Friday, 14th December 2018  

Vijayavani

ಚಾಮರಾಜನಗರದಲ್ಲಿ ವಿಷವಾದ ಮಾರಮ್ಮನ ಪ್ರಸಾದ- ನಾಲ್ವರ ಸಾವು-40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, ಜಿಲ್ಲಾಧಿಕಾರಿ ಭೇಟಿ        ರಾಜಸ್ಥಾನ ಸಿಎಂ ಆಗಿ ಆಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್​​ಗೆ ಡಿಸಿಎಂ ಪಟ್ಟ- ಕಾಂಗ್ರೆಸ್​ನಿಂದ ಅಧಿಕೃತ ಘೋಷಣೆ        ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​ವೈ- ಸಿಎಂ ಎಚ್​ಡಿಕೆ ಚೆನ್ನೈಗೆ ಪ್ರಯಾಣ        ಭದ್ರತೆಗಾಗಿ ರಫೇಲ್ ಖರೀದಿ-ಸುಪ್ರೀಂಕೋರ್ಟ್ ತೀರ್ಪಿನಿಂದ ಭ್ರಮನಿರಸನ-ರಾಗಾ ವಿರುದ್ಧ ಹಾಲಿ ಮಾಜಿ ರಕ್ಷಣಾ ಸಚಿವರ ಕಿಡಿ        ನಾಲ್ಕು ದಿನದಲ್ಲಿ ಎಲ್ಲ ಸರಿಹೋಗುತ್ತೆ-ಪ್ರಯಾಣಿಕರಿಗೆ ಯಾವುದೇ ಆತಂಕ ಬೇಡ-ಪಿಲ್ಲರ್ ಬಿರುಕಿಗೆ BMRCL ಎಂಡಿ ಸ್ಪಷ್ಟನೆ        ನನಗೂ ಸಚಿವೆಯಾಗುವ ಆಸೆ ಇದೆ- ಅಂತರಂಗ ತೆರೆದಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್- ಕೈ ಸಚಿವಾಕಾಂಕ್ಷಿಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ       
Breaking News

ನವೋದ್ಯಮ, ಉದ್ಯೋಗ ಸೃಷ್ಟಿ ದೃಷ್ಟಿ

Saturday, 17.02.2018, 3:04 AM       No Comments

ಯುವಜನರಿಗೆ ಸ್ವಯಂ ಉದ್ಯೋಗ, ಉದ್ಯೋಗಾವಕಾಶ ಕಲ್ಪಿಸುವ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಹೊಸ ನೀತಿಗಳು ಹಾಗೂ ಅನೇಕ ರಿಯಾಯಿತಿಗಳ ಮೂಲಕ ಟಾನಿಕ್ ನೀಡಲು ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ. ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಕಳೆದ ವರ್ಷ 2,250 ಕೋಟಿ ರೂ. ಅನುದಾನ ನೀಡಲಾಗಿತ್ತು. ಈ ವರ್ಷ 569 ಕೋಟಿ ರೂ. ಕಡಿತಗೊಳಿಸಿ 1,681 ಕೋಟಿ ರೂ.ಗೆ ಇಳಿಸಲಾಗಿದೆ. ಆದರೆ ನೇಕಾರರಿಗೆ ಅನುಕೂಲ, ಹೊಸ ಕಬ್ಬು ತಳಿಗಳ ಅಭಿವೃದ್ಧಿಗೆ ಉತ್ತೇಜನ, 2 ಮತ್ತು 3ನೇ ಶ್ರೇಣಿ ನಗರಗಳಲ್ಲಿ 11 ಹೊಸ ಕೈಗಾರಿಕಾ ವಸಾಹತು ಅಭಿವೃದ್ಧಿ ಸೇರಿ ಅನೇಕ ಘೋಷಣೆ ಮಾಡಲಾಗಿದೆ. ಹಣಕಾಸಿನ ವೆಚ್ಚ ಕಡಿಮೆಯಾಗಿದ್ದರೂ, ಕೈಗಾರಿಕೆಗೆ ಉತ್ತೇಜನ ನೀಡುವ ಅಂಶಗಳನ್ನು ಘೋಷಿಸಿದ್ದಾರೆ.

ಗ್ರಾಹಕರಿಗೆ ಉತ್ಪಾದನಾ ಸ್ಥಳದಿಂದ ಸರಕುಗಳ ತಡೆರಹಿತ ಚಲನೆಗಾಗಿ ಸರಕು ಸಾಗಣೆ ನೀತಿ (ಲಾಜಿಸ್ಟಿಕ್ ಪಾಲಿಸಿ) ರೂಪಿಸುವುದಾಗಿ ಸರ್ಕಾರ ಘೋಷಿಸಿದೆ. ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ, ಐಸಿಡಿ, ಸಿಎಫ್​ಎಸ್, ಗೋದಾಮುಗಳು ಇತ್ಯಾದಿಗಳ ನಡುವೆ ಉತ್ತಮ ಸಮನ್ವಯಕ್ಕಾಗಿಈ ನೀತಿ ಜಾರಿಯಾಗುತ್ತಿದೆ. ಯುವಜನರ ಹೊಸ ಕಲ್ಪನೆಗಳನ್ನು ಉತ್ಪಾದನಾ ನವೋದ್ಯಮವಾಗುವ ರೀತಿಯಲ್ಲಿ ಉತ್ತೇಜಿಸಲು ತಾಂತ್ರಿಕ ಮತ್ತು ಸಂಶೋಧನಾ ಸಂಸ್ಥೆಗಳ ಸಹಯೋಗದೊಂದಿಗೆ ಅನ್ವೇಷಣಾ ನೀತಿ (ಇನೊವೇಷನ್ ಪಾಲಿಸಿ) ರೂಪಿಸಲು ಪ್ರಸ್ತಾಪಿಸಲಾಗಿದೆ. ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವುದನ್ನು ಗಂಭೀರವಾಗಿ ಪರಿಗಣಿಸಿರುವ ಸಿದ್ದರಾಮಯ್ಯ, ಬೃಹತ್ ಕೈಗಾರಿಕೆಗಳಿಗೆ ಉತ್ತೇಜನ ನೀಡಿದ್ದಾರೆ. ಹಣಕಾಸು ಗಾತ್ರದಲ್ಲಿ ಮಾತ್ರವಲ್ಲದೆ, ಹೆಚ್ಚು ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡಲು ಕಾರ್ವಿುಕ ಸಾಂದ್ರತೆಯ ಉದ್ಯಮಗಳ ನೀತಿ (ಲೇಬರ್ ಇಂಟೆನ್ಸಿವ್ ಇಂಡಸ್ಟ್ರೀಸ್ ಪಾಲಿಸಿ) ರೂಪಿಸಲು ನಿರ್ಧರಿಸಲಾಗಿದೆ. ಸೇವಾ ವಲಯದ ವಿವಿಧ ಅಂಶಗಳನ್ನು ಪರಾಮಶಿಸಲು ಉನ್ನತಾಧಿಕಾರ ಸಮಿತಿ ರಚಿಸಿ, ಅದರ ಶಿಫಾರಸಿನ ಆಧಾರದಲ್ಲಿ ವಲಯಕ್ಕೆ ಹೆಚ್ಚಿನ ಉತ್ತೇಜನ ನೀಡಲು ಹೊಸ ನೀತಿಯನ್ನು ರೂಪಿಸುವುದಾಗಿ ಘೋಷಿಸಲಾಗಿದೆ. 2013ರಲ್ಲಿ ರೂಪಿಸಲಾಗಿದ್ದ ನೂತನ ಜವಳಿ ನೀತಿ 2018ಕ್ಕೆ ಮುಕ್ತಾಯವಾಗಿದೆ. ಜವಳಿ ಹಾಗೂ ಸಿದ್ಧುಡುಪು ವಲಯದ ಅಭಿವೃದ್ಧಿಗೆ ಹೊಸ ಜವಳಿ ನೀತಿ ಘೋಷಿಸಲು ತೀರ್ವನಿಸಲಾಗಿದೆ.

