎಂ ಸಭಾಂಗಣದಿಂದ ಹೊರಬರುತ್ತಿದ್ದಂತೆ ಸೀಬೆ ಹಣ್ಣು ಅವರಿಗಾಗಿ ಕಾಯ್ದಿತ್ತು. ಕತ್ತರಿಸಿದ ಸೀಬೆ ಹಣ್ಣನ್ನು ಸವಿಯುತ್ತಲೇ ಪಕ್ಷದ ಶಾಸಕರೊಂದಿಗೆ ಹೆಜ್ಜೆಹಾಕಿದರು.


ಚುನಾವಣಾ ಪ್ರಣಾಳಿಕೆ ಆಶಯದಂತಿದೆ

| ಜ ಪ್ರೊ.ಆರ್.ಎಂ.ಚಿಂತಾಮಣಿ, ಆರ್ಥಿಕ ಚಿಂತಕರು

ಈ ಸರ್ಕಾರದ ಅಧಿಕಾರಾವಧಿಯ ಕೊನೆಯ ಮತ್ತು ತಾತ್ಕಾಲಿಕ (ಜ್ಞಿಠಿಛ್ಟಿಜಿಞ) ಮುಂಗಡ ಪತ್ರ ಮಂಡಿಸುವ ಸಾಂವಿಧಾನಿಕ ಅವಕಾಶವನ್ನು ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಸಾಧನೆಗಳನ್ನು ವಿವರವಾಗಿ ರಾಜ್ಯದ ಜನತೆಗೆ ತಿಳಿಸಲು ವಿಧಾನಸಭೆಯ ವೇದಿಕೆಯನ್ನೇ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಇಷ್ಟೇ ಅಲ್ಲ, ತಮ್ಮ ಹಿಂದಿನ ಸರ್ಕಾರದ ಐದು ವರ್ಷಗಳ (2008-13) ಸಾಧನೆಗಳಿಗಿಂತ ಐದು ವರ್ಷಗಳ ಸಾಧನೆಗಳು ಎಷ್ಟರಮಟ್ಟಿಗೆ ಹೆಚ್ಚಾಗಿವೆ ಎಂಬ ಅಂಶವನ್ನು ತಿಳಿಸಲು ಅಂಕಿ-ಸಂಖ್ಯೆಗಳನ್ನು ಹೋಲಿಕೆ ಮಾಡಿದ್ದಾರೆ. 2,09,101 ಕೋಟಿ ರೂ. ವೆಚ್ಚದ 2018-19ರ ತಾತ್ಕಾಲಿಕ ಅಂದಾಜುಗಳನ್ನು ಪ್ರಕಟಿಸುವ ಕಾರ್ಯದಲ್ಲಿ ತಮ್ಮ ಸರ್ಕಾರದ ಸಾಧನೆಗಳನ್ನು ಉದಾಹರಿಸುತ್ತ ಮುಂದಿನ ಚುನಾವಣೆಗಳಲ್ಲಿ ತಾವೇ ಗೆದ್ದು ಬಂದರೆ ಇದಕ್ಕಿಂತ ಹೆಚ್ಚು ಜನೋಪಯೋಗಿ ಕೆಲಸಗಳನ್ನು ಮಾಡಬಹುದೆಂದು ತಾತ್ಕಾಲಿಕ ಮುಂಗಡ ಪತ್ರದ ಸ್ವೀಕೃತ ಸಂಹಿತೆಯನ್ನು ಮೀರದೆ ಪರೋಕ್ಷವಾಗಿ ಹೇಳಿದ್ದಾರೆ.

ಚುನಾವಣೆಯು ಅತಿ ಸಮೀಪದಲ್ಲಿದ್ದು, ಮುಂದಿನ ಹಣಕಾಸು ವರ್ಷದ ಕೆಲ ತಿಂಗಳು ಇದೇ ಸರ್ಕಾರ ಇರುವಂತಿದ್ದಾಗ ಏಪ್ರಿಲ್ ಒಂದರಿಂದ ಖರ್ಚು ಮಾಡಲು ಒಂದಿಷ್ಟು ಹಣ ಮುಂಗಡ ಪಡೆಯಲು (ಲೇಖಾನುದಾನ) ಸಂವಿಧಾನಿಕ ಪ್ರಕ್ರಿಯೆಯಂತೆ ಸದನಗಳ ಅನುಮತಿ ಪಡೆಯಬೇಕಾಗುತ್ತದೆ. ಇದು ತಾತ್ಕಾಲಿಕ ಬೇಡಿಕೆ. ಅದಷ್ಟನ್ನೇ ಮಂಡಿಸದೆ ಇಡೀ ವರ್ಷದ ಅಂದಾಜು ಸ್ವೀಕೃತಿ ಮತ್ತು ವೆಚ್ಚಗಳನ್ನು ಹಾಲಿ ವರ್ಷದ ಅಂದಾಜುಗಳ ಆಧಾರದ ಮೇಲೆ ಮುಂದಿನ ವರ್ಷಕ್ಕಾಗಿ ತಯಾರಿಸಿ ಅದನ್ನು ಸದನದಲ್ಲಿ ಮಂಡಿಸಿ 3-4 ತಿಂಗಳಿಗಾಗಿ ಲೇಖಾನುದಾನ ಕೇಳಿ ಅನುಮತಿ ಪಡೆಯಬೇಕು.