ಬಹು ಮಾದರಿ ಲಾಜಿಸ್ಟಿಕ್ ಪಾರ್ಕ್

ಸರಕು ಸಾಗಣೆ ಕ್ಷೇತ್ರಕ್ಕೆ ಉತ್ತೇಜನ ನೀಡಿರುವ ಸಿದ್ದರಾಮಯ್ಯ, ಬಹು ಮಾದರಿಯ ಲಾಜಿಸ್ಟಿಕ್ ಪಾರ್ಕ್ ಸ್ಥಾಪನೆಗೆ ಮುಂದಾಗಿದ್ದಾರೆ. ಬೆಂಗಳೂರು ಸಮೀಪ 100ಎಕರೆ ಹಾಗೂ ಹುಬ್ಬಳ್ಳಿಯಲ್ಲಿ 50 ಎಕರೆ ಪ್ರದೇಶದಲ್ಲಿ ಈ ಪಾರ್ಕ್ ಸ್ಥಾಪನೆಯಾಗಲಿವೆ. ಕೈಗಾರಿಕಾ ವಸಾಹತುಗಳಲ್ಲಿರುವ ಅನೇಕ ಕೈಗಾರಿಕೆಗಳು ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕಾದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿವೆ. ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಆದಾಯದ ಜತೆಗೆ ಕೈಗಾರಿಕೆಗಳಿಗೆ ಸ್ವಲ್ಪ ನಿರಾಳ ನೀಡಲು ಸರ್ಕಾರ ಮುಂದಾಗಿದೆ. ಈ ಪ್ರದೇಶದಲ್ಲಿರುವ ಕೈಗಾರಿಕೆಗಳು ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆಯನ್ನು 2018ರ ಸೆಪ್ಟೆಂಬರ್​ನೊಳಗೆ ಒಂದೇ ಕಂತಿನಲ್ಲಿ ಪಾವತಿಸಿದರೆ, ಈಗಾಗಲೆ ತೆರಿಗೆ ಮೇಲೆ ಸ್ಥಳೀಯ ಸಂಸ್ಥೆಗಳು ವಿಧಿಸಿರುವ ಸಂಪೂರ್ಣ ದಂಡವನ್ನು ಮನ್ನಾ ಮಾಡುವುದಾಗಿ ಘೋಷಿಸಲಾಗಿದೆ.

4ನೇ ಕೈಗಾರಿಕಾ ಕ್ರಾಂತಿಗೆ ಉತ್ತೇಜನ

ಪ್ರಸ್ತುತ ಜಾಗತಿಕ ಕೈಗಾರಿಕಾ ಕ್ಷೇತ್ರದಲ್ಲಿ ನಾಲ್ಕನೇ ಕ್ರಾಂತಿ ಎಂದೇ ಕರೆಯಲ್ಪಡುತ್ತಿರುವ ‘ಇಂಡಸ್ಟ್ರಿ 4.0 ಟೆಕ್ನಾಲಜಿ’ ಕಲಿಕಾ ಶ್ರೇಷ್ಠತಾ ಕೇಂದ್ರ ಸ್ಥಾಪನೆ ಘೋಷಿಸಲಾಗಿದೆ. ಇಂಟರ್ನೆಟ್ ಮತ್ತು ಭೌತಿಕ ಉಪಕರಣ, ಇಂಟರ್ನೆಟ್ ಆಫ್ ಥಿಂಗ್ಸ್(ಐಒಟಿ), ಕ್ಲೌಡ್ ಕಂಪ್ಯೂಟಿಂಗ್ ಹಾಗೂ ಅರಿವಿನ ಶಕ್ತಿ ಹೊಂದಿರುವ ಕಂಪ್ಯೂಟರ್ ಕಾರ್ಯಕ್ರಮಗಳನ್ನು ಬಳಸಿ ಕೈಗಾರಿಕೆಗಳಲ್ಲಿ ಉತ್ಪನ್ನ ತಯಾರಾಗುತ್ತವೆ. ‘ಸ್ಮಾರ್ಟ್ ಫ್ಯಾಕ್ಟರಿ’ ಎಂದೂ ಕರೆಯಲಾಗುವ ಈ ತಂತ್ರಜ್ಞಾನವನ್ನು ಕಲಿಸಲು 23 ಕೋಟಿ ರೂ. ವೆಚ್ಚದಲ್ಲಿ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ. ಭಾರತೀಯ ಕೈಗಾರಿಕೆಗಳ ಒಕ್ಕೂಟದ ಸಹಯೋಗದೊಂದಿಗೆ ರೂಪಿಸಿರುವ ಯೋಜನೆಯ ಒಟ್ಟು ವೆಚ್ಚದ ಶೇ. 50 ಸರ್ಕಾರ ನೀಡಲಿದೆ. ಪ್ರಸಕ್ತ ಸಾಲಿನಲ್ಲಿ 5 ಕೋಟಿ ರೂ. ನೀಡಲು ತೀರ್ವನಿಸಲಾಗಿದೆ.