ಹೀಗೆ ಮಾಡುವಾಗ ಹೊಸ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಪ್ರಕಟಿಸಬಾರದು. ಹೊಸ ನೀತಿಗಳನ್ನು ಘೊಷಿಸಬಾರದು. ಅದೆಲ್ಲ ಚುನಾವಣೆ ನಂತರ ಬಂದ ಹೊಸ ಸರ್ಕಾರದ ಹಕ್ಕು ಮತ್ತು ಜವಾಬ್ದಾರಿ. ಆಗ ಅದು ಪೂರ್ಣಾವಧಿ ಬಜೆಟ್ ಅನ್ನು ತನ್ನ ನೀತಿಯಂತೆ ಪ್ರಕಟಿಸಬೇಕು. ಇದು ತಾತ್ಕಾಲಿಕ ಬಜೆಟ್ ಪರಿಕಲ್ಪನೆ. ತಾತ್ಕಾಲಿಕ ಬಜೆಟ್ ಮಂಡಿಸುವ ಹೊರ ಹೋಗುತ್ತಿರುವ ಸರ್ಕಾರದ ಅರ್ಥಮಂತ್ರಿ ಈ ಸಂಹಿತೆಯನ್ನು ಮೀರಬಾರದು.

ಸಿದ್ದರಾಮಯ್ಯನವರು ತಮ್ಮ ಜಾಣ ನಡೆಯಲ್ಲಿ ಅಲಿಖಿತ ಸಂಹಿತೆಯನ್ನು ಮುರಿಯದೆ ತಮ್ಮ ಬಗ್ಗೆ ಹೇಳಬೇಕಾದುದನ್ನೆಲ್ಲ ನಾಲ್ಕು ಗಂಟೆ ಹತ್ತು ನಿಮಿಷಗಳ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.

ಜಿಎಸ್​ಟಿ, ಅಮಾನ್ಯೀಕರಣ ರಾಗ!

ಕಾಂಗ್ರೆಸ್​ನ ಅಜೆಂಡಾದಂತೆ ಈ ಬಾರಿಯ ಬಜೆಟ್​ನಲ್ಲಿಯೂ ಸರ್ಕಾರ ನೋಟು ಅಮಾನ್ಯೀಕರಣ ಹಾಗೂ ಜಿಎಸ್​ಟಿ ಕುರಿತ ಭಿನ್ನರಾಗ ಮುಂದುವರಿಸಿದೆ. ನೋಟು ಅಮಾನ್ಯೀಕರಣದಿಂದ ರಾಜ್ಯದ ಆರ್ಥಿಕತೆ ಹಾಗೂ ನೋಂದಣಿ-ಮುದ್ರಾಂಕದ ರಾಜಸ್ವ ಸಂಗ್ರಹದ ಮೇಲೆ ವ್ಯತಿರಿಕ್ತ ಪರಿಣಾಮವಾಗಿದೆ. ಇದರ ಜತೆಗೆ ಜಿಎಸ್​ಟಿಯಲ್ಲಿನ ಬದಲಾವಣೆ ಹಾಗೂ ಮಾಹಿತಿ ತಂತ್ರಜ್ಞಾನದಲ್ಲಿನ ತೊಡಕು ತೆರಿಗೆ ಸಂಗ್ರಹದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಭಾಷಣದ ಆರಂಭದಲ್ಲಿ ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಭಾಷಣದ ಕೊನೆಯಲ್ಲಿ ರಾಜ್ಯದ ಆರ್ಥಿಕತೆ ಬಗ್ಗೆ ಪ್ರಸ್ತಾಪಿಸುವಾಗ ಜಿಎಸ್​ಡಿಪಿಯು ಶೇ.8.5ರ ಧನಾತ್ಮಕ ಬೆಳವಣಿಗೆಯಾಗಿದೆ ಎಂದಿದ್ದರೆ, ಮುದ್ರಾಂಕ ಹಾಗೂ ನೋಂದಣಿ ರಾಜಸ್ವ ಸಂಗ್ರಹದಲ್ಲಿ ಶೇ.100.75ರ ಗುರಿ ಸಾಧನೆಯಾಗಿದೆ ಎಂದಿದ್ದಾರೆ. ಇನ್ನು ಜಿಎಸ್​ಟಿಗೆ ಸಂಬಂಧಿಸಿ ವಾಣಿಜ್ಯ ತೆರಿಗೆಯಲ್ಲಿ 2200 ಕೋಟಿ ರೂ ನಿರೀಕ್ಷೆಗೂ ಮೀರಿ ಸಂಗ್ರಹವಾಗಿದೆ ಎಂದು ಉಲ್ಲೇಖಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಅಬಕಾರಿ ಸುಂಕ ಪ್ರಮಾಣದಲ್ಲಿ ಮಾತ್ರ ಇಳಿಕೆಯಾಗಿರುವುದು ಅಂಕಿಅಂಶದಲ್ಲಿ ಗಮನಕ್ಕೆ ಬಂದಿದೆ.