ಬೆಂಗಳೂರಿನಿಂದ ಬೇರೆಡೆಗೆ

ರಾಜ್ಯದ ಬಹುತೇಕ ಕೈಗಾರಿಕೆಗಳ ಸಾಂದ್ರತೆ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವುದನ್ನು ತಡೆಗಟ್ಟಿ 2ನೇ ಹಾಗೂ 3ನೇ ಶ್ರೇಣಿ ನಗರಗಳಲ್ಲಿ ಹೂಡಿಕೆ ಉತ್ತೇಜಿಸಲು ಈ ಬಾರಿಯೂ ಪ್ರಯತ್ನಕ್ಕೆ ಕೈ ಹಾಕಲಾಗಿದೆ. 2 ಮತು ್ತ 3 ನೇ ಶ್ರೇಣಿ ನಗರಗಳಲ್ಲಿ ಸೂಕ್ಷ್ಮ , ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗಾಗಿ ಬಂಡವಾಳ ಹೂಡಿಕೆ ಉತ್ತೇಜಿಸಲು ಕೊಪ್ಪಳ, ಬಳ್ಳಾರಿ, ಯಾದಗಿರಿ, ಧಾರವಾಡ, ತುಮಕೂರು, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳ ಲ್ಲಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ಮೂಲಕ 11 ಹೊಸ ಕೈಗಾರಿಕಾ ವಸಾಹತುಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.

ದಾವಣಗೆರೆಯ ಜಗಳೂರು ತಾಲೂಕಿನ 46 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 250 ಕೋಟಿ ರೂ., ಚಿತ್ರದುರ್ಗದ ಭರಮಸಾಗರ ಹೋಬಳಿಯ 33 ಕೆರೆಗಳಿಗೆ 250 ಕೋಟಿ ರೂ. ಘೊಷಿಸುವ ಮೂಲಕ ನಮ್ಮ ಸಂಕಲ್ಪಕ್ಕೆ ಸ್ಪಂದಿಸಿರುವುದು ಸಂತಸ ತಂದಿದೆ.

| ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತರಳಬಾಳು ಮಠ ಸಿರಿಗೆರೆ


ಉತ್ತರ ಕರ್ನಾಟಕದ 2ನೇ ರಾಜಧಾನಿ ಬೆಳಗಾವಿಗೆ ನಿರುದ್ಯೋಗ ನಿವಾರಿಸುವಂತಹ ಪ್ರಮುಖ ಯೋಜನೆಗಳನ್ನು ರಾಜ್ಯ ಸರ್ಕಾರ ಬಜೆಟ್​ನಲ್ಲಿ ಘೋಷಣೆ ಮಾಡಿಲ್ಲ. ಇದೊಂದು ಚುನಾವಣೆಯ ಗಿಮಿಕ್ ಬಜೆಟ್. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಜನರನ್ನು ಮರಳು ಮಾಡುವ ಬಜೆಟ್.

| ಸುರೇಶ್​ ಅಂಗಡಿ ಸಂಸದರು ಬೆಳಗಾವಿ


ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ಅನುದಾನ ನೀಡದಿರುವುದು ಜನರಲ್ಲಿ ನಿರಾಸೆ ಮೂಡಿಸಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಮಾಡುವ ಭರವಸೆಯನ್ನಷ್ಟೇ ನೀಡಲಾಗಿದೆ. ಸರ್ಕಾರಿ ನೌಕರರ ವೇತನ ತಾರತಮ್ಯ ನಿವಾರಣೆಗೆ ಸ್ಪಷ್ಟ ನಿರ್ಧಾರ ಪ್ರಕಟಿದೆ ನೌಕರರ ಮೂಗಿಗೆ ತುಪ್ಪ ಸವರಿದೆ.

| ಡಾ. ಪ್ರಭಾಕರ್​ ಕೋರೆ ರಾಜಸಭೆ ಸದಸ್ಯರು


ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಅಭಿವೃದ್ಧಿಗೆ ಮಾರಕವಾಗುವಂತಿದೆ. ನೀರಾವರಿಗೆ ಅನುದಾನ ಹೆಚ್ಚಿಸದಿರುವುದು, ಕೃಷ್ಣಾ ಮೇಲ್ದಂಡೆ ಹಂತ-3, ಆಲಮಟ್ಟಿ ಎತ್ತರ 524 ಮೀಟರ್ ಎತ್ತರಿಸುವ ಪುನರ್ವಸತಿ ಕಾರ್ಯಕ್ಕೆ ಹಣ ಒದಗಿಸದಿರುವುದು ಆಘಾತಕಾರಿ. ಗ್ರಾಮೀಣಾಭಿವೃದ್ಧಿಯನ್ನು ನಿರ್ಲಕ್ಷಿಸಲಾಗಿದೆ.

| ಬಸವರಾಜ ಬೊಮ್ಮಾಯಿ ಶಾಸಕ


ನಾವೀನ್ಯತೆಯೇ ಜೀವಾಳ...

ರಾಜ್ಯಕ್ಕೆ ಜಾಗತಿಕ ಮಟ್ಟದಲ್ಲಿ ಹೆಸರು ತಂದುಕೊಟ್ಟಿರುವ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರಗಳನ್ನು ಅಭಿವೃದ್ಧಿಗೊಳಿಸಬೇಕೆಂದರೆ ನವೋದ್ಯಮ ಉತ್ತೇಜಿಸುವುದು ಬಹುಮುಖ್ಯ ಎಂಬುದರ ಹಿನ್ನೆಲೆಯಲ್ಲಿ ಇಲಾಖೆ ಕುರಿತ ಬಜೆಟ್ ಪ್ರಸ್ತಾವನೆಯಲ್ಲಿ ಈ ಕುರಿತು ಸಾಕಷ್ಟು ಘೋಷಣೆ ಮಾಡಲಾಗಿದೆ. ನವೋದ್ಯಮಗಳಿಗೆ ಉತ್ತೇಜನ ನೀಡಲು ಕಲಬುರ್ಗಿಯ ದೇಶಪಾಂಡೆ ಪ್ರತಿಷ್ಠಾನ ಸಹಯೋಗದೊಂದಿಗೆ 5 ಕೋಟಿ ರೂ. ವೆಚ್ಚದಲ್ಲಿ ಒಂದು ಇನ್​ಕ್ಯೂಬೇಷನ್ ಸೆಂಟರ್ ಸ್ಥಾಪನೆಗೆ ತೀರ್ವನಿಸಲಾಗಿದೆ. ರಾಜ್ಯದ ವಿವಿಧ ವಲಯಗಳಲ್ಲಿ ನಾವೀನ್ಯತೆ ಪ್ರೋತ್ಸಾಹಿಸಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ‘ಕರ್ನಾಟಕ ನಾವೀನ್ಯತಾ ಪ್ರಾಧಿಕಾರ’ ಸ್ಥಾಪಿಸಲಾಗುವುದು. ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು(ಆರ್ ಆಂಡ್ ಡಿ), ಉದ್ದಿಮೆಗಳು, ಹಾಗೂ ನವೋದ್ಯಮವನ್ನು ಗಮನದಲ್ಲಿರಿಸಿಕೊಂಡು ಪೇಟೆಂಟ್ ಭಂಡಾರ ಸ್ಥಾಪನೆಯಾಗುತ್ತಿದೆ. ಬೌದ್ಧಿಕ ಆಸ್ತಿ ಸಂರಕ್ಷಣೆ ಹಾಗೂ ಉತ್ತೇಜನಕ್ಕೆ ಹೊಸ ಯೋಜನೆ. ಪೇಟೆಂಟ್ ವಿವರವನ್ನು ಒಂದೆಡೆ ಸಂಗ್ರಹಿಸಿ, ತಾಳೆ ನೋಡಲು ಹಾಗೂ ವಿನಿಮಯಕ್ಕೆ ಪೇಟೆಂಟ್ ಭಂಡಾರ ಬಳಕೆಯಾಗಲಿದೆ ಎಂದು ತಿಳಿಸಲಾಗಿದೆ. ಹೊಸ ತಂತ್ರಜ್ಞಾನಗಳನ್ನು ನಿಯಂತ್ರಿಸಲು ಕಾನೂನು ಜಾರಿಯಾಗುತ್ತಿಗದೆ. ತಂತ್ರಜ್ಞಾನ ಕಾನೂನು ಚೌಕಟ್ಟಿನೊಳಗೆ ತರಲು ‘ನಾವೀನ್ಯತೆ ಕ್ಷೇತ್ರಕ್ಕೆ ಕಾನೂನು ಚೌಕಟ್ಟು’ ಸ್ಥಾಪಿಸಲಾಗುತ್ತದೆ.