 

ಪ್ರತಿ ಪ್ರಜೆ ಮೇಲೆ – 44,769 ರೂ ಸಾಲ!

ರಾಜ್ಯದ ಪ್ರತಿ ಪ್ರಜೆ ಮೇಲೆ ಕರ್ನಾಟಕ ಸರ್ಕಾರದ ಸಾಲವು 44,769 ರೂಗಳಿಗೆ ತಲುಪುತ್ತಿದೆ!

ಸಾಲಗಳನ್ನು ವಿರೋಧಿಸಿಕೊಂಡೇ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ, ರಾಜ್ಯದಲ್ಲಿ ಅತಿ ಹೆಚ್ಚು ಸಾಲ ಮಾಡಿದ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ. ಪ್ರಸಕ್ತ ಆಯವ್ಯಯದಲ್ಲಿ ಪ್ರಸ್ತಾಪವಾದ 39,328 ಕೋಟಿ ರೂ ಸಾಲದೊಂದಿಗೆ ಕರ್ನಾಟಕದ ಒಟ್ಟು ಸಾಲವು 2,86,790 ಕೋಟಿ ರೂ ತಲುಪಿದೆ. 2021-22ರ ಆರ್ಥಿಕ ವರ್ಷಕ್ಕೆ ಇದು 4,18,179 ಕೋಟಿ ರೂ ತಲುಪುವ ಅಂದಾಜಿದೆ.

ವಿಪರ್ಯಾಸವೆಂದರೆ ರಾಜ್ಯ ಸರ್ಕಾರವು ಸಾಲ ಮರುಪಾವತಿಗೆ ಕೇವಲ 11,086 ಕೋಟಿ ರೂ ಮೀಸಲಿಟ್ಟಿದ್ದರೆ, ಬಡ್ಡಿ ಪಾವತಿಗೆ 16,208 ಕೋಟಿ ರೂ ಇರಿಸಿದೆ. ಇದರೊಂದಿಗೆ ರಾಜ್ಯವು ವರ್ಷದಿಂದ ವರ್ಷಕ್ಕೆ ಸಾಲದ ಕೂಪಕ್ಕೆ ಬೀಳುವುದು ನಿಶ್ಚಿತವಾಗಿದೆ. ಜಿಎಸ್​ಡಿಪಿಯ ಶೇ.25ರಷ್ಟು ಸಾಲ ಮಾಡುವ ಅವಕಾಶವಿದ್ದರೂ ಸಾಲದ ಪ್ರಮಾಣವು ರಾಜ್ಯದ ಒಟ್ಟಾರೆ ಆಯವ್ಯಯಕ್ಕಿಂತ 84 ಸಾವಿರ ಕೋಟಿ ರೂ ಹೆಚ್ಚಿದೆ. ಸದ್ಯಕ್ಕೆ ರಾಜ್ಯದ ಒಟ್ಟು ಹೊಣೆಗಾರಿಕೆಯು ಜಿಎಸ್​ಡಿಪಿಯ ಶೇ.20.36ರಷ್ಟಿದೆ. ಇನ್ನು ವಿತ್ತೀಯ ಕೊರತೆಯು 35,127 ಕೋಟಿ ರೂಗಳೆಂದರೆ ಜಿಎಸ್​ಡಿಪಿಯ ಶೇ.2.49ರಷ್ಟಿದೆ.

Leave a Reply

Your email address will not be published. Required fields are marked *

Back To Top