# ವಿಜ್ಞಾನ ಮತ್ತು ಇಂಜಿನಿಯ ರಿಂಗ್​ನ ಪಿಎಚ್​ಡಿ ಸಂಶೋಧಕರಿಗೆ ಡಿಎಸ್​ಟಿ ಶಿಷ್ಯವೇತನ ಪ್ರಾರಂಭಿಸಲು 1 ಕೋಟಿ ರೂ. ಅನುದಾನ.

# ಬೆಳಗಾವಿಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ 3-ಡಿ ತಾರಾಲಯ ಸ್ಥಾಪನೆ.

# ಹಾರ್ಡ್​ವೇರ್ ಉಪಕರಣ ಮತ್ತು ಸೆಮಿಕಂಡಕ್ಟರ್ ಚಿಪ್ ವಿನ್ಯಾಸ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡಲು ಸೆಮಿಕಂಡಕ್ಟರ್ ಫೇಬಲ್ಸ್ ಆಕ್ಸಿಲರೇಟರ್ ಲ್ಯಾಬ್ ಸ್ಥಾಪನೆ.

# ಕೃಷಿ ಕ್ಷೇತ್ರದಲ್ಲಿ ನವೀನ ಆವಿಷ್ಕಾರ ಕೈಗೊಳ್ಳಲು ಅಗ್ರಿ ಇನೊವೇಷನ್ ಕೇಂದ್ರ ಸ್ಥಾಪನೆ.

# ಉದ್ಯಮಗಳ ವಿನ್ಯಾಸ ಹಾಗೂ ಉತ್ಪನ್ನಗಳ ವಿನ್ಯಾಸವನ್ನು ಉತ್ತೇಜಿಸಲು ಶ್ರೇಷ್ಠತಾ ಕೇಂದ್ರ ಸ್ಥಾಪನೆ.

ದೀರ್ಘ ರಜೆಯಿದ್ದವರಿಗೆ ಕೌಶಲ ತರಬೇತಿ

ಐಟಿ ಬಿಟಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರು ಹೆರಿಗೆ ಅಥವಾ ವ್ಯಾಸಂಗಕ್ಕೆ ದೀರ್ಘ ರಜೆ ಮೇಲೆ ತೆರಳಿ ವಾಪಸಾಗುವ ವೇಳೆಗೆ ತಂತ್ರಜ್ಞಾನ ಸಾಕಷ್ಟು ಬದಲಾವಣೆ ಆಗಿರುತ್ತದೆ. ಮತ್ತೆ ಉದ್ಯೋಗ ಕೈಗೊಳ್ಳಲು ಎದುರಾಗುವ ಕೌಶಲದ ಕೊರತೆ ಭರಿಸಲು ನಿರ್ದಿಷ್ಟ ಕಾರ್ಯಕ್ರಮಗಳನ್ನು ರೂಪಿಸಲು ನಿಧರಿಸಲಾಗಿದೆ.

ವಿನಾಯಿತಿ ವಿಸ್ತರಣೆ

ಕರ್ನಾಟಕ ಲೋಕಸೇವಾ ಆಯೋಗಕ್ಕೆ ಇತ್ತೀಚಿನ ದಿನಗಳಲ್ಲಿ ಸಲ್ಲಿಕೆಯಾಗುತ್ತಿರುವ ಅರ್ಜಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಸರ್ಕಾರ ತಿಳಿಸಿದೆ. ಈಗಾಗಲೇ ಪ.ಜಾ/.ಪ.ಪಂ ಅರ್ಜಿದಾರರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಮಹಿಳೆಯರು ಹಾಗೂ ವಿಕಲಚೇತನ ಅರ್ಜಿದಾರರಿಗೂ ಈ ವಿನಾಯಿತಿ ವಿಸ್ತರಣೆ ಮಾಡಲು ಸರ್ಕಾರ ನಿರ್ಧರಿಸಿದೆ.

ಹೊಸ ಘೊಷಣೆಗಳಿವು

# ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕೆಎಸ್​ಎಸ್​ಐಡಿಸಿ ವತಿಯಿಂದ ಮೂಲಸೌಕರ್ಯ ಅಭಿವೃದ್ಧಿ.

# ಭೂಮಿ ಖರೀದಿಸುವ ಕಾರ್ಯವಿಧಾನಗಳ ನ್ನು ಸರಳೀಕರಿಸುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಲು 20-30 ಎಕರೆ ಬಂಜರು ಅಥವಾ ಒಣ ಭೂಮಿಯನ್ನು ಗ್ರಾಮೀಣ ಉದ್ಯಮ ವಲಯವೆಂದು ಅಧಿಸೂಚಿಸಲಾಗುವುದು. ಯುವ ಜನರು ನಗರಗಳಿಗೆ ವಲಸೆ ಹೋಗುವುದನ್ನು ಇದರಿಂದ ಕಡಿಮೆಗೊಳಿಸಬಹುದು.

# ಕುಶಲಕರ್ವಿುಗಳು ಮತು ್ತ ಅತಿ ಸೂಕ್ಷ್ಮ ಸೂಕ್ಷ್ಮ ಮತು ್ತ ಮಧ್ಯಮ ಕೈಗಾರಿಕೆಗಳ ಕೊರತೆ ನೀಗಿಸಲು ರಾಜ್ಯ ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮ ಪರಿಚಯ. ಸಾಮಾನ್ಯ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಲು ಯೋಜನಾ ವೆಚ ್ಚ ಶೇ.50 ಅಥವಾ ಗರಿಷ್ಠ 5 ಕೋಟಿ ರೂ. ಒದಗಿಸಲಾಗುವುದು.

# ಭೌಗೋಳಿಕ ಗುರುತುಗಳ (ಜಿಐ) ಸಂಬಂಧಿತ ಉತ್ಪನ್ನಗಳ ಕೆಲಸ ಮಾಡುವ ಕುಶಲಕರ್ವಿುಗಳು, ಘಟಕಗಳು ಅಥವಾ ಕೈಗಾರಿಕೆಗಳಿಗೆ ಕ್ಲಸ್ಟರ್ ರೂಪದಲ್ಲಿ ಮೂಲಸೌಕರ್ಯ, ಮಾರುಕಟ್ಟೆ ಮತು ್ತ ಕೌಶಲಾಭಿವೃದ್ಧಿಗಾಗಿ ಸಮಗ್ರ ಕಾರ್ಯಕ್ರಮ ಪರಿಚಯ.

# ಸೂಕ್ಷ್ಮ ಮತ್ತು ಸಣ್ಣ ಉತ್ಪಾದನಾ ಕೈಗಾರಿಕೆಗಳನ್ನು ಪ್ರಾರಂಭಿಸುವ ಉದ್ಯಮಿಗಳಿಗೆ ಕೆಎಸ್​ಎಫ್​ಸಿಯಿಂದ ಪಡೆಯುವ ಸಾಲದ ಮೇಲೆ, ಸಾಲ ಬಿಡುಗಡೆಯಾದ ದಿನಾಂಕದಿಂದ 5 ವರ್ಷದವರೆಗೆ ಶೇ.10 ಬಡ್ಡಿ ಸಹಾಯಧನ.

# ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ, ಸಕ್ಕರೆ ತಂತ್ರಜ್ಞಾನದಲ್ಲಿ ಬಿಎಸ್​ಸಿ ಪದವಿ ಕೋರ್ಸ್ ಆರಂಭ.

# ಹೊಸ ಕಬ್ಬು ತಳಿ ಅಭಿವೃದ್ಧಿ ಮತ್ತು ಉತ್ತೇಜನಕ್ಕೆ ಶೇ.50 ಸಹಾಯಧನದಂತೆ 5 ಕೋಟಿ ರೂ. ಅನುದಾನ.

# ನೇಕಾರರಿಗೆ ಸದ್ಯ ಇರುವ 180 ದಿನಗಳ ರಿಬೇಟ್ ಅವಧಿ 365 ದಿನಕ್ಕೆ ವಿಸ್ತರಣೆ.

# ಕೈಮಗ್ಗ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಕೈಮಗ್ಗ ಛಾಪು ಮೂಡಿಸಲು ನ್ಯಾಷನಲ್ ಇನ್ಸ್​ಟಿಟ್ಯೂಟ್ ಆಫ್ ಡಿಸೈನ್ ಮೂಲಕ ಸ್ಮಾರ್ಟ್ ಹ್ಯಾಂಡ್​ಲೂಮ್ ಕೇಂದ್ರ ಸ್ಥಾಪನೆ.

# ಮರಳು ದಾಸ್ತಾನು ಪ್ರದೇಶದಲ್ಲಿ ಮರಳು ಗುತ್ತಿಗೆದಾರರು ವೇ ಬ್ರಿಡ್ಜ್ ಅಳವಡಿಸಲು, ಎಂ ಸ್ಯಾಂಡ್ ತಯಾರಿಕಾ ಯಂತ್ರೋಪಕರಣ ಅಳವಡಿಸಲು ಹಾಗೂ ಸಾಂಪ್ರದಾಯಿಕ ಕಟ್ಟಡ ಕಲ್ಲು ತೆಗೆಯುವ ಸಂಘಗಳಿಗೆ ಗುತ್ತಿಗೆ ಶುಲ್ಕ ಪಾವತಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಎಸ್​ಸಿಪಿ ಟಿಎಸ್​ಪಿ ಯೋಜನೆಯಲ್ಲಿ ಶುಲ್ಕ ಪಾವತಿಗೆ ಸಹಾಯಧನ.

# 2018-19ರಲ್ಲಿ 8 ಹೊಸ ಕಬ್ಬಿಣ ಅದಿರು ಬ್ಲಾಕ್​ಗಳ ಹರಾಜು ಹಾಗೂ 2020ಕ್ಕೆ ಅಂತ್ಯವಾಗಲಿರುವ 30 ಗಣಿ ಗುತ್ತಿಗೆಗಳ ಖನಿಜಾನ್ವೇಷಣೆ ಕೈಗೊಳ್ಳುವುದು.

# ಜಿಲ್ಲಾ ಖನಿಜ ಪ್ರತಿಷ್ಠಾನದ ಭಾಗವಾಗಿ, 2018-19ನೇ ಸಾಲಿನಲ್ಲಿ 900 ಕೋಟಿ ರೂ.ಗಳ ವೆಚ್ಚದಲ್ಲಿ ಸಮಗ್ರ ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆ ಜಾರಿ.

ಶೇ.8.5ರ ಬೆಳವಣಿಗೆ

ರಾಜ್ಯದ ರಾಷ್ಟ್ರೀಯ ಆಂತರಿಕ ಉತ್ಪನ್ನ(ಜಿಡಿಪಿ) 2017-18ನೇ ಸಾಲಿಗೆ ಶೇ.8.5ರಷ್ಟು ಬೆಳವಣಿಗೆಯಾಗುವ ನಿರೀಕ್ಷೆ ಹೊಂದಲಾಗಿದೆ. ಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಶುಕ್ರವಾರ ಬಿಡುಗಡೆ ಮಾಡಿರುವ ಕರ್ನಾಟಕ ಆರ್ಥಿಕ ಸಮೀಕ್ಷೆ 2017-18ರಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ. 2016-17ರಲ್ಲಿದ್ದ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ 8,74,395 ಕೋಟಿ ರೂ.ಗಳಿಂದ 2017-18ಕ್ಕೆ 9,49,111ಕೋಟಿ ರೂ.ಗಳಿಗೆ ಏರಿದೆ. ಈ ಆಧಾರದ ಮೇಲೆ 2017-18ನೇ ಸಾಲಿನಲ್ಲಿ ರಾಜ್ಯದ ಜಿಡಿಪಿ ಶೇ.8.5ರಷ್ಟು ಬೆಳವಣಿಗೆಯಾಗಬಹುದೆಂದು ಅಂದಾಜಿಸಲಾಗಿದೆ. 2016-17ನೇ ಸಾಲಿನಲ್ಲಿ ಕೃಷಿ ವಲಯದ ಬೆಳವಣಿಗೆ ದರ ಶೇ.5.7 ರಷ್ಟಿದ್ದು, ರಾಜ್ಯದಲ್ಲಿ 2017-18ನೆ ಸಾಲಿನ ಮುಂಗಾರಿನಲ್ಲಿ ತೊಗರಿ ಹಾಗೂ ಭತ್ತದ ಬೆಳೆ ಕ್ಷೇತ್ರ ಕ್ರಮವಾಗಿ 3 ಲಕ್ಷ, 2 ಲಕ್ಷ ಹೆ. ಬಿತ್ತನೆ ಪ್ರದೇಶ ಕಡಿಮೆಯಾಗುವ ಹಿನ್ನೆಲೆಯಲ್ಲಿ ಕೃಷಿ ವಲಯದ ಬೆಳವಣಿಗೆ ದರ 2017-18ನೇ ಸಾಲಿನಲ್ಲಿ ಶೇ.4.9ಕ್ಕೆ ಇಳಿಕೆಯಾಗಬಹುದೆಂದು ಅಂದಾಜು ಮಾಡಲಾಗಿದೆ.

# ಕೈಗಾರಿಕೆ ವಲಯದ ಬೆಳವಣಿಗೆ ದರ 2016-17ರಲ್ಲಿ ಶೇ.3.7 ರಷ್ಟಿದ್ದು, 2-17-18ಕ್ಕೆ ಶೇ.4.9ಕ್ಕೆ ಏರುವ ನಿರೀಕ್ಷೆಯಿದೆ.

# ರೇವಾ ವಲಯದಲ್ಲಿ 2016-17ರಲ್ಲಿ 8.9 ರಷ್ಟಿದ್ದ ಬೆಳವಣಿಗೆ ದರ 2017-18ಕ್ಕೆ 10.4ಕ್ಕೆ ಏರಿಕೆಯಾಗಿದೆ.

# ಸಾರ್ವಜನಿಕ ಆಡಳಿತ, ವೃತ್ತಿಪರ ಸೇವೆ, ವಾಸಗೃಹ ಒಡೆತನ, ವ್ಯಾಪಾರ ಮತ್ತು ದುರಸ್ತಿ ಹಾಗೂ ಇತರೆ ಸೇವೆಗಳು ಶೇ.105 ರಷ್ಟು ಬೆಳವಣಿಗೆ ರಾಜ್ಯದ ಒಟ್ಟು ಜಿಡಿಪಿ ಉತ್ಪನ್ನದ ಶೇ.8.5ರ ಬೆಳವಣಿಗೆಗೆ ಕಾರಣವಾಗಿದೆ.

# ಪ್ರಸಕ್ತ ಬೆಲೆಗಳಲ್ಲಿ 2016-17ನೇ ಸಾಲಿನಲ್ಲಿ ರಾಜ್ಯದ ನಿವ್ವಳ ತಲಾ ಆದಾಯ 1,57,436 ರೂ. ಇದ್ದು, ಇದು 2017-18ರ ಸಾಲಿಗೆ ಶೇ.10.9 ರಷ್ಟು ಹೆಚ್ಚಳದೊಂದಿಗೆ 1,74,551 ಕೋಟಿ ರೂ.ಗಳಷ್ಟಾಗುವ ಅಂದಾಜು ಮಾಡಲಾಗಿದೆ.

# ಒಟ್ಟು ಜಿಡಿಪಿಯಲ್ಲಿ ಕೃಷಿ, ಕೈಗಾರಿಕೆ ವಲಯಗಳ ಕೊಡುಗೆ 2017-18ಕ್ಕೆ ಕ್ರಮವಾಗಿ ಶೇ.11.10 ಹಾಗೂ ಶೇ.22.27ಕ್ಕೆ ಇಳಿಕೆಯಾಗಿರುವುದು ಹಾಗೂ ಸೇವಾ ವಲಯದಲ್ಲಿ ಶೇ.65.53ರಿಂದ ಶೇ.66.63ಕ್ಕೆ ಅಲ್ಪ ಏರಿಕೆಯಾಗಿದೆ.

# ರಾಜ್ಯದ 2014-15 ಮತ್ತು 2015-16 ಮತ್ತು 2016-17 ನೇ ಸಾಲುಗಳಲ್ಲಿ ತಲಾವಾರು ಅಭಿವೃದ್ಧಿ ವೆಚ್ಚ ಕ್ರಮವಾಗಿ 13,928 ರೂ.,15,591 ಮತ್ತು 17,413 ರೂ. ಆಗಿರುತ್ತದೆ. ಈ ವರ್ಷಗಳಲ್ಲಿ ರಾಷ್ಟ್ರದ ಎಲ್ಲ ರಾಜ್ಯಗಳ ಸರಾಸರಿ ಅಭಿವೃದ್ಧಿ ವೆಚ್ಚ ಕ್ರಮವಾಗಿ 10,437 ರೂ, 13,545 ಮತ್ತು 14,404 ರೂ. ಆಗಿದೆ.

# ತೆರಿಗೆಯೇತರ ರಾಜಸ್ವದಲ್ಲಿ ಅಷ್ಟೊಂದು ಹೆಚ್ಚಳವಾಗಿಲ್ಲ. ವೆಚ್ಚ ಸುಧಾರಣಾ ಆಯೋಗ ಬಳಕೆದಾರರ ಶುಲ್ಕಗಳಿಂದ ರಾಜಸ್ವ ಹೆಚ್ಚಿಸಲು ಶಿಫಾರಸು ಮಾಡಿದೆ.

ಜ್ಞಾನ ಆಯೋಗದ ಶಿಫಾರಸಿಗೆ ಜೈ

ಕರ್ನಾಟಕ ಜ್ಞಾನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು 2018-19ನೇ ಸಾಲಿನಲ್ಲಿ ಒಟ್ಟಾರೆ 142 ಕೋಟಿ ರೂ.ಗಳನ್ನು ಇ- ಆಡಳಿತಕ್ಕೆ ನೀಡಲಾಗಿದ್ದು, ಜ್ಞಾನ ಆಯೋಗ ಸಲಹೆಯಂತೆ ರಾಜ್ಯದಲ್ಲಿ ಬಿಗ್ ಡೇಟಾವನ್ನು ಆಡಳಿತ ವಿಭಾಗದಲ್ಲಿ ಯೋಜನೆ ರೂಪಿಸಲು 3 ಕೋಟಿ ರೂ. ನೀಡಲಾಗಿದೆ. ಸಾರ್ವಜನಿಕರಿಗೆ ವಿವಿಧ ರೀತಿಯ ದತ್ತಾಂಶಗಳನ್ನು ಒದಗಿಸಲು ಕರ್ನಾಟಕ ಓಪನ್ ಡೇಟಾ ಇನಿಷಿಯೇಟಿವ್(ಕೆ-ಒಡಿಐ) ರೂಪಿಸಲು 5 ಕೋಟಿ ರೂ. ನೀಡಿದೆ. ಇ- ಆಡಳಿತ ಇಲಾಖೆಯಲ್ಲಿ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಆರಂಭಿಸಲಿದೆ.

ಕಾಗದ ಸಹಿತ ಸೇವೆ: ಇ- ಆಡಳಿತದ ಉಪಕರಣಗಳನ್ನು ಬಳಸಿ ಸಕಾಲ ಸೇವೆಯನ್ನು ಉನ್ನತೀಕರಿಸಲು ಉದ್ದೇಶಿಸಿದೆ (ಸಕಾಲ 2.0). ಈ ಮೂಲಕ ನಾಗರಿಕ ಸೇವಾ ಕೇಂದ್ರಗಳಲ್ಲಿ ಸೇವೆಗಳನ್ನು ಮುಖ ರಹಿತ(ಫೇಸ್​ಲೆಸ್), ನಗದು ರಹಿತ(ಕ್ಯಾಷ್​ಲೆಸ್) ಹಾಗೂ ಕಾಗದ ರಹಿತ(ಪೇಪರ್ ಲೆಸ್)ಗೊಳಿಸಲು ಉದ್ದೇಶಿಸಲಾಗಿದೆ.

ಉನ್ನತೀಕರಣ

ಮಾನವ ಸಂಪನ್ಮೂಲ ನಿರ್ವಹಣಾ ಯೋಜನೆಯು (ಎಚ್​ಆರ್​ಎಂಎಸ್ )1.0 ದಿಂದ 2.0 ಗೆ ಉನ್ನತೀಕರಿಸಲು ಕ್ರಮ ಘೊಷಿಸಲಾಗಿದೆ. 2019-18ನೇ ಸಾಲಿನಲ್ಲಿ ಹಮ್ಮಿಕೊಂಡಿದ್ದ ಬೆಳೆ ಸಮೀಕ್ಷೆ ಚಟುವಟಿಕೆಯನ್ನು 2018-19ನೇ ಸಾಲಿನಲ್ಲೂ ಮುಂದುವರಿಯಲಿದ್ದು ರೈತರ ಜಮೀನುಗಳನ್ನು ಒಳಪಡಿಸಲು ಉದ್ದೇಶಿಸಲಾಗಿದೆ. ದತ್ತಾಂಶಗಳನ್ನು ಕ್ರೋಡೀಕರಿಸಿ, ಸರ್ಕಾರಿ ಯೋಜನೆಗಳಾದ ಕನಿಷ್ಠ ಬೆಂಬಲ ಬೆಲೆ ನಿಗದಿ, ಸಬ್ಸಿಡಿ ನಿಗದಿ, ಬೆಳೆ ಪ್ರದೇಶ ಅಂದಾಜು ಸೇರಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗ ಫಲಾನುಭವಿಗಳ ಆಯ್ಕೆಗೆ ಬಳಸಲಿದೆ.

ಮದ್ಯ ಏರಿಕೆ, ವಿಮಾನ ಇಂಧನ ಅಗ್ಗ

ಮೌಲ್ಯವರ್ಧಿತ ತೆರಿಗೆ ವ್ಯವಸ್ಥೆ ರದ್ದಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎರಡು ಕ್ಷೇತ್ರಗಳಲ್ಲಿ ಮಾತ್ರ ತೆರಿಗೆ ಸುಧಾರಣೆ ಪ್ರಸ್ತಾಪಿಸಿದೆ. ಅಬಕಾರಿ ಸುಂಕವನ್ನು ಹಾಲಿ ದರಗಳ ಮೇಲೆ ಶೇ.8 ಏರಿಸಲಾಗಿದ್ದು, ಇದರಿಂದ ಪಾನಪ್ರಿಯರ ಜೇಬಿಗೆ ಇನ್ನಷ್ಟು ಕತ್ತರಿ ಬೀಳಲಿದೆ. ಕಳೆದ ಆಯವ್ಯಯದಲ್ಲಿ ಶೇ.6ರಿಂದ ಶೇ.16ರವರೆಗೆ ಏರಿಕೆ ಮಾಡಲಾಗಿತ್ತು. ಪ್ರಸಕ್ತ ಆಯವ್ಯಯದಲ್ಲಿನ ಅಬಕಾರಿ ಸುಂಕ ಏರಿಕೆಯಿಂದ ಅಬಕಾರಿ ರಾಜಸ್ವ ಸಂಗ್ರಹ ಗುರಿಯನ್ನು 18,750 ಕೋಟಿ ರೂ ನಿಗದಿಗೊಳಿಸಲಾಗಿದೆ.

ವಿಮಾನಯಾನಕ್ಕೆ ನೆರವು: ವೈಮಾನಿಕ ಇಂಧನದ ಮಾರಾಟ ತೆರಿಗೆ ಇಳಿಸಬೇಕು ಎಂಬ ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದೆ. ಈ ತೆರಿಗೆ ಏರಿಕೆಯಿಂದ ಕರ್ನಾಟಕದ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳಿಗೆ ಇಂಧನ ಭರಿಸುತ್ತಿರಲಿಲ್ಲ. ಈಗ ಮಾರಾಟ ತೆರಿಗೆಯನ್ನು ಶೇ.28ರಿಂದ ಶೇ.23ಕ್ಕೆ ಇಳಿಸಲಾಗಿದೆ.

 


 ಐತಿಹಾಸಿಕ ದಿನ

ಕರ್ನಾಟಕದ ಇತಿಹಾಸದಲ್ಲಿ ಫೆ. 16 ಒಂದು ಪ್ರಮುಖ ದಿನವಾಗಿ ದಾಖಲಾಗಲಿದೆ. ಈ ದಿವಸದಂದು ಎರಡು ಪ್ರಮುಖ ಬೆಳವಣಿಗೆಗಳು ಘಟಿಸಿವೆ. ಹಲವು ದಶಕಗಳಿಂದ ರಾಜ್ಯವನ್ನು ಆತಂಕದಲ್ಲಿ ನಿಲ್ಲಿಸಿದ್ದ ಕಾವೇರಿ ನದಿ ನೀರು ಹಂಚಿಕೆ ವಿವಾದ ಕೊನೆಗೂ ಸುಪ್ರೀಂ ಕೋರ್ಟಿನಲ್ಲಿ ಒಂದು ರ್ತಾಕ ಅಂತ್ಯ ಕಂಡಿದೆ. ಇನ್ನೊಂದೆಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಈ ಅಧಿಕಾರಾವಧಿಯ ಕೊನೆಯ ಬಜೆಟ್ಟನ್ನು ಮಂಡಿಸಿದ್ದಾರೆ. ಇನ್ನು ಕೆಲ ದಿನಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಜನರ ಮೇಲೆ ತೆರಿಗೆ ಭಾರ ಹೊರಿಸದೆ, ಮತ್ತೊಂದೆಡೆ, ಹಲವು ಜನಪ್ರಿಯ ಯೋಜನೆಗಳನ್ನೂ ಪ್ರಕಟಿಸುವ ಮೂಲಕ ಸಮತೋಲನದ ಕಸರತ್ತು ನಡೆಸಿದ್ದಾರೆ. ಕಾವೇರಿ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಶುಕ್ರವಾರ ನೀಡಿದ ಆದೇಶ ಪ್ರಶ್ನಿಸಿ ತಮಿಳುನಾಡು ಮೇಲ್ಮನವಿ ಸಾಧ್ಯತೆ ಇದೆಯಾದರೂ, ಸದ್ಯಕ್ಕೆ ಕರ್ನಾಟಕಕ್ಕೆ ಸಕಾರಾತ್ಮಕವಾದ ಆದೇಶವೇ ಬಂದಿದೆ ಎಂದು ಸಮಾಧಾನಪಟ್ಟುಕೊಳ್ಳಬಹುದು. ಕುಡಿಯುವ ನೀರಿಗೆ ಎಲ್ಲಕ್ಕಿಂತ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ ಎಂಬುದನ್ನು ಕೋರ್ಟ್ ಸ್ಪಷ್ಟಮಾತುಗಳಲ್ಲಿ ಹೇಳಿದೆ. ಮಹದಾಯಿ ವಿವಾದವೂ ಇರುವ ಹಿನ್ನೆಲೆಯಲ್ಲಿ ಈ ಅಂಶಕ್ಕೆ ಮಹತ್ವವಿದೆ. ಈ ತೀರ್ಪಿನಿಂದಾಗಿ, ಕಾವೇರಿ ನ್ಯಾಯಮಂಡಳಿ ನಿರ್ಣಯಕ್ಕಿಂತ 14.75 ಟಿಎಂಸಿ ನೀರು ಹೆಚ್ಚುವರಿಯಾಗಿ ರಾಜ್ಯಕ್ಕೆ ಲಭ್ಯವಾಗಲಿದೆ. ಸುಪ್ರೀಂ ಕೋರ್ಟಿನ ಈ ತೀರ್ಪು ಕಾವೇರಿ ನೀರಿನ ಕುರಿತಾದ ಎಲ್ಲ ಬಗೆಯ ಗೊಂದಲಗಳಿಗೆ ಹಾಗೇ ರಾಜಕೀಯ ಮೇಲಾಟಗಳಿಗೆ ತೆರೆಯೆಳೆಯಬಹುದೆಂದು ಆಶಿಸಬಹುದಾಗಿದೆ. ಇನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಬಗ್ಗೆ ನೋಡುವುದಾದರೆ ಮೇಲ್ನೋಟಕ್ಕೆ ಅಬ್ಬರಾರ್ಭಟದ ಘೋಷಣೆಗಳು-ಯೋಜನೆಗಳು ಕಾಣಿಸುವುದಿಲ್ಲ. ಆದರೆ ಜನಪ್ರಿಯತೆಯ ಅಂಶವನ್ನು ಪೂರ್ತಿಯಾಗಿ ಕಡೆಗಣಿಸಿಲ್ಲ. ವಿದ್ಯಾರ್ಥಿಗಳು, ಮಹಿಳೆಯರಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಹಾಗೆ ನೋಡಿದರೆ, ಈ ಬಜೆಟ್​ನಲ್ಲಿನ ಎಷ್ಟು ಘೋಷಣೆಗಳು ವಾಸ್ತವದಲ್ಲಿ ಜಾರಿಯಾಗುತ್ತವೆ ಎಂಬುದು ಕಾದುನೋಡಬೇಕಾದ ಸಂಗತಿ. ಏಕೆಂದರೆ, ಇನ್ನು ಕೆಲ ತಿಂಗಳಲ್ಲಿ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗುತ್ತದೆ. ಕಾಂಗ್ರೆಸ್ಸೇತರ ಸರ್ಕಾರ ಬಂದಲ್ಲಿ ಈ ಬಜೆಟ್ಟನ್ನು ಯಥಾವತ್ತಾಗಿ ಜಾರಿಮಾಡುತ್ತದೆ ಎಂಬ ಖಾತ್ರಿಯಿಲ್ಲ. ಅಕಸ್ಮಾತ್, ಭಾರಿ ಹಣ ಬೇಡುವ ಯೋಜನೆಗಳನ್ನು ಪ್ರಕಟಿಸಿದರೆ, ಒಂದೊಮ್ಮೆ ಅಧಿಕಾರಕ್ಕೆ ಮರಳಿದಲ್ಲಿ ಬಜೆಟ್ ಭರವಸೆಗಳನ್ನು ಈಡೇರಿಸುವುದು ಕಷ್ಟವಾಗುತ್ತದೆ ಎಂಬ ಆಲೋಚನೆ ಹಿನ್ನೆಲೆಯಲ್ಲಿಯೂ ಸಿದ್ದರಾಮಯ್ಯ ಈ ಸರ್ಕಸ್ ಮಾಡಿರಬಹುದು. ಒಟ್ಟಿನಲ್ಲಿ, ಈ ಎರಡು ಘಟನೆಗಳು ಒಂದೇ ದಿನ ಆದದ್ದು ಕಾಕತಾಳೀಯವಾದರೂ, ಜನರ ಬದುಕಿಗೆ ಹಸನು ತರಲೆಂಬುದು ಆಶಯ.

Leave a Reply

Your email address will not be published. Required fields are marked *

Back To Top